ಬಿಹಾರದಲ್ಲಿ ಎನ್.ಡಿ.ಎ ಮಹಾ ವಿಜಯ : ನಿತೀಶ್ ಮುಖ್ಯಮಂತ್ರಿ ಆಗ್ತಾರಾ?

-ವಸಂತರಾಜ ಎನ್.ಕೆ

ಬಿಹಾರದ ಮಹತ್ವದ ವಿಧಾನಸಭೆಯ ಚುನಾವಣೆಗಳಲ್ಲಿ ಎನ್.ಡಿ.ಎ ಮಹಾವಿಜಯ ಸಾಧಿಸಿದೆ. ಆರ್.ಜೆ.ಡಿ ನಾಯಕತ್ವದ ಮಹಾಘಟಬಂಧನ (ಮಹಾಮೈತ್ರಿಕೂಟ) ಪರಾಭವಗೊಂಡಿದೆ. ಫಲಿತಾಂಶಗಳ ಎನ್.ಡಿ.ಎ ಪಕ್ಷಗಳ  ಬಲಾಬಲದ ಹಿನ್ನೆಲೆಯಲ್ಲಿ ನಿತೀಶ್ ಮತ್ತೆ ಮುಖ್ಯಮಂತ್ರಿ ಆಗ್ತಾರಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಫಲಿತಾಂಶಗಳಿಂದ ಹೊಮ್ಮುವ ಇತರ ಗಮನಾರ್ಹ ಅಂಶಗಳೇನು? ಬಿಹಾರ

ದೇಶದಲ್ಲೇ ಸುದ್ದಿ ಮಾಡಿದ ಬಿಹಾರದ ಮಹತ್ವದ ವಿಧಾನಸಭೆ ಚುನಾವಣೆಗಳಲ್ಲಿ ಎನ್.ಡಿ.ಎ ಮಹಾವಿಜಯ ಸಾಧಿಸಿದೆ. ಆರ್.ಜೆ.ಡಿ ನಾಯಕತ್ವದ ಮಹಾಘಟಬಂಧನ (ಮಹಾಮೈತ್ರಿಕೂಟ) ಪರಾಭವಗೊಂಡಿದೆ. ಬಿಹಾರದ ವಿಧಾನಸಭೆಯ 243 ಸೀಟುಗಳಲ್ಲಿ 2010ರ ನಂತರ ಎನ್.ಡಿ.ಎ ಮೊದಲ ಬಾರಿಗೆ 200 ರ ಗಡಿ ದಾಟಿ, 202 ಸೀಟುಗಳನ್ನು ಪಡೆದುಕೊಂಡಿದೆ. ಆರ್.ಜೆ.ಡಿ ತನ್ನ ಎರಡನೇ ಅತಿ ಕಡಿಮೆ (25) ಸೀಟುಗಳನ್ನು ಪಡೆದಿದೆ. ಮಹಾಘಟಬಂಧನ ಕೇವಲ 35 ಸೀಟುಗಳಿಗೆ ಸೀಮಿತಗೊಂಡಿದೆ. ಹಲವು ಪಕ್ಷಗಳಿಗೆ ಸಲಹಾಕಾರರಾಗಿ ಗೆಲ್ಲಿಸಿದ್ದ ಚುನಾವಣಾ ತಜ್ಞ ಪ್ರಶಾಂತ ಕಿಶೋರ್ ಅವರ ಜನ ಸುರಾಜ್ ಪಕ್ಷ ಮುನ್ನಡೆ ಸಾಧಿಸಿಲ್ಲ. ಫಲಿತಾಂಶಗಳ ಎನ್.ಡಿ.ಎ ಪಕ್ಷಗಳ  ಬಲಾಬಲದ ಹಿನ್ನೆಲೆಯಲ್ಲಿ ನಿತೀಶ್ ಮತ್ತೆ ಮುಖ್ಯಮಂತ್ರಿ ಆಗ್ತಾರಾ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ನಿತೀಶ್ ಮುಖ್ಯಮಂತ್ರಿ – ಎರಡು ಜೋಕುಗಳು

ನಿತೀಶ್ ಕುಮಾರ್ ಎರಡು ದಶಕಗಳಿಂದ ಮುಖ್ಯಮಂತ್ರಿಯಾಗಿರುವುದರ ಸುತ್ತ ಬಿಹಾರದಲ್ಲಿ ಎರಡು ಜೋಕುಗಳು ಪ್ರತಿ ಚುನಾವಣೆಯಲ್ಲಿ ಹರಿದಾಡುತ್ತವಂತೆ. ಬಿಹಾರದಲ್ಲಿ ಚುನಾವಣೆಯಾಗುವುದು ಯಾರು ವಿರೋಧ ಪಕ್ಷದ ನಾಯಕರಾಗಬೇಕು ಅಂತ ಅಷ್ಟೇ. ಮುಖ್ಯಮಂತ್ರಿ ಯಾವಾಗಲೂ ನಿತೀಶ್ ಕುಮಾರ್- ಅಂತ ಒಂದು ಜೋಕ್. ಚುನಾವಣೆಯಲ್ಲಿ ಪ್ರತಿ ಬಾರಿ ಈ ಬಾರಿಯೂ ಮಾಧ್ಯಮಗಳು ಮತ್ತು ಜನತೆಯ ನಡುವೆ ಬಿಹಾರದ ದುಸ್ಥಿತಿ ಬದಲಿಸಲು ‘ಬದಲಾವ್’ (ಬದಲಾವಣೆ) ಬೇಕು ಅಂತ ಚರ್ಚೆ ಆಗುತ್ತದೆ. ಚುನಾವಣೆಯಲ್ಲಿ ಜನ ನಿತೀಶ್ ಕುಮಾರ್ ನ್ನು ಮುಖ್ಯಮಂತ್ರಿ ಮಾಡ್ತಾರೆ ಮತ್ತು ಯಾವ ‘ಬದಲಾವ್’ (ಯಾವ ಕೂಟಕ್ಕೆ ‘ಪಲ್ಟಿ’ ಹೊಡೆಯಬೇಕು!) ಮಾಡಬೇಕು ಅಂತ ನಿತೀಶ್ ಗೆ ಬಿಡ್ತಾರೆ ಅಂತ ಇನ್ನೊಂದು ಜೋಕ್. ಬಿಹಾರ

ಇದನ್ನೂ ಓದಿ: ಕಲಬುರಗಿ | ಶಾಹೂ ಮಹಾರಾಜರ ಇತಿಹಾಸ ಮತ್ತು ಚಿಂತನೆಗಳು ಸಮಾಜದ ಮುಂದೆ ತೆರೆದಿಡಬೇಕು – ಎಫ್.ಎಚ್.ಜಕ್ಕಪ್ಪನವರ

ಬಿಜೆಪಿ ಬಿಹಾರದ ಪ್ರಥಮ ಪಕ್ಷವಾಗಲು ಮತ್ತು ತನ್ನದೇ ಮುಖ್ಯಮಂತ್ರಿ ಹೊಂದಲು ಹೆಣಗಾಡುತ್ತಾ ಬಂದಿದೆ. ಈಗ ಅದಕ್ಕೆ ಅನುಕೂಲವಾದ ಚಾರಿತ್ರಿಕ ಅವಕಾಶವೊದಗಿದೆ. ಬಿಜೆಪಿ 89 ಸೀಟುಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿದೆ. ಜೆಡಿಯು ನ (85 ಸೀಟು) ಇಲ್ಲದೆಯೂ ಎನ್.ಡಿ.ಎ (202-85=117) ಗೆ ಸರಕಾರ ರಚಿಸಲು ಕೇವಲ 5 ಶಾಸಕರ ಬೆಂಬಲ ಬೇಕು. ಜೆಡಿಯು ಎನ್.ಡಿ.ಎ ದಿಂದ ಹೊರನಡೆದು ಮಹಾಘಟಬಂಧನದ ಜತೆ (85+35= 120) ಸರಕಾರ ರಚಿಸಲು 2 ಶಾಸಕರ ಬೆಂಬಲ ಬೇಕು. ಎರಡೂ ಅಸಾಧ್ಯವೇನಲ್ಲ. ಆದರೆ ಕೇಂದ್ರದಲ್ಲಿ ಬಹುಮತ ಉಳಿಸಿಕೊಳ್ಳಲು ಜೆಡಿಯು ಅಗತ್ಯವಿದೆ. ಜೆಡಿಯು ವನ್ನು ಒಡೆದು ಇವೆರಡನ್ನೂ ಸಾಧ್ಯ ಮಾಡುವುದು ಬಿಜೆಪಿ ಚಾಣಕ್ಯನಿಗೆ ದೊಡ್ಡ ಸವಾಲೇನಲ್ಲ. ಈಗಾಗಲೇ ಬಿಜೆಪಿ ಯ ‘ಟ್ರೋಜನ್ ಕುದುರೆ”ಗಳು ಜೆಡಿಯು ಒಳಗೆ ಇದ್ದಾರೆ. ಬಿಹಾರ

ಆದರೆ ರಾಜಕೀಯ ಬರಿಯ ಗಣಿತವಲ್ಲ. ಎನ್.ಡಿ.ಎ ಯ ಮಹಾವಿಜಯದಲ್ಲಿ ಜೆಡಿಯು ಮತ್ತು ನಿತೀಶ್ ಕುಮಾರ್ ಪಾತ್ರ ಸ್ಪಷ್ಟವಿದೆ. “ಟೈಗರ್ ಜಿಂದಾ ಹೈ” ಪೋಸ್ಟರುಗಳು ಪಟ್ನಾದಲ್ಲಿ ಕಂಡು ಬಂದವು. ಆದರೆ ಚುನಾವಣಾ ಪೂರ್ವದಲ್ಲಿ ಆಗಲಿ ಫಲಿತಾಂಶದ ನಂತರವಾಗಲಿ ನಿತೀಶ್ ಮುಖ್ಯಮಂತ್ರಿ ಆಗ್ತಾರೆ ಅಂತ ಬಿಜೆಪಿ ಅಥವಾ ಎನ್.ಡಿ.ಎ ಅಧಿಕೃತವಾಗಿ ಅಥವಾ ನಾಯಕರು ವೈಯಕ್ತಿಕವಾಗಿ ಸಹ ಹೇಳಿಕೆ ನೀಡಿಲ್ಲ.  ಮಾತ್ರವಲ್ಲ ಫಲಿತಾಂಶ ಹೊರಬೀಳುತ್ತಿದ್ದಂತೆ ನಿತೀಶ್ ಮುಖ್ಯಮಂತ್ರಿಯಾಗುವ ಕುರಿತು ಮಾಡಿದ ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್ ನ್ನು ಕೆಲ ಸಮಯದಲ್ಲೇ ಅಳಿಸಿ ಹಾಕಲಾಯಿತು. “ಅಭೂತಪೂರ್ವ, ಸಾಟಿಯಿಲ್ಲದ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಇದ್ದರು, ಇದ್ದಾರೆ, ಮುಂದೆಯೂ ಇರುತ್ತಾರೆ” ಎಂದು ಜೆಡಿಯು ಅಧಿಕೃತ ಪೋಸ್ಟ್ ಹೇಳಿತ್ತು.

ಇದನ್ನು ದೆಹಲಿಯಿಂದ ಬಂದ ಆಣತಿಯ ಮೇರೆಗೆ ಅಳಿಸಲಾಯಿತೆ? ಬಿಜೆಪಿ ನಿತೀಶ್ ಅವರೇ ‘ಸ್ವ-ಇಚ್ಛೆಯಿಂದ ನಿವೃತ್ತ” ನಾಗಲು ಅಥವಾ ಕೇಂದ್ರಕ್ಕೆ ಹೋಗಲು ಪುಸಲಾಯಿಸುತ್ತಾ ಅಥವಾ ಒತ್ತಡ ಹಾಕುತ್ತಾ? ಅಥವಾ ಮಹಾರಾಷ್ಟ್ರದಂತೆ ಜೆಡಿಯು ಮೇಲೆ ‘ಶಿಂಧೆ ಆಪರೇಶನ್’ ಮಾಡುತ್ತಾ? ಚಿರಾಗ್ ಪಾಸ್ವಾನ್ ಅಥವಾ ಯಾರೂ ಕೇಳಿರದ ಬಿಜೆಪಿ ಶಾಸಕನನ್ನು (ಗುಜರಾತ್, ಮ.ಪ್ರದೇಶ್ ಗಳಲ್ಲಿ ಮಾಡಿದ ಹಾಗೆ) ಮುಖ್ಯಮಂತ್ರಿ ಮಾಡುತ್ತಾ? ನಿತೀಶ್ ಗೆ ಕೆಲ ಕಾಲ ಮುಖ್ಯಮಂತ್ರಿಯಾಗಲು ಬಿಟ್ಟು ಆ ಮೇಲೆ ಈ ಪ್ರಕ್ರಿಯೆ ಹರಿಯಬಿಡುತ್ತಾ? ಈ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ಈ ಎಲ್ಲದರ ನಡುವೆ ಆಯ್ಕೆ ಮಾಡುವಾಗ ನಿತೀಶ್ ಅವರ ‘ಚಾಣಕ್ಯ ಪ್ರತಿತಂತ್ರ”ಗಳ ಕುರಿತು ಬಿಜೆಪಿ ಗೆ ಭಯ-ಆತಂಕಗಳಿವೆ.

ಆದರೆ ನಿತೀಶ್ ಮುಖ್ಯಮಂತ್ರಿಯಾದರೂ ಅವರು ತಮ್ಮ ಅವಧಿ ಪೂರ್ಣಗೊಳಿಸುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗುತ್ತಿದೆ.

ಫಲಿತಾಂಶದಿಂದ ಹೊಮ್ಮುವ ಗಮನಾರ್ಹ ಅಂಶಗಳು

ಎನ್.ಡಿ.ಎ ಮಹಾಘಟಬಂಧನ್ ಮತ್ತು ಇತರ ಪಕ್ಷಗಳು ಸ್ಪರ್ಧಿಸಿದ/ಗೆದ್ದ ಸೀಟು, ಮತಪ್ರಮಾಣ ಮತ್ತು ಕಳೆದ ಬಾರಿಯಿಂದ ವ್ಯತ್ಯಾಸಗಳ ವಿವರ ಕೋಷ್ಟಕ 1ರಲ್ಲಿದೆ

ಕೋಷ್ಟಕ 1  ಬಿಹಾರ ವಿಧಾನಸಭೆ ಚುನಾವಣಾ 2025 ಫಲಿತಾಂಶ

ಕೂಟ/ಪಕ್ಷ ಸ್ಪರ್ಧಿಸಿದ

ಸೀಟುಗಳು

ಗೆದ್ದ

ಸೀಟುಗಳು

2020ರಿಂದ ವ್ಯತ್ಯಾಸ ಮತ

ಪ್ರಮಾಣ(%)

2020ರಿಂದ ವ್ಯತ್ಯಾಸ(%)
ಬಿಜೆಪಿ 101 89 +15 20.08 0.62
ಜೆಡಿಯು 101 85 +42 19.25 3.86
ಎಲ್.ಜೆ.ಪಿ(ಆರ್,ವಿ)# 28 19 +18 4.97 -0.69
ಎಚ್.ಎ.ಎಂ(ಎಸ್) 6 5 +1 1.17 0.28
ಆರ್.ಎಲ್.ಎಮ್ # 6 4 +4 1.06 -0.71
ಸ್ವತಂತ್ರ* 1 0 0.03
ಎನ್.ಡಿ. ಕೂಟ & 243 202 81 46.56 +9.3
ಆರ್.ಜೆ.ಡಿ 143 25 -50 23.00 -0.11
ಕಾಂಗ್ರೆಸ್ 61 6 -13 8.71 -0.77
ಸಿಪಿಐ(ಎಂ.ಎಲ್-ಲಿಬರೇಶನ್) 20 2 -10 2.85 -0.32
ಸಿಪಿಐ(ಎಂ) 4 1 -1 0.61 -0.04
ಸಿಪಿಐ 9 0 -2 0.74 -0.09
ವಿ.ಐ.ಪಿ# 12 0 -4 1.37 -0.15
ಐ.ಐ.ಪಿ* 3 1 0.37
ಜೆಜೆಡಿ* 1 0 0.08
ಸ್ವತಂತ್ರ* 2 0 0.21 `
ಮಹಾಘಟಬಂಧನ ಕೂಟ & 243 35 -79 37.94 +0.71
ಎ.ಐ.ಎಂ.ಐ.ಎಂ 25 5 0 1.85 0.19
ಆರ್.ಎಲ್.ಜೆ,ಪಿ * 25 0 0  
ಬಿ.ಎಸ್.ಪಿ 130 1 1.62 0.13
ಜನ ಸುರಾಜ್ ಪಕ್ಷ 238 0 3.14
ಸ್ವತಂತ್ರ          
ಒಟ್ಟು ಇತರ &   6 -2 15.5 -10.01

#ಕಳೆದ ಬಾರಿ – ವಿ.ಐ.ಪಿ ಎನ್.ಡಿ.ಎ ನಲ್ಲಿತ್ತು; ಎಲ್.ಜೆ.ಪಿ(ಆರ್,ವಿ) ಸ್ವತಂತ್ರವಾಗಿದ್ದು ಆರ್.ಎಲ್.ಎಮ್ ಮೂರನೇ ಕೂಟದಲ್ಲಿದ್ದು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು;

*ಹೊಸ ಪಕ್ಷ/ಸ್ಪರ್ಧೆಗಳು & ಕೂಟದಲ್ಲಿದ್ದ ಪಕ್ಷಗಳಲ್ಲಿ ಬದಲಾವಣೆಗಳಿಂದಾಗಿ ಪಕ್ಷಗಳ ಕೂಟದ ಸೀಟು ಮತ್ತು ಮತಪ್ರಮಾಣ ವ್ಯತ್ಯಾಸಗಳು ತಾಳೆಯಾಗುವುದಿಲ್ಲ

ಕೋಷ್ಟಕ 1 ರಿಂದ ಈ ಕೆಲವು ಅಂಶಗಳನ್ನು ಗಮನಿಸಬಹುದು

*ಎನ್.ಡಿ.ಎ ಕೂಟ ಮತಪ್ರಮಾಣವನ್ನು 9.3%ರಷ್ಟು ಹೆಚ್ಚಿಸಿಕೊಂಡಿದ್ದು ಅದರ ಪ್ರಚಂಡ ವಿಜಯಕ್ಕೆ ಕಾರಣವಾಗಿದೆ. ಪ್ರಮುಖವಾಗಿ 2020ರಲ್ಲಿ ಕೂಟದ ಹೊರಗಿದ್ದ ಎಲ್.ಜೆ.ಪಿ ಮತ್ತು ಆರ್;ಎಲ್.ಎಮ್ ಗಳನ್ನು ಕೂಟಕ್ಕೆ ಸೇರಿಸಿಕೊಂಡಿದ್ದು ಮತಪ್ರಮಾಣ ಮತ್ತು ಸೀಟು ಹೆಚ್ಚಲು ಕಾರಣವಾಗಿದೆ. ಜೆಡಿಯು ಕಳೆದ ಬಾರಿಗೆ ಹೋಲಿಸಿದರೆ ಕಡಿಮೆ ಸೀಟುಗಳಲ್ಲಿ ಸ್ಪರ್ಧಿಸಿದರೂ ಅತ್ಯಂತ ಹೆಚ್ಚಿನ ಮತಪ್ರಮಾಣ ಏರಿಕೆ (3.86%) ಸಾಧಿಸಿದೆ. ಎಲ್.ಜೆ.ಪಿ ಮತ್ತು ಆರ್;ಎಲ್.ಎಮ್ ಗಳ ಮತಪ್ರಮಾಣ ಕಡಿಮೆಯಾಗಿದ್ದರೂ ಅದು ಪ್ರಮುಖವಾಗಿ ಅವು ಕಳೆದ ಬಾರಿ ಸ್ವತಂತ್ರವಾಗಿ ಅಥವಾ ಮೂರನೇ ಕೂಟದಿಂದ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ್ದರಿಂದ ಆಗಿದೆ.

*ಮಹಾಘಟಬಂಧನ ಸೀಟುಗಳ ಲೆಕ್ಕದಲ್ಲಿ ಪರಾಭವ ಹೊಂದಿದ್ದರೂ ಮತ್ತು ಪ್ರಮುಖ ಪಕ್ಷಗಳು ಅಲ್ಪ ಪ್ರಮಾಣದಲ್ಲಿ ಮತ ಕಳೆದುಕೊಂಡಿದ್ದರೂ ಮತಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳ ಸಾಧಿಸಿದೆ. ಇದು ವಿ.ಐ.ಪಿ ಪಕ್ಷ ಎನ್.ಡಿ.ಎ ಯಿಂದ ವಿರೋಧಿ ಕೂಟಕ್ಕೆ ಬಂದಿದ್ದರಿಂದ ಸಾಧ್ಯವಾಗಿದೆ.

*ಎರಡೂ ಕೂಟಗಳ ಹೊರಗಿದ್ದ ಪಕ್ಷಗಳ ಮತ್ತು ಪಕ್ಷೇತರರ ಮತ 25% ದಿಂದ 15% ಕ್ಕೆ ಕುಸಿದಿದೆ. ಹೀಗಾಗಿ ಮಹಾಘಟಬಂಧನದ ಮತಪ್ರಮಾಣ ಕಡಿಮೆಯಾಗದಿದ್ದರೂ ಎನ್.ಡಿ.ಎ ಕೂಟ ಮತಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ.

*ಜನ ಸುರಾಜ್ ಪಕ್ಷ ಕಳೆದ 2 ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿತ್ತು. ಆದರೆ ಅದು ಕೆಲವು ಸೀಟುಗಳನ್ನಾದರೂ ಪಡೆದು ಗಮನಾರ್ಹ ಮತಪ್ರಮಾಣ ಪಡೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹೆಚ್ಚು ಕಡಿಮೆ ಎಲ್ಲ (238/243) ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳಲ್ಲಿ ಇಬ್ಬರನ್ನು ಬಿಟ್ಟರೆ ಯಾರೂ ಠೇವಣಿ ಉಳಿಸಿಕೊಳ್ಳಲು (ಅಂದರೆ 16.66% ಮತ ಪಡೆಯಲು) ಸಾಧ್ಯವಾಗಿಲ್ಲ. ಆದರೆ 115 ಕ್ಷೇತ್ರಗಳಲ್ಲಿ ಅದರ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿದ್ದರು. ಜನ ಸುರಾಜ್ ಪಕ್ಷ ತಮ್ಮ ವಿರೋಧಿ ಕೂಟದ ಬಿ ಟೀಂ ಎಂದು ಎರಡೂ ಕೂಟಗಳು ಆಪಾದಿಸಿದ್ದವು. ಎರಡು ಕೂಟಗಳ ನಡುವೆ ಅಂತರ ಕಡಿಮೆಯಿದ್ದ ಕ್ಷೇತ್ರಗಳಲ್ಲಿ ಅದು ‘ವೋಟ್ ಕಟ್ವಾ’ (ಮತ ಕಡಿತ) ಪಾತ್ರವನ್ನು ವಹಿಸಿರುವ ಸಾಧ್ಯತೆಯಿದೆ. ಎಷ್ಟು ಕ್ಷೇತ್ರಗಳಲ್ಲಿ ಯಾವ ಕೂಟದ ಸೋಲಿಗೆ ಕಾರಣವಾಗಿದೆ ಎಂಬುದನ್ನು ವಿವರವಾಗಿ ವಿಶ್ಲೇಷಿಸಬೇಕಾಗಿದೆ. ಆದರೆ ಆಡಳಿತ-ವಿರೋಧಿ ಮತಗಳ ಒಂದು ವಿಭಾಗವನ್ನು ಸೆಳೆಯುವ ಮೂಲಕ ಹಲವು ಕ್ಷೇತ್ರಗಳಲ್ಲಿ ಮಹಾಘಟಬಂಧನ ಕೂಟದ ಸೋಲಿಗೆ ಕಾರಣವಾಗಿರುವ ಸಾಧ್ಯತೆಯೇ ಹೆಚ್ಚು. ಮೊದಲ ಪ್ರಯತ್ನದಲ್ಲಿ ಹೊಸ ಪಕ್ಷವೊಂದು 3.14 % ಮತ ಪಡೆಯುವುದು ತೀರಾ ಕಳಪೆ ಪ್ರದರ್ಶನವೇನಲ್ಲ. ಆದರೆ ಪ್ರಶಾಂತ ಕಿಶೋರ್ ಅವರಿಂದ ಇದ್ದ ನಿರೀಕ್ಷೆಗೆ ಹೋಲಿಸಿದರೆ ಅದು ‘ಠುಸ್ ಪಟಾಕಿ’ಯೇ ಎನ್ನಬೇಕು.

*ಎ.ಐ.ಎಂ.ಐ.ಎಂ ಪಕ್ಷ ನಿರೀಕ್ಷೆಗೆ ಮೀರಿ ಮತ್ತೆ 5 ಸೀಟುಗಳನ್ನು ಗಳಿಸಿದೆ. ಕಳೆದ ಬಾರಿ ಈ ಪಕ್ಷದ 5 ಶಾಸಕರಲ್ಲಿ 4 ಜನ ಆರ್.ಜೆ.ಡಿ ಸೇರಿದ್ದರು. ಹಾಗಾಗಿ ಪಕ್ಷದ ವಿಶ್ವಾಸಾರ್ಕತೆ ಕಡಿಮೆಯಾಗಿದೆ. ಅಲ್ಲದ ಈ ಬಾರಿ ಮಹಾಘಟಬಂಧನ ಅಧಿಕಾರಕ್ಕೆ ಬರುವ ಸಾಧ್ಯತೆಯಿದ್ದ್ದರಿಂದ ಮತ್ತು ವಕ್ಫ್ ಕಾನೂನಿಗೆ ಜೆಡಿಯು ಬೆಂಬಲಿಸಿದ್ದರಿಂದ ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರಗಳಲ್ಲಿ ವಿರೋಧಿ ಕೂಟವನ್ನೇ ಬೆಂಬಲಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಅದನ್ನು ಹುಸಿಗೊಳಿಸಿ ಆ 5 ಸೀಟುಗಳನ್ನು ಮತ್ತೆ ಗೆದ್ದಿದೆ. ವಕ್ಫ್ ಕಾನೂನಿನ ಕುರಿತು ಅದು ಮಾಡಿದ ಗಟ್ಟಿ ಪ್ರಚಾರಾಂದೋಲನ ಮತ್ತು ಪಕ್ಷವನ್ನು ಮತ್ತೆ ಕೆಳಗಿಂದ ಕಟ್ಟಿದ್ದರಿಂದ ಇದು ಸಾಧ್ಯವಾಗಿದೆ ಎಂದು ಹೇಳಲಾಗಿದೆ. ಸೀಮಾಂಚಲ ಪ್ರದೇಶದಲ್ಲಿ ಸುಮಾರು 28 ಸೀಟುಗಳಲ್ಲಿ ಎ.ಐ.ಎಂ.ಐ.ಎಂ ಮಹಾಘಟಬಂಧನದ ಪಕ್ಷಗಳ ಸೋಲಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ಅದು ವಿರೋಧಿ ಕೂಟದ ಭಾಗವಾಗಲು ಬಯಸಿದ್ದು ಇದು ಕೋಮುವಾದಿ ಧ್ರುವೀಕರಣಕ್ಕೆ ಎಡೆಮಾಡಿಕೊಡಬಹುದು ಎಂಬ ಭಯದಿಂದ ಮಹಾಘಟಬಂಧನ ಅದನ್ನು ತಿರಸ್ಕರಿಸಿತ್ತು.

*ಎಲ್.ಜೆ.ಪಿ (ಆರ್.ವಿ) ಮತ್ತು ಜೆಡಿಯು ಈ ಬಾರಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ (ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದರೂ) ಎನ್.ಡಿ.ಎ ಕೂಟದ ಭಾಗವಾಗಿ ಸ್ಪರ್ಧಿಸಿವೆ. ಎಲ್.ಜೆ.ಪಿ (ಆರ್.ವಿ) ಕಳೆದ ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಜೆಡಿಯು ಸೀಟು ಕಡಿಮೆಯಾಗುವಂತೆ ಮಾಡಿತ್ತು ಎನ್ನಲಾಗಿದೆ. ಎಲ್.ಜೆ.ಪಿ 2005ರಲ್ಲಿ ಗಳಿಸಿದ 29 ಸೀಟುಗಳ ನಂತರ ಈ ಬಾರಿಯ 19 ಸೀಟುಗಳು ಅದರ ಎರಡನೇ ಅತ್ಯಧಿಕ ಸಂಖ್ಯೆ. ಈ ಪಕ್ಷಕ್ಕೆ ಕೊಡಲಾಗಿದ್ದ ಸೀಟುಗಳಲ್ಲಿ ಹೆಚ್ಚಿನವು ಕಳೆದ ಬಾರಿ ಎನ್.ಡಿ.ಎ ಸೋತಿದ್ದ ಸೀಟುಗಳು ಎಂದು ಗಮನಿಸಿದಾಗ ಇದು ಉತ್ತಮ ಸಾಧನೆಯೇ.

*ಮಹಾಘಟಬಂಧನದ ಪರಾಜಯವನ್ನು ಅದರ ಭಾಗವಾಗಿದ್ದ ಎಡ ಪಕ್ಷಗಳೂ ಹಂಚಿಕೊಳ್ಳಬೇಕಾಗಿ ಬಂದಿದೆ. ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಸಿಪಿಐ(ಎಂ.ಎಲ್-ಲಿಬರೇಶನ್) ನ ಸೀಟುಗಳು 12 ರಿಂದ 2 ಕ್ಕೆ ಇಳಿದಿವೆ. ಸಿಪಿಐ(ಎಂ) 2 ಸೀಟಿನಿಂದ 1ಕ್ಕೆ ಇಳಿದಿದೆ. ಸಿಪಿಐ ಇದ್ದ 2 ಸೀಟು ಕಳೆದುಕೊಂಡಿದೆ. ಎಡಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ವಿಶೇಷ ತಂತ್ರಗಾರಿಕೆ ಮಾಡಿತ್ತು ಎನ್ನಲಾಗಿದೆ.

*ಕಾಂಗ್ರೆಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಸೀಟು ಹೊಂದಾಣಿಕೆಯಲ್ಲಿ ಭಾರೀ ಸಂಘರ್ಷ ನಡೆಸಿ ಪಡೆದಿದ್ದ 61 ಸೀಟುಗಳಲ್ಲಿ ಕೇವಲ 6 ಸೀಟು ಗೆದ್ದಿದೆ. ಸೀಟು ಹಂಚಿಕೆಯಲ್ಲಿ ತನ್ನ ಜನಬೆಂಬಲ ಮತ್ತು ಕಾರ್ಯಕರ್ತರ ಪಡೆಯ ವಾಸ್ತವ ಆಧಾರಕ್ಕೆ ತಕ್ಕಷ್ಟು ಸೀಟು ಮಾತ್ರ ಪಡೆದಿದ್ದರೆ  ಮಹಾಘಟಬಂಧನದ ಪರಾಜಯವನ್ನು ತಪ್ಪಿಸಬಹುದಾಗಿತ್ತು ಎನ್ನಲಾಗಿದೆ.

ಇದನ್ನೂ ನೋಡಿ: CITU 16 ನೇ ರಾಜ್ಯ ಸಮ್ಮೇಳದ ಉದ್ಘಾಟನೆಯ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *