ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ : ‘ಆಯ್ದ ಅಂಕಣ ಬರಹಗಳು’, ‘ಆಯ್ದ ಸಾಹಿತ್ಯಕ ಬರಹಗಳು’

ನಿರಂಜನರ ಶತಮಾನೋತ್ಸವ ಸಂದರ್ಭದಲ್ಲಿ ಕ್ರಿಯಾ ಮಾಧ್ಯಮ ಅವರ ಆಯ್ದ ಬರಹಗಳ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದೆ.  ಆಯ್ದ ಅಂಕಣ ಬರಹಗಳು’, ‘ಆಯ್ದ ಸಾಹಿತ್ಯಕ ಬರಹಗಳು’ – ಈ  ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ತೇಜಸ್ವಿನಿ ನಿರಂಜನ ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.
ನವೀನ್‌ ಕುಮಾರ್‌ ಹಾಸನ

ಆಯ್ದ ಅಂಕಣ ಬರಹಗಳು

(ಸಂಪಾದಕರು : ವಿಶ್ವ ಕುಂದಾಪುರ, ಪುಟ: 144, ಬೆಲೆ: 160)

ಕಥೆ ಕಾದಂಬರಿಗಳ ನಂತರ ನಿರಂಜನರ ಬರಹಗಳ ಪ್ರಕಾರಗಳಲ್ಲಿ ಪ್ರಮುಖವಾದದ್ದು ಮತ್ತು ಬಹುಶಃ ಸಂಖ್ಯಾತ್ಮಕವಾಗಿ ಅತಿ ದೊಡ್ಡದು ಅವರ ಅಂಕಣ ಬರಹಗಳು. ಸುಮಾರು ಎರಡುವರೆ ದಶಕಗಳಲ್ಲಿ (1945-70) ಹರಡಿದ್ದ ಅವರ ಒಟ್ಟು 13 ಅಂಕಣಗಳಲ್ಲಿ 7 ಅಂಕಣ ಬರಹಗಳು ಸಂಕಲನ ರೂಪದಲ್ಲಿ ಮುದ್ರಿತವಾಗಿವೆ. ಅವರ ಅಂಕಣಗಳು ಪ್ರಕಟವಾದ ಪತ್ರಿಕೆಗಳ ಸಂಖ್ಯೆ ಮಾತ್ರವಲ್ಲದೆ ಮುದ್ರಿತ ಅಂಕಣ ಬರೆಹಗಳ ಪ್ರಮಾಣವೂ ಗುಣಮಟ್ಟವೂ ವಿಷಯ ವೈವಿಧ್ಯವೂ ಅಗಾಧವಾದುದು. ಅವರ ಒಟ್ಟು ಅಂಕಣ ಬರಹಗಳ ಸಂಖ್ಯೆ 2000ಕ್ಕಿಂತಲೂ ಹೆಚ್ಚು. ಕನ್ನಡದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಅಂಕಣವನ್ನು ಒಂದು ಪ್ರಕಾರವನ್ನಾಗಿ ನೆಲೆಗೊಳಿಸಿದ್ದರಲ್ಲಿನಿರಂಜನ ಅಗ್ರಗಣ್ಯರು ಎನ್ನುವುದು ನಿಸ್ಸಂದೇಹವಾಗಿದೆ. ಇಷ್ಟು ವಿಸ್ತಾರವಾದ ಅಂಕಣ ಬರಹಗಳಲ್ಲಿ ಈ ಅಗಾಧ ವೈವಿದ್ಯತೆಯನ್ನು ಪ್ರತಿನಿಧಿಸುವ ಬರಹಗಳ ಆಯ್ಕೆ ಮಾಡುವುದು ಸುಲಭದ ಮಾತಲ್ಲ.

ಇದನ್ನು ಸಮರ್ಥವಾಗಿ ನಿರ್ವಹಿಸಿದವರು, ಕನ್ನಡದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ಮತ್ತು ಈ ಪುಸ್ತಕದ ಸಂಪಾದಕರಾದ ವಿಶ್ವ ಕುಂದಾಪುರ. ನಿರಂಜನರ ಈ ಅಗಾಧ ಅಂಕಣ ಬರಹಗಳ ಲೋಕದಸ್ಥೂಲ ಆದರೂ ಸಮಗ್ರ ಪರಿಚಯ ಕೊಡುವ “ಕನ್ನಡ ಪತ್ರಿಕಾ ಆವರಣದಲ್ಲಿʻಅಂಕಣʼ ತೋರಣ ಕಟ್ಟಿದ ಪತ್ರಕರ್ತ” ಎಂಬ ದೀರ್ಘ ಮುನ್ನುಡಿ ಪುಸ್ತಕದ ಮೆರುಗನ್ನು ಹೆಚ್ಚಿಸಿದೆ.

ಅಂಕಣ ಬರೆಹಗಳ ಈ ಸಂಗ್ರಹದಲ್ಲಿ 1950ರಿಂದ 1970ರ ವರೆಗಿನ ಸಾಧನ ಸಂಚಯ, ಅಂಕಣ, ರಾಜಧಾನಿಯಿಂದ ಮತ್ತು ದಿನಚರಿಯಿಂದ ಸಂಕಲನಗಳಿಂದ ಆಯ್ದ 33 ಬರೆಹಗಳಿವೆ. ಇವುಗಳಲ್ಲಿ ವೈಯಕ್ತಿಕ ಅನಿಸಿಕೆ, ಸಾಹಿತ್ಯ-ಸಾಹಿತಿ, ಸಾಂಸ್ಕೃತಿಕ ನೀತಿ, ಮಾಧ್ಯಮ, ವಿಜ್ಞಾನ-ತಂತ್ರಜ್ಞಾನ, ನಾಡು-ರಾಜಕೀಯ ಮತ್ತು ಜಾಗತಿಕ – ಹೀಗೆ ವರ್ಗೀಕರಿಸಲಾದ ಅಧ್ಯಾಯಗಳಲ್ಲಿ ಪ್ರತಿ ವಿಷಯಗಳ 3-4 ಬರೆಹಗಳಿವೆ. ಇವುಗಳನ್ನು ಅವರ ವಿಷಯ, ಶೈಲಿಗಳಲ್ಲಿಅಗಾಧ ವೈವಿಧ್ಯತೆ, ಧೋರಣೆಗಳನ್ನು ಮತ್ತು ಮೂರು ದಶಕಗಳ ದೀರ್ಘಕಾಲದಲ್ಲಿ ಅವರ ಬೆಳವಣಿಗೆಯನ್ನು ಬಿಂಬಿಸುವಂತೆ ಆಯ್ದುಕೊಳ್ಳಲಾಗಿದೆ. ಕೆಲವು ಬರೆಹಗಳು ನಿರಂಜನರೇ ಸ್ವತಃ ಸಂಪಾದಿಸಿ 1987ರಲ್ಲಿ ಪ್ರಕಟವಾದ ತಮ್ಮ ಬರೆಹಗಳ ವಾಚಿಕೆ ‘ಪ್ರತಿಧ್ವನಿ’ಯಿಂದ ಆಯ್ದವು.

ಇವು ಸ್ವಾಂಪಲ್ ಮಾತ್ರ. ಆದರೆ ನಿರಂಜನರ ಅಂಕಣ ಬರೆಹಗಳ ವೈವಿಧ್ಯತೆ, ಆಳ, ವಿಶಿಷ್ಟ ಶೈಲಿಯ ಒಂದು ನೋಟ ಖಂಡಿತ ಕೊಡುತ್ತದೆ. ಈ ಓದು ಅವರ ಎಲ್ಲ ಅಂಕಣ ಬರಹಗಳ ಸಮಗ್ರ ಅಧ್ಯಯನಕ್ಕೆ, ಮೌಲ್ಯಮಾಪನಕ್ಕೆ ಉತ್ತೇಜಿಸುವ ಸಾಧ್ಯತೆಹೊಂದಿವೆ. ಮುನ್ನುಡಿಯಲ್ಲಿ ನಿರಂಜನರ ಅಂಕಣ ಬರಹಗಳ ವಿಶಿಷ್ಟತೆಗಳಾದ ಪದಗಳ ಬಳಕೆ, ಇಂದಿಗೂ ಸಲ್ಲುವ ಪ್ರಸ್ತುತತೆ, ಆಳ ಅನುಭವ, ಸೂಕ್ಷ್ಮ ನಿರೀಕ್ಷಣೆ, ಬದುಕಿಗೆ ನಿಷ್ಠೆಯ ಕುರಿತೂ ಬರೆಯಲಾಗಿದೆ.

ಇದನ್ನೂ ಓದಿ :ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ

ಆಯ್ದ ಸಾಹಿತ್ಯಕ ಬರಹಗಳು

(ಸಂಪಾದಕರು: ಮೀನಾಕ್ಷಿ ಬಾಳಿ, ಪುಟ: 144, ಬೆಲೆ: 160)

ಕನ್ನಡದ ಸಾಹಿತ್ಯಕ ಚಳುವಳಿಗಳಲ್ಲಿ ಒಂದಾದ ‘ಪ್ರಗತಿಶೀಲ ಚಳುವಳಿ’ಯ ಹರಿಕಾರ ಮತ್ತು ನೇತಾರರಾಗಿ ನಿರಂಜನ ಸೃಜನಶೀಲ ಸಾಹಿತ್ಯ ಬರೆಯುವುದಲ್ಲದೆ ಸಾಹಿತ್ಯ ಮತ್ತು ಸಮಾಜ, ಬದುಕುಗಳ ಸಂಬಂಧದ ಬಗೆಗೂ ಚಿಂತನೆ ಮಾಡಿದವರು. ವಿಪುಲವಾಗಿ ಪುಸ್ತಕ ಪರಿಚಯ, ಪುಸ್ತಕ ವಿಮರ್ಶೆ ಮಾಡಿದವರು. ಸಾಹಿತಿಗಳ ಕುರಿತು ನುಡಿಚಿತ್ರವಲ್ಲದೆ ವಿಮರ್ಶಾತ್ಮಕವಾಗಿ ಬರೆದವರು. ನಿರಂಜನರ ಸಾಹಿತ್ಯಕ ಬರಹಗಳ ಎರಡು ಪ್ರಮುಖ ಪ್ರಕಟಿತ ಸಂಕಲನಗಳೆಂದರೆ ‘ಬುದ್ಧಿ, ಭಾವ, ಬದುಕು’ ಮತ್ತು ‘ಮುಖತ:’ (ಸಂದರ್ಶನಗಳ ಸಂಕಲನ) ಇವಲ್ಲದೆ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಡಿದ ಭಾಷಣಗಳು, ಅಂಕಣ ಬರಹಗಳಲ್ಲೂ ಸಾಹಿತ್ಯದ ಕುರಿತು ಅವರ ಚಿಂತನೆ ವಿಸ್ತಾರವಾಗಿ ಹರಡಿದೆ. ಈ ಸಂಕಲನದ ಸಂಪಾದಕರು ನಾಡಿನ ಪ್ರಮುಖ ಸಾಹಿತಿ, ಚಿಂತಕರಲ್ಲಿ ಒಬ್ಬರಾದ ಮೀನಾಕ್ಷಿ ಬಾಳಿ ಅವರು.

ಈ ಸಂಕಲನದಲ್ಲಿ ‘ಬುದ್ಧಿ ಭಾವ ಬದುಕು’ ಸಂಕಲನದ 16 ಬರಹಗಳನ್ನುಆಯ್ದುಕೊಳ್ಳಲಾಗಿದೆ. ‘ಮುಖತಃ’ ಸಂಕಲನದ ಒಂದು ಸಂದರ್ಶನವನ್ನು ಆಯ್ಕೆ ಮಾಡಲಾಗಿದೆ. ಇದು ‘ಸಮುದಾಯ ವಾರ್ತಾಪತ್ರ’ ಕ್ಕಾಗಿ ಕನ್ನಡದ ಇಂದಿನ ಮಹತ್ವದಲೇಖಕರಾಗಿರುವ ಬರಗೂರು ರಾಮಚಂದ್ರಪ್ಪನವರು ನಿರಂಜನರೊಂದಿಗೆ ಮಾಡಿದದೀರ್ಘ ಸಂದರ್ಶನ. ಈ ಬರಹಗಳನ್ನು ಆಯ್ಕೆ ಮಾಡುವಾಗ ನಿರಂಜನ ಲೇಖಕರಾಗಿಸಕ್ರಿಯವಾಗಿದ್ದಾಗಿನ ಸುಮಾರು ಐದು ದಶಕಗಳ ಸಾಹಿತ್ಯಕ ಲೋಕದ ಸ್ಥೂಲ ನೋಟಕೊಡುವ ಬರಹಗಳಲ್ಲದೆ, ಇಂದಿಗೂ ಪ್ರಸ್ತುತವಾಗಿರುವ ಸಾಹಿತ್ಯಕ ಪ್ರಶ್ನೆಗಳಿಗೆ ಒತ್ತುಕೊಡಲಾಗಿದೆ.

ಈ 17 ಲೇಖನಗಳಲ್ಲಿ ಸುಮಾರು ಅರ್ಧದಷ್ಟು ಬರೆಹಗಳು ಒಟ್ಟು ಪ್ರಗತಿಶೀಲ ಚಳುವಳಿಯ ನಡೆಯನ್ನು ಅದರ ಏಳು-ಬೀಳು, ಸಾಧಕ-ಭಾದಕಗಳನ್ನು ವಸ್ತು ನಿಷ್ಟವಾಗಿ ಪೃಥಕ್ಕರಿಸಿವೆ. ಈ ಬರಹಗಳಿಗೆ ಪ್ರಗತಿಶೀಲ ಚಳುವಳಿಯೆಂಬ ಕೇಂದ್ರವಿದೆ. ಆದ್ದರಿಂದ ಪ್ರಗತಿಶೀಲ ಚಳುವಳಿಯನ್ನು ಕುರಿತು ಅಧ್ಯಯನ ಮಾಡುವವರಿಗೆ ಇದೊಂದುಆಕರ ಕೃತಿಯಾಗಿ ಗಮನ ಸೆಳೆಯುತ್ತದೆ. ಉಳಿದರ್ಧ ಬರೆಹಗಳಸಾಹಿತ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಕ್ರಮಿಸುತ್ತಿರುವ ನಮಗೆ ಹಿಂದಿನ ಸಾಹಿತಿಗಳ ವರ್ತನೆ, ಅವರ ಬದುಕಿನ ವಿನ್ಯಾಸಗಳು, ಜನತೆ ಅವರನ್ನುಪರಾಂಬರಿಸುತ್ತಿದ್ದ ಬಗೆ, ಸಾಹಿತ್ಯ ಲೋಕದಲ್ಲಿ ನಡೆಯುತ್ತಿದ್ದ ವಾಗ್ವಾದಗಳ ಉತ್ತಮ ಚಿತ್ರಣ ನೀಡುತ್ತವೆ.

ಇದನ್ನೂ ನೋಡಿ :ಧರ್ಮಸ್ಥಳದ ನಿಗೂಢಗಳು | ಕ್ಲೈಮ್ಯಾಕ್ಸ್‌ನತ್ತ SIT ತನಿಖೆ ; ಫಲಿತಾಂಶಕ್ಕಾಗಿ ಕಾಯೋಣ Janashakthi Media

Donate Janashakthi Media

Leave a Reply

Your email address will not be published. Required fields are marked *