ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ರನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಿಸೆಂಬರ್ 24 ರಂದು ಕೆ.ಆರ್.ಪುರಂ ಗ್ರೇಟರ್ ಬೆಂಗಳೂರು ಪೂರ್ವ ಪಾಲಿಕೆ ಕಚೇರಿ ಎದುರು ಸಿಪಿಐ(ಎಂ) ಪಕ್ಷದ ನಾಯಕರಾದ ಗೌರಮ್ಮ, ನಂಜೇಗೌಡ. ಪಿ. ಮುನಿರಾಜು, ರಾಜೇಶ್ವರಿ, ಶರಣಪ್ಪ ಕಲ್ಪನಾ, ಸಿ. ರಮೇಶ್. ಪ್ರಭಾಕರ್. ರಾಮ್ ಮೋಹನ್. ವನಿತಾ ಸೇರಿದಂತೆ ಇನ್ನಿತರ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜನಪ್ರತಿನಿಧಿಗಳ ನ್ಯಾಯಾಲಯವು ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್ ನನ್ನು ಕೂಡಲೆ ಬಂಧಿಸಿ ಜೈಲಿಗೆ ಅಟ್ಟಬೇಕು. ಮೂರು ಬಾರಿ ಇವರನ್ನು ಶಾಸಕರನ್ನಾಗಿ ಮಾಡಿದ ತಪ್ಪಿಗಾಗಿ ಇವತ್ತು ಇಡೀ ಕ್ಷೇತ್ರದ ಹೆಸರು ಹಾಳಾಗಿದೆ ಎಂದು ಪ್ರತಿಭಟನೆಕಾರರು ಆಕ್ರೋಶಹೊರಹಾಕಿದರು.
ಸರಕಾರದಿಂದ ಬಂದ ನೂರಾರು ಕೋಟಿ ರೂ.ಗಳ ಅನುದಾನ ಎಲ್ಲಿ ಬಳಕೆಯಾಗಿದೆ ಎಂದು ಗೊತ್ತಾಗುತ್ತಿಲ್ಲ. ಕ್ಷೇತ್ರದಲ್ಲಿ ಕಣ್ಣಿಗೆ ಕಾಣುವಂತಹ ಯಾವುದೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಶಾಸಕರ ವಿರುದ್ಧ ಸರಕಾರಿ ಭೂಮಿ ಒತ್ತುವರಿ ಸೇರಿದಂತೆ ಅನೇಕ ಗುರುತರ ಆರೋಪಗಳಿವೆ. ಸರಕಾರ ಬೈರತಿ ಬಸವರಾಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
