ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಸರ್ಕಾರ ಕೈಗೊಂಡಿರುವ ಉಪಕ್ರಮಗಳಿಂದ ತಾಯಂದಿರ ಮರಣ ಅನುಪಾತದಲ್ಲಿ ಶೇ.24ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.
ವಿಕಾಸಸೌಧಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2024ರ ಜನವರಿ ತಿಂಗಳಿನಿಂದ ಅಕ್ಟೋಬರ್‌ವರೆಗೆ ಒಟ್ಟು 483 ತಾಯಿ ಮರಣ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷದಲ್ಲಿ ಜನವರಿಯಿಂದ ಅಕ್ಟೋಬರ್‌ವರೆಗೆ 366 ತಾಯಿ ಮರಣ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಶೇ.24ರಷ್ಟು ತಾಯಿ ಮರಣ ಪ್ರಕರಣ ಇಳಿಕೆಯಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ : ಬೆಂಗಳೂರು | ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಮೇಲೆ ಹಲ್ಲೆ, ಅಪಹರಣ: MGSP ಖಂಡನೆ
ಮುಂದಿನ ದಿನದಲ್ಲಿ ತಾಲೂಕು ಆಸ್ಪತ್ರೆಯಲ್ಲಿ ತಲಾ ಇಬ್ಬರು ಸ್ತ್ರಿರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರನ್ನು ಹಾಗೂ ಒಬ್ಬ ರೇಡಿಯಾಲಜಿಸ್ಟ್ ಇರಲಿದ್ದು, ದಿನದ 24 ಗಂಟೆಯೂ ಹೆರಿಗೆ ಸೌಲಭ್ಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಸಮುದಾಯ ಆರೋಗ್ಯ ಕೇಂದ್ರದ (ಸಿಎಚ್‌ಸಿ) ತಜ್ಞ ವೈದ್ಯರನ್ನು ಹಾಗೂ ಇಬ್ಬರು ಸ್ಟಾಫ್ ನರ್ಸ್‌ಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿ ತಾಲೂಕು ಆಸ್ಪತ್ರೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳು ದಿನದ 24 ಗಂಟೆಗಳು ಸಮಗ್ರ ತುರ್ತು ಪ್ರಸೂತಿ ಹಾಗೂ ನವಜಾತ ಶಿಶು ಆರೈಕೆ (ಸೀಮಾಂಕ್) ಸೇವೆಗಳನ್ನು ಒದಗಿಸಲಿದೆ. ನಮ್ಮ ತಜ್ಞ ವೈದ್ಯರನ್ನು ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ಹೆಚ್ಚಿನ ಹೆರಿಗೆ ಹೊರೆ ಇರುವ ಆಸ್ಪತ್ರೆಗಳು ಮತ್ತು ತುರ್ತು ಆರೈಕೆ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದರು.
ಕಡ್ಡಾಯ ವೈದ್ಯಕೀಯ ಸೇವಾ ಯೋಜನೆ ಅಡಿಯಲ್ಲಿ ಸುಧಾರಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಮತ್ತು ತೊಡಕುಗಳನ್ನು ನಿರ್ವಹಿಸಲು 125 ಸೂಪರ್ ಸ್ಪೆಷಾಲಿಟಿ ಹುದ್ದೆಗಳನ್ನು ಸೃಜಿಸಲಾಗುತ್ತಿದೆ. ಇವುಗಳಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಹೃದ್ರೋಗ ತಜ್ಞರು, ನರರೋಗತಜ್ಞ, ಮೂತ್ರಪಿಂಡಶಾಸ್ತ್ರಜ್ಞರು, ಆಂಕೊಲಾಜಿಸ್ಟ್‌ಗಳು, ಗ್ಯಾಸ್ಟ್ರೋಎಂಟರಾಲಜಿಸ್ಟ್‌ಗಳು, ಶ್ವಾಸಕೋಶತಜ್ಞ, ವೃದ್ಧಾಪ್ಯ ತಜ್ಞರು ಮತ್ತು ಕ್ರಿಟಿಕಲ್ ಕೇರ್ ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.
30ಕ್ಕಿಂತ ಹೆಚ್ಚು ಹೆರಿಗೆಯಾಗುವ ಸಿಎಚ್‌ಸಿಗಳಲ್ಲಿ ತಲಾ ಒಬ್ಬ ಸ್ತ್ರೀರೋಗತಜ್ಞ, ಅರಿವಳಿಕೆ ಮತ್ತು ಮಕ್ಕಳ ತಜ್ಞರನ್ನು ಮುಂದುವರಿಸುತ್ತೇವೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿನ ತಜ್ಞ ವೈದ್ಯರ ಸ್ಥಳಕ್ಕೆ ಇಬ್ಬರು ಎಂಬಿಬಿಎಸ್ ವೈದ್ಯರನ್ನು ಭರ್ತಿ ಮಾಡಲಾಗುತ್ತದೆ. ಸಹಜ ಹೇರಿಗೆಯನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಮಾಡಿಸಬಹುದಾಗಿದ್ದು, ಮಕ್ಕಳ ತಜ್ಞರನ್ನು ಮುಂದುವರಿಸಲಾಗುತ್ತದೆ ಎಂದು ವಿವರಿಸಿದರು.
15 ಜಿಲ್ಲಾ ಆಸ್ಪತ್ರೆಗಳಲ್ಲಿ ಸೂಪರ್-ಸ್ಪೆಷಲಿಸ್ಟ್ಗಳ ನಿಯೋಜನೆ ಮಾಡಲಾಗುವುದು. ಹೆಚ್ಚುವರಿಯಾಗಿ 104 ರೇಡಿಯಾಲಜಿಸ್ಟ್ ಗಳು ಮತ್ತು 23 ವೈದ್ಯರ ಹುದ್ದೆಗಳನ್ನು ಸೃಹಿಸಲಾಗುವುದು. ಕಡಿಮೆ ಕಾರ್ಯಕ್ಷಮತೆ ಹೊಂದಿರುವ 200 ಸಿಹೆಚ್ ಸಿಗಳ ತಜ್ಞರನ್ನು ಹೆಚ್ಚಿನ ಕೆಲಸದ ಆಸ್ಪತ್ರೆಗಳಿಗೆ ಮರು ನಿಯೋಜನೆ ಮಾಡಲಾಗುವುದು ಎಂದರು.
ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ವೈದ್ಯರ ಸೇವೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಹೋಗುವ ಸಂಖ್ಯೆ ಕಡಿಮೆಯಾಗಲಿದೆ. ಶೂನ್ಯ ಹೆರಿಗೆ ಇರುವ ಪಿಹೆಚ್ಸಿಗಳಲ್ಲಿ ಸ್ಟಾಪ್ ನರ್ಸ್ ಇರುವ ಅಗತ್ಯ ಇಲ್ಲ. ಅವರನ್ನು ಹೆಚ್ಚು ಹೆರಿಗೆ ಆಗುತ್ತಿರುವ ಪಿಹೆಚ್ಸಿಗಳಿಗೆ ಶಿಫ್ಟ್ ಮಾಡಲಾಗುವುದು. ನಮ್ಮ ದಕ್ಷತೆ ಸರಿ ಮಾಡುವ ಅಗತ್ಯ ಇದೆ. ನಮ್ಮಲ್ಲಿ ಇರುವ ಮಾನವ ಸಂಪನ್ಮೂಲ ಸಮರ್ಪಕ ಬಳಕೆ ಮಾಡಿದರೆ, ಆರ್ಥಿಕ ಇಲಾಖೆಯಿಂದ ಹೆಚ್ಚುವರಿ ವೈದ್ಯರ ನೇಮಕಕ್ಕೆ ಬೇಡಿಕೆ ಇಡಬಹುದಾಗಿದೆ ಎಂದರು.
ಅನೇಕ ವೈದ್ಯರು ಕೆಲಸ ಇಲ್ಲದೆ ಕೂತಿದ್ದಾರೆ. ಅವರಿಗೆ ಲಕ್ಷಾಂತರ ರೂ. ಸಂಬಳ ಕೊಡಲಾಗುತ್ತಿದೆ. 192 ಹುದ್ದೆಗಳು ಮಂಜೂರಾದರೂ ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಅಟೆಂಡೆನ್ಸ್ ವ್ಯವಸ್ಥೆ ಮಾಡಿದ್ದೇವೆ. ಈಗಾಗಲೇ ಸುಮಾರು ಸಿಬ್ಬಂದಿ 95% ಮೊಬೈಲ್ ಬಯೋಮೆಟ್ರಿಕ್ ಅಟೆಂಡೆನ್ಸ್ ವ್ಯವಸ್ಥೆಗೆ ನೋಂದಣಿಯಾಗಿದ್ದಾರೆ. ಇದರಿಂದ 85% ಸಿಬ್ಬಂದಿ ಸರಿಯಾದ ಸಮಯದಲ್ಲಿ ಸೇವೆಗೆ ಹಾಜರಾಗುತ್ತಿದ್ದಾರೆ ಎಂದರು.
ಇದನ್ನೂ ನೋಡಿ : ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
