ಮೋದಿ ಸರ್ಕಾರವು ಜಿಎಸ್‌ಟಿ ದರ ಇಳಿಕೆಯ ಕೀರ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ. ಆದರೆ ಇದರಿಂದ ತನ್ನ ಆದಾಯದಲ್ಲಿ ಆಗುವ ಇಳಿಕೆಯನ್ನು ಶ್ರೀಮಂತರಿಂದ ಸಂಪನ್ಮೂಲ ಸಂಗ್ರಹಣೆಯ ಮೂಲಕ ಮಾಡಲು ಅದು ನಿರಾಕರಿಸುವುದರಿಂದಾಗಿ, ಪರೋಕ್ಷವಾಗಿ ಬಡವರ ಮೂಲಕವೇ ಸಂಗ್ರಹ ಮಾಡುವಂತಾಗುತ್ತದೆ. ಇದು ನಿಜವರಮಾನಗಳ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ರಾಜ್ಯ ಸರ್ಕಾರಗಳ ಹಣಕಾಸಿನ ಮೇಲೆ ಮತ್ತಷ್ಟು ಒತ್ತಡವನ್ನು ಹೇರುತ್ತದೆ, ಅಂದರೆ ಕೇಂದ್ರ ಸರಕಾರ ಬಲಗೈಯಿಂದ ಕೊಡಮಾಡಿದ್ದನ್ನು ಎಡಗೈಯಿಂದ ಕಸಿದುಕೊಳ್ಳುತ್ತದೆ ಎಂಬ ಈ ಕ್ರಮದ ಒಟ್ಟು ಚಿತ್ರವನ್ನು ಅದು ಎಚ್ಚರಿಕೆಯಿಂದ ಮರೆಮಾಚುತ್ತದೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ. ನಾಗರಾಜ್
ಮೋದಿ ಸರ್ಕಾರವು ಪ್ರಕಟಿಸಿರುವಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳ ಪರಿಷ್ಕರಣೆಯನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಜನಸಾಮಾನ್ಯರಿಗೆ ಸರ್ಕಾರದ ಉದಾತ್ತತೆ ಅತಿ ಹೆಚ್ಚು ಅಗತ್ಯವಾಗುವ ಸಮಯದಲ್ಲಿ, ಅಂದರೆ ಹಬ್ಬದ ಸಮಯದಲ್ಲಿ, ತೆರಿಗೆ ದರ ಇಳಿಕೆಯು ಅವರ ತಲೆಯ ಮೇಲಿನ ಭಾರವನ್ನು ಇಳಿಸಿದೆ ಎಂಬ ಡಂಗುರ ಸಾರಲು ಪ್ರಚಾರ ಯಂತ್ರವು ಹಗಲಿರುಳೂ ದುಡಿದಿದೆ. ಪ್ರಧಾನ ಮಂತ್ರಿ ಮೋದಿ ಮತ್ತು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಭಾವಚಿತ್ರಗಳನ್ನುಳ್ಳ ಮತ್ತು ಜಿಎಸ್‌ಟಿ ಪರಿಷ್ಕರಣೆಯಿಂದಾಗಿ 390ಕ್ಕೂ ಹೆಚ್ಚು ಸರಕುಗಳು ಅಗ್ಗವಾಗಿವೆ ಎಂದು ಹೇಳಿಕೊಳ್ಳುವ ಸರ್ಕಾರದ ಜಾಹೀರಾತು-ಚಿತ್ರಪಟಗಳನ್ನು ದಿಲ್ಲಿ ಮೆಟ್ರೊ ರೈಲುಗಳಲ್ಲಿ ಪ್ರದರ್ಶಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೀಪಾವಳಿ ಮಾರಾಟದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂಬುದನ್ನು ಪದೇ ಪದೇ ಹೇಳುತ್ತಾರೆ. ಮತ್ತು, ಜಿಎಸ್‌ಟಿ ದರಗಳ ಪರಿಷ್ಕರಣೆಯಿಂದ ಸಾಧ್ಯವಾದ ಆಟೋಮೊಬೈಲ್ ಬೆಲೆಗಳ ಇಳಿಕೆಯಿಂದಾಗಿ ಆಟೋಮೊಬೈಲ್ ಮಾರಾಟದ ಏರಿಕೆಯ ಬಗ್ಗೆ ಪತ್ರಿಕಾ ವರದಿಗಳು ತುಂಬಿಹೋಗಿವೆ.
ಇದೆಲ್ಲವೂ ಹೆಚ್ಚೆಂದರೆ ಚಿತ್ರದ ಅರ್ಧ ಭಾಗ ಮಾತ್ರ. ಉಳಿದರ್ಧಭಾಗವು ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಕುಸಿತವಾಗಿರುವ ಸರ್ಕಾರದ ಆದಾಯದ ಪರಿಣಾಮಗಳಿಗೆ ಸಂಬಂಧಿಸಿರುವುದರಿಂದ ಅದನ್ನು ಎಚ್ಚರಿಕೆಯಿಂದ ಮರೆಮಾಡಲಾಗಿದೆ. ತೆರಿಗೆ ಇಳಿಕೆಯಿಂದ ಹೆಚ್ಚು ನಷ್ಟವಾಗುವುದಿಲ್ಲ ಎಂದು ಹೇಳುವಷ್ಟು ವಿಶ್ವಾಸವನ್ನು ಸರ್ಕಾರದ ಅರ್ಥಶಾಸ್ತ್ರಜ್ಞರು ಹೊಂದಿದ್ದಾರೆ. ತೆರಿಗೆ ದರಗಳನ್ನು ಇಳಿಕೆ ಮಾಡಲಾದ ಸರಕು ಮತ್ತು ಸೇವೆಗಳ ಬೆಲೆಗಳ ಇಳಿಕೆಯಿಂದಾಗಿ ಅವುಗಳ ಮಾರಾಟ ಹೆಚ್ಚುವುದರಿಂದ, ತೆರಿಗೆ ದರ ಇಳಿಕೆಯ ಹೊರತಾಗಿಯೂ, ಮೊದಲಿದ್ದಷ್ಟೇ ಆದಾಯ ಬರುತ್ತದೆ, ಕಡಿಮೆಯಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ, ಇದು ಅಸಾಧ್ಯವೇ ಸರಿ. ಏಕೆ ಎಂಬುದನ್ನು ಈ ಕೆಳಗಿನ ಉದಾಹರಣೆ ತೋರಿಸುತ್ತದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗೌರವ ಧನ ₹1 ಸಾವಿರ ಹೆಚ್ಚಳ: ಲಕ್ಷ್ಮಿ ಹೆಬ್ಬಾಳಕರ್
ಒಂದು ವಸ್ತುವಿನ ಬೆಲೆ ರೂ. 100 ಇದೆ ಮತ್ತು ಅದರ ಮೇಲೆ ಈ ಹಿಂದೆ ಶೇ. 28ರಷ್ಟು ಇದ್ದ ಜಿಎಸ್‌ಟಿಯನ್ನು, ಈಗ ಶೇ. 18ಕ್ಕೆ ಇಳಿಸಲಾಗಿದೆ ಮತ್ತು ಸರಳತೆಗಾಗಿ ವಸ್ತುವಿನ ಜಿಎಸ್‌ಟಿ-ಪೂರ್ವ ಬೆಲೆ ಬದಲಾಗದೆ ಉಳಿದಿದೆ ಎಂದು ಊಹಿಸಿಕೊಳ್ಳೋಣ. ಅಂದರೆ 100+28 ಈಗ 100+18 ಆಗುತ್ತದೆ, ಇದರಿಂದಾಗುವ ಬೆಲೆ ಇಳಿಕೆ 8%. ಸರ್ಕಾರಕ್ಕೆ ಈ ವಸ್ತುವಿನ ಮಾರಾಟದ ಮೂಲಕ ಬರುವ ಆದಾಯವು ಬದಲಾಗದೆ ಉಳಿಯಬೇಕು ಎಂದಾದರೆ, ಅದರ ಮಾರಾಟವು ಈಗ ಮೊದಲಿಗಿಂತ 28/18 ಪಟ್ಟು ಹೆಚ್ಚಬೇಕಾಗುತ್ತದೆ; ಅಂದರೆ, ಈ ವಸ್ತುವಿನ ಮಾರಾಟವು ಶೇ. 56ರಷ್ಟು ಹೆಚ್ಚಬೇಕಾಗುತ್ತದೆ. ಅಂದರೆ, ಒಂದು ವಸ್ತುವಿನ ಬೆಲೆಯಲ್ಲಿ ಮಾಡಿದ ಶೇ. 8ರಷ್ಟು ಇಳಿಕೆಯು ಅದರ ಮೇಲಿನ ಬೇಡಿಕೆಯಲ್ಲಿ ಶೇ. 56ರಷ್ಟು ಹೆಚ್ಚಳವನ್ನು ಉಂಟುಮಾಡಬೇಕಾದರೆ, ಈ ವಸ್ತುವಿನ ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವವು 7ರಷ್ಟಿರಬೇಕಾಗುತ್ತದೆ. ಇದು ಅಸಂಬದ್ಧವೇ ಸರಿ. ಆದ್ದರಿಂದ, ಜಿಎಸ್‌ಟಿ ದರಗಳ ಇಳಿಕೆಯಿಂದಾಗಿ ಸರ್ಕಾರದ ಆದಾಯದಲ್ಲಿ ಗಮನಾರ್ಹ ಮಟ್ಟದ ನಷ್ಟ ಉಂಟಾಗುತ್ತದೆ ಎಂಬುದು ನಿರಾಕರಿಸಲಾಗದ ಒಂದು ಸಂಗತಿ.
ಸರಕಾರದ ಆದಾಯ – ಇಳಿಕೆ ಅನಿವಾರ್ಯ
ದೀರ್ಘ ಬಾಳಿಕೆಯ ಗ್ರಾಹಕ ಸರಕುಗಳನ್ನು ಜನರು ಎಚ್ಚರಿಕೆಯಿಂದ ಮತ್ತು ಬೆಲೆ ಇಳಿಕೆ ಮಾಡಿದ ಕೂಡಲೇ ಮುಗಿ ಬಿದ್ದು ಹಿಂಡು ಹಿಂಡಾಗಿ ಅವುಗಳನ್ನು ಖರೀದಿಸುತ್ತಾರೆ. ಆದ್ದರಿಂದ, ಜಿಎಸ್‌ಟಿ ದರ ಕಡಿತದ ನಂತರ ಅಂತಹ ಸರಕುಗಳಿಂದ ಬರುವ ಆದಾಯದಲ್ಲಿ ತಕ್ಷಣವೇ ಕುಸಿತ ಕಂಡುಬರುವುದಿಲ್ಲ (ಬದಲಿಗೆ ಒಂದು ಏರಿಕೆಯೇ ಇರಬಹುದು). ಈ ವಿದ್ಯಮಾನವು ಏನನ್ನು ಅರ್ಥೈಸುತ್ತದೆ ಎಂದರೆ, ಅಂಥಹ ಸರಕುಗಳ ಬೆಲೆ ಇಳಿಕೆಯು (ಅಂದರೆ, ತೆರಿಗೆ ದರ ಇಳಿಕೆಯು) ಸರ್ಕಾರದ ಆದಾಯದ ಮೇಲೆ ಉಂಟುಮಾಡುವ ಪರಿಣಾಮವು ಒಂದು ಸಣ್ಣ ಅವಧಿಯಲ್ಲಿ ಕಾಣುವುದಿಲ್ಲ. ಕಾಲಾನಂತರದಲ್ಲಿ ಮಾತ್ರ ಗೋಚರಿಸುತ್ತದೆ.

ಏಕೆಂದರೆ, ಜನರು ಮುಗಿ ಬಿದ್ದು ಕೊಳ್ಳುವುದು ನಿಂತು ಹೋಗುತ್ತದೆ ಮಾತ್ರವಲ್ಲ, ಅವಶ್ಯಕತೆ ಮತ್ತು ಅನುಕೂಲ ಇದ್ದವರು ಮಾತ್ರ ಅಂಥಹ ಸರಕುಗಳನ್ನು ಕೊಳ್ಳುತ್ತಾರೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಜನರು ಮುಗಿ ಬಿದ್ದು ಕೊಂಡಾಗ ಉಂಟಾದ ಪರಿಣಾಮವನ್ನು ಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವದ ಪ್ರಶ್ನೆಯಿಂದ ಬೇರ್ಪಡಿಸಬೇಕಾಗುತ್ತದೆ. ವಾಹನಗಳ ಮಾರಾಟದ ತಕ್ಷಣದ ಏರಿಕೆ ಮತ್ತು ಅದರಿಂದ ಸರ್ಕಾರಕ್ಕೆ ಬರುವ ಆದಾಯದ ತಕ್ಷಣದ ಏರಿಕೆಯನ್ನು ಆಧರಿಸಿ ಜಿಎಸ್‌ಟಿ ದರ ಇಳಿಕೆಯು ಸರ್ಕಾರದ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸರ್ಕಾರದ ಆದಾಯವು ಇಳಿಕೆಯಾಗುವುದು ಅನಿವಾರ್ಯವಾಗುತ್ತದೆ.
ಈ ಆದಾಯ ನಷ್ಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳಬೇಕಾಗುತ್ತದೆ. ಈ ನಷ್ಟವನ್ನು ತಾತ್ವಿಕವಾಗಿ ಕೇಂದ್ರ ಸರ್ಕಾರವೇ ಅಧಿಕ ತೆರಿಗೆ ಆದಾಯ ಸಂಗ್ರಹಣೆಯ ಇತರ ಕೆಲವು ವಿಧಾನಗಳ ಮೂಲಕ ಸರಿದೂಗಿಸಬಹುದು. ಆದರೆ, ಕೇಂದ್ರ ಸರ್ಕಾರವು ತಾನು ಅತಿಯಾಗಿ ಮುದ್ದಿಸುವ ಶ್ರೀಮಂತರ ಮೇಲೆ, ಅವರು “ಅಭಿವೃದ್ಧಿ”ಯನ್ನು ಉತ್ತೇಜಿಸುತ್ತಾರೆ ಎಂಬ ಕಾರಣದ ಮೇಲೆ, ಅಧಿಕ ತೆರಿಗೆಗಳನ್ನು ವಿಧಿಸಲು ಮುಂದಾಗುವುದಿಲ್ಲ ಎಂಬುದು ತಿಳಿದಿರುವ ಸಂಗತಿಯೇ. ಇಂತಹ ಪರಿಸ್ಥಿತಿಯಲ್ಲಿ, ಆ ಅಧಿಕ ಆದಾಯವನ್ನು ದುಡಿಯುವ ಜನರ ಮೂಲಕವೇ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಈ ಕ್ರಮವನ್ನು ಅನುಸರಿಸಿದಾಗ ಜನ ಸಾಮಾನ್ಯರ ಕೈಯಲ್ಲಿ ಕೊಳ್ಳುವ ಅಧಿಕ ಶಕ್ತಿಯನ್ನು ನೀಡಿರುವುದಾಗಿ ಹೇಳಿದ ಸರ್ಕಾರದ ದಾವೆಯು ಒಂದು ಹಸಿ ಸುಳ್ಳಾಗುತ್ತದೆ. ಆದ್ದರಿಂದ, ತನ್ನ ದಾವೆಯ ಸುಳ್ಳುತನವನ್ನು ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತದೆ. ಹಾಗಾಗಿ, ಈ ರೀತಿಯ ಅಧಿಕ ತೆರಿಗೆ ಆದಾಯ ಸಂಗ್ರಹಣೆಯ ಕ್ರಮವನ್ನು ಸರ್ಕಾರ ತೊರೆಯುತ್ತದೆ. ಹೇಗೂ ಅಂತಹ ಯಾವುದೇ ಪ್ರಸ್ತಾವೂ ಈ ವರೆಗೂ ಚರ್ಚೆಗೆ ಬಂದಿಲ್ಲ.
ಬಲಗೈಯಿಂದ ನೀಡಿ ಎಡಗೈಯಿಂದ ಕಸಿದುಕೊಳ್ಳುತ್ತದೆ
ಅದೇ ರೀತಿಯಲ್ಲಿ, ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ಇಲ್ಲ. ರಾಜ್ಯಗಳಿಗೂ ಸಹ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಲು ಅನುಮತಿ ಕೊಡುವುದಿಲ್ಲ. ಕೇಂದ್ರವು ಪ್ರಸ್ತುತ ತನ್ನ ವಿತ್ತೀಯ ಕೊರತೆಯನ್ನು ನಿಗದಿಪಡಿಸಿದ ಜಿಡಿಪಿಯ ಅನುಪಾತದ ಮಟ್ಟಕ್ಕೆ ಇಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದೆ ಮತ್ತು ಈ ಅನುಪಾತವನ್ನು ಕಾಪಾಡಿಕೊಳ್ಳುವ ಕಾರ್ಯವನ್ನು ಅದು ಖಂಡಿತವಾಗಿಯೂ ಕೈಬಿಡುವುದಿಲ್ಲ. ಆದ್ದರಿಂದ ಜಿಎಸ್‌ಟಿ ದರ ಪರಿಷ್ಕರಣೆಯು ಅಗತ್ಯವಾಗಿ ಸರ್ಕಾರದ ಖರ್ಚು ವೆಚ್ಚಗಳ ಕಡಿತದಲ್ಲಿ ಪರಿಣಮಿಸುತ್ತದೆ.
ಸರ್ಕಾರದ ವೆಚ್ಚಗಳ ಮೇಲಿನ ಈ ಕಡಿತವು ಸಾಮಾನ್ಯವಾಗಿ ಆರೋಗ್ಯ ಪಾಲನೆ, ಶಿಕ್ಷಣ ಮತ್ತು ಇತರ ಸೇವೆಗಳ ಬಾಬ್ತು ಇನ್ನೂ ಖರ್ಚಾಗದೆ ಉಳಿದಿರುವ ಹಣದ ಮೇಲೆ ಪರಿಣಾಮ ಬೀರುತ್ತದೆ. ಈ ಸೇವೆಗಳನ್ನು ಈಗಾಗಲೇ ವ್ಯಾಪಕವಾಗಿ ಖಾಸಗೀಕರಣಗೊಳಿಸಲಾಗಿದೆ. ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ಈ ಖಾಸಗೀಕರಣ ಪ್ರಕ್ರಿಯೆಯನ್ನು ಈಗ ಮತ್ತಷ್ಟು ಚುರುಕಾಗಿ ಮುಂದುವರಿಸಲಾಗುವುದು. ಖಾಸಗಿ ವಲಯವು ಒದಗಿಸುವ ಅಂತಹ ಸೇವೆಗಳು ಸರ್ಕಾರ ಒದಗಿಸುವ ಇದೇ ರೀತಿಯ ಸೇವೆಗಳಿಗಿಂತಲೂ ಹೆಚ್ಚು ದುಬಾರಿಯಾಗಿರುವುದರಿಂದ, ಜನರು ಈಗ ಈ ಸೇವೆಗಳನ್ನು ಬಳಸಿಕೊಳ್ಳಲು ಹೆಚ್ಚು ಹಣವನ್ನು ವ್ಯಯಿಸಬೇಕಾಗುತ್ತದೆ.
ಈ ಅಗತ್ಯ ಸೇವೆಗಳಿಗಾಗಿ ಸರ್ಕಾರವು ಮಾಡಲಿದ್ದ ವೆಚ್ಚಗಳನ್ನು ಕಡಿತಗೊಳಿಸುವುದರಿಂದ, ಜಿಎಸ್‌ಟಿ ದರ ಇಳಿಕೆಯ ಮೂಲಕ ಸರ್ಕಾರವು ಜನರಿಗೆ ಲಭ್ಯವಾಗುವಂತೆ ಮಾಡಿರುವ ಕೊಳ್ಳುವ ಶಕ್ತಿಯನ್ನು ಅವರು ಕಳೆದುಕೊಳ್ಳುವ ಖರೀದಿ ಶಕ್ತಿಯ ಮೂಲಕ ಸರಿದೂಗಿಸಲಾಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರವು ತನ್ನ ಬಲಗೈಯಿಂದ ನೀಡಿದ್ದನ್ನು ಎಡಗೈಯಿಂದ ಕಸಿದುಕೊಳ್ಳುತ್ತದೆ.
ವರಮಾನ ಅಸಮಾನತೆಗಳ ಏರಿಕೆ
ಅಷ್ಟೇ ಅಲ್ಲ. ಜಿಎಸ್‌ಟಿ ದರ ಇಳಿಕೆಯ ಫಲಾನುಭವಿಗಳಲ್ಲಿ, ಜನ ಸಾಮಾನ್ಯರು ಮಾತ್ರವಲ್ಲದೆ ಶ್ರೀಮಂತರೂ ಇರುತ್ತಾರೆ ಎಂಬುದು ಜಿಎಸ್‌ಟಿ ದರ ಇಳಿಕೆಯ ನಂತರ ಕಂಡು ಬಂದ ಕಾರು ಮಾರಾಟ ಹೆಚ್ಚಳದ ವರದಿಗಳಿಂದ ಸ್ಪಷ್ಟವಾಗುತ್ತದೆ. ಆದರೆ, ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ಉಂಟಾಗುವ ಸರ್ಕಾರದ ವೆಚ್ಚಗಳ ಕಡಿತದ ಬಲಿಪಶುಗಳು ಪ್ರಧಾನವಾಗಿ ಜನ ಸಾಮಾನ್ಯರೇ ಆಗಿರುತ್ತಾರೆ. ಏಕೆಂದರೆ, ಸರ್ಕಾರ ಒದಗಿಸುವ ಆರೋಗ್ಯ ಪಾಲನೆ, ಶಿಕ್ಷಣ ಮತ್ತು ಅಂತಹುದೇ ಸೇವೆಗಳನ್ನು ಶ್ರೀಮಂತರು ಪಡೆಯುವುದು ವಿರಳವೇ.
ಈ ಅಗತ್ಯ ಸೇವೆಗಳ ವಲಯಗಳಲ್ಲಿ ಖರ್ಚು ಕಡಿತಗಳು ಒಂದು ವೇಳೆ ಸಂಭವಿಸದೇ ಇದ್ದರೂ, ಇತರ ವಲಯಗಳಲ್ಲಿ ಪಿಂಚಣಿಗಳ ಪಾವತಿಯ ವಿಳಂಬವೋ ಅಥವಾ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೂಲಿ ಪಾವತಿಯ ವಿಳಂಬವೋ ಸಂಭವಿಸಿದರೂ ಸಹ, ಬಲಿಪಶುಗಳಾಗುವುದು ಮಾತ್ರ ಜನ ಸಾಮಾನ್ಯರೇ. ಅಂದರೆ, ಪರಿಣಾಮ ಮಾತ್ರ ಅದೇ ಆಗಿರುತ್ತದೆ. ಅಂದರೆ, ತೊಂದರೆಗೊಳಗಾಗುವುದು ಜನ ಸಾಮಾನ್ಯರೇ, ಶ್ರೀಮಂತರಲ್ಲ ಎಂಬುದು. ಆದ್ದರಿಂದ ಈ ಇಡೀ ಕಸರತ್ತಿನ ಒಟ್ಟು ಪರಿಣಾಮವೆಂದರೆ ಜನ ಸಾಮಾನ್ಯರಿಂದ ತುಲನಾತ್ಮಕವಾಗಿ ಹೆಚ್ಚು ಶ್ರೀಮಂತರಿಗೆ ವರಮಾನ ಪುನರ್ವಿತರಣೆ. ಅಂದರೆ, ನಮ್ಮ ಸಮಾಜದಲ್ಲಿ ನಿಜ ವರಮಾನ ಅಸಮಾನತೆಗಳ ಏರಿಕೆ.
ಈ ಬಗ್ಗೆ ಸರ್ಕಾರ ಸರ್ಕಾರ ಅನುಸರಿಸಿದ ತಂತ್ರವನ್ನು ಈ ಕೆಳಗಿನ ಅಂಶಗಳಲ್ಲಿ ಕಾಣಬಹುದು. ಜಿಎಸ್‌ಟಿ ದರ ಇಳಿಕೆಯು ನೇರವಾಗಿ ಮತ್ತು ತಕ್ಷಣವೇ ಕಾಣುತ್ತದೆ. ಆದರೆ, ಜಿಎಸ್‌ಟಿ ದರ ಇಳಿಕೆಯಿಂದ ಅಗತ್ಯವಾಗುವ ಸರ್ಕಾರದ ವೆಚ್ಚಗಳ ಕಡಿತವು ತಕ್ಷಣವೇ ಗೋಚರಿಸುವುದಿಲ್ಲ. ಮತ್ತು, ಈ ವೆಚ್ಚಗಳ ಕಡಿತವು ಉಂಟುಮಾಡುವ ಪರಿಣಾಮಗಳು ಪ್ರಕಟಗೊಂಡಾಗಲೂ ಅವು ಜಿಎಸ್‌ಟಿ ದರ ಇಳಿಕೆಗೆ ಸಂಬಂಧಿಸಿಲ್ಲ ಎಂದೇ ತೋರುವ ಸಾಧ್ಯತೆ ಇದೆ.
ಇದನ್ನೂ ನೋಡಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೋ? ಶಾಪವೋ? Janashakthi Media
ಆದ್ದರಿಂದ, ಸರ್ಕಾರವು ಜಿಎಸ್‌ಟಿ ದರ ಇಳಿಕೆಯಿಂದ ಹೆಚ್ಚಿನ ಪ್ರಚಾರ ಲಾಭ ಪಡೆಯಬಹುದು. ಆದರೆ, ಈ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ಉಂಟಾಗುವ ವೆಚ್ಚಗಳ ಕಡಿತದ ಕಾರಣದಿಂದ ಅದಕ್ಕೆ ತಟ್ಟಬೇಕಾದ ಕಳಂಕ ತಟ್ಟುವುದಿಲ್ಲ. ಸಮಾಜದಲ್ಲಿ ನಿಜ ವರಮಾನಗಳ ಅಸಮಾನತೆಯನ್ನು ಹೆಚ್ಚಿಸುವ ಕ್ರಮವನ್ನೂ ಸಹ ಅದು ಬಡವರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅವರ ಹಿತಾಸಕ್ತಿಗಾಗಿ ಅದನ್ನು ಜಾರಿಗೆ ತರಲಾಗಿದೆ ಎಂದು ಪ್ರಸ್ತುತಪಡಿಸಲಾಗಿದೆ ಮತ್ತು ಹಾಗೆ ತೋರುತ್ತದೆ ಕೂಡ.
ಇಲ್ಲಿ ಜಿಎಸ್‌ಟಿ ದರ ಇಳಿಕೆಯನ್ನು ಟೀಕಿಸುವುದು ಮುಖ್ಯ ವಿಷಯವಲ್ಲ. ಆದರೆ, ಈ ರೀತಿಯ ಯಾವುದೇ ದರ ಇಳಿಕೆಯು ಅದಕ್ಕೆ ಸಮಾನವಾಗಿ ಶ್ರೀಮಂತರಿಂದ ಸಂಪನ್ಮೂಲಗಳ ಸಂಗ್ರಹಣೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಈ ಕಾರ್ಯವು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಅಂಶವನ್ನು ಒತ್ತಿಹೇಳುವುದೇ ಇಲ್ಲಿರುವ ಉದ್ದೇಶ.
ಜಿಎಸ್‌ಟಿ ದರ ಇಳಿಕೆಗೆ ಸಮಾನವಾಗಿ ಶ್ರೀಮಂತರ ಮೂಲಕ ಸಂಪನ್ಮೂಲಗಳ ಸಂಗ್ರಹಣೆ ಸಂಭವಿಸುವುದಿಲ್ಲ. ಆದ್ದರಿಂದ, ಅಧಿಕ ಸಂಪನ್ಮೂಲಗಳ ಸಂಗ್ರಹಣೆಯ ಮೂಲಕ ಒದಗಿಸಿಕೊಂಡ ಆದಾಯವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಹಾಗಾಗಿ, ಈ ಜಿಎಸ್‌ಟಿ ದರ ಇಳಿಕೆಯು ರಾಜ್ಯ ಸರ್ಕಾರಗಳ ಹಣಕಾಸಿನ ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಅನಿಶ್ಚಿತಗೊಳಿಸುತ್ತದೆ. ದರ ಇಳಿಕೆಯಿಂದಾಗಿ ರಾಜ್ಯ ಸರ್ಕಾರಗಳು ಆದಾಯ ನಷ್ಟವನ್ನು ಅನುಭವಿಸುತ್ತವೆ. ಆದರೂ, ಕೇಂದ್ರ ಸರ್ಕಾರಕ್ಕಿಂತ ಭಿನ್ನವಾಗಿ, ಅವು ಜನ ಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿರುವುದರಿಂದ, ಜನ ಸಾಮಾನ್ಯರಿಗೆ ಉದ್ದೇಶಿಸಲಾದ ಸೇವೆಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯವನ್ನು ಅಧಿಕವಾಗಿ ಹೆಚ್ಚಿಸುವ ಸಾಮರ್ಥ್ಯವಿಲ್ಲ. ಅವುಗಳಿಗೆ ತಮ್ಮ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದೂ ಸಹ ಸಾಧ್ಯವಿಲ್ಲ. ಆದ್ದರಿಂದ, ಜಿಎಸ್‌ಟಿ ದರ ಇಳಿಕೆಯ ನಿವ್ವಳ ಫಲಿತಾಂಶವು ರಾಜ್ಯ ಸರ್ಕಾರಗಳ ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದಗೆಡಲು ಕಾರಣವಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಮೋದಿ ಸರ್ಕಾರವು ಜಿಎಸ್‌ಟಿ ದರ ಇಳಿಕೆಯ ಕೀರ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆ. ಈ ದರ ಇಳಿಕೆಯಿಂದ ಹೊರಹೊಮ್ಮುವ ಒಟ್ಟು ಚಿತ್ರವನ್ನು ನಾವು ನೋಡಿದಾಗ, ನಿಜ ವರಮಾನಗಳ ಅಸಮಾನತೆಯ ಹೆಚ್ಚಳವನ್ನು ಮತ್ತು ರಾಜ್ಯ ಸರ್ಕಾರಗಳ ಹಣಕಾಸಿನ ಮೇಲೆ ಮತ್ತಷ್ಟು ಒತ್ತಡ ಹೇರಿಕೆಯನ್ನು ನಾವು ಕಾಣುತ್ತೇವೆ ಎಂಬ ಅಂಶವನ್ನು ಅದು ಎಚ್ಚರಿಕೆಯಿಂದ ಮರೆಮಾಚುತ್ತದೆ.

ಅವರಿಗೆ ಥ್ಯಾಂಕ್ಸ್ ಹೇಳು!
ವ್ಯಂಗ್ಯಚಿತ್ರ: ಸತೀಶಚಾರ್ಯ
@ಫೇಸ್‍ಬಕ್
