ಪಾಟ್ನ: ಬಿಹಾರ ವಿಧಾನಸಭಾ ಚುನಾವಣಾ ಕಣ ದಿನೇದಿನೇ ಕಾವೇರುತ್ತಿದ್ದು, ರಾಜಕೀಯ ವಲಯದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಹಿಮಂತ ಬಿಸ್ವಾ ಶರ್ಮಾ ನವೆಂಬರ್ 4ರಂದು ನಡೆದ ರ‍್ಯಾಲಿಯಲ್ಲಿ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಸಿವಾನ್ ಜಿಲ್ಲೆಯ ರಘುನಾಥಪುರ ಕ್ಷೇತ್ರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಹಿಮಂತ ಬಿಸ್ವ ಶರ್ಮಾ, ಆರ್‌ಜೆಡಿ ಅಭ್ಯರ್ಥಿ ಹಾಗೂ ಮೃತ ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್ ವಿರುದ್ಧ ಧ್ವೇಷ ಭಾಷಣ ಮಾಡಿದ್ದಾರೆ.
“ಈ ಕ್ಷೇತ್ರದಲ್ಲಿ ಒಬ್ಬ ಒಸಾಮ ಸ್ಪರ್ಧಿಸುತ್ತಿದ್ದಾನೆ. ಅವನ ಹೆಸರು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನಂತೆಯೇ ಇದೆ. ಇಂತಹ ಒಸಾಮ ಗೆದ್ದರೆ ಅದು ಹಿಂದೂಗಳ ಸೋಲು ಎಂದರ್ಥ,” ಎಂದು ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಡದಿ ಉಪನಗರ ಯೋಜನೆ ಭೂ ಬೆಲೆ ನಿಗದಿ ಸಭೆ ರದ್ದುಪಡಿಸಲು KPRS ಆಗ್ರಹ
“ರಘುನಾಥಪುರ ಎನ್ನುವ ಹೆಸರೇ ರಾಮ-ಸೀತೆಯ ನೆನಪನ್ನು ತರುತ್ತದೆ. ಆದರೆ ಇಲ್ಲಿ ಒಸಾಮ ಇದ್ದಾನೆ ಎಂಬುದು ತಿಳಿದು ಆಶ್ಚರ್ಯವಾಯಿತು. ಶಹಾಬುದ್ದೀನ್ ಕೊಲೆಗಳಲ್ಲಿ ದಾಖಲೆ ನಿರ್ಮಿಸಿದ್ದ. ಅವನ ಮಗ ಎಕೆ-47 ರೈಫಲ್‌ಗಳೊಂದಿಗೆ ಆಟವಾಡುತ್ತ ಬೆಳೆದಿರಬೇಕು,” ಎಂದು ಹೇಳಿದರು.
ಹಿಮಂತ ಬಿಸ್ವ ಶರ್ಮಾ, ಒಸಾಮರ ತಾಯಿ ಹಾಗೂ ಮಾಜಿ ಸಂಸದೆಯಾದ ಹಿನಾ ಶಹಾಬ್ ಅವರನ್ನು ಉಲ್ಲೇಖಿಸಿ, “ಲೋಕಸಭಾ ಚುನಾವಣೆಯಲ್ಲಿ ನೀವು ಒಸಾಮನ ತಾಯಿಯನ್ನು ಸೋಲಿಸಿದಂತೆಯೇ, ಈ ಬಾರಿ ಒಸಾಮನನ್ನೂ ಸೋಲಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ. ನವೆಂಬರ್ 14ರಂದು ಅಸ್ಸಾಂನ ಕಾಮಾಖ್ಯಾ ದೇವಾಲಯದಲ್ಲಿ ಕುಳಿತು ಈ ಕ್ಷೇತ್ರದ ಫಲಿತಾಂಶವನ್ನು ನಾನು ನೋಡುತ್ತೇನೆ,” ಎಂದರು.
ಇದನ್ನೂ ನೋಡಿ: ಬಿಹಾರ ಚುನಾವಣೆ | ಭರಪೂರ ಭರವಸೆ -ಬದಲಾವಣೆಯತ್ತ ಮತದಾರರ ಒಲವು Janashakthi Media | Bihar Election 2025
