ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (2020) ನ್ನು ತಿರಸ್ಕರಿಸಿ ಸಂವಿಧಾನದ ಒಕ್ಕೂಟದ ಆಶಯವನ್ನು ಎತ್ತಿ ಹಿಡಿಯಲು ರಾಜ್ಯ ಶಿಕ್ಷಣ ನೀತಿ (2025) ರೂಪಿಸಿದ್ದ ಕಾಂಗ್ರೆಸ್ ಸರ್ಕಾರ, ತನ್ನ ರಾಜ್ಯ ಶಿಕ್ಷಣ ನೀತಿಯನ್ನು ತಾನೇ ಧಿಕ್ಕರಿಸಿ, ತಾನು ಬಲವಾಗಿ ವಿರೋಧಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಶಿಕ್ಷಣದ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಹೇಳಿದೆ.
ಹಾಲಿ ಕಾಂಗ್ರೆಸ್ ಆಡಳಿತಾವಧಿಯ ದೊಡ್ಡ ದುರಂತ ಮತ್ತು ವಿಪರ್ಯಾಸವೆಂದರೆ, ತಾನೇ ರೂಪಿಸಿ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯಿದೆ ಮತ್ತು ಕರ್ನಾಟಕ ಶಿಕ್ಷಣ ನೀತಿ ಆಯೋಗದ ಮೂಲಕ ತಾನೇ ರಚಿಸಿದ್ದ ರಾಜ್ಯ ಶಿಕ್ಷಣ ನೀತಿಯ ಶಿಫಾರಸ್ಸನ್ನು ಗಾಳಿಗೆ ತೂರಿ, ರಾಷ್ಟ್ರೀಯ ಶಿಕ್ಷಣ ನೀತಿಯ (2020) ಪ್ಯಾರಾ 7 ರಿಂದ 7.3 ರವರೆಗೆ ಪ್ರಸ್ತಾಪಿಸಿರುವ ಶಾಲಾ ಸಂಕೀರ್ಣ ತತ್ವದ ಅಡಿಯಲ್ಲಿ , ರಾಜ್ಯದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಬರೋಬರಿ 25683 ಶಾಲೆಗಳನ್ನು 700 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ (ಕೆಪಿಸ್) ಉನ್ನತೀಕರಿಸುವ ಮಾಗ್ನೆಟ್ ಶಾಲೆಗಳಲ್ಲಿ ವಿಲೀನಗೊಳಿಸುವ, ಅರ್ಥಾತ್ 25683 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿರುವ ತೀರ್ಮಾನ ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಕರಾಳ ತೀರ್ಮಾನವಾಗಿದೆ.
ಸನ್ಮಾನ್ಯ ಮುಖ್ಯಂತ್ರಿಯವರ 2025-26 ನೇ ಸಾಲಿನ ಆಯವ್ಯಯ ಭಾಷಣ ಪ್ಯಾರ ಸಂಖ್ಯೆ 105 ರ ಅನ್ವಯ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಏಷಿಯನ್ ಅಭಿವೃದ್ಧಿ ಬ್ಯಾಂಕಿನ ನೆರೆವಿನೊಂದಿಗೆ 2500 ಕೋಟಿ ರೂ ನೆರೆವಿನೊಂದಿಗೆ 500 ಹೊಸ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಿತ್ತೇ ಹೊರತು , 25683 ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಸ್ತಾವನೆಯಾಗಲಿ ಅಥವಾ ಸರ್ಕಾರ ಅಕ್ಟೋಬರ್ 15ರಂದು ಹೊರಡಿಸಿರುವ ಆದೇಶ ಹೇಳುವಂತೆ 1 ರಿಂದ 5 ಕಿಲೋಮೀಟರ್ ವ್ಯಾಪ್ತಿಯ ಚಿಕ್ಕ ಶಾಲೆಗಳನ್ನು ಕರ್ನಾಟಕ ಶಾಲೆಗಳೊಂದಿಗೆ ಸುಲಲಿತವಾಗಿ ಸಮ್ಮಿತಗೊಳಿಸುವ ಪ್ರಸ್ತಾವನೆಯಾಗಲಿ ಇರಲಿಲ್ಲ.
ಈ ಹೊಸ ಪ್ರಸ್ತಾವನೆ ಶಿಕ್ಷಣ ಸಚಿವರು ಹಾಗು ಇಲಾಖೆಯ ಅಧಿಕಾರಿಗಳು ಒಳಗೂಡಿ , ಸನ್ಮಾನ್ಯ ಮುಖ್ಯಂತ್ರಿಯವರ 2025-26 ನೇ ಸಾಲಿನ ಆಯವ್ಯಯ ಭಾಷಣ ಪ್ಯಾರ ಸಂಖ್ಯೆ 105ನ್ನು ತಿರುಚಿ, ರಾಜ್ಯ ಶಿಕ್ಷಣ ನೀತಿಯನ್ನು ಧಿಕ್ಕರಿಸಿ ಹಿಂಬಾಗಿಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಒಳಸಂಚಿನ ಹುನ್ನಾರವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: CITU ರಾಜ್ಯ ಸಮ್ಮೇಳನ |ಎಲ್ಲ ಶೋಷಣೆಯಿಂದಲೂ ಮುಕ್ತವಾದ ಸಮಾಜ ನಿರ್ಮಾಣ ಸಿಐಟಿಯು ಗುರಿ- ಕೆ. ಹೇಮಲತಾ
ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಸಂಕೀರ್ಣಗಳ ಮೂಲಕ ಪರಿಣಾಮಕಾರಿ ಸಂಪನ್ಮೂಲ ಬಳಕೆ ಮತ್ತು ಆಡಳಿತದ ನೆಪವೊಡ್ಡಿ ಲಕ್ಷಾಂತರ ಸರ್ಕಾರಿ ಶಾಲೆಗಳನ್ನು ಕಳೆದ ಹತ್ತು ವರ್ಷಗಳಿಂದ ಮುಚ್ಚುತ್ತಲೇ ಬಂದಿದೆ. ಇದರ ಭಾಗವಾಗಿ, ಜುಲೈ 2022 ರಲ್ಲಿ, ಕರ್ನಾಟಕದ ಅಂದಿನ ಬಿಜೆಪಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಶ್ರೀಯುತ ಬಿ.ಸಿ. ನಾಗೇಶ್ ರವರು, ರಾಷ್ಟ್ರೀಯ ಶಿಕ್ಷಣ ನೀತಿ (2020) ಅನ್ವಯ ಕಡಿಮೆ ದಾಖಲಾತಿ ಹೊಂದಿರುವ ಸುಮಾರು 13,800 ಸರ್ಕಾರಿ ಶಾಲೆಗಳನ್ನು “ಮಾದರಿ ಸರ್ಕಾರಿ ಶಾಲೆಗಳಲ್ಲಿ” ವಿಲೀನಗೊಳಿಸುವ ಯೋಜನೆಯನ್ನು ಘೋಷಿಸಿದರು. ಬಿಜೆಪಿ ಸರ್ಕಾರದ ಈ ನಿರ್ಧಾರನ್ನು ನಾವು ಶಿಕ್ಷಣದ ಮೂಲಭೂತ ಹಕ್ಕಗಾಗಿ ಜನಾಂದೋಲನಗಳ ಸಮನ್ವಯ (PAFRE – ಪಾಫ್ರೆ ) ವತಿಯಿಂದ ಬಲವಾಗಿ ವಿರೋಧಿಸಿದ್ದೆವು. ಜೊತೆಗೆ , ಸರ್ಕಾರದ ನಿರ್ಧಾರವು ವಿದ್ಯಾರ್ಥಿ ಸಂಘಟನೆಗಳು ಮತ್ತು ತಜ್ಞರಿಂದಲೂ ಟೀಕೆಗೂ ಗುರಿಯಾಯಿತು. ಎಲ್ಲಕ್ಕಿಂತ ಮಿಗಿಲಾಗಿ, ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಇದನ್ನು ಬಲವಾಗಿ ವಿರೋಧಿಸಿತ್ತು.
ʼನೆರೆಹೊರೆಯ ಶಾಲೆʼಯಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಹಲವಾರು ದಶಕಗಳಿಂದ ಸೋತಿರುವ ಸರ್ಕಾರ , ಗುಣಮಟ್ಟದ ಶಿಕ್ಷಣ ನೀಡುವ ಹೆಸರಿನಲ್ಲಿ ಶಾಲೆಗಳನ್ನು ವಿಲೀನಗೊಳಿಸುವುದು ಅಥವಾ ಮುಚ್ಚಲು ಹೊರಟಿರುವುದು ಕೇವಲ ಸುಳ್ಳು ನೆಪವಾಗಿದೆ . ಇದು ಶಿಕ್ಷಣ ಹಕ್ಕಿನ ಘೋರ ಉಲ್ಲಂಘನೆಯಾಗಿದ್ದು ಶಾಲೆ ಬಿಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದು ಅಂದಿನ ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು .
ದುರಂತವೆಂದರೆ , ಅಂದು ವಿರೋಧಿಸಿ ಈಗ ಅಧಿಕಾರದಲ್ಲಿರುವ ಅದೇ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಸುಮಾರು 25683 ಶಾಲೆಗಳನ್ನು 700 ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಆದೇಶ ಹೊರಡಿಸಿದೆ.ಇದು ನಮ್ಮ ಕಾಲದ ದೊಡ್ಡ ದುರಂತ. ತಾನೇ ರೂಪಿಸಿ ಜಾರಿಗೊಳಿಸಿದ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿಯುವ ಕೆಲಸ. ಇದು ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಶಿಕ್ಷಣ ಹಕ್ಕು ಕಾಯ್ದೆಯ ಸಂಪೂರ್ಣ ಉಲ್ಲಂಘನೆಯಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ನಾಶಮಾಡಿ, ಖಾಸಗೀಕರಣವನ್ನು ಪೂರ್ಣವಾಗಿ ವಿಸ್ತರಿಸಲು ರೂಪಿಸಿರುವ ಕುತಂತ್ರ ದ ಯೋಜನೆಯಾಗಿದೆ . ಇದು ರಾಜ್ಯ ಶಿಕ್ಷಣ ನೀತಿಯ (SEP ) ಶಿಫಾರಸ್ಸಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ತಿಳಿಸಿದೆ.
ಸುಮಾರು 26000 ಶಾಲೆಗಳನ್ನು ಹಂತ ಹಂತವಾಗಿ ಮುಚ್ಚುವುದರಿಂದ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ದಲಿತರು, ಅಲ್ಪಸಂಖ್ಯಾತರು, ದುಡಿಯುವ ವರ್ಗದ ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳು, ವಿಶೇಷವಾಗಿ ಎಲ್ಲ ಜನವರ್ಗದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆತಂಕವನ್ನು ನಿರ್ಮಿಸಲಿದೆ. ಶಾಲೆ ಸಮೀಪವಿಲ್ಲದ ಕಾರಣಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ನಮ್ಮ ಹಿಂದಿನ ಅನುಭವಗಳಿಂದ ತಿಳಿದಿದೆ. ಹಲವಾರು ವರದಿಗಳು ಕೂಡ ಮಕ್ಕಳು ಶಾಲೆ ತೊರೆಯಲು ಶಾಲೆ ಇಲ್ಲದಿರುವುದು ಮುಖ್ಯ ಕಾರಣಗಳಲ್ಲಿ ಒಂದೆಂದು ಹೇಳಿವೆ.

ರಾಜ್ಯದಲ್ಲಿರುವ ಒಟ್ಟು ಸರಕಾರಿ ಶಾಲೆಗಳ ಪೈಕಿ ಸರಿಸುಮಾರು ಅರ್ಧದಷ್ಟು ಶಾಲೆಗಳು ಇಲ್ಲವಾಗಲಿವೆ ಎಂಬುದೇ ನಾಗರಿಕ ಸಮಾಜವೊಂದು ನಾಚಿಕೆಪಡಬೇಕಾದ ಸಂಗತಿ. ಸುಮಾರು 26000 ಗ್ರಾಮಗಳು ಶಾಲೆಗಳನ್ನು ಕಳೆದುಕೊಳ್ಳಲಿವೆ! ಇದು ಖಾಸಗಿ ಶಾಲೆಗಳ ಬೆಳವಣಿಗೆಗೆ ಬಹಳಷ್ಟು ಪೂರಕವಾಗಿದೆ. ಗ್ರಾಮ ಗ್ರಾಮಗಳಲ್ಲಿ ಖಾಸಗಿ ಶಾಲೆಗಳು ಆರಂಭವಾಗಲು ಇದೊಂದು ಆರಂಭವಾಗಲಿದೆ. ಶಾಲೆ ಮುಚ್ಚಲ್ಪಡುವ ಇಷ್ಟೂ ಹಳ್ಳಿಗಳಲ್ಲಿ ಖಂಡಿತವಾಗಿ ಖಾಸಗಿ ಶಾಲೆಗಳು ತಲೆ ಎತ್ತಲಿವೆ. ಸರಕಾರದ ಈ ಕ್ರಮದ ಹಿಂದೆ ಈ ಖಾಸಗಿ ಸಂಸ್ಥೆಗಳಿಗೆ ನೆರವು ನೀಡುವ ಹಿತಾಸಕ್ತಿ ಖಂಡಿತ ಇದೆ. ಇದನ್ನು ಪಾಫ್ರೆ ಖಂಡಿಸುತ್ತದೆ.
ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸುವುದೇ ಬಹು ದೊಡ್ಡ ಪ್ರಗತಿಯೆಂದು ಬಿಂಬಿಸಿ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕೆ.ಪಿ.ಎಸ್ ಶಾಲೆಗಳನ್ನು ಆರಂಭಿಸಲು ಲಾಬಿ ನಡೆಸಿದ್ದಾರೆ. ಅಷ್ಟೇ ಪ್ರಮಾಣದ ಸಂಖ್ಯೆಯ ಸರಕಾರಿ ಶಾಲೆಗಳನ್ನು ತಮ್ಮ ಕ್ಷೇತ್ರದಲ್ಲಿ ಮುಚ್ಚಲು ನೆರವಾಗುತ್ತಿದ್ದಾರೆ. ಸರಕಾರ ತನ್ನ ಸುತ್ತೋಲೆಯಲ್ಲಿ ಹೇಳಿದ 50 ಕ್ಕೂ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳು – ಸಣ್ಣ ಗಾತ್ರದ ಶಾಲೆಗಳು – ಮಾತ್ರವಲ್ಲ 100 ಮತ್ತು ಅದಕ್ಕೂ ಹೆಚ್ಚು ಸಂಖ್ಯೆಯ ಮಕ್ಕಳಿರುವ ಶಾಲೆಗಳನ್ನು ಕೂಡ ಮುಚ್ಚುತ್ತಿದೆ. ಇಷ್ಟು ಮಾತ್ರವಲ್ಲಈಗ ಗುರುತಿಸಲಾಗಿರುವ ಮತ್ತು ಕೆ.ಪಿ.ಎಸ್ ಶಾಲೆಗಳೆಂದು ಉನ್ನತೀಕರಿಸಲು ಮುಂದಾಗಿರುವ 700 ಮ್ಯಾಗ್ನೇಟ್ ಶಾಲೆಗಳಲ್ಲದೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಎಸ್ ಶಾಲೆಗಳ ಸುತ್ತಲಿರುವ ಶಾಲೆಗಳನ್ನೂ ಮುಚ್ಚಲು ಆದೇಶ ಮಾಡಲಾಗಿದೆ. ಇದಕ್ಕಿಂತ ದೊಡ್ಡ ದುರಂತ ಏನಿದ್ದೀತು?
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಸರಕಾರಿ ಶಾಲೆಗಳನ್ನು ಮುಚ್ಚಿದ ಮತ್ತೊಂದು ಉದಾಹರಣೆ ಇಲ್ಲ. ಇಂತಹದೊಂದು ಅನಾಹುತಕ್ಕೆ ಕಾರಣವಾಗುವ ಸರಕಾರದ ಈ ತೀರ್ಮಾನ ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ಉಳಿಯಲಿದೆ.
ಮುಚ್ಚಲಿರುವ ಶಾಲೆಗಳ ಮಕ್ಕಳು ಸಂಯೋಜನೆಗೊಳಪಡುವ ಕೆಪಿಎಸ್ ಶಾಲೆಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಮಾಡುವುದಾಗಿ ಸರಕಾರ ಹೇಳುತ್ತಿದೆ. ಇದು ಕೇವಲ ಸಾರಿಗೆಯ ಪ್ರಶ್ನೆಯಲ್ಲ. ಮಕ್ಕಳ ಆತ್ಮವಿಶ್ವಾಸದ ಪ್ರಶ್ನೆ. ತಮ್ಮ ಸ್ವಂತ ಊರು, ತಮ್ಮ ಸುತ್ತಲಿನ ಪರಿಚಿತ ವಾತಾವರಣ ಹಾಗು ಕಲಿಕೆಗೆ ಪೂರಕವಾಗುವ ಜನ ಸಮುದಾಯವನ್ನು ಬಿಟ್ಟು ಹೊರ ಹೋಗಬೇಕಿರುವ ಸ್ಥಿತಿ ಮಕ್ಕಳ ಮನೋಸ್ಥೈರ್ಯವನ್ನು ಕುಂದಿಸುತ್ತದೆ. ಅದೂ ಚಿಕ್ಕ ಮಕ್ಕಳಲ್ಲಂತೂ ಭಯವನ್ನು ತುಂಬಲಿದೆ. ಇದು ಅವರು ಶಾಲೆಯನ್ನು ತೊರೆಯಲು ಪ್ರೇರೇಪಿಸುತ್ತದೆ . ಇಷ್ಟು ಮಾತ್ರವಲ್ಲ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವಲ್ಲೂ ಪಾತ್ರವಹಿಸುತ್ತದೆ. ಕಲಿಕೆಯಲ್ಲಿ ಹಿಂದುಳಿಯುವ ಮಕ್ಕಳು ಶಾಲೆಯಿಂದ ಹೊರ ತಳ್ಳಲ್ಪಡುತ್ತಾರೆ. ಇದರಿಂದ ಗ್ರಾಮೀಣ ಮಕ್ಕಳು ಗುಣಾತ್ಮಕ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಮಕ್ಕಳು ಬಾಲ ಕಾರ್ಮಿಕರಾಗಿ ಬದಲಾಗುವ ದಿನಗಳು ತುಂಬಾ ಹತ್ತಿರದಲ್ಲಿವೆ . ಮಕ್ಕಳ ಮೇಲಿನ ದೌರ್ಜನ್ಯ , ಮಕ್ಕಳ ಸಾಗಾಣಿಕೆ , ಮತ್ತು ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಬಹುದಾಗಿದೆ. ಸರಕಾರಿ ಶಾಲೆಗಳನ್ನು ಮುಚ್ಚಿದ ಗ್ರಾಮಗಳಲ್ಲಿ ಇರುವ ಮತ್ತು ಹೊಸದಾಗಿ ಆರಂಭವಾಗಲಿರುವ ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರಲಿದ್ದಾರೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿ ಖಾಸಗಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ಇದಕ್ಕೆಲ್ಲ ಸರಕಾರವೇ ನೇರವಾಗಿ ಕುಮ್ಮಕ್ಕು ನೀಡುತ್ತಿದೆ.
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು KPS ಶಾಲೆಗಳು ಎಂಬುದರ ಅರ್ಥ ಆ ಭಾಗದಲ್ಲಿ ಹೆಚ್ಚು ಶಾಲೆಗಳು ಮುಚ್ಚಲಿವೆ ಎಂದೇ ಆಗಿದೆ. ಕಾಲಾನು ಕಾಲದಿಂದ ಶಿಕ್ಷಣ ವಂಚಿತ ಜನ ಸಮುದಾಯವನ್ನು ಇನ್ನಷ್ಟು ವಂಚಿಸುವ ಕ್ರಮ ಇದಾಗಲಿದೆ. ಶಾಲೆಯಿಂದ ಹೊರಗುಳಿವ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಈ ಭಾಗದಲ್ಲಿ ಸರಕಾರದ ಈ ಕ್ರಮವು ಹೆಚ್ಚಿನ ಅನಾಹುತವನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.
ಸರ್ಕಾರದ ಈ ತಪ್ಪು ನಿರ್ಧಾರದಿಂದ , ಮಕ್ಕಳು ಹತ್ತಿರದ ಖಾಸಗಿ ಶಾಲೆಗಳಿಗೆ ಸೇರುವ ಅನಿವಾರ್ಯತೆ ಅಥವಾ ದೂರದಲ್ಲಿನ ಸರ್ಕಾರಿ ಶಾಲೆಯಿಂದ ದೂರವೇ ಉಳಿಯುತ್ತಾರೆ ಎಂದು ಹೇಳಿದೆ.
ಈ ಆದೇಶದಲ್ಲಿನ ಮತ್ತೊಂದು ಅಪಾಯ ಮತ್ತು ಹಿಂದಿನ ವರ್ಣಾಶ್ರಮ ವ್ಯವಸ್ಥೆಗೆ ಕೊಂಡೊಯ್ಯುವ ಬಗ್ಗೆ ಹಲವು ಪ್ರಸ್ತಾಪಗಳಿವೆ.
ಇದು ಕೇವಲ ‘ಸಣ್ಣ ಗಾತ್ರದ’ ( 50 ಕ್ಕಿಂತ ಕಡಿಮೆ ದಾಖಲಾತಿ ಇರುವ ಸುಮಾರು 26000 ಶಾಲೆಗಳನ್ನು ) ಮುಚ್ಚುವ/ 700 ಮಾಗ್ನೇಟ್ ಶಾಲೆಗಳ ( KPS ಶಾಲೆಗಳು) ಜೊತೆ ಸಂಯೋಜಿಸುವ ಕುರಿತಾಗಿ ಮಾತ್ರ ಹೇಳುತ್ತಿಲ್ಲ. ಬದಲಾಗಿ 6 ನೇ ತರಗತಿಯಿಂದಲೇ ವೃತ್ತಿಪರ ತರಬೇತಿಗಳನ್ನು ಆರಂಭಿಸುವ ಕುರಿತು ಹೇಳುತ್ತದೆ. ಈ ತರಬೇತಿಗಳ ಪಠ್ಯಕ್ರಮವನ್ನು ‘ಉದ್ದಿಮೆ ಪಾಲುದಾರರ’ ಸಹಯೋಗದಲ್ಲಿ ( ಸಾರ್ವಜನಿಕ-ಖಾಸಗಿ ಪಾಲುದಾರಿಕೆ- PPP) ಮಾದರಿಯಲ್ಲಿ – ಖಾಸಗಿ ಉದ್ಯೋಗಪತಿಗಳ ಜೊತೆ ಸೇರಿ ನಡೆಸಲಾಗುತ್ತದೆ. ಜೊತೆಗೆ ವೃತ್ತಿಪರ ತರಬೇತಿಯ ಜಂಟಿ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ.
ಇದು , ವಿದ್ಯಾರ್ಥಿಗಳಿಗೆ 10 ಮತ್ತು 12 ನೇ ತರಗತಿಯಲ್ಲಿ ಶಿಕ್ಷಣದಿಂದ ನಿರ್ಗಮಿಸುವ ಆಯ್ಕೆಗಳನ್ನು ಒದಗಿಸಲಿದೆ ಎಂದು ಆದೇಶ ಹೇಳುತ್ತದೆ. ಅಂದರೆ, ಖಾಸಗಿ ಉದ್ಯಮಪತಿಗಳಿಗೆ ಬೇಕಾದ, ಕಡಿಮೆ ಸಂಬಳದಲ್ಲಿ ದುಡಿಯುವ ದಿನಗೂಲಿಗಳನ್ನು ನಿರ್ಮಾಣ ಮಾಡಲು ಸರಕಾರಿ ಶಾಲೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಬಡವರು ಮತ್ತು ಹಿಂದುಳಿದ ವರ್ಗಗಳ ಮಕ್ಕಳು ಶಾಲೆ ತೊರೆದು ಖಾಸಗಿ ಉದ್ದಿಮೆಗಳಿಗೆ ಸೇರಿ ಕೂಲಿ ಕಾರ್ಮಿಕರಾಗಲಿದ್ದಾರೆ. ಈ ಮೂಲಕ ಪದವಿ ಹಾಗೂ ಉನ್ನತ ಶಿಕ್ಷಣವನ್ನು ಬಡವರು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಿರಾಕರಿಸಲಾಗುತ್ತಿದೆ ಮತ್ತು ಇಡಿಯಾಗಿ ಉಳ್ಳವರ ಮಡಿಲಿಗೆ ಹಾಕುತ್ತಿದೆ.
10 ಮತ್ತು 12 ತರಗತಿಗಳ ನಂತರ ನಿರ್ಗಮನ ಆಯ್ಕೆಗಳನ್ನು ತೆರೆಯುವ ಕಾರಣ, ಕೆಳ ಸಮುದಾಯದ ವಿದ್ಯಾರ್ಥಿಗಳು ಖಾಸಗಿ ಕಂಪನಿಗಳು ನೀಡಿದ ಪ್ರಮಾಣ ಪತ್ರಗಳ ಆಧಾರದಲ್ಲಿ ಖಾಸಗಿ ಕಂಪನಿಗಳಲ್ಲಿ ಮೂರು-ನಾಲ್ಕನೇ ದರ್ಜೆಯ ದಿನಗೂಲಿ ಕಾರ್ಮಿಕರಾಗಿ ದುಡಿಯಲಿದ್ದಾರೆ .ಈ ಮೂಲಕ ಬಡ ಅವಕಾಶ ವಂಚಿತ ಮಕ್ಕಳಿಗೆ ಉನ್ನತ ಶಿಕ್ಷಣ/ ಗುಣಮಟ್ಟದ ಬದುಕಿನ ನಿರಾಕರಣೆಯನ್ನು ಸುಂದರವಾದ ಬಣ್ಣದ ಮಾತುಗಳ ಮೂಲಕ ದಾಖಲಿಸಲಾಗಿದೆ .ಒಂದೆಡೆ ರಾಜ್ಯದಲ್ಲಿರುವ ಒಟ್ಟು ಸರಕಾರಿ ಶಾಲೆಗಳಲ್ಲಿ ಅರ್ಧದಷ್ಟನ್ನು ಮುಚ್ಚುವುದು, ಉಳಿದ ಶಾಲೆಗಳಲ್ಲಿ ಓದುವ ಬಡವರ ಮಕ್ಕಳನ್ನು ಶ್ರಮಜೀವಿ ದಿನಿಗೂಲಿಗಳನ್ನಾಗಿ ತಯಾರು ಮಾಡಿ 10-12 ತರಗತಿಗಳ ನಂತರ ಯಶಸ್ವಿಯಾಗಿ ಹೊರದಬ್ಬುವುದು, ಉಳಿದ ಮೇಲ್ವರ್ಗದ ಶ್ರೀಮಂತರ ಮಕ್ಕಳಿಗೆ ಉನ್ನತ ಶಿಕ್ಷಣದ ಮೂಲಕ ಪ್ರತಿಷ್ಠಿತ ಶ್ರೇಷ್ಠ ಹುದ್ದೆಗಳಿಗೆ ಅಣಿಗೊಳಿಸುವ ಹುನ್ನಾರವಾಗಿದೆ. ಒಟ್ಟಾರೆ , ಇದು ಒಂದು ಬಗೆಯಲ್ಲಿ ಮನುವಾದಿ ವರ್ಣಾಶ್ರಮ ವ್ಯವಸ್ಥೆಯನ್ನು ಪುನಸ್ಥಾಪಿಸುವ ಒಂದು ಕಾರ್ಯ ಯೋಜನೆಯಾಗಿದೆ ಎಂದಿದೆ.
ಇದು ನಮ್ಮ ಕಾಲದ ದೊಡ್ಡ ದುರಂತವಲ್ಲದೆ ಬೇರೇನೂ ಅಲ್ಲ . ಶಿಕ್ಷಣ ಹಕ್ಕು ಕಾಯಿದೆಯನ್ನು ರೂಪಿಸಿ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ, ತಾನು ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ರೀತಿಯ ಕೆಲಸಕ್ಕೆ ಮುಂದಾಗಿರುವುದು ಸಂವಿಧಾನ ಹಾಗೂ ಶಿಕ್ಷಣ ಹಕ್ಕಿನ ಕಾಯಿದೆಗೆ ಮಾಡಿದ ಘೋರ ಅಪಚಾರ. ಸಂವಿಧಾನದ ಮತ್ತು ಶಿಕ್ಷಣ ಹಕ್ಕಿನ ರಕ್ಷಕರಾಗಬೇಕಿದ್ದ ಶಿಕ್ಷಣ ಸಚಿವರು ಸಂವಿಧಾನದ ಉಲ್ಲಂಘನೆಗೆ ಮುಂದಾಗಿರುವುದು ದೊಡ್ಡ ದುರಂತ. ಮಕ್ಕಳ ದಿನಾಚರಣೆಗೆ ನಾಲ್ಕು ದಿನ ಬಾಕಿ ಇರುವ ಸಂದರ್ಭದಲ್ಲಿ , ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಕ್ಕಳ ಸಂವಿಧಾನದ ಮೂಲಭೂತ ಹಕ್ಕನ್ನು ಕಸಿದಿರುವ ಸಚಿವರು ಸಂಪುಟದಲ್ಲಿ ಮುಂದುವರಿಯಲು ಅರ್ಹರೆ ಎಂಬುದನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ತೀರ್ಮಾನಿಸಲು ಇದು ಸಕಾಲವಾಗಿದೆ.
ಈ ಅಘಾತಕಾರಿ ವಿಷಯವನ್ನು ಬಹುಶಃ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆರಾಧಕರು ಮತ್ತು ನಾಡಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರ ಗಮನಕ್ಕೆ ತರದೆ ಸಚಿವರೇ ಮಾಡಿರುವ ನಿರ್ಧಾರವಾಗಿರುವಂತೆ ಕಾಣುತ್ತದೆ. ಈ ಬಗ್ಗೆ ಸ್ವತಃ ಮುಖ್ಯ ಮಂತ್ರಿಗಳೇ ಕರ್ನಾಟಕದ ಜನತೆಗೆ ಉತ್ತರಿಸಬೇಕಿದೆ ಎಂದು ಹೇಳಿದೆ.
1. ನಿರಂಜನಾರಾಧ್ಯ ವಿ ಪಿ, ಪ್ರಧಾನ ಸಂಚಾಲಕರು , ಪಾಫ್ರೆ
2. ಎಫ್ ಸಿ ಚೇಗರಡ್ಡಿ ಮತ್ತು ಶುಭಂಕರ್ ಚಕ್ರವರ್ತಿ, BGVS ಕರ್ನಾಟಕ
3.ಲೋಕೇಶ್ ತಾಳಿಕಟ್ಟೆ, ಕರ್ನಾಟಕ ಗ್ರಾಮೀಣ ಶಿಕ್ಷಣ ಸಂಸ್ಥೆಗಳ ಸಂಘ
4. ಬಿ ಎನ್ ಯೋಗಾನಂದ, ಪೋಷಕರ ಸಂಘ
5.ಗುರುಮೂರ್ತಿ ಕಾಸಿನಾಥನ್, ಕ್ರಿಟಿಕಲ್ ಎಡ್ಟೆಕ್ ಇಂಡಿಯಾ (CETI)
6. ಎಂ.ಜಯಮ್ಮ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ
7.ಉಮೇಶ್ ದೊಡ್ಡಗಂಗವಾಡಿ, ಅಧ್ಯಕ್ಷರು, ಸ್ದಮ್ಚ್ಸಿಫ್
8.ವೀಣಾ/ ಮಂಜುನಾಥ್, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ
9. ತಿರುಮಲ ರಾವ್, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿಗಳ ಸಂಘ
10 .ಮೊಹಮ್ಮದ್ ಜೋಹರ್ ಕಾಸಿಫ್ ವಿದ್ಯಾರ್ಥಿ ಇಸ್ಲಾಮಿಕ್ ಸಂಸ್ಥೆ
11. ಶರತ್ ಬಿ, ಅಖಿಲ ಭಾರತ ವಿದ್ಯಾರ್ಥಿ ಸಂಘ
12. ಜಿ.ರವಿ, ನಾಲ್ಕನೇ ತರಂಗ ಪ್ರತಿಷ್ಠಾನ
13. ಶ್ರೀಮತಿ ಸರಸ್ವತಿ, ಕನ್ವೀನರ್, ಸಿಎಸಿಎಲ್ ಕೆ
14.ಟಿ.ಪಿ. ಗಂಗಾಧರ, ಸಂಚಾಲಕ, ಸಮ ಸಮಾಜಕ್ಕಗಿ ಗೆಳೆಯರ ಬಳಗ
15. ಕುಮಾರ್ ಶೃಂಗೇರಿ, CCL- NLSIU
ಇದನ್ನೂ ನೋಡಿ: ಬೆಳ್ತಂಗಡಿ| ಮಹಿಳೆಯ ಮನೆ ಮುಟ್ಟುಗೋಲು ಕ್ರಮ ವಾಪಸ್ ಪಡೆಯಲು ಮನವಿ Janashakthi Media
