ಬೆಂಗಳೂರು | ಮಹಿಳೆಯರಿಗೆ  ಅಸಾಧ್ಯವಾದ ಕೆಲಸ ಯಾವುದು ಇಲ್ಲ – ಲಕ್ಷ್ಮೀ ಹೆಬ್ಬಾಳಕರ್‌

ಬೆಂಗಳೂರು: ಮಹಿಳೆಯರಿಗೆ  ಅಸಾಧ್ಯವಾದ ಕೆಲಸವಂತೂ ಯಾವುದು ಇಲ್ಲ ಆದರೆ ಸಾಧನೆ ಮಾಡಲು ಕಷ್ಟ ಆಗಬಹುದು, ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಅಭಿಪ್ರಾಯಪಟ್ಟಿದ್ದಾರೆ.

ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಕ್ತಿ ಸಂವಾದ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು ಗ್ರಾಮೀಣ ಭಾಗದಿಂದ ಬಂದ ಹೆಣ್ಣು ಮಗಳು, ನಾನು ಸವೆಸಿದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಕೇವಲ ನನ್ನದಷ್ಟೇ ಕಥೆಯಲ್ಲ, ಇಲ್ಲಿರುವ ಪ್ರತಿಯೊಬ್ಬ ಮಹಿಳೆಯರದ್ದೂ ಅವರದ್ದೇ ಆದ ಕಥೆಯಿದೆ ಎಂದರು.

ಈಗ ಕಾಲ ಬದಲಾಗಿದೆ. ಹಿಂದಿನ ಕಾಲವನ್ನು ಮೆಟ್ಟಿನಿಂತು ಬದಲಾಗಿದ್ದೇವೆ, ಇದು ನನ್ನ ಹೃದಯಕ್ಕೆ ಹತ್ತಿರವಾಗಿರುವ ಸಂವಾದ, ಹಿಂದಿನ ಕಾಲದಲ್ಲಿ ಮಹಿಳೆಯರನ್ನು ಕೇವಲ ಅಡುಗೆ ಮಾಡಲು, ಮಕ್ಕಳನ್ನು ಹೇರುವುದಕ್ಕಷ್ಟೇ ಸೀಮಿತ ಮಾಡಲಾಗಿತ್ತು.  ಈ ಸಮಾಜದ ಸೃಷ್ಟಿಕರ್ತರು ನಾವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಇದನ್ನೂ ಓದಿ : ಪುಣೆ | ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ನಿಧನ

ಶೈಕ್ಷಣಿಕವಾಗಿ ನಮ್ಮ ಮಹಿಳೆಯರು ಸಾಕಷ್ಟು ಮುಂದಿದ್ದಾರೆ ಎಂದರು. ಮಹಿಳೆಯರು ಅವಕಾಶವನ್ನು ಕೇಳಿಕೊಂಡು ಹೋಗುವ ಪರಿಸ್ಥಿತಿ ಇಲ್ಲ, ಅವಕಾಶಗಲೇ ಮಹಿಳೆಯರನ್ನು ಹುಡುಕಿಕೊಂಡು ಬರುತ್ತಿವೆ.

ಈ ಹಿಂದೆ ಗಂಡ ಸತ್ತರೆ ಮಹಿಳೆಯರಿಗೆ ಬದುಕುವ ಹಕ್ಕಿಲ್ಲ ಎನ್ನುವಂಥ ಪರಿಸ್ಥಿತಿ ಇತ್ತು. ಇವತ್ತು ಸಾಕಷ್ಟು ಬದಲಾಗಿದೆ. ಮಹಿಳೆಯರು ಮನಸ್ಸು ಮಾಡಿದರೆ ಮತದಾನದ ಮೂಲಕ ಸರ್ಕಾರವನ್ನೇ ತರಬಹುದು, ಇಂದು ಮಹಿಳೆಯರಿಗೆ ಒಗ್ಗಟ್ಟು ಜಾಸ್ತಿಯಿದ್ದು, ವಿಚಾರ ಮಾಡುವ ಮನಸ್ಥಿತಿ ಹೊಂದಿದ್ದಾರೆ, ಹೆಣ್ಣು ಕೇವಲ ಭವಿಷ್ಯ ಅಲ್ಲ, ವರ್ತಮಾನ ಕೂಡ ಎಂದು ಸಚಿವರು ಹೇಳಿದರು.

ಇಲ್ಲಿವರೆಗೂ ನಮ್ಮ ಸರ್ಕಾರ 1.26 ಕೋಟಿ ಮಹಿಳೆಯರಿಗೆ ತಲಾ 48 ಸಾವಿರ ರೂಪಾಯಿಯಂತೆ ಗೃಹಲಕ್ಷ್ಮೀ ಯೋಜನೆ ಮೂಲಕ ಹಣ ಸಂದಾಯ ಮಾಡಿದೆ. ನಮ್ಮ ಸರ್ಕಾರ ಕೂಡ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ಕೊಡುತ್ತಿದೆ. ಮಹಿಳೆಯರಿಗಾಗಿ ಜಾರಿಗೆ ತರಲಾಗಿರುವ ಶಕ್ತಿ ಯೋಜನೆ, ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಂದ ಹಿಡಿದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸಾಕಷ್ಟು ಅನುಕೂಲ ಆಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಜೀವನ ಬದಲಾಗುತ್ತೆ ಎಂದು ಹೇಳುವುದಿಲ್ಲ, ಆದರೆ ತಕ್ಕ ಮಟ್ಟಿಗೆ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, ಬಿಎಂಟಿಎಫ್ ಎಡಿಜಿಪಿ ಡಿ.ರೂಪಾ ಮೌದ್ಗಿಲ್, ಚಲನಚಿತ್ರ ನಟಿ ಶ್ವೇತಾ ಶ್ರೀವತ್ಸ, ಮೌಂಟ್ ಕಾರ್ಮೆಲ್ ಕಾಲೇಜಿನ ನಿರ್ದೇಶಕರು ಹಾಗೂ ಕಾರ್ಯದರ್ಶಿ ಸಿಸ್ಟರ್ ಎಂ.ಅಲ್ದಿನಾ, ಪ್ರಾಂಶುಪಾಲರಾದ ಪ್ರೊ.ಜಾರ್ಜ್ ಲೇಖಾ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಇದನ್ನೂ ನೋಡಿ : ಕೋಗಿಲು ಪ್ರಕರಣ : ಬಡವರ ಕೂಗು ಕೇಳದಾಯಿತೆ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *