ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು, ಉಳ್ಳಾಲಕ್ಕೆ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ಸ್ಥಾಪಿಸಲು ಆಗ್ರಹ
ಮುಡಿಪು: ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಜನಸಾಮಾನ್ಯರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಗಲು-ರಾತ್ರಿ ಹೋರಾಟ ನಡೆಸಲಾಗುವುದು ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು, ಉಳ್ಳಾಲ ತಾಲೂಕಿಗೆ 100 ಹಾಸಿಗೆಗಳ ಸರಕಾರಿ ತಾಲೂಕು ಆಸ್ಪತ್ರೆಯನ್ನು ಶೀಘ್ರ ಸ್ಥಾಪಿಸುವುದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಯದೇವ, ಕಿದ್ವಾಯಿ ಮತ್ತು ನಿಮ್ಹಾನ್ಸ್ ಸಂಸ್ಥೆಗಳ ಘಟಕಗಳನ್ನು ಸ್ಥಾಪಿಸುವುದು ಹಾಗೂ ಮುಡಿಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಮುಡಿಪು ವಲಯ ಸಮಿತಿ ವತಿಯಿಂದ ಮುಡಿಪು ಜಂಕ್ಷನ್ನಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಕೇಂದ್ರವಾಗಿ ಬೆಳೆದಿದ್ದರೂ, ಬಡಜನರಿಗೆ ಕೈಗೆಟುಕುವ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಬಡವರು ತಮ್ಮ ಮನೆಮಠವನ್ನೇ ಮಾರಾಟ ಮಾಡಬೇಕಾದ ಪರಿಸ್ಥಿತಿಯಿದೆ. ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಒಳರೋಗಿಗಳಾಗಿ ದಾಖಲಾದರೆ ಲಕ್ಷಾಂತರ ರೂಪಾಯಿ ಬಿಲ್ ವಿಧಿಸಲಾಗುತ್ತದೆ. ಈ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ಬಡಜನರು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಹಣಕ್ಕಾಗಿ ಮನವಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಇನ್ನೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗದಿರುವುದರಿಂದ ಬಡ ಕುಟುಂಬಗಳ ಮಕ್ಕಳಿಗೆ ವೈದ್ಯರಾಗುವ ಕನಸು ನನಸಾಗುತ್ತಿಲ್ಲ. ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾದರೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ. ಆದರೆ, ಈ ಅಗತ್ಯದ ಕಡೆಗೆ ಆಡಳಿತಗಾರರು ಗಮನ ಹರಿಸುತ್ತಿಲ್ಲ ಎಂದು ಮುನೀರ್ ಕಾಟಿಪಳ್ಳ ಟೀಕಿಸಿದರು.
ಇದನ್ನೂ ಓದಿ : ಸೌಜನ್ಯ ಪ್ರಕರಣದ ಮರುತನಿಖೆ ಚುರುಕು: ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಪೊಲೀಸರಿಗೆ ಎಸ್ಐಟಿ ನೋಟಿಸ್
ಉಳ್ಳಾಲ ಕ್ಷೇತ್ರದಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗಿರುವ ಹಾಗೂ ಎರಡು ಬಾರಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಯು.ಟಿ. ಖಾದರ್ ಅವರು ತಮ್ಮ ಕ್ಷೇತ್ರಕ್ಕೆ ಇನ್ನೂ ಸರಕಾರಿ ತಾಲೂಕು ಆಸ್ಪತ್ರೆ ಒದಗಿಸಿಲ್ಲ. ಬದಲಿಗೆ, ಅಸ್ತಿತ್ವದಲ್ಲಿರುವ ಸರಕಾರಿ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಸಂಸ್ಥೆಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಆರೋಪಿಸಿದರು.
ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗಳ ಕುರಿತು ಧ್ವನಿ ಎತ್ತಬೇಕಾದ ಜವಾಬ್ದಾರಿಯುತ ವಿರೋಧ ಪಕ್ಷದ ಬಿಜೆಪಿ ಶಾಸಕರು ಕಂಬಳ ಮತ್ತು ಡಿಜೆ ಕಾರ್ಯಕ್ರಮಗಳ ಸುತ್ತಲೇ ತೊಡಗಿಸಿಕೊಂಡಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ ಎಂದು ಅವರು ಟೀಕಿಸಿದರು.
ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು, ಉಳ್ಳಾಲಕ್ಕೆ 100 ಹಾಸಿಗೆಗಳ ಸರಕಾರಿ ತಾಲೂಕು ಆಸ್ಪತ್ರೆ ನಿರ್ಮಿಸುವುದು, ಜಯದೇವ, ಕಿದ್ವಾಯಿ ಮತ್ತು ನಿಮ್ಹಾನ್ಸ್ ಘಟಕಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವುದು ಹಾಗೂ ಮುಡಿಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಜನರನ್ನು ಸಂಘಟಿಸಿ ಹಗಲು-ರಾತ್ರಿ ಹೋರಾಟ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
ಧರಣಿಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ತೊಕ್ಕೊಟ್ಟು, ಸುನೀಲ್ ಕುಮಾರ್ ಬಜಾಲ್, ರೈತ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮಹಿಳಾ ಮುಖಂಡೆ ಪದ್ಮಾವತಿ ಶೆಟ್ಟಿ ಹಾಗೂ ಆಟೋ ರಿಕ್ಷಾ ಯೂನಿಯನ್ ಅಧ್ಯಕ್ಷ ಜಲೀಲ್ ಕೊಡಕ್ಕಲ್ ಮಾತನಾಡಿದರು.
ಸಾಮಾಜಿಕ ಕಾರ್ಯಕರ್ತರಾದ ಅಬೂಬಕರ್ ಜಲ್ಲಿ, ಖಾದರ್ ಸಣ್ಣಬೈಲ್, ಇಸ್ಮಾಯಿಲ್ ಕಣಂತೂರು, ಕಾರ್ಮಿಕ ಮುಖಂಡರಾದ ಜಯಂತ್ ನಾಯ್ಕ್, ಸುಂದರ ಕುಂಪಲ, ವಿಲಾಸಿನಿ ತೊಕ್ಕೊಟ್ಟು, ಪ್ರಮೋದಿನಿ ಕಲ್ಲಾಪು, ಇಬ್ರಾಹಿಂ ಮದಕ, ಶೇಖರ್ ಕುಂದರ್, ರಮೇಶ್ ಉಳ್ಳಾಲ, ರಝಕ್ ಮುಡಿಪು, ಅಲಿ ಕಾಯಾರ್, ಶಾಫಿ ಮುಡಿಪು, ಫಾರೂಕ್ ಕೊಣಾಜೆ, ಇಕ್ಬಾಲ್ ಹರೇಕಳ, ಸಿದ್ದಿಕ್ ಪಂಜಿಮಾಡಿ, ಸಿರಾಜ್ ಮೊಂಟೆಪದವು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಿಪಿಐ(ಎಂ) ಮುಡಿಪು ವಲಯ ಸಮಿತಿ ಸದಸ್ಯ ರಝಾಕ್ ಮೊಂಟೆಪದವು ಕಾರ್ಯಕ್ರಮ ನಿರೂಪಿಸಿದರು. ಸಿಪಿಐ(ಎಂ) ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ ವಂದಿಸಿದರು.
ಇದನ್ನೂ ನೋಡಿ : ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳ ಕೊಲೆ! ಅಡ್ವೊಕೇಟ್ ಬಾಲನ್ ಆರೋಪ Janashakthi Media
