ತಹಶಿಲ್ದಾರರ ಕಚೇರಿ ಎದುರು ಎಸ್ಎಫ್ಐ ಕಾರ್ಯಕರ್ತರ ಪ್ರತಿಭಟನೆ ಮರ್ಯಾದೆ
ರಾಣೇಬೆನ್ನೂರ: ಮರ್ಯಾದಾ ಹತ್ಯೆ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಿ, ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಆಗ್ರಹಿಸಿದರು. ಮರ್ಯಾದೆ
ಹುಬ್ಬಳ್ಳಿಯ ಇನಾಂ ವೀರಾಪುರದ ಗರ್ಭಿಣಿ ಯುವತಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ನಗರದ ತಹಶಿಲ್ದಾರವರ ಕಛೇರಿ ಎದುರು ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಅನ್ಯ ಜಾತಿ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗರ್ಭಿಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರೀಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಈ ಅಮಾನವೀಯವಾಗಿ ಹತ್ಯೆ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ತೀವ್ರವಾಗಿ ಖಂಡಿಸುತ್ತದೆ.
ಇದನ್ನೂ ಓದಿ: ಹೀಲಿಯಂ ಸಿಲಿಂಡರ್ ಸ್ಫೋಟ: ವರದಿ ನೀಡುವಂತೆ ಅಧಿಕಾರಿಗಳಿಗೆ ಜಿ.ಪರಮೇಶ್ವರ್ ಸೂಚನೆ
ದಲಿತ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದ ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದಳು. ಮದುವೆಯಾಗಿ ಊರಿಗೆ ಬಂದಿದ್ದ ಮಾನ್ಯಾಳನ್ನು ಆಕೆಯ ಹೆತ್ತ ತಂದೆ ಮತ್ತು ಕುಟುಂಬಸ್ಥರು ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಕ್ರೂರ ಘಟನೆಯನ್ನು ಮಾನವೀಯ ನಾಗರೀಕ ಸಮಾಜ ಸಹಿಸುವುದಿಲ್ಲ ಎಂದರು.
ಮಹಿಳೆಯರ ಮೇಲಾಗುವ ಎಲ್ಲ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ನ್ಯಾ. ಜಿ.ಎಸ್ ವರ್ಮಾ ಸಮಿತಿಯ ಹಾಗೂ ಉಗ್ರಪ್ಪ ಸಮಿತಿಯ ಮಹಿಳಾ ಪರ ಕಾನೂನು ಶಿಫಾರಸ್ಸುಗಳನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸುತ್ತೇವೆ.
ಎಸ್ಎಫ್ಐ ಮಾಜಿ ಅಧ್ಯಕ್ಷ ಶ್ರೀಧರ ಚಲವಾದಿ ಮಾತನಾಡಿ, ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರಜಾತಿ ವಿವಾಹವನ್ನು ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನೋಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಗರ್ಭೀಣಿಯಾದ ತನ್ನ ಮಗಳನ್ನೆ ಅಮಾನುಷವಾಗಿ ತಂದೆಯೇ ಕೊಲ್ಲುವ ಜಾತಿ ಪ್ರತಿಷ್ಠೆಯು ಘನ ಘೋರವಾಗಿದೆ. ಈ ಜಾತಿ ತಾರತಮ್ಯ, ಜಾತಿ ಧ್ವೇಷ, ಅಸ್ಪೃಷ್ಯತೆ ನಿರ್ಭೀಜಗೊಳಿಸದೇ ಸಮಾಜದ ಬೆಳವಣಿಗೆ, ಸಾಮರಸ್ಯ ತರಲು ಸಾಧ್ಯವಿಲ್ಲ.

ಮೃತ ಯುವತಿ ಮಾನ್ಯ ದೊಡ್ಡಮನಿ ಹಾಗೂ ಆಕೆಯ ಪತಿ ವಿವೇಕಾನಂದ ಪ್ರಾಪ್ತವಯಸ್ಕರು ಮಾತ್ರವಲ್ಲ ಉತ್ತಮ ಶಿಕ್ಷಣ ಪಡೆಯುತ್ತಾ ಉತ್ತಮ ಭವಿಷ್ಯದ ಕನಸು ಕಾಣುತ್ತಾ ಹೊಸ ಬದುಕು ಕಟ್ಟಿಕೊಂಡಿದ್ದರು. ಆದರೆ ಜಾತಿಯ ವರ್ತುಲದಲ್ಲಿ ಸಿಕ್ಕಿ ಹಾಕಿಕೊಂಡ ಮೃತ ಮಾನ್ಯಳ ತಂದೆ ಮನೆಯವರು ಮಗಳು ದಲಿತ ಯುವಕನನ್ನು ಮದುವೆಯಾದ ಒಂದು ನೆಪಮಾಡಿ ಅಮಾನುಷವಾಗಿ ಹತ್ಯೆ ಮಾಡಿರುವುದು ಜಾತಿ ಶ್ರೇಷ್ಠತೆಯ ವ್ಯಸನಕ್ಕೆ ಜಗತ್ತು ನೋಡುವ ಮುಂಚೆಯೆ ಗರ್ಭದಲ್ಲಿರುವ ಶಿಶುವನ್ನು ಕೂಡ ಹತ್ಯೆಗೈದಿರುವುದನ್ನು ಸಹಿಸುವುದಾದರೂ ಹೇಗೆ?
ಮಾರ್ಯದೆ ಹತ್ಯೆ ನಡೆಸುವ ಎಲ್ಲರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕುಟುಂಬಕ್ಕಿರುವ ಆತಂಕದಂತೆ ಮಾನ್ಯಾಳ ಪತಿ ವೀವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಮುಖಂಡರಾದ ಬಸವರಾಜ ಸಾವಕ್ಕನವರ ಮಾತನಾಡಿ, ಸರ್ಕಾರ ಅಂತರಜಾತಿ ವಿವಾಹವಾಗುವ ಎಲ್ಲ ಯುವಕ ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಅವರಿಗೆ ಸಾಮಾಜಿಕವಾಗಿ ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು ಹಾಗೂ ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು.
ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಈಗಾಗಲೇ ಅವಮರ್ಯಾದಾ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಸರ್ವೊಚ್ಛ ನ್ಯಾಯಾಲಯದ ಆದೇಶಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಗುಡ್ಡಪ್ಪ ಮಡಿವಾಳರ, ಹರೀಶ್ ನಾಯಕ, ಯೋಗೆಶ್ ಗೌಡ್ರು, ನಾಗರಾಜ ಸಿ ಎಲ್, ಮದನ್ ಹರಿಜನ, ರಾಹುಲ್ ಎಸ್ ಎಲ್, ಚೇತನ್ ಎಸ್ ಯು, ದರ್ಶನ ಚಕ್ರಸಾಲಿ, ಮನೋಜ್ ಆರೇರ್, ಚನ್ನವೀರಯ್ಯ, ನವೀನ ಬೆತ್ತೂರ, ಶಂಕರಗೌಡ ಪೋಲಿಸಗೌಡ್ರು, ಬೀರಪ್ಪ ಹೆಚ್, ಮುಖಂಡರಾದ ಹನುಮಂತ ದುಗ್ಗತ್ತಿ, ಶಬ್ಬಿರ್, ಕರಬಸಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ‘ಮರ್ಯಾದೆಗೇಡು ಹತ್ಯೆ’ ಮರ್ಯಾದೆ ಉಳಿಸಿಕೊಳ್ಳಲಿ ಸರ್ಕಾರ!? ಕೆ.ಎಸ್.ವಿಮಲಾ, ಗುರುರಾಜ ದೇಸಾಯಿ ಮಾತುಕತೆ Janashakthi
