ಬೆಂಗಳೂರು : ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ವಿರೋಧಿ ಸಂಹಿತೆಗೆ ವಿರೋಧ ವ್ಯಕ್ತಪಡಿಸಿರುವ ಸಿಐಟಿಯು ಸಂಘಟನೆ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸುಟ್ಟು ಹಾಕುವ ಮೂಲಕ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದೆ. ರಾಜ್ಯವ್ಯಾಪಿ ನಡೆದ ಪ್ರತಿಭಟನೆಯ ಜಿಲ್ಲಾವರು ಸುದ್ದಿಗಳು ಈ ಕೆಳಗಿನಂತಿವೆ.
ದಾವಣಗೆರೆ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ಉದ್ಯೋಗದಾತರ ಪರ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯ ಅನುಷ್ಠಾನ ಮಾಡಲು ಮುಂದಾಗಿ ಅಧಿಸೂಚನೆ ಪ್ರಕಟಿಸಿದೆ. ಇದು ದೇಶದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಮಾಡಿದ ಮೋಸದ ವಂಚನೆ ಎಂದು ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 21 ನವೆಂಬರ್ 2025 ರಂದು ಅಧಿಸೂಚನೆ ಗೊಳ್ಳುವ ಪೂರ್ವದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರೆದ ಸಭೆಯಲ್ಲಿ ನಾಲ್ಕು “ಕಾರ್ಮಿಕ ಸಂಹಿತೆಗಳು” ಎಂಬ ಈ ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಧಿಸೂಚನೆಯು ಎಲ್ಲಾ ಪ್ರಜಾಸತ್ತಾತ್ಮಕ ನೀತಿಗಳನ್ನು ಧಿಕ್ಕರಿಸುತ್ತದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ನಾಶಮಾಡಲಿದೆ ಎಂದು ಸಿ.ಐ.ಟಿ.ಯು. ಹಾಗೂ ಇತರೆ ಕೇಂದ್ರ ಕಾರ್ಮಿಕ ಸಂಘಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ ಅದನ್ನು ಕಡೆಗಣಿಸಿರುವ ಕೇಂದ್ರ ಸರ್ಕಾರ ಬಿಹಾರ ಚುನಾವಣೆಯ ವಿಜಯದಿಂದ ಬೀಗಿ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಘೋಷಿಸಿದೆ. ಇದರಿಂದ ಭವಿಷ್ಯದಲ್ಲಿ ಕೋಟ್ಯಾಂತರ ಶ್ರಮಜೀವಿಗಳ ಬದುಕು ಅತಂತ್ರಗೊಳ್ಳಲಿದೆ ಎಂದು ಕೆ. ಮಹಾಂತೇಶ್ ಅಪಾದಿಸಿದರು.
ಇದನ್ನೂ ಓದಿ: ನ್ಯಾಯಾಂಗವು ಪ್ರಜಾಪ್ರಭುತ್ವದ ರಕ್ಷಣೆಯ ಕವಚವಾಗಿ ಕೆಲಸ ಮಾಡಬೇಕು – ಶ್ರೀ P V ಸುರೇಂದ್ರನಾಥನ್
ಕೇಂದ್ರ ಸರ್ಕಾರ ಕೂಡಲೇ ಭಾರತೀಯ ಕಾರ್ಮಿಕ ಸಮ್ಮೇಳನವನ್ನು (ILC) ತಕ್ಷಣವೇ ಕರೆಯುವಂತೆ ಒತ್ತಾಯಿಸಿದೆ ಮತ್ತು ಇದೇ ನವೆಂಬರ್26 ರಂದು ಸಂಯುಕ್ತ ಕಿಸಾನ ಮೊರ್ಚ(SKM) ಹಾಗೂ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ(JCTU) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದೆ ಅಂದು ಹರಿಹರ ಪಾಲಿಪೈಬರ್ಸ್, ಗ್ರಾಸಿಂ ಹಾಗೂ ರಾಮ್ ಕೊ ಕಂಪನಿ ಕಾರ್ಮಿಕರು ಸಿ.ಐ.ಟಿ.ಯು. ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕ ಕೆ. ಮುದಿಮಲ್ಲನಗೌಡ ಹೇಳಿದರು.
ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಲಿ ಇರುವ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಕಲ್ಯಾಣ ಮಂಡಳಿಗಳು ಮುಚ್ಚುವ ಅಪಾಯಗಳಿವೆ ಗುತ್ತಿಗೆ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಒಳಗಾಗಲಿದ್ದಾರೆ ಎಂದು ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ.ಹೆಚ್. ಆನಂದರಾಜು ಆರೋಪಿಸಿದರು.
ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಮತ್ತು ಮನುಸೃತಿ ಆಧಾರಿತ ಶ್ರಮ ಶಕ್ತಿ ನೀತಿ 2025 ರ ಕರಡನ್ನು ಹಿಂತೆಗೆದುಕೊಳ್ಳಬೇಕೇಂದು ಹರಿಹರ ಪಾಲಿಪೈಬರ್ಸ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೋಟ್ರೇಶ ಓಲೇಕಾರ್ ಆಗ್ರಹಿಸಿ ಇಲ್ಲದಿದ್ದರೆ ಭಾರತದ ದುಡಿಯುವ ಜನರು ತೀವ್ರ ಪ್ರತಿಭಟನೆಯ ಕೇಂದ್ರ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಜಿ.ಡಿ. ಖಜಾಂಚಿಯಾದ ನೇತ್ರಾವತಿ, ಗಜೇಂದ್ರ, ಹನುಮಂತಪ್ಪ, ಮಂಜುನಾಥ್, ಮುರುಳಿ, ಶಿವಪ್ಪ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಹಾಲೇಶ್ ನಾಯಕ್, ಸದಾಶಿವ ನಾಯಕ್, ಎಲ್.ಐ.ಸಿ. ಏಜೆಂಟ್ಸ್ ಯೂನಿಯನ್ ಜಿಲ್ಲಾ ಮುಖಂಡರಾದ ಸವಿತಾ ಜಿ.ಜಿ., ಆಟೋ ಚಾಲಕರ ಸಂಘದ ಮುಖಂಡರಾದ ಶ್ರೀನಿವಾಸ ಮೂರ್ತಿ, ಬೀದಿಬದಿ ಮಾರಾಟಗಾರರ ಸಂಘದ ನಾಗರಾಜ್, ಗ್ರಾ.ಪಂ ನೌಕರರ ಸಂಘದ ಮಂಜುನಾಥ್, ಎಚ್ ಪಿ ಎಫ್ ನೌಕರರ ಸಂಘದ ವಿನಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಹಾಸನ: ಸಿಐಟಿಯು ಹಾಸನ ಜಿಲ್ಲಾ ಸಮಿತಿ ನವೆಂಬರ್.22 ರಂದು ಹಾಸನದ ಮಹಾವೀರ ವೃತ್ತದಲ್ಲಿ ಕರಾಳ ಸಂಹಿತೆಗಳ ಅಧಿಸೂಚನೆ ಪ್ರತಿಗಳನ್ನು ದಹಿಸಿ ತೀವ್ರ ಕೋಪ ವ್ಯಕ್ತಪಡಿಸಿತು. ಸಂಘಟನೆಯು ಇದನ್ನು ಕೇಂದ್ರ ಸರ್ಕಾರಕ್ಕೆ “ಗಂಭೀರ ಎಚ್ಚರಿಕೆ. ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರತಿಯೊಂದು ಕ್ರಮಕ್ಕೂ ನಾವು ನೂರರಷ್ಟು ಶಕ್ತಿಯಾಗಿ ಪ್ರತಿರೋಧಿಸುತ್ತೇವೆ. ನವೆಂಬರ್.26 ರಂದು ರೈತರೊಂದಿಗೆ ಸಂಯುಕ್ತ ಹೋರಾಟ ಜೊತೆಗೆ ದೇಶವ್ಯಾಪಿ ಧಿಕ್ಕಾರ ದಿನವಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಕಾರ್ಮಿಕ ವೇದಿಕೆ 26 ರಂದು ಒಟ್ಟಾಗಿ ಪ್ರತಿಭಟನೆ ನಡೆಸಲಿದ್ದು, ಕೆಲಸದ ಸ್ಥಳಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ, ಗೇಟ್ ಸಭೆಗಳು, ಬೀದಿ ಬದಿ ಜಾಗೃತಿ, ಬಸ್ತಿಗಳಲ್ಲಿ ಸಭೆಗಳ ಮೂಲಕ ಸಂಘರ್ಷಾತ್ಮಕ ಹೋರಾಟ ಕೈಗೊಳ್ಳಲಾಗುವುದು ಎಂದರು. ನಿರುದ್ಯೋಗದ ಬಿಕ್ಕಟ್ಟು, ಹಣದುಬ್ಬರದ ಹೊಡೆತಗಳ ನಡುವೆ ಜಾರಿಗೊಂಡಿರುವ ಈ ಸಂಹಿತೆಗಳು ದುಡಿಯುವ ಜನರ ಮೇಲೆ ಕೇಂದ್ರ ಸರ್ಕಾರ ಘೋಷಿಸಿರುವ ಯುದ್ಧವೇ ಸರಿ ಎಂದು ಸಂಘಟನೆ ಹೇಳಿದೆ. ಸಂಹಿತೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಹೋರಾಟ ತೀವ್ರಗೊಳ್ಳುತ್ತಲೇ ಇರುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಖಜಾಂಚಿ ಅರವಿಂದ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಪ್ಲಾಂಟೇಶನ್ ವರ್ಕರ‍್ಸ್ ಕಾರ್ಯದರ್ಶಿ ಸೌಮ್ಯ, ರಮೇಶ್ ಇತರರು ಉಪಸ್ಥಿತರಿದ್ದರು.

ಹೊಸಕೋಟೆ: ದುಡಿಯುವ ವರ್ಗಕ್ಕೆ ದೊರೆತ ಸೌಲಭ್ಯಗಳೆಲ್ಲ ಕಾರ್ಮಿಕರ ಹೋರಾಟದಿಂದಲೇ ದೊರೆತಿದ್ದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.
ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿಯವರೆಗೆ ಸಿಐಟಿಯು ಸಂಘಟನೆ ಮೆರವಣಿಗೆಯಲ್ಲಿ ತೆರಳಿ ದೇಶದ ಮೊದಲ ಕಾರ್ಮಿಕ ಸಚಿವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡೆ ಮಾಡುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡಿ ಬಂಡವಾಳ ಶಾಹಿಗಳ ಪರ ನೆಡೆದುಕೊಳ್ಳುತ್ತಿದೆ. ಇದರಿಂದ ಕಾರ್ಮಿಕರಿಗೆ ಬಾರಿ ಅನ್ಯಾಯವಾಗುತಿದ್ದು, ಈ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಮಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೊಳಿಸಿದ ಕಾರ್ಮಿಕ ವಿರೋಧಿಯಾದ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ ಇಂದು ದೇಶಾದ್ಯಂತ ಕಾರ್ಮಿಕರಿಂದ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಬೇಕೆಂದು ಸಿಐಟಿಯು ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಕಾರ್ಪೊರೇಟ್ ಗಳ ಹಿತಾಸಕ್ತಿಗಳನ್ನು ಕಾಪಾಡುವ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟು, ಯಾದವ ಶೆಟ್ಟಿ, ರವಿಚಂದ್ರ ಕೊಂಚಾಡಿ, ರೋಹಿದಾಸ್,ನೋಣಯ್ಯ ಗೌಡ, ಕಟ್ಟಡ ಕಾರ್ಮಿಕರ ಸಂಘಟನೆಯ ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಇಬ್ರಾಹೀಂ ಅಂಬ್ಲಮೊಗರು, ಉಮೇಶ್ ಶಕ್ತಿನಗರ,ಬೀಡಿ ಕಾರ್ಮಿಕರ ಸಂಘಟನೆಯ ಜಯಂತಿ ಶೆಟ್ಟಿ,ವಿಲಾಸಿನಿ,ಬೀದಿಬದಿ ವ್ಯಾಪಾರಸ್ಥರ ಸಂಘದ ಸಂತೋಷ್, ಖಾದರ್,ಬಂದರು ಶ್ರಮಿಕ ಸಂಘದ ಫಾರೂಕ್ ಉಳ್ಳಾಲ, ರಫೀಕ್ ಹರೇಕಳ,ರೈತ ಸಂಘಟನೆಯ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ಸದಾಶಿವದಾಸ್, ಮಶೇಖರ್ ಕುಂದರ್, ಡಿವೈಎಫ್‌ಐ ನಾಯಕರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ನವೀನ ಕೊಂಚಾಡಿ, ತಯ್ಯುಬ್ ಬೆಂಗರೆ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಶಕ್ತಿನಗರ, ಅಸುಂತ ಡಿ ಸೋಜ, ಮಾಧುರಿ ಬೋಳಾರ, ಯೋಗಿತಾ ಉಳ್ಳಾಲ, ಪ್ಲೇವಿ ಕ್ರಾಸ್ತಾ ಅತ್ತಾವರ, ಪ್ರಮೀಳಾ ದೇವಾಡಿಗ, ದಲಿತ ಸಂಘಟನೆಯ ರಘುವೀರ್, ಆದಿವಾಸಿ ಹಕ್ಕುಗಳ ಸಮಿತಿಯ ಕರಿಯ ಕೆ, ಶೇಖರ್ ವಾಮಂಜೂರು, ವಿಕಾಸ್, ಕೃಷ್ಣ ಕತ್ತಲ್ ಸಾರ್, ಬ್ಯಾಂಕ್ ನೌಕರರ ಸಂಘಟನೆಯ ಪುರುಷೋತ್ತಮ ಪೂಜಾರಿ, ಮುನ್ನೂರು ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.

ಬಳ್ಳಾರಿ: ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ 4 ಕಾರ್ಮಿಕ ಸಂಹಿತೆಯ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಮಾಡಿದ್ದು , ದೇಶದಲ್ಲಿ ಸಂಪತ್ತು ಸೃಷ್ಟಿ ಮಾಡುವ ಕಾರ್ಮಿಕರು ಹಕ್ಕುಗಳನ್ನು ಕಸಿದು ಕೊಂಡು ಮಾಲಿಕರ ಪರವಾಗಿ ಜಾರಿ ಮಾಡಿದ ಕೇಂದ್ರ ಸರ್ಕಾರದ ವಿರುದ್ದ ಸಿಐಟಿಯು ನೇತೃತ್ವದಲ್ಲಿ ನಗರದ ಗಡಿಗಿ ಚನ್ನಪ್ಪ ವೃತ್ತದಲ್ಲಿ ನಿನ್ನೆ ಮಧ್ಯಾಹ್ನ ಪ್ರತಿಭಟನೆ ನಡೆಸಿ ನೀತಿ ಸಂಹಿತೆಗಳ ಕಾಯೆದೆ ಗಳನ್ನು ದಹನ ಮಾಡಲಾಯುತು.
ಕರ್ನಾಟಕ ಪ್ರಾಂತ ರೈತ ಸಂಘಟನೆ ರಾಜ್ಯ ಅದ್ಯಕ್ಷ ಯು ಬಸವರಾಜ,, ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷ ಜೆ. ಚಂದ್ರಕುಮಾರಿ, ಸಿ ಐ ಟಿ ಯು ರಾಜ್ಯ ಉಪಾಧ್ಯಕ್ಷ ಜೆ ಸತ್ಯಬಾಬು, ಸಿ ಐ ಟಿ ಯುನ ಜಿಲ್ಲಾ ಪ್ರದಾನ ಕಾರ್ಯದರ್ಶಿ ಎ. ಮಲ್ಲಮ್ಮ, ಬಿ ಟಿ ಪಿ ಎಸ್ ಸಂಘದ ಅಧ್ಯಕ್ಷ ಎಂ ತಿಪ್ಪೇಸ್ವಾಮಿ, ಕಿರಣಕುಮಾರಿ, ಈರಮ್ಮ್, ಎಸ್ ವೈ ಗುರುಶಾಂತ ಮೊದಲಾದವರು ಇದರಲ್ಲಿ ಪಾಲ್ಗೊಂಡಿದ್ದರು.

ಕೋಲಾರ: ಕಾರ್ಮಿಕರಿಗೆ ಸಂಬಂಧಿಸಿದ 29 ಕಾನೂನುಗಳನ್ನು, ನಾಲ್ಕು ಸಂಹಿತೆಗಳನ್ನಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಈ ಮೂಲಕ ದುಡಿಯುವ ವರ್ಗವನ್ನು ಬೀದಿಗೆ ತಂದು ನಿಲ್ಲಿಸುವ ಹುನ್ನಾರ ಅಡಗಿದೆ. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಗೊಳಿಸಿ ಕಾರ್ಮಿಕ ವರ್ಗದ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ನಗರದ ಮೆಕ್ಕೆ ವೃತ್ತದಲ್ಲಿ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ನೋಡಿ: ಶಾಲಾ – ಕಾಲೇಜ್ ಸಮಯಕ್ಕೆ ಬಸ್ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ Janashakthi Media
