ಸಾರ್ವಜನಿಕ ಹಣಕಾಸು ವಲಯದ ಉನ್ನತ ಹುದ್ದೆಗಳನ್ನು ಖಾಸಗಿ ಬಂಟರಿಗೆ ಕೊಡಮಾಡುವ ಹುನ್ನಾರ- ಸಿಐಟಿಯು ಖಂಡನೆ

ನವದೆಹಲಿ :ಕೇಂದ್ರ ಮಂತ್ರಿಮಂಡಲದ  ನೇಮಕಾತಿ ಸಮಿತಿಯ ಸಚಿವಾಲಯವು ಅಕ್ಟೋಬರ್‍ 4ರಂದು ಸಾರ್ವಜನಿಕ ವಲಯದ ಬ್ಯಾಂಕುಗಳು, ಭಾರತೀಯ ಜೀವ ವಿಮಾ ನಿಗಮ (LIC) ಮತ್ತು ಸಾಮಾನ್ಯ ವಿಮಾ ಕಂಪನಿಗಳ ನಿರ್ವಹಣಾ (ಮ್ಯಾನೇಜ್‍ ಮೆಂಟ್‍) ಹುದ್ದೆಗಳನ್ನು ಖಾಸಗಿ ವಲಯದ ಅಭ್ಯರ್ಥಿಗಳಿಗೆ ತೆರೆಯುವಂತೆ  ಪರಿಷ್ಕೃತ ಕ್ರೋಡೀಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ವರದಿಯಾಗಿದೆ. ಇದನ್ನು ದೇಶದ ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ಖಂಡಿಸಿದೆ. ರಾಷ್ಟ್ರದ ಆರ್ಥಿಕ ಸಾರ್ವಭೌಮತ್ವವನ್ನು ಭದ್ರಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಈ ಮಾರ್ಗಸೂಚಿಗಳನ್ನು  ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ಈ ರಾಷ್ಟ್ರೀಯ ಸಂಸ್ಥೆಗಳ ಸಾರ್ವಜನಿಕ ಸ್ವರೂಪವನ್ನು ಎತ್ತಿಹಿಡಿಯಬೇಕು ಎಂದು ಅದು ಒತ್ತಾಯಿಸಿದೆ. ಸಾರ್ವಜನಿಕ

ಈ ಮಾರ್ಗಸೂಚಿಗಳು ಸಾಮಾನ್ಯ ಭಾರತೀಯ ಜನತೆಯ ಹಣಕಾಸಿನೊಂದಿಗೆ ದಶಕಗಳಿಂದ ಕಟ್ಟಿ ಬೆಳೆಸಲಾದ  ಸಾರ್ವಜನಿಕ ಹಣಕಾಸು ಸಂಸ್ಥೆಗಳ ಭದ್ರತೆ ಮತ್ತು ಸಮಗ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತವೆ ಎಂದು  ಸಿಐಟಿಯು ಕಳವಳ ವ್ಯಕ್ತಪಡಿಸಿದೆ. ಸಂಪುಟ ಸಮಿತಿಯ ಇಂತಹ ಕ್ರೋಡೀಕೃತ ಮಾರ್ಗಸೂಚಿಗಳ ಮೂಲಕ ಖಾಸಗಿ ವಲಯದ ನಿರ್ವಾಹಕರುಗಳನ್ನು ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ(ಎಂಡಿ), ಕಾರ್ಯನಿರ್ವಾಹಕ ನಿರ್ದೇಶಕ(ಇಡಿ), ಪೂರ್ಣಾವಧಿ ನಿರ್ದೇಶಕ ಮತ್ತು ಅಧ್ಯಕ್ಷ ಹುದ್ದೆಗಳಿಗೆ ಪರಿಗಣಿಸಲು ಅವಕಾಶ ನೀಡುವುದು ಸಂಸತ್ತಿನ ಸಾಂವಿಧಾನಿಕ ಅಧಿಕಾರಗಳ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಇದು ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಜನರ ಹಿತಗಳನ್ನು ಬಲಿಗೊಟ್ಟು, ಈ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿ ಕಾರ್ಪೊರೇಟ್ ವರ್ಗದ ಪ್ರಯೋಜನಕ್ಕಾಗಿ ಖಾಸಗೀಕರಣಗೊಳಿಸಲು ಮತ್ತು/ಅಥವಾ ಬಳಸಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂದು ಸಿಐಟಿಯು ಹೇಳಿದೆ.

ಈ ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಸಂಸತ್ತು ಜನತೆಯ ಸಾರ್ವಭೌಮ ಇಚ್ಛೆಯಂತೆ ಸಂಸತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955; ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನ ಮತ್ತು ಉದ್ಯಮಗಳ ವರ್ಗಾವಣೆ) ಕಾಯ್ದೆ 1970 ಮತ್ತು 1980, ಮತ್ತು LIC ಕಾಯ್ದೆ 1956 ಮೂಲಕ ಸ್ಥಾಪಿಸಿರುವ  ಶಾಸನಬದ್ಧ ಸಂಸ್ಥೆಗಳಾಗಿವೆ, ಇವು ಆಂತರಿಕ ಉತ್ತರಾಧಿಕಾರ ವ್ಯವಸ್ಥೆಗಳ ಭಾಗವಾಗಿ ಆಯಾ ಉದ್ಯಮದಿಂದ ಉನ್ನತ ಹುದ್ದೆಗಳಿಗೆ ನೇಮಕಾತಿ ಮಾಡುವ ಪದ್ಧತಿಯನ್ನು  ಸ್ಥಾಪಿಸಿಕೊಂಡಿವೆ. ಈ ಪಾರದರ್ಶಕ ಜವಾಬ್ದಾರಿಯುತ ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಯನ್ನು ಖಾಸಗಿ ಮಂದಿಗೆ/ವಲಯಕ್ಕೆ ತೆರೆಯುವ ಮೂಲಕ ಕೈಬಿಡಲಾಗುತ್ತದೆ , ಇದು ಖಾಸಗಿ ಬಂಟತನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಿಐಟಿಯು ಹೇಳಿದೆ.

ಇದನ್ನೂ ಓದಿ : ನವೆಂಬರ್ 13, 14 ಮತ್ತು 15 ಹಾಸನದಲ್ಲಿ ಸಿಐಟಿಯು 16ನೇ ರಾಜ್ಯ ಸಮ್ಮೇಳನ

ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳ ಖಾಸಗೀಕರಣದ ವಿರುದ್ಧ ನೌಕರರು, ಕಾರ್ಮಿಕರು ಮತ್ತು ಜನರು ನಡೆಸಿದ ಹೋರಾಟದ ಚಳವಳಿಯಿಂದ ಹತಾಶೆಗೊಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಉನ್ನತ ಹುದ್ದೆಗಳನ್ನು ಖಾಸಗಿ ವಲಯಕ್ಕೆ ತೆರೆಯುವ ಈ ಅಪಾಯಕಾರಿ ಮತ್ತು ಪ್ರತಿಗಾಮಿ ಕ್ರಮವನ್ನು ಕೈಗೊಂಡಿದೆ ಎಂದು ಟೀಕಿಸಿರುವ ಸಿಐಟಿಯು, ನವ ಉದಾರವಾದಿ ನೀತಿಗಳಿಗೆ ಅನುಗುಣವಾಗಿ ದೇಶೀ ಮತ್ತು ವಿದೇಶಿ ಕಾರ್ಪೊರೇಟ್‌ಗಳಿಗೆ ಪ್ರಯೋಜನ ತಲುಪಿಸುವುದಕ್ಕಾಗಿಯೇ  ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳ ವಿನಾಶಕಾರಿ ಪುನರ್ರಚನೆಯ ರಾಷ್ಟ್ರವಿರೋಧಿ ದಾರಿಯಲ್ಲಿ ಸಾಗಿರುವುದನ್ನು ಇದು ಬಿಂಬಿಸುತ್ತದೆ ಎಂದು ಹೇಳಿದೆ. ಸಾರ್ವಜನಿಕ ವಲಯದ ಹಣಕಾಸು ವಲಯ ಸಂಸ್ಥೆಗಳನ್ನು ರಕ್ಷಿಸಿಕೊಳ್ಳಲು ಈ ಪರಿಷ್ಕೃತ ಕ್ರೋಡೀಕೃತ ಮಾರ್ಗಸೂಚಿಗಳನ್ನು ವಿರೋಧಿಸುತ್ತಿರುವ ಮತ್ತು ಪ್ರತಿರೋಧಿಸುತ್ತಿರುವ  ಸಂಸ್ಥೆಗಳ  ನೌಕರರಿಗೆ ತನ್ನ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸುತ್ತ ಸಿಐಟಿಯು ಕೇಂದ್ರ ಸರ್ಕಾರದ ಇಂತಹ ಪ್ರತಿಗಾಮಿ ಹುನ್ನಾರವನ್ನು ಬಲವಾಗಿ ವಿರೋಧಿಸಲು ಕಾರ್ಮಿಕ ಆಂದೋಲನಕ್ಕೆ ಕರೆ ನೀಡಿದೆ.

ಇದನ್ನೂ ನೋಡಿ : ಉತ್ತರ ಕನ್ನಡ | ಎಮರ್ಜೆನ್ಸಿಯಲ್ಲಿ ಜೀವ ಉಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆ ಇಲ್ಲ | ಯಮುನಾ ಗಾಂವ್ಕರ್

Donate Janashakthi Media

Leave a Reply

Your email address will not be published. Required fields are marked *