ಆನೇಕಲ್: ಕಂದಾಯ ಇಲಾಖೆಯು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ್ದ ಮನೆಗಳ ಮೇಲೆ ದಾಳಿ ನಡೆಸಿ ತೆರವುಗೊಳಿಸಿತು. ಇದರಿಂದಾಗಿ ಸುಮಾರು 25 ಕುಟುಂಬಗಳ ಕಾರ್ಮಿಕರು ಬೀದಿ ಪಾಲಾಗಿವೆ.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ 10ರಲ್ಲಿ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲಾಗಿತ್ತು. ಅಮರಾವತಿ ಎಂಬುವರ ಪ್ಯಾಕಿಂಗ್ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಮನೆಗಳಲ್ಲಿ ವಾಸವಾಗಿದ್ದರು. ಅಕ್ಟೋಬರ್ 13 ಮಾತ್ತು 14ರಂದು ಕಂದಾಯ ಇಲಾಖೆ ದಾಳಿ ನಡೆಸಿ ಈ ಮನೆಗಳನ್ನು ತೆರವುಗೊಳಿಸಿತು. ಇದರ ಪರಿಣಾಮವಾಗಿ 45ಕ್ಕೂ ಹೆಚ್ಚು ಕಾರ್ಮಿಕರಿಗೆ ಆಸರೆ ಇಲ್ಲವಾಗಿದೆ.
ಇದನ್ನೂ ಓದಿ: 22 ಮಕ್ಕಳ ಸಾವಿಗೆ ಕಾರಣವಾದ ಸಿರಪ್: ಶೇ.10 ಕಮಿಷನ್ಗೆ ಶಿಫಾರಸು ಮಾಡಿದ ವೈದ್ಯರು
ಹೊಟ್ಟೆ ಹೊರೆಯಲು ಪಶ್ಚಿಮ ಬಂಗಾಳ ಮತ್ತು ಓಡಿಶಾದಿಂದ ವಲಸೆ ಬಂದಿರುವ ಈ ಕುಟುಂಬಗಳು ಸ್ನಾನ, ಶೌಚಾಲಯ ಸೌಲಭ್ಯಗಳಿಲ್ಲದೆ ನರಕಯಾತನೆ ಪಡುತ್ತಿವೆ. ಎರಡು ತಿಂಗಳ ಹಸುಗೂಸಿಗೆ ತಾಯಿಯೊಬ್ಬರು ಹಾಲುಣಿಸಲು ಕೂಡ ಪರದಾಡುವ ಸ್ಥಿತಿ ಇದೆ.
ಮನೆ ಮಾಲೀಕರಾದ ಅಮರಾವತಿ, ‘ರಾಜಕಾಲುವೆ ಒತ್ತುವರಿ ಬಗ್ಗೆ ತಿಳಿದಿರಲಿಲ್ಲ. ಕಂದಾಯ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿದ್ದು ಬೇಸರ’ ಎಂದು ವಿವರಿಸಿದರು.
ಜಲಮೂಲ ಸಂರಕ್ಷಣೆಗಾಗಿ ಒತ್ತುವರಿ ತೆರವು ಸರಿ. ಆದರೆ, ಕಾರ್ಮಿಕರು ತಮ್ಮ ಎಲ್ಲ ಸಾಮಗ್ರಿಗಳನ್ನು ಕಾರ್ಖಾನೆಗಳಲ್ಲಿ ಇರಿಸಬೇಕಾಗಿ ಬಂದಿದೆ. ಅವರಿಗೆ ತಕ್ಷಣದ ಸಹಾಯದ ಅವಶ್ಯ ಇದೆ. ಸಂಬಂಧಿತ ಅಧಿಕಾರಿಗಳು ಈ ಕುಟುಂಬಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.
ಇದನ್ನೂ ನೋಡಿ: CITU 14ನೇ ಜಿಲ್ಲಾ ಸಮ್ಮೇಳನದಲ್ಲಿ ಯೋಗ ಪ್ರದರ್ಶಿಸಿದ ರಾಜ್ಯ ಪ್ರಶಸ್ತಿ ವಿಜೇತೆ ಐಶ್ವರ್ಯ Janashakthi Media
