ನವದೆಹಲಿ: ದೇಶದಲ್ಲಿ ವಿಮಾನ ಪ್ರಯಾಣಿಕರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಬಗ್ಗೆ ಸಿಪಿಐ(ಎಂ) ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಭಾರತದ ವಿಮಾನ ಪ್ರಯಾಣ ವಲಯದಲ್ಲಿನ ಪ್ರಸ್ತುತ ಬಿಕ್ಕಟ್ಟನ್ನು ಭಾರತದ ವಿಮಾನ ಸಾರಿಗೆ ವಲಯದಲ್ಲಿ ಒಬ್ಬರ ಅಥವ ಇಬ್ಬರ ಗುತ್ತೇದಾರಿಕೆ ಮೂಡಿಬಂದಿರುವುದಕ್ಕೆ ಸಂಬಂಧಪಟ್ಟ ಸಂರಚನಾತ್ಮಕ ಅಂಶಗಳ ಒಂದು ಫಲಿತಾಂಶವಾಗಿ ನೋಡಬೇಕಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ನ್ಯಾಯಾಂಗ ನಿರ್ದೇಶನಗಳ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ತಂದ ಹೊಸ ನಿಯಮಾವಳಿಗಳ ಉದ್ದೇಶ ವಿಮಾನ ಸಿಬ್ಬಂದಿಯ, ವಿಶೇಷವಾಗಿ ಪೈಲಟ್‌ಗಳ ಆಯಾಸ ನಿರ್ವಹಣೆಯನ್ನು ಖಚಿತಪಡಿಸಲಿಕ್ಕೆಂದು ಮತ್ತು ಒಟ್ಟಾರೆಯಾಗಿ ವಿಮಾನ ಪ್ರಯಾಣಿಕರ ಸುರಕ್ಷತೆಯ ಕಾಳಜಿಗಳನ್ನು ಪರಿಹರಿಸಲಿಕ್ಕೆಂದು ಆಗಿತ್ತು. ಒಂದೆಡೆ, ಇಂಡಿಗೋ ಗೆ ಸಾಕಷ್ಟು ಸಮಯವಿದ್ದರೂ, ಅದಕ್ಕೆ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ, ಇದರಿಂದಾಗಿ ಅವರ ಕಾರ್ಯಾಚರಣೆಗಳು ಬಹುತೇಕ ಸ್ಥಗಿತಗೊಂಡವು.
ಇದನ್ನೂ ಓದಿ: ಅಸ್ತಿತ್ವವಾದಿ ರಾಜಕೀಯವೂ ಪ್ರಜಾಸತ್ತೆಯ ಮೌಲ್ಯಗಳೂ
ಈ ಅಭೂತಪೂರ್ವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಡಿಜಿಸಿಎಯನ್ನು ತನ್ನ ನಿಯಮಗಳ ಅನುಷ್ಠಾನವನ್ನು ಮುಂದೂಡುವಂತೆ ಹೇಗೋ ಬಲವಂತಪಡಿಸುವುದು ಅವರಿಗೆ ಸಾಧ್ಯವಾಯಿತು. ಈ ಮೂಲಕ ಸುರಕ್ಷತೆಯ ವಿಷಯದಲ್ಲಿ ಗಂಭೀರವಾಗಿ ರಾಜಿ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ, ಇಂಡಿಗೊ ವಿಮಾನ ಹಾರಾಟಗಳ ಹಠಾತ್ ಅಸ್ತವ್ಯಸ್ತತೆಯು ಇತರ ವಿಮಾನಯಾನ ಸಂಸ್ಥೆಗಳು ಭಾರಿ ಅನಿರೀಕ್ಷಿತ ಲಾಭವನ್ನು ಮಾಡಿಕೊಳ್ಳುವ ಪರಿಸ್ಥಿತಿಗಳನ್ನು ಸೃಷ್ಟಿಸಿತು, ವಿಮಾನ ಪ್ರಯಾಣವನ್ನೇ, ವೈದ್ಯಕೀಯ ತುರ್ತುಗಳಿಗೂ ಸಹ, ಅಸಾಧ್ಯವಾಗಿಸಿತು.
ಪ್ರಸ್ತುತ ಬಿಕ್ಕಟ್ಟು ಹಲವು ವರ್ಷಗಳಿಂದ ವಾಯುಸಾರಿಗೆ ವಲಯದಲ್ಲಿ ಸೃಷ್ಟಿಯಾಗಿರುವ ಸಂರಚನಾತ್ಮಕ ಕೊರತೆಯ ಒಂದು ಸಹಜ ಪರಿಣಾಮವಾಗಿದೆ. ಇದೇ ರೀತಿಯ ಒಬ್ಬಿಬ್ಬರ ಗುತ್ತೇದಾರಿಕೆಗಳು ಹೊಮ್ಮುತ್ತಿರುವ ಮತ್ತು ಬಂಟತನದ ಆರೋಪಗಳು ದಟ್ಟವಾಗಿರುವ ಇತರ ಮೂಲಸೌಕರ್ಯ ವಲಯಗಳಿಗೂ ಇದು ಒಂದು ಮುನ್ನೆಚ್ಚರಿಕೆಯನ್ನು ಸೂಚಿಸುತ್ತದೆ. ಪ್ರಾಸಂಗಿಕವಾಗಿ, ಇಂಡಿಗೊ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ವಂತಿಗೆ ನೀಡಿರುವ ಆರೋಪಗಳು ಸಹ ಬೆಳಕಿಗೆ ಬಂದಿವೆ.
ಈ ಅನುಚಿತ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಜವಾಬ್ದಾರರಾಗಿರುವ ಎಲ್ಲರ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಅಥವಾ ಜಂಟಿ ಸಂಸದೀಯ ಸಮಿತಿಯ ಮೂಲಕ ಒಂದು ಸೂಕ್ತವಾದ ಸ್ವತಂತ್ರ ತನಿಖೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ, ವಿಮಾನ ದರಗಳ ಮೇಲಿನ ಬೆಲೆ ಮಿತಿಯನ್ನು ಎಲ್ಲಾ ಸಮಯದಲ್ಲೂ ದೃಢವಾಗಿ ಪಾಲಿಸುವಂತೆ ಸರ್ಕಾರ ಖಚಿತಪಡಿಸಬೇಕು ಎಂದು ಹೇಳಿದೆ.
ಇದನ್ನೂ ನೋಡಿ: ಭೂಮಿಯನ್ನು ಉಳಿಸಿಕೊಳ್ಳಲು ಸರಕಾರದ ವಿರುದ್ಧದ ಹೋರಾಟ ಬಲಗೊಳ್ಳಲಿದೆ – ಯು. ಬಸವರಾಜ Janashakthi Media
