ಹಾವೇರಿ | ವಿಜ್ಞಾನ ವಸ್ತು ಪ್ರದರ್ಶನ : ಗಮನಸೆಳೆದ ವಿದ್ಯಾರ್ಥಿಗಳು ತಯಾರಿಸಿದ ವಿದ್ಯುತ್​​ ಚಾಲಿತ ಟ್ರ್ಯಾಕ್ಟರ್​

ಹಾವೇರಿ: ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇಲ್ಲಿನ ಜೆ.ಹೆಚ್.ಕಾಲೇಜು ಆಡಳಿತ ಮಂಡಳಿ ಜಿಲ್ಲೆಯ ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ವಿವಿಧ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವಿಧ ಪ್ರೌಢಶಾಲೆಗಳಿಂದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ವಿಜಯಪುರ| ಸರ್ಕಾರಿ ಮೆಡಿಕಲ್ ಕಾಲೇಜುಗಾಗಿ ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ

ವಿಜ್ಞಾನ ವಿಷಯದಲ್ಲಿ ಸ್ಪೂರ್ತಿ, ಉತ್ಸಾಹ, ಸಾಧನೆ, ಪ್ರೇರಣೆ ಮತ್ತು ವಿಜ್ಞಾನ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಲಾಗಿತ್ತು. ತಾವು ತಯಾರಿಸಿದ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ಅವರು ಪ್ರದರ್ಶಿಸಿದರು.

Science exhibition

ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಯೊಬ್ಬ ತಯಾರಿಸಿದ ವಿದ್ಯುತ್ ಯಂತ್ರದ ಸಹಾಯದಿಂದ ಚಲಿಸುವ ಟ್ರ್ಯಾಕ್ಟರ್ ಗಮನ ಸೆಳೆಯಿತು. ಈ ಟ್ರ್ಯಾಕ್ಟರ್ ಮಣ್ಣಿನಲ್ಲಿ ಸರಾಗವಾಗಿ ಚಲಿಸುತ್ತದೆ. ಟ್ರ್ಯಾಕ್ಟರ್ ಜೊತೆಗೆ ಕಲ್ಟಿವೇಟರ್ ಮತ್ತು ಮೆಕ್ಕೆಜೋಳ ಕಟಾವ್ ಮಾಡುವ ಯಂತ್ರವನ್ನೂ ಸಹ ವಿದ್ಯಾರ್ಥಿ ತಯಾರಿಸಿದ್ದಾನೆ. ಪ್ರಸ್ತುತ ಟ್ರ್ಯಾಕ್ಟರ್‌ಗಳನ್ನು ಡೀಸೆಲ್ ಸೇರಿದಂತೆ ಇತರ ಇಂಧನಗಳ ಮೂಲಕ ಚಲಾಯಿಸಲಾಗುತ್ತದೆ. ಅದರ ಬದಲು ವಿದ್ಯುತ್ ಟ್ರ್ಯಾಕ್ಟರ್ ಬಳಸುವುದರಿಂದ ಇಂಧನ ಬಳಕೆ ಕಡಿಮೆ ಮಾಡಬಹುದು. ಜೊತೆಗೆ, ಮಾನವನ ಶ್ರಮವೂ ಕಡಿಮೆಯಾಗುತ್ತದೆ ಎನ್ನುವ ಇಂಗಿತವನ್ನು ವಿದ್ಯಾರ್ಥಿ ವ್ಯಕ್ತಪಡಿಸಿದ್ದಾನೆ.

ಚಂದ್ರಯಾನ ಒಂದರ ವಿಶೇಷತೆ ಏನು? ಚಂದ್ರಯಾನ ಎರಡು ವಿಫಲವಾಗಲು ಕಾರಣವೇನು? ಚಂದ್ರಯಾನ ಯಶಸ್ವಿ ನಂತರ ಇಸ್ರೋದ ಪ್ರಾಮುಖ್ಯತೆ ವಿಶ್ವಕ್ಕೆ ತಿಳಿದಿರುವ ವಿಷಯಗಳನ್ನು ವಿದ್ಯಾರ್ಥಿಗಳು ನೋಡುಗರಿಗೆ ತಿಳಿಸಿದರು. ರಾಣೆಬೆನ್ನೂರಿನ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಚಂದ್ರಯಾನ-3 ಪ್ರಾತ್ಯಕ್ಷಿಕೆ ತಯಾರಿಸಿಕೊಂಡು ಬಂದಿದ್ದರು. ಭಾರತದ ಇಸ್ರೋ ಸಂಸ್ಥೆ ತಯಾರಿಸಿದ ಬಾಹ್ಯಾಕಾಶ ಪರಿಕರಗಳ ಮಾದರಿಗಳನ್ನು ಮಾಡಿದ್ದರು. ಚಂದ್ರಯಾನ 3 ಉಡಾವಣೆ ಮತ್ತು ಉಪಗ್ರಹ ಚಂದ್ರನಲ್ಲಿ ಸಂಚರಿಸಿ ಮಣ್ಣು ಸಂಗ್ರಹ ಮಾಡಿರುವ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಸಾಮಾನ್ಯವಾಗಿ ಹೆಣ್ಣುಮಕ್ಕಳ ಧ್ವನಿ ಮಧುರವಾಗಿರುತ್ತದೆ. ಆದರೆ ಗಂಡುಮಕ್ಕಳ ಧ್ವನಿ ಗಡುಸಾಗಿರುತ್ತದೆ. ಇದಕ್ಕೆ ಕಾರಣವನ್ನು ವಿಜ್ಞಾನ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರು ತಿಳಿಸಿಕೊಟ್ಟರು. ಹೆಣ್ಣಿನ ಧ್ವನಿಪೆಟ್ಟಿಗೆಯ ಭಾರ ಕಡಿಮೆ, ಅವಧಿ ಹೆಚ್ಚು ಇರುತ್ತದೆ. ಹೀಗಾಗಿ ಹೆಣ್ಣುಮಕ್ಕಳ ಧ್ವನಿ ಸುಮಧುರವಾಗಿರುತ್ತದೆ. ಅದೇ ಗಂಡು ಮಕ್ಕಳ ಧ್ವನಿಪೆಟ್ಟಿಗೆಯ ಭಾರ ಅಧಿಕ ಮತ್ತು ಅವಧಿ ಕಡಿಮೆ ಇರುತ್ತದೆ. ಹೀಗಾಗಿ ಗಂಡುಮಕ್ಕಳ ಧ್ವನಿ ಗಡಸಾಗಿರುತ್ತದೆ ಎಂದು ವಿದ್ಯಾರ್ಥಿನಿಯರು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಿಕೊಟ್ಟರು. ಮನುಷ್ಯನ ಕಿವಿಗಳು ಎಷ್ಟು ಡೆಸಿಬಲ್ ಪ್ರಮಾಣದ ಶಬ್ದವನ್ನು ಗ್ರಹಿಸುತ್ತವೆ. ಕಿವಿ ಹೇಗೆ ಕಾರ್ಯನಿರ್ವಹಿಸುತ್ತವೆ, ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

Science exhibition
ಪ್ರದರ್ಶನದಲ್ಲಿ ಪಾಲ್ಗೊಂಡ ಮಕ್ಕಳಿಗೆ ವಿವಿಧ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಈ ರೀತಿಯ ಪ್ರದರ್ಶನಗಳು ನಮ್ಮಲ್ಲಿನ ಕಲ್ಪನೆಗಳಿಗೆ ವೇದಿಕೆ ಒದಗಿಸುತ್ತವೆ. ದೆಹಲಿ ವಾಯುಮಾಲಿನ್ಯ ಕಡಿಮೆ ಮಾಡುವಂತಹ ಪ್ರಾತ್ಯಕ್ಷಿಕೆ, ಕೃಷಿ ಚಟುವಟಿಕೆಗಳಲ್ಲಿ ವಿಜ್ಞಾನ ಬಳಕೆ, ಸೌರವ್ಯೂಹ ಡಿಎನ್‌ಎ ಮಾದರಿ, ರಸ್ತೆ ಅಪಘಾತಗಳ ತಡೆಯಲು ಮಾಡಬೇಕಾದ ಉಪಾಯಗಳು ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳು ಗಮನಸೆಳೆದವು.  ವಿದ್ಯಾರ್ಥಿಗಳು ಶಿಕ್ಷಕರ ಸಹಾಯ ಪಡೆದು ಉತ್ತಮ ಪ್ರಾತ್ಯಕ್ಷಿಕೆ ತಯಾರಿಸುತ್ತಾರೆ. ವಿಜ್ಞಾನದ ಬಗ್ಗೆ ಉತ್ಸುಕತೆ, ಮಾದರಿಗಳ ತಯಾರಿಕೆಗೆ ಪ್ರೇರೇಪಣೆ ಸಿಗುತ್ತವೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
https://www.youtube.com/watch?v=eDo-s9ewHmU
Donate Janashakthi Media

Leave a Reply

Your email address will not be published. Required fields are marked *