ಎಸ್‍ಐಆರ್ ಪ್ರಕ್ರಿಯೆ ದೋಷಪೂರಿತವಾಗಿದೆ – ಅದನ್ನು ತಕ್ಷಣವೇ ನಿಲ್ಲಿಸಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

“ಸಾವುನೋವುಗಳು ಆಕಸ್ಮಿಕವಲ್ಲ – ಬೇಜವಾಬ್ದಾರಿ ಮತ್ತು ಅಮಾನವೀಯ ಆಡಳಿತ ಪ್ರಕ್ರಿಯೆಯ ನೇರ ಫಲಿತಾಂಶ”
ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್)ಗೆ ತನ್ನ ಬಲವಾದ ವಿರೋಧವನ್ನು ಪುನರುಚ್ಚರಿಸಿರುವ ಸಿಪಿಐ(ಎಂ), ನಿಯಮಿತ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿಯಾಗಿರುತ್ತದೆ ಎನ್ನಲಾದ ಈ ಪ್ರಕ್ರಿಯೆಯು ಮತದಾರರ ಪಟ್ಟಿಯ ಸಮಗ್ರತೆ ಮತ್ತು ಆ ಕೆಲಸವನ್ನು ಕೈಗೊಳ್ಳುವ ಬಲವಂತಕ್ಕೆ ಒಳಗಾಗಿರುವವವರ ಸುರಕ್ಷತೆ ಎರಡಕ್ಕೂ ಮಾರಕವಾಗುವ ಒಂದು ಅವ್ಯವಸ್ಥೆಯ, ಲಂಗುಲಗಾಮಿಲ್ಲದ ಪ್ರಕ್ರಿಯೆಯಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದೆ. ದೋಷ

ಈ ಇಡೀ ಪ್ರಕ್ರಿಯೆಯನ್ನು ಆತುರಾತುರವಾಗಿ ಮತ್ತು ಬಹಳ ಕೆಟ್ಟದಾಗಿ ಯೋಜಿಸಿರುವ ರೀತಿಯಲ್ಲಿ ನಡೆಸಲಾಗುತ್ತಿದೆ. ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಮನೆ-ಮನೆ ಪರಿಶೀಲನೆಯನ್ನು ಪೂರ್ಣಗೊಳಿಸಲು ಅಸಾಧ್ಯವಾದ ಗಡುವನ್ನು ನೀಡಲಾಗಿದೆ. ಈ ಆತುರವು ಹಲವಾರು ಸ್ಥಳಗಳಲ್ಲಿ ಬಿಎಲ್‌ಒಗಳು ಕೆಲವು ಪಕ್ಷದ ಕಚೇರಿಗಳಲ್ಲಿ ಮೊಕ್ಕಾಂ ಹೂಡಿ ಮತದಾರರನ್ನು ತಮ್ಮನ್ನು ಭೇಟಿ ಮಾಡಲು ಹೇಳುತ್ತಿದ್ದಾರೆ ಎಂಬ ದೂರುಗಳಿಗೆ ಕಾರಣವಾಗಿದೆ. ಇವೆಲ್ಲವೂ ಅನಿವಾರ್ಯವಾಗಿಯೇ ಸಾಮೂಹಿಕವಾಗಿ ಹೊರಗಿಡುವುದಕ್ಕೆ ಮತ್ತು ದೋಷಗಳಿಗೆ ಕಾರಣವಾಗುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಳವಳ ವ್ಯಕ್ತಪಡಿಸಿದೆ.

ಬಿಎಲ್‌ಒಗಳ ಮೇಲೆ ಬಿದ್ದಿರುವ ಅಪಾರ ಒತ್ತಡವು ಈಗಾಗಲೇ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಅವರು ಸಾಕಷ್ಟು ವಿಶ್ರಾಂತಿ ಅಥವಾ ಸುರಕ್ಷತಾ ಕ್ರಮಗಳಿಲ್ಲದೆ, ನಜ್ಜು-ಗುಜ್ಜು ಮಾಡುವ ಕೆಲಸದ ಹೊರೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವು ಆಕಸ್ಮಿಕ ಸಾವುನೋವುಗಳಲ್ಲ – ಒಂದು ಬೇಜವಾಬ್ದಾರಿ ಮತ್ತು ಅಮಾನವೀಯ ಆಡಳಿತ ಪ್ರಕ್ರಿಯೆಯ ನೇರ ಫಲಿತಾಂಶವಾಗಿದೆ.

ಇದನ್ನೂ ಓದಿ: ಶಿವಮೊಗ್ಗ | ತಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗೊಂಳಿಗೆ ಕೈ ಜೋಡಿಸಿ – ಸಂಪತ್‌ ಸಿ ಎಂ

ಚುನಾವಣಾ ಆಯೋಗವು ತನ್ನದೇ ನಕಲಿ ಮತದಾರರ ಪತ್ತೆಹಚ್ಚುವ ತಂತ್ರಾಂಶವನ್ನು ಬಳಸುತ್ತಿಲ್ಲ ಎಂಬುದು ಆಘಾತಕಾರಿಯಾಗಿದೆ, ಇದು ನಿಖರತೆಯನ್ನು ಖಚಿತಪಡಿಸಲು ಮತ್ತು ದೈಹಿಕ ಹೊರೆಗಳನ್ನು ಕಡಿಮೆ ಮಾಡಲೆಂದೇ ನಿರ್ದಿಷ್ಟವಾಗಿ ರೂಪಿಸಲಾದ ಒಂದು ಸಾಧನ. ಪ್ರಸ್ತುತ ಪರಿಷ್ಕರಣೆಯ ಹಿಂದಿನ ನಿಜವಾದ ಆಶಯ ಮತ್ತು ಉದ್ದೇಶದ ಬಗ್ಗೆ ಗಂಭೀರ ಕಳವಳಗಳನ್ನು ಇದು ಹುಟ್ಟುಹಾಕುತ್ತದೆ.

ಈ ಹೊರೆಯೂ ಸಾಲದೆಂಬಂತೆ, ಪ್ರಪತ್ರ(ಫಾರ್ಮ್‌)ಗಳನ್ನು ಅಪ್‌ಲೋಡ್ ಮಾಡಲು ಬಯಸುವ ಬಿಎಲ್‌ಒಗಳು ಮತ್ತು ಸಾಮಾನ್ಯ ಮತದಾರರು ಇಬ್ಬರೂ ಇಂಟರ್ನೆಟ್ ಸಂಪರ್ಕ, ಅಸ್ಥಿರ ಸರ್ವರ್‌ಗಳು ಮತ್ತು ಮತ್ತೆ-ಮತ್ತೆ ತಾಂತ್ರಿಕ ವೈಫಲ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕರಿಗೆ – ವಿಶೇಷವಾಗಿ ಅಂಚಿನಲ್ಲಿರುವ ವಿಭಾಗಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ – ಒಂದು ಸರಳ ಪ್ರಪತ್ರವನ್ನು ಅಪ್‌ಲೋಡ್ ಮಾಡುವುದು ಕೂಡ ಒಂದು ವಿಷಮಪರೀಕ್ಷೆಯಾಗಿ ಮಾರ್ಪಟ್ಟಿದ್ದು,  ಇದು ಮತದಾರರ ಸೇರ್ಪಡೆಗೆ ಖಂಡಿತವಾಗಿಯೂ ಹೊಸ ಅಡೆತಡೆಗಳನ್ನು ಸೃಷ್ಟಿಸುತ್ತಿದೆ.

ಆದ್ದರಿಂದ ಚುನಾವಣಾ ಆಯೋಗವು ಈ ದೋಷಪೂರಿತ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ದೊಡ್ಡ ಸಂಖ್ಯೆಯಲ್ಲಿ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಪೊಲಿಟ್‌ಬ್ಯುರೊ ಆಗ್ರಹಪಡಿಸಿದೆ.

ಇದನ್ನೂ ನೋಡಿ: ಕ್ರಾಂತಿಗೀತೆ | ಭಾರತ ದೇಶದ ಭವಿಷ್ಯ ಬರೆಯಲು | CITU Janashakthi Media

Donate Janashakthi Media

Leave a Reply

Your email address will not be published. Required fields are marked *