ಬಿಹಾರ ವಿಧಾನಸಭಾ ಚುನಾವಣೆ: ಅಕ್ಟೋಬರ್‌ 12ರಂದು ಟಿಕೆಟ್‌ಗಳ ಕುರಿತು ಘೋಷಣೆ – ಬಿಜೆಪಿ ಮುಖ್ಯಸ್ಥ

ಪಟ್ನಾ: ಬಿಹಾರದಲ್ಲಿ ಘೋಷಣೆಯಾಗಿರುವ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಘಟಕಗಳೊಂದಿಗೆ ಸೀಟು ಹಂಚಿಕೆ ಮತ್ತು ಟಿಕೆಟ್‌ಗಳ ಕುರಿತು ಪಕ್ಷದ ಕೇಂದ್ರ ನಾಯಕತ್ವವು ಅಕ್ಟೋಬರ್‌ 12ರಂದು ಪ್ರಮುಖ ಘೋಷಣೆಗಳನ್ನು ಮಾಡಲಿದೆ ಎಂದು ಸುದ್ದಿಗಾರರೊಂದಿಗೆ ಅಕ್ಟೋಬರ್‌ 10ರಂದು ಮಾತನಾಡಿದ ಬಿಜೆಪಿಯ ಬಿಹಾರ ಘಟಕದ ಮುಖ್ಯಸ್ಥ ದಿಲೀಪ್ ಜೈಸ್ವಾಲ್ ಹೇಳಿದ್ದಾರೆ.

ರಾಜ್ಯದ ಎನ್‌ಡಿಎ ಮಿತ್ರಪಕ್ಷಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿ, “ಎನ್‌ಡಿಎ ಒಕ್ಕೂಟದಲ್ಲಿ ಎಲ್ಲವೂ ಸರಿಯಾಗಿದೆ. ಸೀಟು ಹಂಚಿಕೆ ಮತ್ತು ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ಭಾನುವಾರ ಬೆಳಿಗ್ಗೆ 11ಕ್ಕೆ ಪ್ರಮುಖ ಘೋಷಣೆಗಳು ಹೊರಬೀಳಲಿವೆ” ಎಂದಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಂಎಲ್‌) ಮುಖ್ಯಸ್ಥ ಉಪೇಂದ್ರ ಕುಶ್ವಾ ಕೂಡಾ ಅಸಮಾಧಾನದ ವದಂತಿಗಳನ್ನು ತಳ್ಳಿಹಾಕಿದರು. ಸೀಟು ಹಂಚಿಕೆ ಮಾತುಕತೆ ಅಂತಿಮಗೊಂಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಒಳಮೀಸಲಾತಿ ಜಾರಿ ವಿಳಂಬ: ಸಚಿವ ಎಚ್‌. ಸಿ.ಮಹದೇವಪ್ಪ ರಾಜಿನಾಮೆಗೆ ಆಗ್ರಹ; ಪ್ರತಿಭಟನೆ

‘ತಮ್ಮ ಪಕ್ಷ (ಹಿಂದೂಸ್ತಾನಿ ಅವಾಮ್ ಮೋರ್ಚಾ)ಕ್ಕೆ ಗೌರವಾನ್ವಿತ ಸಂಖ್ಯೆಯ ಸ್ಥಾನಗಳನ್ನು ನೀಡಬೇಕು ಎಂಬುದು ನಮ್ಮ ವಿನಂತಿಯೇ ಹೊರತು, ಹಕ್ಕೊತ್ತಾಯವಲ್ಲ. ಕಳೆದ ಹಲವು ವರ್ಷಗಳಿಂದ ನಾನು ಎನ್‌ಡಿಎಗೆ ಸಹಾಯ ಮಾಡುತ್ತಲೇ ಬಂದಿದ್ದೇನೆ. ಒಂದೊಮ್ಮೆ ಸಿಗದೇ ಇದ್ದರೆ ಪಕ್ಷವು ಚುನಾವಣೆಯಲ್ಲಿ ಸ್ಪರ್ಧೆಸದೇ ಇರಬಹುದು’ ಎಂದು ಕೇಂದ್ರ ಸಚಿವ ಜಿತನ್ ರಾಮ್‌ ಮಾಂಝಿ ಹೇಳಿದ್ದಾರೆ.

‘ಪಕ್ಷ ಸ್ಥಾಪನೆಯಾಗಿ ಹತ್ತು ವರ್ಷಗಳ ನಂತರವೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಮಾನ್ಯತೆ ಪಡೆಯದ ಪಕ್ಷವಾಗಿಯೇ ಉಳಿದಿದೆ. ನಮಗೆ ಕನಿಷ್ಠ 15 ಸ್ಥಾನಗಳನ್ನು ನೀಡದಿದ್ದರೆ ಅದು ನನಗೆ ಮತ್ತು ನನ್ನ ಪಕ್ಷಕ್ಕೆ ಅವಮಾನವಾದಂತೆ. 15 ಕ್ಷೇತ್ರಗಳನ್ನು ನೀಡಿದರೆ ಕನಿಷ್ಠ 8ರಿಂದ 9 ಸ್ಥಾನಗಳನ್ನು ಗೆಲ್ಲಬಹುದು. ಅದರಿಂದ ಪಕ್ಷಕ್ಕೆ ಮಾನ್ಯತೆಯೂ ಸಿಗಲಿದೆ’ ಎಂದಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಮತ್ತೊಂದು ಪಕ್ಷ ಲೋಕ ಜನಶಕ್ತಿ ಪಕ್ಷದ (ರಾಮ್‌ ವಿಲಾಸ್‌) ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮಾತನಾಡಿ, ‘ಪಕ್ಷವು ಈ ಹಿಂದೆ 20–22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈಗ ಕನಿಷ್ಠ 25 ಸ್ಥಾನಗಳನ್ನು ಕೇಳುತ್ತಿದೆ’ ಎಂದು ವರದಿಯಾಗಿದೆ.

ಬಿಹಾರ ವಿಧಾನಸಭೆಗೆ ನ. 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನ. 14ರಂದು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ.

ಎನ್‌ಡಿಎ ಮೂಲಗಳ ಪ್ರಕಾರ ದೊಡ್ಡ ಮಿತ್ರಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ಕ್ರಮವಾಗಿ 102 ಮತ್ತು 101 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಹಿಂದೆ ಸುಮಾರು 20-22 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಎಲ್‌ಜೆಪಿ (ರಾಮ್ ವಿಲಾಸ್) ಈಗ ಕನಿಷ್ಠ 25 ಸ್ಥಾನಗಳನ್ನು ಕೇಳುತ್ತಿದೆ. ಪಕ್ಷವು ಕನಿಷ್ಠ 45 ಸ್ಥಾನಗಳನ್ನು ಪಡೆಯಬೇಕು ಎಂದು ಎಲ್‌ಜೆಪಿ (ಆರ್‌ವಿ) ಯ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಇದನ್ನೂ ನೋಡಿ: ಅವನು ಎಸೆದ ಚಪ್ಪಲಿ ಗವಾಯಿವರ ಸಮುದಾಯದ ಶ್ರಮ ಸಂಸ್ಕೃತಿJanashakthi Media

Donate Janashakthi Media

Leave a Reply

Your email address will not be published. Required fields are marked *