ಕೆ ಪಿ ಎಸ್‌ ಶಾಲೆಯನ್ನು ಪ್ರಾರಂಭಿಸುವ ನೆಪದಲ್ಲಿ ಶಾಲೆ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಿ – ಶಿಕ್ಷಣ ತಜ್ಞ ವಿ.ಪಿ ನಿರಂಜನಾರಾಧ್ಯ

ಬೆಂಗಳುರು : ನಗರದ ಮೌರ್ಯ ಹೋಟೆಲಿನ ಸಭಾಂಗಣದಲ್ಲಿ ಆಯೋಜಿಸಿದ ಸಭೆಯಲ್ಲಿ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ವಿ..ಪಿ ರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಗಳ ವಿಲೀನ , ಶಿಕ್ಷಣ ಹಕ್ಕು ಕಾಯಿದೆಯ ಪರಿಣಾಮಕಾರಿ ಜಾರಿ ಹಾಗು ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಬಲವರ್ಧನೆ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತಂತೆ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಕೂಲಂಕುಷವಾಗಿ ಚರ್ಚಿಸಲಾಯಿತು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮೂಲ ವಾರಸುದಾರರ ಜೊತೆ ಸಮಾಲೋಚಿಸಿ ರಾಜ್ಯ ಶಿಕ್ಷಣ ನೀತಿ ರೂಪಿಸಿದ್ದರೂ ಅದನ್ನು ಬದಿಗಿಟ್ಟು, ರಾಜ್ಯ ಶಿಕ್ಷಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಮೂಲ ವಾರಸುದಾರರ ಜೊತೆ ಯಾವುದೇ ಸಮಾಲೋಚನೆ ಮಾಡದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮಾರಕವಾಗುವ ಹಲವು ಸರಣಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಸಭೆ ಅತೀವ ಕಳವಳ ವ್ಯಕ್ತ ಪಡಿಸಿತು . ವಿಸ್ತೃತ ಚರ್ಚೆಯ ನಂತರ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಖಾತರಿಗೊಳಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಈ ಕೆಳಗಿನ ನಿರ್ಣಯಗಳನ್ನು ಎಲ್ಲರ ಒಮ್ಮತದಿಂದ ಕೈಗೊಳ್ಳಲಾಯಿತು ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಹಲವು ನಿರ್ಣಯಗಳು ಕೈ ಗೊಳ್ಳಲಾಯಿತು.

ಇದನ್ನೂ ಓದಿ : ಶಿಕಾರಿಪುರ | ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸರ್ಕಲ್ಯರ್ ಎಕಾನಮಿ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ಕಾರ್ಯಾಗಾರ

ನಿರ್ಣಯಗಳು : 

1. ರಾಜ್ಯ ಸರ್ಕಾರವು ಪಂಚಾಯಿತಿಗೊಂದು ಕರ್ನಾಟಕ ಸಾರ್ವಜನಿಕ ಶಾಲೆಯನ್ನು ಪ್ರಾರಂಭಿಸುವ ನೆಪದಲ್ಲಿ 25, 683 ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ಸಮಿತಿ ಬಲವಾಗಿ ಖಂಡಿಸಿತು . ಕೂಡಲೇ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು .
2. ⁠ರಾಜ್ಯ ಶಿಕ್ಷಣ ನೀತಿ ಆಯೋಗ ರೂಪಿಸಿರುವ ರಾಜ್ಯ ಶಿಕ್ಷಣ ನೀತಿಯನ್ನು ಮುಂಬರುವ ವಿಧಾನ ಸಭಾ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಬೇಕು
3. ಉತ್ತಮ ಎಸ್ಡಿಎಂಸಿ ಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕ ಮತ್ತು ವಸ್ತುನಿಷ್ಠವಾಗಿರಬೇಕು. ಉತ್ತಮ ಪ್ರಶಸ್ತಿ ಪಡೆದ ಶಾಲೆಗಳ ಯಶೋಗಾಥೆಗಳ ಸಂಕಲವನ್ನು ಪ್ರಕಟಣೆ ರೂಪದಲ್ಲಿ ಹೊರ ತರಬೇಕು.
4. ಶಿಕ್ಷಣ ಹಕ್ಕು ಕಾಯಿದೆ 2009 ನ್ನು ಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಈ ಕ್ರಿಯಾ ಯೋಜನೆ ಜಾರಿಗೆ ಸರ್ಕಾರ ಅಗತ್ಯ ಹಣಕಾಸನ್ನು ಒದಗಿಸಬೇಕು .
5. ಪೂರ್ವ ಪ್ರಾಥಮಿಕದಿಂದಲೇ ಆಂಗ್ಲ ಮಾಧ್ಯಮ ಜಾರಿಗೊಳಿಸುವುದನ್ನು ಕೈಬಿಟ್ಟು , ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಕನಿಷ್ಠ8 ನೇತರಗತಿಯವರೆಗೆ ತಾಯ್ನುಡಿ ಕಲಿಕೆಯನ್ನು ಜಾರಿಗೊಳಿಸಬೇಕು.
6. 7. ಆಂಗ್ಲ ಭಾಷೆಯನ್ನು ಒಂದು ಭಾಷೆಯನ್ನಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಸಲು ನುರಿತ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸಬೇಕು. ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಲು ಅಗತ್ಯ ಸಂಪಂನ್ಮೂಲ ಮತ್ತು ತರಬೇತಿಯನ್ನು ನೀಡಬೇಕು .
7. ರಾಜ್ಯದಲ್ಲಿ ತ್ರಿಭಾಷ ಸೂತ್ರದ ಬದಲು ದ್ವಿಭಾಷ ಸೂತ್ರವನ್ನು ಜಾರಿಗೊಳಿಸಬೇಕು
8. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು , ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಳನ್ನು ಮೀಸಲಿಡಬೇಕು
9. ಪದವಿ ಪೂರ್ವ ಶಿಕ್ಷಣದವರೆಗೆ ಸರ್ಕಾರಿ ಶಾಲೆ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಎಲ್ಲಾ ವೃತ್ತಿಪರ ಕೋರ್ಸ್‌ ಗಳಲ್ಲಿ ಕನಿಷ್ಠ ಶೇಕಡ 25 ರಷ್ಟು ಸೀಟುಗಳನ್ನು ಮೀಸಲಿಡಬೇಕು
10. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ತುಂಬಬೇಕು. ಶಿಕ್ಷಕರ ನೇಮಕಾತಿಯನ್ನು ಅವರ ನೇಮಕಾತಿಯ ಸಂದರ್ಭದಲ್ಲಿ ಆಯ್ಕೆಯಾದ ತಾಲ್ಲೂಕಗಳಿಗೆ ಸೀಮಿತಗೊಳಿಸಿ , ಆಯಾ ತಾಲ್ಲೂಕು ಕೇಂದ್ರಗಳಲ್ಲಿಯೇ ವಾಸಿಸುವಂತೆ ಕಡ್ಡಾಯಗೊಳಿಸಬೇಕು.
11. ಶಿಕ್ಷಕರ ತರಬೇತಿಯು ಪೋಷಕರು/ಎಸ್‌ಡಿಎಂಸಿ/ಸಮುದಾಯದ ಅಧಿಕಾರ , ಕರ್ತವ್ಯದ ವಿಷಯವನ್ನು ಒಳಗೊಂಡಿರಬೇಕು ಹಾಗೂ ಸಮುದಾಯದೊಂದಿಗೆ ಬಾಂಧವ್ಯವನ್ನು ಬೆಳೆಸುವುದು ಶಾಲೆ/ಶಿಕ್ಷಕರ ಕರ್ತವ್ಯ ಎಂಬುದನ್ನು ತರಬೇತಿ ಒಳಗೊಂಡಿರಬೇಕು
12. ಸರ್ಕಾರಿ ಶಾಲೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಭರವಷೆ ಮೂಡಿಸಲು ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು , ಎಲ್ಲಾ ಸರ್ಕಾರಿ ನೌಕರರು ಮತ್ತು ಜನ ಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸೂಕ್ತ ಕಾನೂನನ್ನು ರೂಪಿಸಬೇಕು
13. ಒಂದರಿಂದ ಮೂರು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿನ ಎಲ್ಲಾ ಶಾಲೆಗಳ ಸ್ಕೂಲ್ ಮ್ಯಾಪಿಂಗ್ ಕೈಗೊಳ್ಳಬೇಕು .ಅದರ ಅನ್ವಯ ಈಗಾಗಲೇ ಸರ್ಕಾರಿ/ ಸರ್ಕಾರಿ ಅನುದಾನಿತ ಕಿರಿಯ, ಹಿರಿಯ ಪ್ರಾಥಮಿಕ ಹಾಗು ಪ್ರೌಢ ಶಾಲೆಯಿದ್ದಲ್ಲಿ , ಎಷ್ಟೇ ಒತ್ತಡವಿದ್ದರೂ ಖಾಸಗಿ ಅನುದಾನರಹಿತ ಶಾಲೆಗಳಿಗೆ ಅನುಮತಿ ನೀಡಬಾರದು. ಬದಲಿಗೆ ಸರ್ಕಾರಿ/ ಸರ್ಕಾರಿ ಅನುದಾನಿತ ಶಾಲೆಗಳನ್ನು ನೆರೆಹೊರೆಯ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲು ಎಲ್ಲಾ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಶಾಲೆಗಳನ್ನು ಸರಕಾರ ತೆರೆಯಬೇಕು
14. ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಎಲ್ಲಾ ಸುತ್ತೋಲೆ ಹಾಗು ಇತರೆ ಮಾಹಿತಿಗಳನ್ನು ಶಾಲೆಯ ಮುಖ್ಯ ಶಿಕ್ಷಕರ ಜೊತೆಗೆ ಎಸ್‌ ಡಿ ಎಂಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ವಾಟ್ಸ್‌ಆಪ್ ನಲ್ಲಿ ಹಂಚಿಕೆ ಮಾಡಲು ಕ್ರಮವಹಿಸಬೇಕು
15. ಶಾಲೆಯ ಉಳಿತಾಯ ಖಾತೆಯಲ್ಲಿನ ಹಣಕ್ಕೆ ಬ್ಯಾಂಕ್‌ನಿಂದ ಸಿಗುವ ಬಡ್ಡಿಯ ಮೊತ್ತವನ್ನು ಆಯಾ ಶಾಲೆಗಳ ಕೆಲಸ ಕಾರ್ಯಕ್ಕೆ ಬಳಸಲು ಅನುವು ಮಾಡಬೇಕು. ಯಾವುದೇ ಕಾರಣದಿಂದ ಬಡ್ಡಿ ಹಣವನ್ನು ಸರ್ಕಾರ ಹಿಂದಕ್ಕೆ ಪಡೆಯಬಾರದು.
16. ಆಯಾ ಶಾಲೆಗಳ ಮುಖ್ಯ ಗುರುಗಳು ಪ್ರತೀ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರನ್ನು (ತಂದೆ ಮತ್ತು ತಾಯಿ ಇಬ್ಬರೂ ) ಒಳಗೊಂಡ ವಾಟ್ಸ್‌ಆಪ್ ಗುಂಪನ್ನು ರಚಿಸಿ ಸರ್ಕಾರದಿಂದ ಬರುವ ಮಕ್ಕಳ ಕಲಿಕೆ, ಶಾಲಾ ನಿರ್ವಹಣೆ , ಶಾಲಾ ಅನುದಾನ ಮತ್ತು ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಗುಂಪಿನಲ್ಲಿ ಹಂಚಿಕೊಳ್ಳುವಂತೆ ಆದೇಶಿಸಿಬೇಕು.
17. ಯುಡೈಸ್/ಸ್ಯಾಟ್‌ಗಳ ಮೂಲಕ ಸಂಗ್ರಹಿಸುವ ಶಾಲಾ ಸಂಪನ್ಮೂಲಗಳ ಮಾಹಿತಿ / ಮೂಲಸೌಕರ್ಯ/ವಿದ್ಯಾರ್ಥಿ / ಶಿಕ್ಷಕರ ಇತ್ಯಾದಿ ಮಾಹಿತಿಯು ಈಗಾಗಲೇ ಮುಖ್ಯ ಶಿಕ್ಷಕರಿಗೆ ಲಭ್ಯವಿದ್ದು , ಈ ಎಲ್ಲಾ ಮಾಹಿತಿ ಎಸ್‌ಡಿ ಎಂಸಿ ಸದಸ್ಯರು, ಪೋಷಕರು ಮತ್ತು ಸಾರ್ವಜನಿಕರಿಗೆ ಲಭ್ಯವಾಗುವಂತೆ ಒಂದು ಆಪ್ ನ್ನು ಅಭಿವೃದ್ಧಿಪಡಿಸಿ ಎಲ್ಲಾ ಎಸ್ಡಿಎಂಸಿ ಸದಸ್ಯರಿಗೆ ಮತ್ತು ಪಾಲಕರಿಗೆ ಒದಗಿಸಬೇಕು
18. ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಚಿವರನ್ನು ಅವರ ಹುದ್ದೆಯಿಂದ ತೆರುವು ಗೊಳಿಸಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುರಿತು ಆಳವಾದ ಒಳನೋಟ, ಬದ್ಧತೆ ಮತ್ತು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುವ ಅನುಭವ ಇರುವ ಶಾಸಕರನ್ನು ಸಚಿವರನ್ನಾಗಿ ನೇಮಿಸಬೇಕು.

ಇದನ್ನೂ ನೋಡಿ : ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರಕಾರ | ತಳ ಸಮುದಾಯಕ್ಕೆ ಎಸಗುತ್ತಿರುವ ದ್ರೋಹ Janashakthi Media

Donate Janashakthi Media

Leave a Reply

Your email address will not be published. Required fields are marked *