ಮನರೇಗ ಕಾನೂನಿನ ಮೂಲಭೂತ ವೈಶಿಷ್ಟ್ಯಗಳನ್ನು ನರೇಂದ್ರ ಮೋದಿ ಸರ್ಕಾರ ತನ್ನ ಡಂಗುರ ಬಾರಿಸುವ ಪಾಲುದಾರರಾದ ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ (ಸಂಯುಕ್ತ)ದ ಜೊತೆಗೂಡಿ ಅಳಿಸಿ ಹಾಕಿದೆ. 2014 ರಿಂದಲೂ, ಅತ್ತ ಕಾರ್ಪೋರೆಟ್ಗಳಿಗೆ ತೆರಿಗೆ ರಿಯಾಯ್ತಿಗಳನ್ನು ಮತ್ತು ಸಾಲ ಮನ್ನಾ ನೀಡುತ್ತಲೇ, ಇತ್ತ ಮನರೆಗಾವನ್ನು ದುರ್ಬಲಗೊಳಿಸಿರುವ, ಹಣಕಾಸು ಹಂಚಿಕೆಗೆ ಹಪಹಪಿಸುವಂತೆ ಮಾಡಿರುವ, ಗ್ರಾಮೀಣ ಬಡವರ ಇಂತಹ ಜೀವನ ಸೇತುವನ್ನು ಬಲಪಡಿಸುವ ಬದಲು ಅದಕ್ಕೆ ಕೊಡಲಿಯೇಟು ಹಾಕುತ್ತಿರುವ. ಸಂವಿಧಾನದ ನಿರ್ದೇಶಕ ತತ್ವಗಳನ್ನು ನೆಲಸಮ ಮಾಡುತ್ತಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು.
–ಬೃಂದಾ ಕಾರಟ್
–ಅನು: ಜಿ.ಎಸ್.ಮಣಿ
ಕೇಂದ್ರ ಸರ್ಕಾರ ತನಗಿರುವ ಬಹುಮತವನ್ನು ಬಳಸಿಕೊಂಡು ಒಂದು ಮಸೂದೆಯ ಮೂಲಕ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾನೂನು(ಎಂಜಿಎನ್ರೆಗಾ ಅಥವಾ ಮನರೆಗಾ)ಅನ್ನು ಬದಲಾಯಿಸಿದೆ. ಇದೊಂದು ಅತ್ಯಂತ ಭಂಡ ‘ಅಧಿಕಾರ್ ಚೋರಿ’ (ಹಕ್ಕು ಕಳವು) ಮತ್ತು ಎಂಜಿನರೆಗಾ ಅಂದರೆ ಈಗಿನ ಕಾನೂನಿನ ಸ್ವರೂಪವನ್ನೇ ಬದಲಿಸುವ ಮತ್ತು ಗ್ರಾಮೀಣ ಕೆಲಸಗಾರರ ಮೇಲಿನ ಆಕ್ರಮಣವಷ್ಟೇ ಅಲ್ಲ, ಇದನ್ನು ಸಂವಿಧಾನದ ಮೇಲಿನ ನೇರ ಹಲ್ಲೆಯ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅದು ಸಂಸತ್ತಿನ ಸ್ಥಾಯಿ ಸಮಿತಿಯ ಮುಂದೆ ಹೊಗಬೇಕಿತ್ತು.
ಸಂವಿಧಾನದ 41 ನೇ ಪರಿಚ್ಛೇದ “ಪ್ರಭುತ್ವವು ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ದಿಯ ಮಿತಿಯೊಳಗೆ ದುಡಿಮೆಯ ಹಕ್ಕನ್ನು ಗಳಿಸುವಂತಾಗಲು ಪರಿಣಾಮಕಾರಿ ಅವಕಾಶವನ್ನು ಕಲ್ಪಿಸಬೇಕು… “ಎಂದು ಹೇಳುತ್ತದೆ. ಅಂದು ಸಂವಿಧಾನ ಸಭೆಯಲ್ಲಿ ದುಡಿಮೆಯ ಹಕ್ಕು ಮೂಲಭೂತ ಹಕ್ಕಾಗಬೇಕು ಎಂದು ಪ್ರತಿಪಾದಿಸಿದ ಸಮಾಜವಾದಿ ಆದರ್ಶಗಳುಳ್ಳವರು ಮತ್ತು ಅದನ್ನು ತೀವ್ರವಾಗಿ ವಿರೊಧಿಸಿದ ಬಂಡವಾಳಿಗರ ಲಾಬಿ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು. ಅಂತಿಮವಾಗಿ ಇದನ್ನು ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಯಿತು.
ಇದನ್ನೂ ಓದಿ: ಗಂಗಾವತಿ | ರಾಸಾಯನಿಕ ಬಳಕೆ : ತುಂಗಭದ್ರಾ ಸೇರಿದಂತೆ ದೇಶದ 80 ನದಿಗಳು ಕಲುಷಿತ ಬಸವರಾಜ ವೀರಾಪುರ ಕಳವಳ
ಡಾ.ಬಿ ಆರ್ ಅಂಬೆಡ್ಕರ್ ಇದನ್ನು “ನವೀನ ಚರ್ಯೆ” ಎಂದು ವರ್ಣಿಸಿದ್ದರು. ನಿರ್ದೇಶಕ ತತ್ವಗಳು ನ್ಯಾಯವಿಚಾರಣೆಗೆ ಒಳಪಡದಿದ್ದರೂ ಅವನ್ನು ಕಾನೂನು ಕರ್ತರುಗಳಿಗೆ “ಸೂಚನೆ ನೀಡುವ ಉಪಕರಣಗಳು” ಮತ್ತು “ಆರ್ಥಿಕ ಪ್ರಜಾಸತ್ತೆಗೆ ಅತ್ಯಾವಶ್ಯಕ” ಅಂಶ ಎಂದು ಪರಿಗಣಿಸಬೇಕಾಗಿತ್ತು. ಸಮಾಜವಾದ-ಪರ ಸದಸ್ಯ ಕೆ ಟಿ ಷಾ ಇದು “ನಂಬಿಕೆಯ ಆಶಯ” ಎಂದು ಆಗ ವರ್ಣಿಸಿದ್ದರು. ನಂತರದ ಬಂಡವಾಳಶಾಹಿ “ಅಭಿವೃದ್ಧಿಯ” ಈ ವರ್ಷಗಳಲ್ಲಿ ನಿರುದ್ಯೊಗಿಗಳ ಮತ್ತು ಉದ್ಯೋಗಾವಕಾಶಗಳ ನಿರಾಕರಣೆಯ ಜೀವಂತ ಅನುಭವದಲ್ಲಿ ಇದು ಅನುರಣಿಸುತ್ತಿದೆ.
ಎಡ ಶಕ್ತಿಗಳ ನಿರ್ಣಾಯಕ ಪಾತ್ರ
ನಿರ್ದೆಶಕ ತತ್ವಗಳಿಗೆ, ನಿರ್ದಿಷ್ಟವಾಗಿ ದುಡಿಮೆಯ ಹಕ್ಕಿನತ್ತ ಸುಮಾರಾಗಿ ಹತ್ತಿರವೆನ್ನಬಹುದಾದ ಒಂದು ನೀತಿ ಪಲ್ಲಟಕ್ಕೆ ದುಡಿಯುವ ಜನರ ಐದೂವರೆ ದಶಕಗಳ ಹೋರಾಟ ಮತ್ತು ನಾಟಕೀಯ ಬೆಳವಣಿಗೆಗಳೇ ಬೇಕಾದವು. 2004 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ನೇತ್ರತ್ವದ ‘ಸಂಯುಕ್ತ ಪ್ರಗತಿಪರ ಮೈತ್ರಿಕೂಟ’ (ಯುಪಿಎ) ಸೋಲಿಸಿತಾದರೂ ಅದಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಅದ್ದರಿಂದ ಮೊದಲ ಬಾರಿಗೆ ಕೇಂದ್ರ ಸರ್ಕಾರ ಎಡ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಯಿತು. ಬಹು ಮುಖ್ಯವಾಗಿ, ಎಡ ಪಕ್ಷಗಳು ಸಿಪಿಐ(ಎಂ) ನೇತ್ರತ್ವದಲ್ಲಿ ಸ್ವತಂತ್ರವಾಗಿ ತಮ್ಮದೇ ಕಾರ್ಯಕ್ರಮ ಮತ್ತು ಶಕ್ತಿಯ ಅಧಾರದ ಮೇಲೆ ಗೆದ್ದವು. ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ’ ಇಂತಹ ರಾಜಕೀಯ ಸಂರಚನೆಯಿಂದಾಗಿ ಸಾಧ್ಯವಾಯಿತು. ಸಂಸತ್ತು 2005ರಲ್ಲಿ ಅಂತಿಮವಾಗಿ ಸರ್ವಾನುಮತದಿಂದ ಅಂಗೀಕರಿಸಿದ ಈ ಶಾಸನವನ್ನು ರೂಪಿಸುವಲ್ಲಿ ಎಡ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಿದವು.

ಈ ಕಾನೂನು ಜನರ ದುಡಿಮೆಯ ಹಕ್ಕಿಗೆ ದೊರೆತ ಒಂದು ಭಾಗಶಃ ಮಾನ್ಯತೆ ಮತ್ತು ಒಂದು ಕನಿಷ್ಠ ಕೂಲಿಯಲ್ಲಿ ಕೆಲಸ ಒದಗಿಸಲು ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲನ್ನು ಖಾತ್ರಿಪಡಿಸುವ ಪ್ರಭುತ್ವದ ಜವಾಬದಾರಿಕೆಯ ಸ್ವೀಕಾರವೂ ಆಗಿತ್ತು. ಈ ಕಾನೂನು ವರ್ಷವಿಡೀ ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ ನೂರು ದಿನಗಳ ಕೆಲಸ ನೀಡುವ ಖಾತ್ರಿ ನೀಡುತ್ತದೆ ಮತ್ತು ಸಾರ್ವತ್ರಿಕವಾಗಿದೆ, ಇದು ದೈಹಿಕ ಕೆಲಸ ಮಾಡಲು ಮುಂದೆ ಬರುವ ಎಲ್ಲರಿಗೂ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಮುಕ್ತ ಅವಕಾಶ ನೀಡುತ್ತದೆ. ಬಹು ಮುಖ್ಯವಾಗಿ ಈ ಕಾನೂನು ಕೆಲಸದ ಬೇಡಿಕೆಗೆ ಸ್ಪಂದಿಸಿ ಗ್ರಾಮೀಣ ಕುಟುಂಬಗಳಿಗೆ ಅವುಗಳ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡುತ್ತದೆ.
ಕೆಲಸ ನಿಂತ ನೀರಲ್ಲ. ಬದಲಿಗೆ ಗ್ರಾಮೀಣ ಕುಟುಂಬಗಳ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆ ಆಗುತ್ತಿರುತ್ತದೆ. ಇದರಲ್ಲಿ ಒಂದು ಗಾಢವಾದ ಪ್ರಜಾಸತ್ತಾತ್ಮಕ ಸತ್ವವಿದೆ. ಒಂದು ಕುಟುಂಬಕ್ಕೆ ಇದಕ್ಕಿಂತ ಉತ್ತಮ ಉದ್ಯೋಗದ ಆಯ್ಕೆಗಳಿದ್ದರೆ ನರೆಗಾದಡಿ ಕೆಲಸವನ್ನು ಪಡೆಯುವ ಅವಕಾಶವನ್ನು ಉಳಿಸಿಕೊಂಡೇ ಅಂತಹ ಆಯ್ಕೆ ಮಾಡುವ ಸ್ವಾತಂತ್ರ್ಯ ಇರುತ್ತದೆ. ಈ ಕಾನೂನು ಗಂಡಸರಿಗೆ ಮತ್ತು ಹೆಂಗಸರಿಗೆ ಸಮಾನ ಕೂಲಿಗಳನ್ನು ಖಾತ್ರಿಪಡಿಸುತ್ತದೆ ಮತ್ತು ಪೂರ್ತಿ ಕೂಲಿ ಪಾವತಿಯನ್ನು ಕೇಂದ್ರ ಸರ್ಕಾರ ಭರಿಸುತ್ತದೆ.
ಈ ಕಾನೂನಿನ ಅಡಿಯಲ್ಲಿ, ರಾಜ್ಯ ಸರ್ಕಾರಗಳು ಸುಮಾರು 10% ರಷ್ಟು ಹಣಕಾಸು ಜವಾಬ್ದಾರಿಯನ್ನು ಹೊಂದಿವೆ ಮತ್ತು ರಾಜ್ಯದ ಅಗತ್ಯಗಳಿಗೆ ಅನುಗುಣವಾಗಿ ಯೋಜನೆಗಳ ವಿನ್ಯಾಸ ಮತ್ತು ಅವುಗಳ ಅನುಷ್ಠಾನದಲ್ಲಿ ಒಂದು ಪಾತ್ರವನ್ನು ಹೊಂದಿವೆ. ಪಂಚಾಯತ್ಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಅಗತ್ಯವಿರುವ ಯೋಜನೆಗಳನ್ನು ಗುರುತಿಸಲು ಮತ್ತು ವಿನ್ಯಾಸಗೊಳಿಸಲು ಹಕ್ಕು ಮತ್ತು ಜವಾಬ್ದಾರಿಯನ್ನು ಹೊಂದಿವೆ. ಬೇಡಿಕೆ-ಚಾಲಿತ ಮತ್ತು ಸಾರ್ವತ್ರಿಕವಾಗಿ ಅನ್ವಯವಾಗುವ ಇಂತಹದೊಂದು ಕಾನೂನು ಬಹುಶಃ ಬಂಡವಾಳಶಾಹಿ ಜಗತ್ತಿನಲ್ಲಿಯೇ ಮೊತ್ತ ಮೊದಲನೆಯದು.
ಮೂಲಭೂತ ವೈಶಿಷ್ಟ್ಯಗಳನ್ನು ಅಳಿಸಿ ಹಾಕಿದ ಮಸೂದೆ
ಮನರೇಗ ಕಾನೂನಿನ ಈ ಮೂಲಭೂತ ವೈಶಿಷ್ಟ್ಯಗಳನ್ನು ನರೇಂದ್ರ ಮೋದಿ ಸರ್ಕಾರ ತನ್ನ ಡಂಗುರ ಬಾರಿಸುವ ಪಾಲುದಾರರಾದ ತೆಲುಗು ದೇಶಂ ಪಕ್ಷ ಮತ್ತು ಜನತಾ ದಳ (ಸಂಯುಕ್ತ)ದ ಜೊತೆ ಸೇರಿ ತಮ್ಮ ಹೊಸ ಮಸೂದೆಯ ಕರಡಿನ ಮೂಲಕ ಅಳಿಸಿ ಹಾಕಿವೆ. ಇದಿನ್ನು ಬೇಡಿಕೆ-ಚಾಲಿತವಾಗಿರುವುದಿಲ್ಲ, ಬೇಡಿಕೆಗೆ ತಕ್ಕಂತ ಪೂರೈಕೆ ಇರುವುದಿಲ್ಲ. ಇದು ಕೇಂದ್ರ ಸರ್ಕಾರದ “ಪ್ರಮಾಣಕ ಹಣಕಾಸು ಹಂಚಿಕೆ”ಗಳ ಮೇಲೆ ಅವಲಂಬಿತವಾಗಿರುತ್ತದೆ.

ಖರ್ಚು ಹಂಚಿಕೆಯನ್ನು ಮೀರಿದರೆ ಅಂತಹ ಖರ್ಚನ್ನು ಭರಿಸಲು ಕೇಂದ್ರ ಸರ್ಕಾರಕ್ಕೆ ಕಾನೂನಿನ ಬಾಧ್ಯತೆ ಇರುವುದಿಲ್ಲ. ಕೇಂದ್ರದ ತೆರಿಗೆ ಆದಾಯದಲ್ಲಿ ನ್ಯಾಯಬದ್ಧ ಪಾಲಿನಿಂದ ವಂಚಿತ ರಾಜ್ಯ ಸರಕಾರಗಳ ಮೇಲೆ ಈಗ ಶೇ 40 ರಷ್ಟು ಖರ್ಚಿನ ಹೊರೆ ಹಾಕಲಾಗಿದೆ. ಅತ್ಯಂತ ಕೇಂದ್ರೀಕರಣ ಇರುವ ಇದರಲ್ಲಿ ಎಲ್ಲವನ್ನೂ ಅಂದರೆ ಯೋಜನೆಗಳ ವಿನ್ಯಾಸದಿಂದ ಡಿಜಿಟಲೀಕೃತ ಲೆಕ್ಕ ಪರಿಶೊಧನೆಯ ವರೆಗೆ ಕೇಂದ್ರ ಸರ್ಕಾರದ ಹತೋಟಿಯಲ್ಲಿ ಇಡಲಾಗಿದೆ. ಇವು ಸಂವಿಧಾನದ ಒಕ್ಕೂಟ ಸ್ವರೂಪದ ಮೇಲೆ ನಡೆಸಿರುವ ನೇರ ದಾಳಿಗಳು.
ಗ್ರಾಮೀಣ ಶ್ರೀಮಂತರ ಪರವಾದ ವರ್ಗ ಪಕ್ಷಪಾತ, ಕೃಷಿ ಹಂಗಾಮಿನಲ್ಲಿ ಈ ಯೋಜನೆಯಡಿ ಕೆಲಸಗಳನ್ನು ನಿಷೇಧಿಸುವ ಅನುಚ್ಛೇದದಲ್ಲಿ ಢಾಳಾಗಿ ಪ್ರದರ್ಶಿತಗೊಂಡಿದೆ. ಕೃಷಿಯಲ್ಲಿ ಹೆಚ್ಚಿರುವ ಯಾಂತ್ರೀಕರಣದಿಂದ ಕೆಲಸದ ದಿನಗಳು ಕಡಿಮೆಯಾಗಿವೆ. ಕೃಷಿ ಕೆಲಸ ಸಿಗದಾಗ ಮತ್ತು ಕೂಲಿಗಳು ಮನರೆಗಾ ಕೂಲಿಗಿಂತ ಕಡಿಮೆ ಇದ್ದಾಗ ಮಾತ್ರವೇ ಕೆಲಸಗಾರರು ಕೃಷಿ ಹಂಗಾಮಿನಲ್ಲಿ ಮನರೆಗಾ ಕೆಲಸವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನರೆಗಾ ಕೆಲಸದ ಮಾದರಿಗಳು ತೋರಿಸುತ್ತವೆ.
ಈ ನಿಷೇಧ ಗ್ರಾಮೀಣ ಬಡವರ ಚೌಕಾಸಿ ಸಾಮರ್ಥ್ಯವನ್ನು ಕುಂದಿಸುತ್ತದೆ. ಮನರೇಗಾ ಕೆಲಸ ಇಲ್ಲದಿದ್ದರೆ, ಅದು ಅವರನ್ನು ದೊಡ್ಡ ಜಮೀನುದಾರರ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾದ ಅಸಹಾಯಕತೆಗೆ ತಳ್ಳುತ್ತದೆ. ಕೃಷಿ ಕ್ಷೇತ್ರದಲ್ಲಿ ಪುರುಷರಿಗಿಂತ ಕಡಿಮೆ ವೇತನ ಪಡೆವ ಮಹಿಳೆಯರನ್ನು ಇದು ಹೆಚ್ಚು ಬಾಧಿಸುತ್ತದೆ. ಈ ಮಸೂದೆ ಆಧಾರ್ ಪಾವತಿ ಪದ್ಧತಿಯನ್ನು ಕಾನೂನುಬದ್ಧಗೊಳಿಸಿ ಡಿಜಿಟಲ್ ಹಾಜರಾತಿ ಕಡ್ಢಾಯಗೊಳಿಸಿ ವೇತನ ಪಾವತಿ ಕಷ್ಟಕರವಾಗುವಂತೆ ಮಾಡುತ್ತದೆ. ಕ್ಷೀಣ ಸಂಪರ್ಕ ಇತ್ಯಾದಿಗಳಿಂದಾಗಿ ಇಂತಹ ಪಾವತಿ ಪದ್ಧತಿಯಲ್ಲಿ ಸಮಸ್ಯೆಗಳಿರುವ ಪುರಾವೆಗಳಿದ್ದರೂ ಸಹ ದುಡಿವವರನ್ನು ಬಲಿಪಶು ಮಾಡಲಾಗುತ್ತಿದೆ.
ಜಿ ರಾಮ್ ಜಿ ಎಂಬ ಸಂಕ್ಷಿಪ್ತ ರೂಪದ ಹೆಸರನ್ನು ಮಸೂದೆಗೆ ನೀಡಿರುವುದು ನಂಬಿರುವವರಿಗೆ ಮೋಡಿ ಮಾಡುವ ಕೆಳಮಟ್ಟದ ಕಸರತ್ತು. ಆದರೆ “ಜಿ ರಾಮ್ ಜಿ ಗೆ ಧಿಕ್ಕಾರ” ಎಂದು ಕೊಟ್ಯಂತರ ಜನ ಪ್ರತಿಭಟಿಸಿದರೆ ಅದು ಭಾವನೆಗಳಿಗೆ ನೋವುಂಟು ಮಾಡಿ ಸರಕಾರಕ್ಕೆ ತಿರುಗುಬಾಣವಾಗಬಹುದು.
ಒಂದು ಯಾತನೆಯ ಪ್ರತಿಬಿಂಬ
ಮನರೆಗಾ ಕೆಲಸಗಾರರ ಜೊತೆಗೆ ಕೆಲಸ ಮಾಡಿರುವ ನಮಗೆ ಅವರು ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿ ದುಡಿಯುತ್ತಾರೆ ಎಂಬುದರ ಅರಿವಿದೆ. ಕೆಲ ಸಂದರ್ಭಗಳಲ್ಲಿ ಮಹಿಳೆಯರು ಉತ್ಪಾದನಾ ಮಾನದಂಡಗಳ ಪ್ರಕಾರ ದಿನವೊಂದಕ್ಕೆ 3000 ಕೆ ಜಿ ಯಷ್ಟು ಮಣ್ಣು ಎತ್ತಬೇಕಾಗುತ್ತದೆ. ಹೀಗಿದ್ದರೂ ಹೆಚ್ಚಿನ ರಾಜ್ಯಗಳಲ್ಲಿ ಮನರೆಗಾ ಕೆಲಸಗಾರರ ಶೇ 50 ರಷ್ಟು ಮಹಿಳೆಯರೇ ಇರುತ್ತಾರೆಂದರೆ, ಅದು ಖಂಡಿತವಾಗಿಯೂ ಗ್ರಾಮೀಣ ಭಾರತದ ಆಳವಾದ ಕೃಷಿ ಸಂಕಟವನ್ನು ಮತ್ತು ಉತ್ತಮ ಪರ್ಯಾಯ ಇಲ್ಲದಿರುವುದನ್ನು ಬಿಂಬಿಸುತ್ತದೆ.
ನಮ್ಮ ಜನಸಂಖ್ಯೆಯ ಶೇ.8.6 ರಷ್ಟು ಆದಿವಾಸಿಗಳಿದ್ದಾರೆ. ಆದರೆ ಮನರೆಗಾ ಕೆಲಸಗಾರರ ಕಳೆದ ವರ್ಷದ ಅಂಕಿ ಸಂಖ್ಯೆಗಳ ಪ್ರಕಾರ ಮನರೆಗಾದಲ್ಲಿ ಅವರ ಪ್ರಮಾಣ ಶೇ18.6 ರಷ್ಟು. ಪರಿಶಿಷ್ಟ ಜಾತಿಗಳವರು ಶೇ 19 ರಷ್ಟು. ಹೀಗೆ ಇಲ್ಲಿ ದುಡಿವ ಜನಗಳ ಮೂರರಲ್ಲಿ ಎರಡು ಭಾಗದಷ್ಟು ಜನ ಸಂವಿಧಾನದ ಪ್ರಕಾರ ಸಾಮಾಜಿಕ ಭದ್ರತೆಗೆ ಒಳಪಡಬೇಕಾದವರು. ಇಂತವರ ಹಕ್ಕುಗಳನ್ನು ಕಸಿಯುವುದು ಸಂವಿಧಾನಕ್ಕೆ ಅಪಚಾರವೆಸಗಿದಂತೆ. ದೂರುಪರಿಹಾರ/ಸಲಹಾ ಮಂಡಳಿಗಳಲ್ಲಿ ಅವರ ಪ್ರಾತಿನಿಧ್ಯವನ್ನು ಕೂಡ ಈ ಮಸೂದೆ ಇಲ್ಲದಂತೆ ಮಾಡಿದೆ.
ಇದನ್ನೂ ನೋಡಿ: ಏನಿದು ಪರ್ಯಾಯ ರಾಜಕಾರಣ? ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ ಸಿಪಿಐ(ಎಂ) Janashakthi Media
ನರೇಂದ್ರ ಮೋದಿ ಸರ್ಕಾರ 2014 ರಿಂದಲೂ, ಅತ್ತ ಕಾರ್ಪೋರೆಟ್ ಗಳಿಗೆ ತೆರಿಗೆ ರಿಯಾಯ್ತಿಗಳನ್ನು ಮತ್ತು ಸಾಲ ಮನ್ನಾ ನೀಡುತ್ತಲೇ, ಇತ್ತ ಮನರೆಗಾವನ್ನು ದುರ್ಬಲಗೊಳಿಸಿದೆ, ಹಣಕಾಸು ಹಂಚಿಕೆಗೆ ಹಪಹಪಿಸುವಂತೆ ಮಾಡಿದೆ. ಈ ಯೋಜನೆಯಡಿ ಕೆಲಸ ಮಾಡುವವರ ಸಂಖ್ಯೆ ಪ್ರಾರಂಭದಲ್ಲಿ 2 ಕೊಟಿ ಇದ್ದದ್ದು 7.7 ಕೋಟಿಗೆ ಏರಿದರೂ ಖರ್ಚಿನ ಬಾಬ್ತು ಸ್ಥಿರವಾಗಿದೆ ಅಥವಾ ಕಡಿಮೆಯಾಗಿದೆ-ದೇಶದ ಒಟ್ಟು ಉತ್ಪಾದನೆಯ ಶೇ 0.2 ರಷ್ಟು ಮಾತ್ರ. ಕಳೆದ ವರ್ಷ 8.9 ಕೋಟಿ ಜನ ಕೆಲಸ ಕೇಳಿದರು. ಆದರೆ 7.9 ಕೋಟಿ ಜನರಿಗೆ ಮಾತ್ರ ಕೆಲಸ ನೀಡಲಾಯಿತು. ತೊಂಬತ್ತೊಂಬತ್ತು ಲಕ್ಷ ಜನರಿಗೆ ಕೆಲಸ ನಿರಾಕರಿಸಲಾಯಿತು.
ಕೂಲಿ ಬಾಕಿ ಏರುತ್ತಲೇ ಇದ್ದು 8000 ಕೋಟಿ ರೂ.ಗೆ ಮುಟ್ಟಿದೆ. ಕುಟುಂಬಗಳಿಗೆ 100 ದಿನಗಳ ಬದಲಾಗಿ ಸರಾಸರಿ ಬರೀ 50 ದಿನಗಳ ಕೆಲಸ ದೊರೆತಿದೆ. ಹೊಸ ಮಸೂದೆಯಲ್ಲಿ 125 ದಿನಗಳ ಕೆಲಸದ ಭರವಸೆ ಗಾಯಕ್ಕೆ ಉಪ್ಪು ಸವರಿದಂತೆ. ಆದರೂ ಮನರೆಗಾಕ್ಕೆ ಜನ ಬರುತ್ತಿದ್ದರೆ ಅವರಿಗೆ ಪರ್ಯಾಯ ಅವಕಾಶಗಳಿಲ್ಲ ಎಂಬುದು ಸ್ಪಷ್ಟ-ಅಂತಹ ಹೀನ ಯಾತನಾಮಯ ಪರಿಸ್ಥಿತಿ ಮತ್ತು ಅಸ್ಥಿರತೆ ಗ್ರಾಮೀಣ ಭಾರತದಲ್ಲಿ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇಂತಹ ಜೀವನ ಸೇತುವನ್ನು ಬಲಪಡಿಸುವ ಬದಲು ಅದಕ್ಕೆ ಕೊಡಲಿಯೇಟು ಹಾಕಲಾಗುತ್ತಿದೆ. ಸಂವಿಧಾನದ ನಿರ್ದೇಶಕ ತತ್ವಗಳನ್ನು ನೆಲಸಮ ಮಾಡಲಾಗುತ್ತಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು.
(ಕೃಪೆ: ದಿ ಹಿಂದು ದಿನ ಪತ್ರಿಕೆಯಲ್ಲಿ ಡಿಸೆಂಬರ್ 19ರಂದು ಪ್ರಕಟವಾದ ಲೇಖನ)
