ಒಳಮೀಸಲಾತಿ: ನೇಮಕಾತಿ‌ ಮುಂದುವರಿಸಲು ಷರತ್ತುಬದ್ಧ ಅನುಮತಿ – ಹೈಕೋರ್ಟ್

ಬೆಂಗಳೂರು: ರಾಜ್ಯ ಸರ್ಕಾರಕ್ಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹಿಗ್ಗಿಸಿ ಒಟ್ಟು ಮೀಸಲು ಪ್ರಮಾಣವನ್ನು ಶೇ 50ರಿಂದ 56ಕ್ಕೆ ಹೆಚ್ಚಿಸಿದ್ದ ಕಾಯ್ದೆ ಅನ್ವಯ ಈಗಾಗಲೇ ಆರಂಭಿಸಿರುವ ಸರ್ಕಾರಿ ಹುದ್ದೆಗಳ ನೇಮಕಾತಿ‌ ಮತ್ತು ಬಡ್ತಿ ಪ್ರಕ್ರಿಯೆ ಮುಂದುವರಿಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ನೇಮಕಾತಿ‌

ಈ ಸಂಬಂಧ ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಕಾಯ್ದೆಯ ಅನ್ವಯ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನೇಮಕಾತಿ ಆರಂಭಿಸಿದ್ದು ಅದು ಅಂತಿಮ ಹಂತದಲ್ಲಿದೆ. ಒಟ್ಟು 3,644 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸುವುದಿಲ್ಲ. ಹೊಸ ಕಾಯ್ದೆ ಅಡಿ ಈಗಾಗಲೇ ನೇಮಕಾತಿ ಮಾಡಿರುವುದಕ್ಕೆ ಮಧ್ಯಂತರ ಆದೇಶ ಅನ್ವಯಿವಾಗುವುದಿಲ್ಲ ಎಂದು ಆದೇಶಿಸಬೇಕು. ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಮತ್ತು ಬಡ್ತಿ ನೀಡಲು ಸರ್ಕಾರಕ್ಕೆ ಅನುಮತಿಸಬೇಕು’ ಎಂದು ಕೋರಿದರು. ನೇಮಕಾತಿ‌

ಇದನ್ನೂ ಓದಿ: ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಇದಕ್ಕೆ ಪ್ರತಿಯಾಗಿ ಅಭ್ಯರ್ಥಿ ಮಧು ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ್‌ ಅವರು ‘ನೇಮಕಾತಿ ಪ್ರಕ್ರಿಯೆ ನಡೆಯಲಿ. ಆದರೆ, ಅಂತಿಮಪಟ್ಟಿಯನ್ನು ನ್ಯಾಯಾಲಯದ ಅನುಮತಿ ಇಲ್ಲದೇ ಪ್ರಕಟಿಸಬಾರದು. ಜಿಬಿಎ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿದ್ದೇವೆ. ಆಯ್ಕೆಯಾದ ಮೇಲೆ ನೇಮಕಾತಿ ಆದೇಶ ನೀಡಲು ಮೂರು ತಿಂಗಳಾಗುತ್ತದೆ. ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ. ನಿವೃತ್ತ ನ್ಯಾ.ಎಚ್‌.ಎನ್‌.ನಾಗಮೋಹನ ದಾಸ್‌ ಸಮಿತಿಯ ವರದಿ ಅನುಸಾರ ಮೀಸಲಾತಿ ಹೆಚ್ಚಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ನ್ಯಾ.ನಾಗಮೋಹನ್‌ ದಾಸ್‌ ಸಮಿತಿಯು ಅಗತ್ಯ ಪ್ರಾತಿನಿಧ್ಯ ಪರೀಕ್ಷೆ ಅನ್ವಯಿಸುವಲ್ಲಿ ಮೂಲಭೂತವಾಗಿ ಎಡವಿದೆ. ಅದು ಅನುಪಾತದ ಪ್ರಾತಿನಿಧ್ಯ ಕಲ್ಪಿಸಿದೆ’ ಎಂಬ ಆಕ್ಷೇಪ ವ್ಯಕ್ತಪಡಿಸಿದರು.

ಇನ್ನಿತರ ಅರ್ಜಿದಾರರ ಪರ ಹೈಕೋರ್ಟ್‌ ವಕೀಲರಾದ ನಚಿಕೇತ್‌ ಮತ್ತು ರಂಗನಾಥ್‌ ಜೋಯಿಸ್‌ ‘ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅವಕಾಶ ನೀಡಬಾರದು. ಅರ್ಜಿಗಳನ್ನು ಅಂತಿಮವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವಾದ ಮಂಡಿಸಲು ಸಿದ್ಧವಿದ್ದು ಅದಕ್ಕೆ ಆದ್ಯತೆ ನೀಡಬೇಕು’ ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮೀಸಲಾತಿ ಹೆಚ್ಚಿಸಿರುವುದರ ಅನುಸಾರ ಹೊಸದಾಗಿ ಯಾವುದೇ ನೇಮಕಾತಿ ಅಥವಾ ಬಡ್ತಿ ನೀಡುವಂತಿಲ್ಲ. ಕಾಯ್ದೆಯ ಅನ್ವಯ ಈಗಾಗಲೇ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ಮುಂದುವರಿಸಬಹುದು. ನೇಮಕಾತಿ ಅಥವಾ ಸೀಟುಗಳ ಹಂಚಿಕೆ ಹಾಲಿ ಅರ್ಜಿಗಳ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಇದನ್ನು ನೇಮಕಾತಿ ಅಥವಾ ಬಡ್ತಿ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಈ ವಿಚಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಹಕ್ಕು ದೊರೆಯುವುದಿಲ್ಲ. ಈ ಮಾರ್ಪಾಡು 2025ರ ನವೆಂಬರ್ 19ರ ಮಧ್ಯಂತರ ಆದೇಶಕ್ಕೆ ಮಾತ್ರ ಅನ್ವಯವಾಗುತ್ತದೆ’ ಎಂದು ಸ್ಪಷ್ಟಪಡಿಸಿತು. ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ವಿಚಾರಣೆಯನ್ನು 2026ರ ಜನವರಿ 28ಕ್ಕೆ ಮುಂದೂಡಿತು.

ಇದನ್ನೂ ನೋಡಿ: ದೇಶದ ಸಂಪತ್ತು‌ ಸೃಷ್ಟಿಸುವ ರೈತ – ಕಾರ್ಮಿಕರ ಹಿತ ರಕ್ಷಿಸಬೇಕಾದವರು ಯಾರು? ಎಸ್‌. ವರಲಕ್ಷ್ಮಿ ಮಾತುಗಳು Janashakthi

Donate Janashakthi Media

Leave a Reply

Your email address will not be published. Required fields are marked *