ಹಾಸನ: ಸಿಐಟಿಯು ರಾಜ್ಯ ಸಮ್ಮೇಳನ ನವೆಂಬರ್ 13 ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಪರಮಶಿವಯ್ಯ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲ ಮಾತನಾಡಿದ ಅವರು, ಸಿಐಟಿಯು ರಾಷ್ಟ್ರೀಯ ಅಧ್ಯಕ್ಷರಾದ ಡಾ. ಕೆ. ಹೇಮಲತಾ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಧ್ವಜಾರೋಹಣದ ನಂತರ, ಕರ್ನಾಟಕದ ಹಿರಿಯ ಕಾರ್ಮಿಕ ನಾಯಕ ವಿ.ಜೆ.ಕೆ. ನಾಯರ್ ಅವರ ಹೋರಾಟದ ಬದುಕನ್ನು ದಾಖಲಿಸುವ ಜೀವನಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ರಾಷ್ಟ್ರೀಯ ಕಾರ್ಯದರ್ಶಿ ಉಮೇಶ್ ಅವರು ಭಾಗವಹಿಸಲಿದ್ದು, ಎಸ್. ವರಲಕ್ಷ್ಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮೂರು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಐಟಿ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ಪ್ರತಿನಿಧಿ ಅಧಿವೇಶನ ನಡೆಯಲಿದೆ. ಇಲ್ಲಿ ರಾಜ್ಯದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆ ನಡೆದು, ಭವಿಷ್ಯದ ಹೋರಾಟದ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಇದರ ಜೊತೆಗೆ, ಹಾಸನದ ಸ್ಥಳೀಯ ಸಮಸ್ಯೆಗಳ ಕುರಿತು ನಿರ್ಣಯಗಳನ್ನು ಕೈಗೊಂಡು, ಮುಂದಿನ ಹೋರಾಟಗಳಿಗೆ ತಯಾರಿ ನಡೆಸಲಾಗುವುದು.
ಕೊನೆಯ ದಿನ ನವೆಂಬರ್ 15 ರಂದು ಬೃಹತ್ ಕಾರ್ಮಿಕರ ರ‍್ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದೆ. ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ “ಕೆಂಪು ಸ್ವಯಂಸೇವಕರ ಪಥಸಂಚಲನ” ನಡೆಯಲಿದೆ. ಸಾವಿರಾರು ಕಾರ್ಮಿಕರು ಭಾಗವಹಿಸುವ ಈ ಸಮಾವೇಶವನ್ನು ಡಾ. ಕೆ. ಹೇಮಲತಾ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಸಿಐಟಿಯು ಭಾರತ ದೇಶದ ಅತ್ಯಂತ ಪ್ರಮುಖ ಕಾರ್ಮಿಕ ಸಂಘಟನೆಯಾಗಿದೆ. ಸಣ್ಣ ಕೆಲಸ ಮಾಡುವವರಿಂದ ಹಿಡಿದು, ದೊಡ್ಡ ಕಾರ್ಖಾನೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವವರೆಗಿನ ಎಲ್ಲಾ ವಿಭಾಗದ ದುಡಿಯುವ ಜನರನ್ನು ಸಂಘಟಿಸಿ ಹೋರಾಟ ಮಾಡುವ ಸಂಘಟನೆ ಇದಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಮುಷ್ಕರಗಳನ್ನು ನಡೆಸಲು ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಲು ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿರುವ ಮುಂಚೂಣಿ ಸಂಘಟನೆ ಸಿಐಟಿಯು ಆಗಿದೆ. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮತ್ತು ಹೋಬಳಿಗಳಲ್ಲಿ ನಮ್ಮ ಘಟಕಗಳು ಸಕ್ರಿಯವಾಗಿವೆ ಎಂದರು.
ನಿರ್ದಿಷ್ಟವಾಗಿ ಪ್ಲಾಂಟೇಶನ್ ಕಾರ್ಮಿಕರು, ಅಂಗನವಾಡಿ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಫ್ಯಾಕ್ಟರಿ ಕಾರ್ಮಿಕರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ನಡುವೆ ಸಿಐಟಿಯು ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.
ಇದನ್ನೂ ಓದಿ: ದೇಶದ ಅತಿದೊಡ್ಡ ಅಲ್ಪಸಂಖ್ಯಾತರು ಮಹಿಳೆಯರು; ಮೀಸಲಾತಿ ಅಗತ್ಯ: ಸುಪ್ರೀಂ ಕೋರ್ಟ್
ನವೆಂಬರ್ 11ರಂದು ಕರ್ನಾಟಕ ಮತ್ತು ಭಾರತದಲ್ಲಿ ದುಡಿಯುವ ವರ್ಗ (ಕಾರ್ಮಿಕರು ಮತ್ತು ರೈತರು) ಹಾಗೂ ಸರ್ಕಾರದ ನಡುವೆ ಒಂದು ರೀತಿಯ “ವರ್ಗ ಸಮರ” ಆರಂಭವಾಗಿದೆ. ಒಂದು ಕಡೆ ಸರ್ಕಾರ ಮತ್ತು ಅದನ್ನು ನಿಯಂತ್ರಿಸುವ ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಪರವಾದ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಕಾರ್ಮಿಕರು, ರೈತರು ಮತ್ತು ಕೂಲಿಕಾರರು ಒಗ್ಗಟ್ಟಾಗಿ ದೇಶದ ಆಸ್ತಿಯನ್ನು ಉಳಿಸಲು ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕಿಳಿದಿದ್ದಾರೆ ಎಂದು ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಎಂ.ಬಿ. ಪುಷ್ಪ, ಸ್ವಾಗತ ಸಮಿತಿಯ ಉಪಾಧ್ಯಕ್ಷ ರಾಜು ಗೊರೂರ್, ಜಿಲ್ಲಾ ಖಜಾಂಚಿ ಅರವಿಂದ್, ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಸ್ವಾಗತ ಸಮಿತಿಯ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್ ಅವರು ಉಪಸ್ಥಿತರಿದ್ದರು.
ಸಭಾಂಗಣ ಮತ್ತು ವೇದಿಕೆ: ಸಮ್ಮೇಳನ ನಡೆಯುವ ಭವನಕ್ಕೆ, ನಿವೃತ್ತ ಬ್ಯಾಂಕ್ ನೌಕರರ ಸಂಘದ ನಾಯಕ ಹಾಗೂ ಸಿಐಟಿಯು ರಾಜ್ಯ ಸಮಿತಿ ಸದಸ್ಯರಾಗಿದ್ದ ದಿವಂಗತ ರತ್ನಾಕರ್ ಶಣೈ ಅವರ ಹೆಸರನ್ನು ಇಡಲಾಗಿದೆ. ವೇದಿಕೆಗೆ, ಪೌರಕಾರ್ಮಿಕರನ್ನು ಸಂಘಟಿಸಿದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದ ದಿವಂಗತ ಹರೀಶ್ ನಾಯಕ್ ಅವರ ಹೆಸರನ್ನು ಇಡಲಾಗಿದೆ.
ಇದನ್ನೂ ನೋಡಿ: JNU ವಿದ್ಯಾರ್ಥಿ ಸಂಘದ ಚುನಾವಣೆ | ಎಡ ವಿದ್ಯಾರ್ಥಿ ಒಕ್ಕೂಟ ಕ್ಲೀನ್ ಸ್ವೀಪ್ Janashakthi | #JNUSU |#LeftUnity
