ಬೆಂಗಳೂರು | ತಕ್ಷಣ ಪುನರ್ವಸತಿ ಕಲ್ಪಿಸಿ : ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ – ಬಿ.ಟಿ. ಲಲಿತಾ ನಾಯಕ್

ಬೆಂಗಳೂರು: ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರು ಕೋಗಿಲು ಬಡಾವಣೆಯಲ್ಲಿ ತೆರವು ಕಾರ್ಯಾಚರಣೆ ನಡೆದು 20 ದಿನಗಳು ಕಳೆದಿದ್ದು, ಸರ್ಕಾರದಿಂದ ತಕ್ಷಣದ ಪುನರ್ವಸತಿಗೆ ಒತ್ತಾಯಿಸಿದ್ದು, ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಸಂತ್ರಸ್ತ ನಿವಾಸಿಗಳು, ಕಳೆದ 30 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ.  ನಾವು ಅಕ್ರಮ ನಿವಾಸಿಗಳಲ್ಲ. ಇದರಲ್ಲಿ ಬಹುತೇಕರು ಹಕ್ಕು ಪತ್ರ ಭೂ ದಾಖಲೆಗಳು, ಆಧಾರ್ ಕಾರ್ಡ್‌ಗಳು, ಮತದಾರರ ಗುರುತಿನ ಚೀಟಿಗಳು, ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಮತ್ತು ಶಾಲಾ ದಾಖಲೆಗಳನ್ನು ಹೊಂದಿದ್ದಾರೆ. ಆದರೆ, ಇದೀಗ ಇದಕ್ಕಿಂದಂತೆ ಎಲ್ಲವೂ ನಾಶವಾಗಿದೆ. ದಿಕ್ಕು ಕಾಣದೇ ಬೇರೆ ಆಶ್ರಯವಿಲ್ಲದೆ ಇದೀಗ ಮಕ್ಕಳು ವೃದ್ಧರ ಜೊತೆಗೆ ನಾವು ಅಲ್ಲಿಯೇ ಚಳಿ ಗಾಳಿಯ ನಡುವೆ ರಾತ್ರಿ ಕಳೆಯುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರು | ಟ್ರಾಫಿಕ್​​ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು

ಮಾಜಿ ಸಚಿವೆ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ಬುಲ್ಡೋಜರ್ ಕಾರ್ಯಾಚರಣೆಯು ಆತಂಕಕಾರಿ ಮಾದರಿಯಾಗಿದೆ. ಕೋಗಿಲು ಒಂದು ಪ್ರತ್ಯೇಕ ಪ್ರಕರಣವಲ್ಲ. ಒಂದೇ ತಿಂಗಳಿನಲ್ಲಿ ಡಿಜೆ ಹಳ್ಳಿ ಮತ್ತು ಥಣಿಸಂದ್ರದಲ್ಲಿ ಇದೇ ರೀತಿಯ ಧ್ವಂಸಗಳನ್ನು ನಡೆಸಲಾಗಿದೆ.

ಕಾಂಗ್ರೆಸ್​ ಸರ್ಕಾರ ಬಿಜೆಪಿ ಜೊತೆಗೆ ಮುಸ್ಲಿಮರು ಮತ್ತು ದಲಿತರಿಗೆ ನ್ಯಾಯ ನಿರಾಕರಿಸುವ ಮೂಲಕ ಪೈಪೋಟಿ ನಡೆಸುತ್ತಿದೆ ಎಂದು ಕಿಡಿಕಾರಿದ ಅವರು, ಕಾಂಗ್ರೆಸ್​ ಅನ್ನು ಯಾವಾಗಲೂ ಜಾತ್ಯತೀತ ಪಕ್ಷವಾಗಿ ನೋಡಲಾಗಿದ್ದು. ಪಕ್ಷದ ಆಡಳಿತದಲ್ಲಿ ಧರ್ಮ ಮತ್ತು ಜಾತಿ ಹಸ್ತಕ್ಷೇಪ ಮಾಡಬಾರದು. ಈ ಹಾದಿ ಮುಂದುವರಿದರೆ, ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಚುನಾವಣೆಗೆ ಮುನ್ನ ಸರ್ಕಾರವು ಬುಲ್ಡೋಜರ್ ಸರ್ಕಾರ ಎಂದು ಪ್ರಸಿದ್ಧವಾದರೆ, ಅದು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜನರ ಆಕ್ರೋಶದ ಕುರಿತು ಎಚ್ಚರಿಸಿದರು. ಪೂರ್ವ ಪುನರ್ವಸತಿ ಅಥವಾ ತಾತ್ಕಾಲಿಕ ಆಶ್ರಯ ಇಲ್ಲದೇ ಏಕೆ ನೆಲಸಮ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಪ್ರಶ್ನಿಸಿದ ಅವರು, ಬಡ ಕುಟುಂಬಗಳನ್ನು ಬೀದಿಗೆ ತಂದ ಕಾರ್ಯವನ್ನು ಆಡಳಿತ ಎಂದು ಕರೆಯಲು ಸಾಧ್ಯವಿಲ್ಲ. ಇದು ಮಾನವೀಯತೆಯ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ ಮಾತನಾಡಿ ಬೆಂಗಳೂರಿನಾದ್ಯಂತ ಭಯದ ವಾತಾವರಣವಿದೆ ಎಂದರು ಜೆಸಿಬಿಗಳ ಶಬ್ದ ಇದೀಗ ಜನರಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಜನರು ಪ್ರತಿದಿನ ಎಚ್ಚರಗೊಂಡು ತಮ್ಮ ಮನೆ ಇರುತ್ತಾ ಇಲ್ಲವೇ ಎಂಬ ಆತಂಕಪಡುವಂತೆ ಆಗಿದೆ.

ಭೂ ಖರೀದಿಗೆ ಮುನ್ನ ವಕೀಲರಿಂದ ಪರಿಶೀಲಿಸಿ, ನೋಂದಾಯಿಸಲಾದ ಆಸ್ತಿಗಳನ್ನು ಇದ್ದಕ್ಕಿದ್ದಂತೆ ಅಕ್ರಮ ಎಂದು ಹೇಗೆ ಕರೆಯಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಈ ಭೂಮಿ ಸರ್ಕಾರಿ ಭೂಮಿ ಅಥವಾ ಮಳೆನೀರು ಚರಂಡಿಯಾಗಿದ್ದರೆ, ಅಧಿಕಾರಿಗಳು ಮೊದಲು ನೋಂದಣಿಗೆ ಏಕೆ ಅವಕಾಶ ನೀಡಿದರು?” ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಭೂ ಮಾಫಿಯಾ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಬವಣೆ ಪಡುವಂತೆ ಆಗಿದೆ. ಈ ಆಸ್ತಿಗಳನ್ನು ನೋಂದಣಿಗೆ ಅನುಮೋದಿಸಿದ ಸಬ್ – ರಿಜಿಸ್ಟ್ರಾರ್‌ಗಳ ವಿರುದ್ಧ ಬಿಡಿಎ ಇದೀಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೊಸ ವರ್ಷದಲ್ಲಿ ಮನೆಗಳು ಸಿಗುತ್ತವೆ ಎಂದು ಜನರು ನಂಬಿದ್ದರು. ಆದರೆ, ಜನರು ಇದೀಗ ರಸ್ತೆಗಳಲ್ಲಿ ಮಲಗುತ್ತಿದ್ದಾರೆ. ಇದೀಗ ವಸತಿ ಸಚಿವರು ಸಮೀಕ್ಷೆಯ ನಂತರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.  ಪುನರ್ವಸತಿಯಲ್ಲಿ ವಿಳಂಬ ಮುಂದುವರಿದರೆ, ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಅಕ್ರಮ ವಲಸಿಗರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಹೇಳಿಕೆ ತಿರಸ್ಕರಿಸಿದ ಅವರು, ಕಾರ್ಯಕರ್ತರು ಪ್ರತಿಯೊಂದು ಮನೆಯನ್ನೂ ಸಮೀಕ್ಷೆ ಮಾಡಿದರು. ಇಲ್ಲಿ ಯಾವುದೇ ಬಾಂಗ್ಲಾದೇಶಿಗಳು ಇಲ್ಲ. ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ಬಡವರನ್ನು ವಿಭಜಿಸುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ವಿರೋಧ ಪಕ್ಷದ ನಾಯಕ ಆರ್. ಅಶೋಕ ನೇತೃತ್ವದ ಕೋಗಿಲುಗೆ ಭೇಟಿ ನೀಡಿದ ಬಿಜೆಪಿ ನಿಯೋಗಕ್ಕೂ ಸಹ ಈ ಪ್ರದೇಶದಲ್ಲಿ ಯಾವುದೇ ಬಾಂಗ್ಲಾದೇಶಿಗಳು ಸಿಗಲಿಲ್ಲ, ಆದ್ದರಿಂದ ಅದು ಈಗ ಅವರು ಮೌನವಾಗಿದ್ದಾರೆ.

ಕುಟುಂಬಗಳು ಆಶ್ರಯ ಮತ್ತು ಉತ್ತರಗಳಿಗಾಗಿ ಕಾಯುತ್ತಿದ್ದಾರೆ. ಉಳ್ಳವರಿಗೆ ಮಾತ್ರ ಕಾನೂನು ಅನ್ವಯ ಎಂಬಂತೆ ಆಗದೆ. ಸಂತ್ರಸ್ತ ಕುಟುಂಬಗಳಿಗೆ ವಸತಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ನೋಡಿ : ರಾಗಿ ಕಣದಲ್ಲಿ ಸಂಕ್ರಾಂತಿ ಸುಗ್ಗಿ ಸೊಬಗು Janashakthi Media

Donate Janashakthi Media

Leave a Reply

Your email address will not be published. Required fields are marked *