ಸಟ್ಟಾಕೋರತನ, ಯುಎಸ್‌ನ ಸುಂಕ – ಬೆದರಿಕೆ ಮತ್ತು ಭಾರತದ ದುಡಿಯುವ ಜನರು

ಲಕ್ಷಾಂತರ ಮಂದಿ ದುಡಿಯುವ ಜನರ ಜೀವನ ಪರಿಸ್ಥಿತಿಗಳನ್ನು ಅಂತರರಾಷ್ಟ್ರೀಯ ಸಟ್ಟಾಕೋರರ ಖಯಾಲಿಗೆ ಒಳಪಡಿಸುವುದು ನವ-ಉದಾರವಾದಿ ಆಳ್ವಿಕೆಯ ಒಂದು ವಿಶಿಷ್ಟ ಲಕ್ಷಣವಾಗಿದೆ. ನವ-ಉದಾರವಾದಿ ಧೋರಣೆಗಳನ್ನು ಬಿಡಲೊಲ್ಲದ ಮೋದಿ ಸರಕಾರ ಅಮೆರಿಕಾದ ಒತ್ತಡದ ಎದುರು ಮೊಣಕಾಲೂರಿ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿರುವುದು ಭಾರತದ ಮೇಲೆ ಇಬ್ಬಗೆಯಲ್ಲಿ ದುಷ್ಪರಿಣಾಮ ಬೀರುತ್ತದೆ. ಇದು ಭಾರತದ ದುಡಿಯುವ ಜನಗಳ ವರಮಾನಗಳನ್ನು ಮತ್ತಷ್ಟು ಹಿಂಡಿ ಹಾಕುತ್ತದೆ. ಒಂದೆಡೆಯಲ್ಲಿ ಇದು ಯುಎಸ್ ಸಾಮ್ರಾಜ್ಯಶಾಹೀ ದುರಹಂಕಾರವನ್ನು ಪ್ರದರ್ಶಿಸಿದರೆ, ಇನ್ನೊಂದೆಡೆಯಲ್ಲಿ ಅಮೇರಿಕನ್ ಹಿತಾಸಕ್ತಿಗಳನ್ನು ಉತ್ತೇಜಿಸುತ್ತಿರುವ ಅಮೇರಿಕನ್ ಆಡಳಿತವನ್ನು ಸಂತೃಪ್ತಗೊಳಿಸುವ ಸಲುವಾಗಿ ಭಾರತದ ದುಡಿಯುವ ಜನರ ಹಿತಾಸಕ್ತಿಗಳನ್ನು ಬಲಿಕೊಡಲು ಸಿದ್ಧವಾಗಿರುವ ಭಾರತದ ಪ್ರಸ್ತುತ ಸರಕಾರದ ಅಸಹಾಯಕತೆಯನ್ನು ಎತ್ತಿ ತೋರುತ್ತದೆ. ಸುಂಕ

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ಸಟ್ಟಾವ್ಯವಹಾರ ಎಂಬುದು ಬಂಡವಾಳಶಾಹಿ ಮಾರುಕಟ್ಟೆಗಳಲ್ಲಿ ಅಂತರ್ಗತವಾಗಿರುವ ಒಂದು ವಿದ್ಯಮಾನ. ಇದು ಜನತೆಗೆ ಅಗತ್ಯವಾಗಿ ಬೇಕಾಗುವ ಒಂದು ಸರಕಿನ ಕೊರತೆ ಇದ್ದಾಗ ಅದರ ಕಳ್ಳದಾಸ್ತಾನು ಮಾಡಿಕೊಳ್ಳುವಂತೆ ಪ್ರೇರೇಪಿಸಿ ಆ ಸರಕಿನ ಕೊರತೆಯನ್ನು ಉಲ್ಬಣಗೊಳಿಸಬಲ್ಲದು. ಅಥವಾ ಕೊರತೆಯೇ ಇಲ್ಲದ ಒಂದು ಸರಕಿನ ಕೊರತೆಯನ್ನು ಕೃತಕವಾಗಿ ಸೃಷ್ಟಿಸಬಲ್ಲದು. ಈ ರೀತಿಯಲ್ಲಿ ಅದು ದುಡಿಯುವ ಜನರ ಜೀವನವನ್ನು ಹಾಳುಗೆಡವುತ್ತದೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿರುವ ಸಂಗತಿಯೇ. ಒಂದು ಉದಾಹರಣೆಯಾಗಿ 30 ಲಕ್ಷ ಜನರ ಸಾವಿಗೆ ಕಾರಣವಾದ 1943ರ ಬಂಗಾಳ ಕ್ಷಾಮದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಬಹುದು. ಭಾರತದ ಪೂರ್ವ ಭಾಗದಲ್ಲಿ ನಡೆಯುತ್ತಿದ್ದ ಯುದ್ಧ ವೆಚ್ಚಗಳಿಗಾಗಿ ವಿತ್ತೀಯ ಕೊರತೆಯ ಮೂಲಕ ಹಣ ಒದಗಿಸಿಕೊಂಡದ್ದರಿಂದಆಹಾರ ಧಾನ್ಯ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆಯ ಪರಿಸ್ಥಿತಿಯು ಉಂಟಾಗಿತ್ತು. ಸುಂಕ

ಧಾನ್ಯಗಳನ್ನು ಕಳ್ಳತನದಿಂದ ಅಧಿಕ ಪ್ರಮಾಣದಲ್ಲಿ ಕೂಡಿಟ್ಟುಕೊಂಡ ಕಾರಣದಿಂದಾಗಿ ಈ ಪರಿಸ್ಥಿತಿಯು ಉಲ್ಬಣಗೊಂಡಿತು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಇಂದಿನ ನವ-ಉದಾರವಾದಿ ಆಳ್ವಿಕೆಯು ಇಷ್ಟಕ್ಕೇ ನಿಲ್ಲುವುದಿಲ್ಲ. ಅದು ದುಡಿಯುವ ಜನರ ಜೀವನ ವೆಚ್ಚಗಳನ್ನು ಸರಕು ಮಾರುಕಟ್ಟೆಗಳಲ್ಲಿ ಸಂಭವಿಸುವ ಸಟ್ಟಾಕೋರ ನಡವಳಿಕೆಯ ಮೇಲೆ ಮಾತ್ರವಲ್ಲದೆ ಕರೆನ್ಸಿ ಮಾರುಕಟ್ಟೆಯಲ್ಲಿ ಸಂಭವಿಸುವ ಸಟ್ಟಾಕೋರ ನಡವಳಿಕೆಯ ಮೇಲೂ ನೇರವಾಗಿ ಅವಲಂಬಿತವಾಗಿರುವಂತೆ ಮಾಡುವ ಮೂಲಕ ಇನ್ನೂ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಸುಂಕ

ಇದನ್ನೂ ಓದಿ: ಕೇರಳದ ‘ತೀವ್ರ ಬಡತನ ನಿರ್ಮೂಲನಾ’ ಕಾರ್ಯಕ್ರಮ: ಇಪಿಇಪಿ – ಅಸಾಧಾರಣ ಸಾಧನೆ ಮತ್ತು ತಿಳುವಳಿಕೆಯಿಲ್ಲದ ಟೀಕೆಗಳು

ನವ ಉದಾರವಾದಿ ಆಳ್ವಿಕೆಯಲ್ಲಿ ಹಣಕಾಸಿನ ಹರಿವುಗಳೂ ಸೇರಿದಂತೆ ಬಂಡವಾಳದ ಹರಿವಿನ ಮೇಲಿನ ನಿಯಂತ್ರಣಗಳನ್ನು ತೆಗೆದುಹಾಕಿರುವುದರಿಂದ ಮತ್ತು ವಿದೇಶಿ ವಿನಿಮಯ ದರವು ಮಾರುಕಟ್ಟೆಯಲ್ಲಿ ನಿರ್ಧಾರವಾಗುವುದರಿಂದ, ಸಟ್ಟಾಕೋರರು ದೇಶದಿಂದ ಹಣವನ್ನು ಹೊರತೆಗೆಯುವ (ಉದಾಹರಣೆಗೆ, ಯುಎಸ್ ಡಾಲರ್‌ಗಳ ರೂಪದಲ್ಲಿ) ಯಾವುದೇ ಪ್ರವೃತ್ತಿಯು, ಸ್ಥಳೀಯ ಕರೆನ್ಸಿಯ(ರೂಪಾಯಿಯ)ವಿನಿಮಯ ದರ ಮೌಲ್ಯವನ್ನು ಇಳಿಕೆ ಮಾಡುತ್ತದೆ (ಅಂದರೆ, ರೂಪಾಯಿಯನ್ನು ಅಪಮೌಲ್ಯಗೊಳಿಸುತ್ತದೆ) ಮತ್ತು ರೂಪಾಯಿ ಲೆಕ್ಕದಲ್ಲಿ ಆಮದುಗಳ ಬೆಲೆಯನ್ನು ಹೆಚ್ಚಿಸುತ್ತದೆ. ಈ ಆಮದುಗಳು ತೈಲದಂತಹ ಅಗತ್ಯ ಒಳಹರಿವುಗಳನ್ನು ಒಳಗೊಂಡಿರುವಾಗ, ರೂಪಾಯಿಯ ಅಪಮೌಲ್ಯವು ಅರ್ಥವ್ಯವಸ್ಥೆಯ ಮೇಲೆ ವೆಚ್ಚ-ತಳ್ಳು(cost-push) ಪರಿಣಾಮವನ್ನು ಬೀರುತ್ತದೆ.

ಇದು ಹಣದುಬ್ಬರವನ್ನು ಉಂಟುಮಾಡುತ್ತದೆ. ಈ ಹಣದುಬ್ಬರದಿಂದಾಗಿ ನಿಜ ಕೂಲಿಯಲ್ಲಿ ಕುಸಿತ ಉಂಟಾಗುತ್ತದೆ ಅಥವಾ ಅದನ್ನು ಇನ್ನೂ ಹೆಚ್ಚು ಸಾಮಾನ್ಯವಾಗಿ ಹೇಳುವುದಾದರೆ, ದುಡಿಯುವ ಜನರ ನಿಜ ವರಮಾನಗಳ ಕುಸಿತ ಉಂಟಾಗುತ್ತದೆ. ಲಾಭವಂತೂ ವಾಸ್ತವವಾಗಿ ಇದ್ದೇ ಇರುವ ಜಗತ್ತಿನಲ್ಲಿ, ಈ ವೆಚ್ಚ-ತಳ್ಳು ಹಣದುಬ್ಬರವನ್ನು ದುಡಿಯುವ ಜನರ ನಿಜ ವರಮಾನಗಳನ್ನು ಕುಗ್ಗಿಸುವ ಮೂಲಕ ಮಾತ್ರವೇ ಕೊನೆಗೊಳಿಸಲಾಗುವುದು. ನಿಜ ವರಮಾನಗಳ ಈ ಕುಗ್ಗುವಿಕೆಯು ಅವರ ಹಣ ವರಮಾನಗಳನ್ನು ಬೆಲೆ ಸೂಚ್ಯಂಕದೊಂದಿಗೆ ಸಂಯೋಜಿಸದ ಕಾರಣದಿಂದ ಸಂಭವಿಸುತ್ತದೆ. ಹಾಗಾಗಿ, ನವ-ಉದಾರವಾದಿ ಆಳ್ವಿಕೆಯು ಲಕ್ಷಾಂತರ ಮಂದಿ ದುಡಿಯುವ ಜನರ ನಿಜ ಜೀವನ ಪರಿಸ್ಥಿತಿಗಳನ್ನು ಅಂತರರಾಷ್ಟ್ರೀಯ ಸಟ್ಟಾಕೋರರ ಗುಂಪಿನ ಖಯಾಲಿಗೆ ಬಿಡುತ್ತದೆ ಎಂಬುದು ಅದರ ಒಂದು ವಿಶಿಷ್ಟ ಲಕ್ಷಣವಾಗಿದೆ. ಸುಂಕ

ಹಣಕಾಸಿನ ಹೊರಹರಿವಿನ ಪ್ರವೃತ್ತಿಯು ವಿನಿಮಯ ದರ ಅಪಮೌಲ್ಯದ ಮೂಲಕ ದುಡಿಯುವ ಜನರ ಜೀವನ ಪರಿಸ್ಥಿತಿಗಳ ಮೇಲೆ ಒತ್ತಡ ಹೇರುವ ರೀತಿಯಲ್ಲಿಯೇ, ಒಂದು ತದ್ವಿರುದ್ಧವಾದ ಪ್ರವೃತ್ತಿಯು, ಹಣಕಾಸಿನ (ಯಾವುದೇ ಅವಧಿಯಲ್ಲಿ ಸ್ವಾಯತ್ತವಾಗಿ ನಿರ್ಧರಿಸಲಾದ ಚಾಲ್ತಿ ಖಾತೆಯ ಕೊರತೆಗಿಂತಲೂ ಅಧಿಕವಾಗಿರುವ) ಒಳಹರಿವು ದುಡಿಯುವ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ವಿನಿಮಯ ದರ ಮೌಲ್ಯವನ್ನು ವೃದ್ಧಿಸುವ ಮತ್ತು ಆ ಮೂಲಕ ಜನರ ಜೀವನ ಪರಿಸ್ಥಿತಿಗಳ ಮೇಲಿನ ಒತ್ತಡವನ್ನು ತಗ್ಗಿಸುವ (ಜೀವನ ವೆಚ್ಚವನ್ನು ಇಳಿಕೆ ಮಾಡುವ) ವಿರುದ್ಧ ಪರಿಣಾಮವನ್ನು ಹೊಂದಿರುತ್ತದೆ ಎಂದು ಯೋಚಿಸಬಹುದು. ಆದರೆ ಹೀಗಾಗುವುದಿಲ್ಲ. ಏಕೆಂದರೆ, ಹಣಕಾಸಿನ ಒಳಹರಿವಿನ ಪರಿಣಾಮಗಳು ಮತ್ತು ಹಣಕಾಸಿನ ಹೊರಹರಿವಿನ ಪರಿಣಾಮಗಳು ಒಂದೇ ರೀತಿ ಅಥವ ಪ್ರಮಾಣದ್ದಾಗಿರುವುದಿಲ್ಲ. ಸುಂಕ

ಹಣಕಾಸು ಒಳಹರಿಯುವಾಗ, ವಿನಿಮಯ ದರವು ಏರಿಕೆಯಾಗಲು ಬಿಟ್ಟರೆ, ದೇಶೀಯ ಉತ್ಪಾದನೆಯು ಆಮದುಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕವಾಗಿ ಉಳಿಯುವುದಿಲ್ಲ. ಆಮದುಗಳು ಏರಿಕೆಯಾದಾಗ ಉತ್ಪಾದನೆ ಕುಗ್ಗುತ್ತದೆ ಮತ್ತು ಆಮದುಗಳ ಏರಿಕೆಯು, ಕೇಂದ್ರ ಬ್ಯಾಂಕಿನ ಹಸ್ತಕ್ಷೇಪವಿಲ್ಲದ ಪರಿಸ್ಥಿತಿಯಲ್ಲಿ, ಹಣಕಾಸಿನ ಅಧಿಕ ಒಳಹರಿವನ್ನು ಹೀರಿಕೊಳ್ಳುವಷ್ಟು ಬೃಹತ್ತಾಗಿರಬೇಕಾಗುತ್ತದೆ. ಅಂತಹ ಒಂದು ಸಂದರ್ಭದಲ್ಲಿ, ದೇಶವು ತನ್ನದೇ “ಅಪ-ಕೈಗಾರಿಕೀಕರಣ”ಕ್ಕೆ ಹಣಕಾಸು ಒದಗಿಸಲು ವಿದೇಶಿಯರಿಗೆ ಸಾಲಗಾರನಾಗಬೇಕಾಗುತ್ತದೆ. ಈ ರೀತಿಯ ಅಭಿವೃದ್ಧಿಯು ಒಂದು ಅಸಂಬದ್ಧವೇ ಸರಿ. ಅಂತಹ ಒಂದು ಅಸಂಬದ್ಧತೆಯನ್ನು ತಪ್ಪಿಸಲು, ಮೂರನೇ ಜಗತ್ತಿನ ದೇಶದ ಕೇಂದ್ರ ಬ್ಯಾಂಕ್, ವಿದೇಶಿ ವಿನಿಮಯ ಮೀಸಲುಗಳ ರೂಪದಲ್ಲಿ ಹಣಕಾಸಿನ ಅಧಿಕ ಒಳಹರಿವುಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿನಿಮಯ ದರವು ಏರಿಕೆಯಾಗದಂತೆ ತಡೆಯುವ ಸಲುವಾಗಿ ಮಧ್ಯಪ್ರವೇಶ ಮಾಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾಡುತ್ತಿರುವುದು ಇದನ್ನೇ. ಸುಂಕ

ದುಡಿಯುವ ಜನರ ವರಮಾನಗಳ ಹಿಂಡಿಕೆ

ಹೀಗೆ, ಹೊರಹರಿವುಗಳು ವಿನಿಮಯ ದರವನ್ನು ಇಳಿಕೆ ಮಾಡಲು (ಅಂದರೆ, ರೂಪಾಯಿ ಅಪಮೌಲ್ಯಗೊಳ್ಳಲು) ಕಾರಣವಾಗುತ್ತವೆ ಮತ್ತು ಈ ಅಪಮೌಲ್ಯದ ಪರಿಣಾಮವಾಗಿ ವೆಚ್ಚ-ತಳ್ಳು ಹಣದುಬ್ಬರದ ಮೂಲಕ ದುಡಿಯುವ ಜನರ ನಿಜ ವರಮಾನವನ್ನು ಹಿಂಡುತ್ತವೆ. ಆದರೆ, ಒಳಹರಿವುಗಳನ್ನು ಅವು ವಿನಿಮಯ ದರದ ಮೇಲೆ ಯಾವುದೇ ಪರಿಣಾಮವನ್ನೂ ಬೀರದಂತೆ ಅವುಗಳನ್ನು ಮೀಸಲುಗಳಾಗಿ ಹಿಡಿದಿಟ್ಟುಕೊಳ್ಳಲಾಗುತ್ತದೆ. ಈ ಮೀಸಲುಗಳು ಹಣಕಾಸು ಹೊರಹರಿದ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ನೆರವಿಗೆ ಬರುತ್ತವೆ. ಇದೇ ಹಣಕಾಸಿನ ಒಳಹರಿವು ಮತ್ತು ಹಣಕಾಸಿನ ಹೊರಹರಿವುಗಳ ಪ್ರಮಾಣಗಳ ನಡುವೆ ಇರುವ ಅಸಮತೆ. ಹೊರಹರಿವಿನ ಸಂದರ್ಭಗಳಲ್ಲಿ, ರೂಪಾಯಿಯ ಅಪಮೌಲ್ಯವನ್ನು(ವಿನಿಮಯ ದರ ಇಳಿಕೆಯನ್ನು) ತಡೆಯುವ ಸಲುವಾಗಿ ಈ ಮೀಸಲುಗಳನ್ನು ಇಳಿಕೆ ಮಾಡಲಾಗುತ್ತದೆ (ಅಂದರೆ, ಅಗತ್ಯಕ್ಕೆ ತಕ್ಕಂತೆ ಮೀಸಲು ಕರೆನ್ಸಿಯನ್ನು ಮಾರಾಟ ಮಾಡಲಾಗುತ್ತದೆ). ಸುಂಕ

ಆದರೆ, ಮೀಸಲುಗಳ ಇಳಿಕೆಯು ವಿನಿಮಯ ದರ ಅಪಮೌಲ್ಯಗೊಳ್ಳುತ್ತದೆ ಎನ್ನುವ ನಿರೀಕ್ಷೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಈ ರೀತಿಯ ಒಂದು ಉಹಾಪೋಹವೇ ಹಣಕಾಸಿನ ಮತ್ತಷ್ಟು ಹೊರಹರಿವಿಗೆ ಕಾರಣವಾಗುತ್ತದೆ. ರಿಸರ್ವ್ ಬ್ಯಾಂಕ್, ಮೀಸಲುಗಳು ಖಾಲಿಯಾಗುವುದನ್ನು ಸಾಮಾನ್ಯವಾಗಿ ಬಯಸುವುದಿಲ್ಲ ಮತ್ತು ಅದು ರೂಪಾಯಿಯ ಅಪಮೌಲ್ಯವನ್ನು(ವಿನಿಮಯ ದರ ಇಳಿಕೆಯನ್ನು) ಸಂಪೂರ್ಣವಾಗಿ ತಡೆಯುವುದಿಲ್ಲ. ರೂಪಾಯಿಯ ಅಪಮೌಲ್ಯವೂ ಸ್ವಲ್ಪ ಮಟ್ಟಿಗೆ ಇರುತ್ತದೆ ಮತ್ತು ಮೀಸಲುಗಳ ಇಳಿಕೆಯೂ ಸ್ವಲ್ಪ ಮಟ್ಟಿಗೆ ಇರುತ್ತದೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮವೆಂದರೆ ದುಡಿಯುವ ಜನರ ನಿಜ ವರಮಾನಗಳನ್ನು ಹಿಂಡುವುದು. ಭಾರತದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಇದೇ ನಡೆಯುತ್ತಿರುವುದು.

ಆದ್ದರಿಂದ, ಹಣಕಾಸಿನ ಒಳಹರಿವು-ಹೊರಹರಿವುಗಳ ಅಸಮ ಪ್ರಮಾಣ ಮತ್ತು ಆಮೂಲಕ ಹಣಕಾಸಿನ ಹೊರಹರಿವು ವಿನಿಮಯ ದರವನ್ನು ಅಪಮೌಲ್ಯಗೊಳಿಸುವುದರಿಂದಾಗಿ ಅದು ದುಡಿಯುವ ಜನರ ನಿಜ ವರಮಾನವನ್ನು ಹಿಂಡುತ್ತದೆ ಮತ್ತು ಹಣಕಾಸಿನ ಒಳಹರಿವು ಯಾವುದೇ ವಿರುದ್ಧ ಪರಿಣಾಮಗಳಿಲ್ಲದೆ ಚಾಲ್ತಿಯಲ್ಲಿರುವ ವಿನಿಮಯ ದರದಲ್ಲಿ ಮೀಸಲುಗಳಾಗಿ ಉಳಿಯುತ್ತದೆ ಎಂಬ ಮೂಲ ಪ್ರತಿಪಾದನೆ ಸಿಂಧುವಾಗಿಯೇ ಉಳಿಯುತ್ತದೆ. ಈ ಅಸಮತೆಯು ಸಮಯ ಕಳೆದಂತೆ ವಿನಿಮಯ ದರದ ಸತತ ಕುಸಿತವಾಗಿ ಕಾಣಿಸಿಕೊಳ್ಳುತ್ತದೆ.

ಇದನ್ನೇ ನಾವು ನವ-ಉದಾರವಾದಿ ಆಳ್ವಿಕೆಯಡಿಯ ಭಾರತದಲ್ಲಿ ನೋಡುತ್ತ ಬಂದಿದ್ದೇವೆ. ಭಾರತದಲ್ಲಿ ಆರ್ಥಿಕ “ಉದಾರೀಕರಣ”ವು ಆರಂಭವಾಗುವ ತುಸು ಮೊದಲು ಚಂದ್ರಶೇಖರ್ ಸರ್ಕಾರವು ನವೆಂಬರ್ 10, 1990ರಂದು ಅಧಿಕಾರ ವಹಿಸಿಕೊಂಡಾಗ, ವಿನಿಮಯ ದರವು ಒಂದು ಯುಎಸ್ ಡಾಲರ್ ಗೆ ಎದುರಾಗಿ 17.50 ರೂಪಾಯಿಗಳಾಗಿತ್ತು. ಈಗ (ನವೆಂಬರ್ 15, 2025 ರಂದು), ವಿನಿಮಯ ದರವು ಒಂದು ಯುಎಸ್ ಡಾಲರ್ ಗೆ ಎದುರಾಗಿ 88.50 ರೂಪಾಯಿಗಳಾಗಿವೆ. ಅಂದರೆ, ನವ-ಉದಾರವಾದಿ ಅವಧಿಯಲ್ಲಿ ರೂಪಾಯಿಯು ಭಾರಿ ಪ್ರಮಾಣದ ಅಪಮೌಲ್ಯವನ್ನು ಕಂಡಿದೆ. ಈ ಅಪಮೌಲ್ಯದ ಪ್ರಮಾಣವು ಶೇ. 400ಕ್ಕಿಂತಲೂ ಅಧಿಕವಾಗಿದೆ. ಹೋಲಿಕೆಯ ದೃಷ್ಟಿಯಲ್ಲಿ ಹೇಳುವುದಾದರೆ, ದೇಶವು 1947ರಲ್ಲಿ ಸ್ವಾತಂತ್ರ‍್ಯ ಪಡೆದಾಗಿನಿಂದ ಹಿಡಿದು 1990ರ ವರೆಗಿನ ಹಿಂದಿನ ಅವಧಿಯಲ್ಲಿ ರೂಪಾಯಿಯು ಕೇವಲ ಶೇ. 33.3ರಷ್ಟು ಅಪಮೌಲ್ಯವನ್ನು ಕಂಡಿತ್ತು.

 

 

ವ್ಯಂಗ್ಯಚಿತ್ರ ಕೃಪೆ: ಪಿ. ಮಹಮ್ಮದ್, ಫೇಸ್‌ಬುಕ್

 

 

 

 

 

 

ಬೆನ್ನೆಲುಬನ್ನು ಹೊಂದಿರದ ಕಾರಣ

ಇದೆಲ್ಲವೂ ಮೂರನೆಯ ಜಗತ್ತಿನ ಒಂದು ನವ-ಉದಾರವಾದಿ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಪ್ರವೃತ್ತಿಗೆ ಸಂಬಂಧಿಸಿದೆ. ಮೂರನೆಯ ಜಗತ್ತಿನ ಅರ್ಥವ್ಯವಸ್ಥೆಯು ನವ-ಉದಾರವಾದಿ ಏರ್ಪಾಟಿನೊಳಗೆ ಆಮದು-ವೆಚ್ಚಗಳಿಂದಾಗಿ ಉಂಟಾಗುವ (import-cost-push)ಹಣದುಬ್ಬರಕ್ಕೆ ಗುರಿಯಾಗುವ ಎರಡನೇ ಮಾರ್ಗವೂ ಇದೆ. ಇದು ಟ್ರಂಪ್ ಅವರ ಇಂದಿನ ಸುಂಕ-ಆಕ್ರಮಣದ ಸಂದರ್ಭದಲ್ಲಿ ಪ್ರಕಟಗೊಂಡಿದೆ. ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಅಮೆರಿಕ ಮತ್ತು ಇತರ ಸಾಮ್ರಾಜ್ಯಶಾಹಿ ದೇಶಗಳು ರಷ್ಯಾದ ವಿರುದ್ಧ ವಿಧಿಸಿರುವ ಏಕಪಕ್ಷೀಯ ನಿರ್ಬಂಧಗಳನ್ನು ಭಾರತ ಉಲ್ಲಂಘಿಸುತ್ತಿದೆ ಎಂಬ ನೆಲೆಯಲ್ಲಿ ಭಾರತದ ವಿರುದ್ಧ ದಂಡನಾತ್ಮಕ ಸುಂಕಗಳನ್ನು ಟ್ರಂಪ್ ವಿಧಿಸಿದ್ದಾರೆ. ಭಾರತವು ಸಾಧಿಸಿದ ಸ್ವಾವಲಂಬನೆಯು ನವ-ಉದಾರವಾದಿ ಆಳ್ವಿಕೆಯ ಅಳವಡಿಕೆಯಿಂದ ದುರ್ಬಲಗೊಂಡಿರುವುದರಿಂದ ಮತ್ತು ಮೋದಿ ಸರ್ಕಾರವು ನವ-ಉದಾರವಾದಿ ನೀತಿಗಳನ್ನು ಹಿಮ್ಮೆಟ್ಟಿಸಲು ಬಯಸದಿರುವುದರಿಂದ ಮತ್ತು ಅಮೆರಿಕದ ವಿರುದ್ಧ ಯಾವುದೇ ಪ್ರತಿ-ಕ್ರಮಗಳನ್ನು ತೆಗೆದುಕೊಳ್ಳುವ ಬೆನ್ನೆಲುಬನ್ನು ಹೊಂದಿರದ ಕಾರಣ, ಅದು ಅಮೆರಿಕದ ಒತ್ತಡಕ್ಕೆ ಸಂಪೂರ್ಣವಾಗಿ ಮಣಿದು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಈ ಸಂಗತಿಯನ್ನು ಭಾರತ ಸರ್ಕಾರ ಒಪ್ಪಿಕೊಳ್ಳದು. ಆದರೆ, ಇದನ್ನು ಟ್ರಂಪ್ ರಾಜಾರೋಷವಾಗಿ ಘೋಷಿಸಿದ್ದಾರೆ ಮತ್ತು ಅವರ ಈ ಮಾತನ್ನು ನಂಬದಿರಲು ಯಾವ ಕಾರಣವೂ ಇಲ್ಲ. ಸುಂಕ

ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವುದರಿಂದ ದೇಶದೊಳಗೆ ತೈಲ ಬೆಲೆಗಳು ಎರಡು ಪ್ರತ್ಯೇಕವಾದ ಕಾರಣಗಳಿಂದಾಗಿ ಏರಿಕೆಯಾಗುತ್ತವೆ. ಮೊದಲನೆಯದು, ರಷ್ಯಾದ ತೈಲವು ಅದಕ್ಕೆ ಬದಲಿಯಾಗಿ ಕೊಳ್ಳುವ ತೈಲಕ್ಕಿಂತ ಅಗ್ಗವಾಗಿದೆ. ಆದ್ದರಿಂದ, ರಷ್ಯಾದಿಂದ ಖರೀದಿಸದಿರುವುದು, ಚಾಲ್ತಿಯಲ್ಲಿರುವ ಅಂತರರಾಷ್ಟ್ರೀಯ ತೈಲ ಬೆಲೆ ಮಟ್ಟದಲ್ಲಿಯೂ ಸಹ, ಭಾರತದ ತೈಲ ಬೆಲೆಯನ್ನು ಹೆಚ್ಚಿಸುತ್ತದೆ. ಎರಡನೆಯದು, ರಷ್ಯಾವನ್ನು ತೈಲ ಪೂರೈಕೆ ಮಾಡದಂತೆ ತಡೆದರೆ, ಅಂತರರಾಷ್ಟ್ರೀಯ ತೈಲ ಬೆಲೆಗಳೇ ಏರಿಕೆಯಾಗುತ್ತವೆ, ಏಕೆಂದರೆ, ಅದು ವಿಶ್ವ ಅರ್ಥವ್ಯವಸ್ಥೆಯ ಒಟ್ಟಾರೆ ಬೇಡಿಕೆಗೆ ಹೋಲಿಸಿದರೆ ಪೂರೈಕೆಯನ್ನು ಇಳಿಕೆ ಮಾಡುತ್ತದೆ. ಇದು ಭಾರತದೊಳಗೆ ತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗುವಂತೆ ಮಾಡುತ್ತದೆ. ಸುಂಕ

ಇದನ್ನೂ ನೋಡಿ: ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದ ಅಂಗನವಾಡಿ, ಆಶಾ, ಬಿಸಿಯೂಟ ನೌಕರರು Janashakthi Media

ದೇಶದೊಳಗೆ ತೈಲ ಬೆಲೆ ಏರಿಕೆಯು ಅರ್ಥವ್ಯವಸ್ಥೆಯ ಮೇಲೆ ವೆಚ್ಚ-ತಳ್ಳಿಕೆ (cost-push) ಯಿಂದಾಗಿ ಉಂಟಾಗುವ ಹಣದುಬ್ಬರವನ್ನು ತರುತ್ತದೆ. ಇದು (ಹಣದುಬ್ಬರವು) ದುಡಿಯುವ ಜನರ ನಿಜ ವರಮಾನವನ್ನು ಕುಗ್ಗಿಸುವ ಮೂಲಕ ಮಾತ್ರವೇ ಕೊನೆಗೊಳ್ಳುತ್ತದೆ. ಆದ್ದರಿಂದ, ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಮೂಲಕ ಭಾರತವು ಅಮೆರಿಕದ ಒತ್ತಡಕ್ಕೆ ಮಣಿಯುವ ಕ್ರಮವು ತೈಲ ಬೆಲೆಗಳ ಮೇಲೆ ವಿನಿಮಯ ದರದ ಅಪಮೌಲ್ಯವು ಬೀರುವ ಪರಿಣಾಮದ ರೀತಿಯದೇ ಪರಿಣಾಮವನ್ನು ಬೀರುತ್ತದೆ ಮತ್ತು ಅದು ದೇಶದ ದುಡಿಯುವ ಜನರ ವರಮಾನವನ್ನು ಅದೇ ರೀತಿಯಲ್ಲಿಯೇ ಹಿಂಡುತ್ತದೆ.

ರಷ್ಯಾದ ವಿರುದ್ಧ ಯುಎಸ್ ವಿಧಿಸಿದ ನಿರ್ಬಂಧಗಳನ್ನು ರಾಜಕೀಯ ಕಾರ್ಯತಂತ್ರದ ಕಾರಣಗಳಿಗಾಗಿ ಮಾತ್ರವಲ್ಲದೆ ದುಬಾರಿ ಅಮೇರಿಕನ್ ತೈಲ ಮಾರುಕಟ್ಟೆಯ ಗಾತ್ರವನ್ನು ವಿಸ್ತರಿಸುವುದಕ್ಕಾಗಿಯೂ ವಿಧಿಸಲಾಗುತ್ತದೆ. ಯುರೋಪ್ ಈಗಾಗಲೇ ಅಮೆರಿಕದ ಹಿಡಿತದಲ್ಲಿದೆ ಮತ್ತು ಅಗ್ಗದ ರಷ್ಯಾದ ಇಂಧನಕ್ಕೆ ಬದಲಾಗಿ ದುಬಾರಿ ಅಮೇರಿಕನ್ ಇಂಧನವನ್ನು ಕೊಳ್ಳುವ ಮೂಲಕ ಆರ್ಥಿಕವಾಗಿ ಆತ್ಮಘಾತುಕ ಎಂದೇ ಹೇಳಬಹುದಾದ ಕೆಲಸವನ್ನು ಮಾಡಿದೆ: ಜರ್ಮನಿಯು ಅಮೇರಿಕನ್ ತೈಲವನ್ನು ಕೊಳ್ಳುವ ಕಾರಣದಿಂದಾಗಿ ಅಪ-ಕೈಗಾರೀಕರಣಗೊಳ್ಳುವ ಹಾದಿಯಲ್ಲಿದೆ ಮತ್ತು ಜರ್ಮನ್ ಕಾರ್ಮಿಕರು ಈಗಾಗಲೇ ಒಂದು ಕಡು ಚಳಿಗಾಲದ ಕಾಠಿಣ್ಯದಿಂದ ನರಳಿದ್ದಾರೆ. ಅಮೆರಿಕದ ಇಂಧನ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಈಗ ಭಾರತದಂತಹ ಮೂರನೇ ಜಗತ್ತಿನ ದೇಶಗಳಲ್ಲಿನ ದುಡಿಯುವ ಜನರು ತೊಂದರೆಗಳಿಗೆ ಒಳಗಾಗಲಿದ್ದಾರೆ.

ಇದು ತನ್ನ ಇಂಧನ ಮಾರುಕಟ್ಟೆಯ ಗಾತ್ರವನ್ನು ವೃದ್ಧಿಸಿಕೊಳ್ಳುವ ಮೂಲಕ ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸಿಕೊಳ್ಳಲು ವಿಶ್ವಾದ್ಯಂತವೂ ದುಡಿಯುವ ಜನರಿಂದ ತ್ಯಾಗಗಳನ್ನು ಮುಚ್ಚುಮರೆಯಿಲ್ಲದೆ ಕೋರುವ ಸಾಮ್ರಾಜ್ಯಶಾಹಿ ಅಮೆರಿಕದ ದುರಹಂಕಾರದ ಒಂದು ಅತ್ಯುತ್ತಮ ನಿದರ್ಶನವೂ ಆಗುತ್ತದೆ. ಅಮೇರಿಕನ್ ಸಾಮ್ರಾಜ್ಯಶಾಹಿಯು ತನ್ನ ಕೈ ತಿರುಚುತ್ತಿರುವುದರ ಬಗ್ಗೆ ಭಾರತ ಸರ್ಕಾರದ ಪ್ರಸ್ತುತ ಅಸಹಾಯಕತೆಯೂ ಸಹ ಒಂದು ಅತ್ಯುತ್ತಮ ನಿದರ್ಶನವಾಗುತ್ತದೆ: ಈ ಸರ್ಕಾರವು ಅಮೇರಿಕನ್ ಹಿತಾಸಕ್ತಿಗಳನ್ನು ಉತ್ತೇಜಿಸುತ್ತಿರುವ ಅಮೇರಿಕನ್ ಆಡಳಿತವನ್ನು ಸಂತುಷ್ಟಗೊಳಿಸುವ ಸಲುವಾಗಿ ಭಾರತದ ದುಡಿಯುವ ಜನರ ಹಿತಾಸಕ್ತಿಗಳನ್ನು ಬಲಿಕೊಡಲು ಸಿದ್ಧವಾಗಿದೆ.

 

 

 

ಯುಎಸ್‍ನೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಧಾವಿಸುತ್ತಿರುವಾಗಲೇ ಅದರೊಂದಿಗೆ ಮೊತ್ತಮೊದಲ ಎಲ್‍ಪಿಜಿ ಆಮದಿನ ಡೀಲ್ ಸುತ್ತಿಕೊಂಡಿದೆ

ವ್ಯಂಗ್ಯಚಿತ್ರ ಕೃಪೆ: ಮಂಜುಲ್ @ ಫೇಸ್‍ಬುಕ್

Donate Janashakthi Media

Leave a Reply

Your email address will not be published. Required fields are marked *