ಜಿಎಸ್ಟಿ ದರಗಳ ಇಳಿಕೆಯಿಂದಾಗಿ ಜನರ ಒಟ್ಟು ಬಳಕೆಯು ಏರಿಕೆಯಾಗುತ್ತದೆ ಎಂದು ಸರಕಾರ ಪ್ರಚಾರ ಮಾಡುತ್ತಿದೆ. ಆದರೆ ಕೇವಲ ಜಿಎಸ್ಟಿ ರಿಯಾಯ್ತಿಗಳಿಂದಷ್ಟೇ ಜನಗಳ ಬಳಕೆಯ ಪ್ರಮಾಣ ಹೆಚ್ಚುವುದಿಲ್ಲ. ವಿತ್ತೀಯ ಕೊರತೆಯನ್ನು ಹೆಚ್ಚಿಸದ ಹೊರತು, ಅಥವಾ ಪರ್ಯಾಯವಾಗಿ, ಜಿಎಸ್ಟಿ ರಿಯಾಯಿತಿಗಳ ಮೂಲಕ ಉಂಟಾಗುವ ಆದಾಯದ ನಷ್ಟವನ್ನು ಶ್ರೀಮಂತರಿಂದ ಹೆಚ್ಚು ನೇರ ತೆರಿಗೆಗಳನ್ನು ಸಂಗ್ರಹಿಸುವ ಮೂಲಕ ಸರಿದೂಗಿಸದ ಹೊರತು, ಸರ್ಕಾರದ ಈ ರೀತಿಯ ಕ್ರಮಗಳಿಂದ ದುಡಿಯುವ ಜನರ ಒಟ್ಟು ಬಳಕೆಯಪ್ರಮಾಣ ವಾಸ್ತವವಾಗಿ ಬದಲಾಗುವುದಿಲ್ಲ. ಟ್ರಂಪ್ ಸುಂಕಗಳು ಭಾರತದ ಅರ್ಥವ್ಯವಸ್ಥೆಯ ಮೇಲೆ ತರುತ್ತಿರುವ ಸಂಕೋಚನದ ಪರಿಣಾಮಗಳನ್ನು ಸರಿದೂಗಿಸಲು, ದುಡಿಯುವ ಜನರ ವರಮಾನದ ಸಂಕೋಚನವನ್ನು ನಿವಾರಿಸಲು ಮೋದಿ ಸರ್ಕಾರವು ಏನನ್ನೂ ಮಾಡಿಲ್ಲ. ಬಹುಶಃ ಅದು ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರು ಮಾರಾಟದ ಮೂಲಕ ವಿತ್ತೀಯ ಕೊರತೆಯ ಹಾದಿ ಹಿಡಿಯಬಹುದು. ಆದರೆ ಅದು ಬಂಡವಾಳದ ಕೇಂದ್ರೀಕರಣವನ್ನು ಮತ್ತು ಸಂಪತ್ತಿನ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಭಾರತದ ವಿರುದ್ಧ ಟ್ರಂಪ್ ಸುಂಕಗಳ ದಾಳಿಯು ನಿಸ್ಸಂದೇಹವಾಗಿ ಭಾರತದ ಅರ್ಥವ್ಯವಸ್ಥೆಯನ್ನು ಕುಗ್ಗಿಸುವ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ ವಿಧಿಸುತ್ತಿರುವ ಶೇ. 50ರ ಸುಂಕಗಳ ದರವನ್ನು ಟ್ರಂಪ್ ಒಂದು ವೇಳೆ ಒಂದಿಷ್ಟು ಮಟ್ಟಿಗೆ ಕಡಿತಗೊಳಿಸಿದರೂ ಸಹ, ಅದು ಅಮೆರಿಕದ ಕೃಷಿ ಸರಕುಗಳು ಮತ್ತು ಡೈರಿ ಉತ್ಪನ್ನಗಳ ಆಮದುಗಳ ಮೇಲಿನ ಸುಂಕಗಳನ್ನು ಭಾರತವು ಇಳಿಕೆ ಮಾಡುವುದರ ಪ್ರತಿಯಾಗಿ ಮಾತ್ರವೇ ಇರುತ್ತದೆ. ಇದರ ಅರ್ಥವೆಂದರೆ, ಅಮೆರಿಕದಿಂದ ಬರುವ ಆಮದುಗಳು ಹೆಚ್ಚುತ್ತವೆ. ಆದ್ದರಿಂದ ಭಾರತದಲ್ಲಿ ವರಮಾನಗಳು ಇಳಿಕೆಯಾಗುತ್ತವೆ. ಟ್ರಂಪ್ ಸುಂಕಗಳು ಉಂಟುಮಾಡುವ ಈ ಸಂಕೋಚನದ ಪರಿಣಾಮವನ್ನು ಸರಿದೂಗಿಸಲು ಭಾರತದ ಅರ್ಥವ್ಯವಸ್ಥೆಗೆ ಕೊಳ್ಳುವ ಶಕ್ತಿಯನ್ನು ಅಧಿಕವಾಗಿ ತುಂಬಬೇಕಾಗುತ್ತದೆ.
ಇದು ಸಂಭವನೀಯವಾಗಿ ಮೂರು ರೂಪಗಳಲ್ಲಿ ಒಂದನ್ನು ತೆಗೆದುಕೊಳ್ಳಬಹುದು: ಮೊದಲನೆಯದು, ವಿತ್ತೀಯ ಕೊರತೆಯ ಹೆಚ್ಚಳ. ಎರಡನೆಯದು, ಶ್ರೀಮಂತರ ಮೇಲೆ ಹೆಚ್ಚು ತೆರಿಗೆಗಳನ್ನು ಹೇರುವ ಮೂಲಕ ಸರ್ಕಾರದ ವೆಚ್ಚಗಳಿಗೆ ಹಣ ಒದಗಿಸಿಕೊಳ್ಳುವುದು (ಈ ಕ್ರಮವು ಅವರ ಖರ್ಚು ಮಾಡದ ಹಣವನ್ನು ಅಥವಾ ಅವರ ಕೆಲವು ಉಳಿತಾಯವನ್ನು ಸರ್ಕಾರದ ಖರ್ಚುಗಳಾಗಿ ಪರಿವರ್ತಿಸುತ್ತದೆ). ಮೂರನೆಯದು, ಸಾಲಗಳ-ಹಣದಿಂದ ಖಾಸಗಿ ಬಳಕೆ ವೆಚ್ಚಗಳ ಹೆಚ್ಚಳ (ಅಥವಾ, ಖಾಸಗಿ ಉಳಿತಾಯಗಳ ಅನುಪಾತದ ಇಳಿಕೆ).
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ವೈದ್ಯರು; ಆರೋಪ
ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳಲ್ಲಿಹೊಂದಾಣಿಕೆಯು ಅರ್ಥವ್ಯವಸ್ಥೆಯಲ್ಲಿ ಕೊಳ್ಳುವ ಶಕ್ತಿಯನ್ನೇನೂ ಹೆಚ್ಚಿಸುವುದಿಲ್ಲ. ಹಿಂದಿನ ನಾಲ್ಕು ದರಗಳಾದ ಶೇ.5, 12, 18 ಮತ್ತು 28ರ ಬದಲಿಗೆ ಶೇ. 5 ಮತ್ತು 18ರ ಕೇವಲ ಎರಡು ದರಗಳನ್ನು (ಈಗ ಶೇ. 40ರ ದಂಡದ ದರವನ್ನು ಆಕರ್ಷಿಸುವ ಕೆಲವು “ಪಾಪದ ಸರಕುಗಳನ್ನು” ಹೊರತುಪಡಿಸಿ) ಇಟ್ಟುಕೊಳ್ಳಲಾಗಿದೆ. ಈ ರಿಯಾಯಿತಿಗಳು ಗ್ರಾಹಕರಿಗೆ ತಲುಪಿದರೆ ಅವರ ಮೇಲಿನ ಒಟ್ಟಾರೆ ಹೊರೆಯು ನಿಜಕ್ಕೂ ಇಳಿಕೆಯಾಗುತ್ತದೆ.
ಆದರೆ, ಸರ್ಕಾರದ ಆದಾಯ ನಷ್ಟವು ವಿತ್ತೀಯ ಕೊರತೆಯ ಗಾತ್ರವನ್ನು ಹೆಚ್ಚಿಸುವುದರ ಬದಲಾಗಿ ಈ ನಷ್ಟಕ್ಕೆ ಅನುಗುಣವಾಗಿ ಸರ್ಕಾರದ ಖರ್ಚು ವೆಚ್ಚಗಳ ಕಡಿತಕ್ಕೆ ಕಾರಣವಾದರೆ, ಆಗ ಈ ಕ್ರಮದ ಮೂಲಕ ಅರ್ಥವ್ಯವಸ್ಥೆಯಲ್ಲಿ ಕೊಳ್ಳುವ ಶಕ್ತಿಯ ನಿವ್ವಳ ಹೆಚ್ಚಳ ಇರುವುದಿಲ್ಲ. ತೆರಿಗೆ ರಿಯಾಯಿತಿಗಳಿಂದಾಗಿ ಖಾಸಗಿ ಬಳಕೆಯ ಹೆಚ್ಚಳವು ಸರ್ಕಾರದ ವೆಚ್ಚಗಳ ಕಡಿತಕ್ಕೆ ಹೊಂದಿಕೆಯಾಗುತ್ತದೆ ಮತ್ತು ಒಟ್ಟು ಬೇಡಿಕೆಯ ಮಟ್ಟಕ್ಕೆ ಅಧಿಕವಾಗಿ ಏನೂ ಸೇರ್ಪಡೆಯಾಗುವುದಿಲ್ಲ. ಆದ್ದರಿಂದ, ಡೊನಾಲ್ಡ್ ಟ್ರಂಪ್ ಅವರ ಸುಂಕಗಳು ಅರ್ಥವ್ಯವಸ್ಥೆಯ ಒಟ್ಟು ಬೇಡಿಕೆಯ ಮೇಲೆ ವಿಧಿಸಿದ ಇಳಿಕೆಯನ್ನು ಈ ಸಂದರ್ಭದಲ್ಲಿ ಜಿಎಸ್ಟಿ ರಿಯಾಯಿತಿಗಳ ಮೂಲಕ ಸರಿದೂಗಿಸಲಾಗದು.
ಅದಕ್ಕಿಂತಲೂ ಮಿಗಿಲಾಗಿ, ಸರ್ಕಾರವು ಹೇಳುತ್ತಿರುವಂತೆ, ಜಿಎಸ್ಟಿ ದರಗಳ ಇಳಿಕೆಯಿಂದಾಗಿ ದುಡಿಯುವ ಜನರ ಒಟ್ಟು ಬಳಕೆಯು ಏರಿಕೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿಕೊಳ್ಳಲಾಗದು. ಈ ತೆರಿಗೆ ರಿಯಾಯಿತಿಗಳಿಂದಾಗಿ ಬಳಕೆಯು ಹೆಚ್ಚಾಗುವ ವಲಯಗಳಲ್ಲಿನ ಕೂಲಿ ವರಮಾನದ ಪಾಲು, ಆದಾಯ ನಷ್ಟದಿಂದಾಗಿ ಸರ್ಕಾರದ ಖರ್ಚು ವೆಚ್ಚಗಳನ್ನು ಕಡಿತಗೊಳಿಸಲಾಗುವ ವಲಯಗಳಲ್ಲಿನ ಕೂಲಿ ವರಮಾನಗಳ ಪಾಲಿಗೆ ಸರಿಸುಮಾರು ಸಮನಾಗಿದ್ದರೆ, ಆಗ ಸರ್ಕಾರದ ವಿತ್ತೀಯ ಕ್ರಮಗಳಿಂದಾಗಿ ಕಾರ್ಮಿಕರ (ಅಥವಾ ಸಾಮಾನ್ಯವಾಗಿ ದುಡಿಯುವ ಜನರ) ಒಟ್ಟು ಬಳಕೆಯು ಬದಲಾಗದೆ ಉಳಿಯುತ್ತದೆ. ಇದು ಖಂಡಿತವಾಗಿಯೂ ನಂಬಬಹುದಾದಅಂದಾಜು. ಏಕೆಂದರೆ ಸರ್ಕಾರದ ವೆಚ್ಚಗಳ ಕಡಿತವು ಮೂಲತಃ ದೊಡ್ಡ ಮೂಲಸೌಕರ್ಯದಲ್ಲಿರುತ್ತದೆ. ಈ ವಲಯವು ಹೆಚ್ಚು ಉದ್ಯೋಗ-ಸಾಂದ್ರವಾಗಿರುವುದರಿಂದ ಒಟ್ಟು ಉತ್ಪತ್ತಿಯಲ್ಲಿ ಕೂಲಿ ವರಮಾನದ ಪಾಲಿನಲ್ಲಿ ಹೆಚ್ಚು ಭಾಗವನ್ನು ಹೊಂದಿರುತ್ತದೆ.
ಇದರಅರ್ಥವೆಂದರೆ, ಡೊನಾಲ್ಡ್ ಟ್ರಂಪ್ ಸುಂಕಗಳ ಪರಿಣಾಮವಾಗಿ ದುಡಿಯುವ ಜನರ ವರಮಾನಗಳ ಇಳಿಕೆಯನ್ನು ಸರ್ಕಾರದ ವಿತ್ತೀಯ ಕ್ರಮಗಳಿಂದ ಅವರ ವರಮಾನವನ್ನುಏರಿಸುವುದರಿಂದಸರಿದೂಗಿಸಲಾಗುವುದಿಲ್ಲ. ಅಂದರೆ, ಸುಂಕಗಳು ಅವರ ವರಮಾನವನ್ನು ಎಷ್ಟರಮಟ್ಟಿಗೆಕೆಳಗಿಳಿಸುತ್ತವೋಅದೇಕೆಳ ಮಟ್ಟದಲ್ಲಿ ಬದಲಾಗದೆ ಅದು ಉಳಿದುಬಿಡುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಟ್ರಂಪ್ ಸುಂಕಗಳು ಭಾರತದ ಅರ್ಥವ್ಯವಸ್ಥೆಯ ಮೇಲೆ ತರುತ್ತಿರುವ ಸಂಕೋಚನದ ಪರಿಣಾಮಗಳನ್ನು ಸರಿದೂಗಿಸಲು ಮತ್ತು ದುಡಿಯುವ ಜನರ ವರಮಾನದ ಸಂಕೋಚನವನ್ನು ನಿವಾರಿಸಲು ಮೋದಿ ಸರ್ಕಾರವು ಏನನ್ನೂ ಮಾಡಿಲ್ಲ. ಜಿಎಸ್ಟಿ ರಿಯಾಯಿತಿಗಳನ್ನು ನೀಡಿದ ಕ್ರಮವು ದುಡಿಯುವ ಜನರ ಬಳಕೆಯನ್ನು ಹೆಚ್ಚಿಸುವಂತೆ ತೋರುತ್ತದೆಯಾದರೂ, ವಿತ್ತೀಯ ಕೊರತೆಯನ್ನು ಹೆಚ್ಚಿಸದ ಹೊರತು (ಅಥವಾ ಪರ್ಯಾಯವಾಗಿ, ಜಿಎಸ್ಟಿ ರಿಯಾಯಿತಿಗಳ ಮೂಲಕ ಉಂಟಾಗುವ ಆದಾಯದ ನಷ್ಟವನ್ನು ಶ್ರೀಮಂತರಿಂದ ಹೆಚ್ಚು ನೇರ ತೆರಿಗೆಗಳನ್ನು ಸಂಗ್ರಹಿಸುವ ಮೂಲಕ ಸರಿದೂಗಿಸದ ಹೊರತು), ಸರ್ಕಾರದ ಈ ರೀತಿಯ ವಿತ್ತೀಯ ಕ್ರಮಗಳಿಂದ ದುಡಿಯುವ ಜನರ ಒಟ್ಟು ಬಳಕೆಯು ವಾಸ್ತವವಾಗಿ ಬದಲಾಗದೆ ಉಳಿಯುತ್ತದೆ.
ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ?
ಟ್ರಂಪ್ ಸುಂಕಗಳು ಭಾರತದ ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡುವ ಸಂಕೋಚನದ ಪರಿಣಾಮಗಳನ್ನು ಮೋದಿ ಸರ್ಕಾರದ ವಿತ್ತೀಯ ಕ್ರಮಗಳು ಸ್ವಲ್ಪ ಮಟ್ಟಿಗೂ ಸರಿದೂಗಿಸಲಾಗುವುದಿಲ್ಲವಾದರೂ, ಸಾಲ-ಹಣಕಾಸಿನ ಹೆಚ್ಚಳ ಅಥವಾ ಉಳಿತಾಯಅನುಪಾತವನ್ನುಇಳಿಸಿಪಡೆವಹಣಕಾಸಿನ ಹೆಚ್ಚಳದ ಮೂಲಕ ಖಾಸಗಿ ಬಳಕೆ ವೆಚ್ಚಗಳು ಹೆಚ್ಚುವ ಬಗ್ಗೆ ಏನು ಹೇಳಬಹುದು? ಜಿಎಸ್ಟಿ ದರಗಳ ಹೊಂದಾಣಿಕೆಯ ಮೂಲಕ ಸರ್ಕಾರದ ಆದಾಯದಲ್ಲಿ ಉಂಟಾಗಬಹುದಾದ ನಷ್ಟದ ಬಗ್ಗೆ ಪತ್ರಿಕೆಗಳು ವರದಿಗಳಿಂದ ತುಂಬಿ ಹೋಗಿವೆ. ದರಗಳ ಇಳಿಕೆಯಿಂದಾಗಿ ಉಂಟಾಗುವ 93,000 ಕೋಟಿ ರೂ.ಗಳ ಒಟ್ಟು ಆದಾಯ ನಷ್ಟವನ್ನು “ಪಾಪದ ಸರಕುಗಳ” ಮೇಲೆ 45,000 ಕೋಟಿ ರೂ.ಗಳಷ್ಟು ತೆರಿಗೆಯನ್ನು ಹೆಚ್ಚಿಸುವ ಮೂಲಕ ಬರುವ ಲಾಭದಿಂದ ಹೊಂದಿಸಿಕೊಂಡ ನಂತರ ಒಂದು ಪೂರ್ಣ ವರ್ಷದಲ್ಲಿ 48,000 ಕೋಟಿ ರೂ.ಗಳ ಆದಾಯ ನಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಹೇಳುತ್ತದೆ.

ಮತ್ತೊಂದೆಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ಪೂರ್ಣ ವರ್ಷದಲ್ಲಿ 3,700 ಕೋಟಿ ರೂ.ಗಳ ನಷ್ಟವಾಗಬಹುದುಎನ್ನುತ್ತದೆ, ಏಕೆಂದರೆ. ತೆರಿಗೆ ಕಡಿತದಿಂದಾದ ಬೆಲೆಗಳ ಕುಸಿತವು ಬಳಕೆಯನ್ನು ಬಹಳವಾಗಿ ಉತ್ತೇಜಿಸುತ್ತದೆ; ಹಾಗಾಗಿ ತೆರಿಗೆ ದರಗಳ ಇಳಿಕೆಯ ಹೊರತಾಗಿಯೂ ಒಟ್ಟಾರೆಯಾಗಿ ಬರುವ ಆದಾಯವು ಸ್ವಲ್ಪ ಮಟ್ಟಿಗೆ ಮಾತ್ರ ಕಡಿಮೆಯಾಗಬಹುದು ಎಂಬುದು ಸ್ಟೇಟ್ ಬ್ಯಾಂಕ್ನ ಅಂದಾಜು. ಕ್ರೆಡಿಟ್-ರೇಟಿಂಗ್ ಏಜೆನ್ಸಿಗಳೂ ಸೇರಿದಂತೆ ವಿವಿಧ ಖಾಸಗಿ ಅಂದಾಜುಗಳು 1.2ರಿಂದ 1.5 ಲಕ್ಷ ಕೋಟಿ ರೂ.ಗಳ ವರೆಗೆ ಆದಾಯ ನಷ್ಟವಾಗಬಹುದುಎಂದು ಹೇಳುತ್ತವೆ. ಆದರೆ, ಈ ಅಂದಾಜುಗಳ ಹಿಂದೆಇರಲೇಬೇಕಾಗಿರುವ ಸೈದ್ಧಾಂತಿಕ ಆಧಾರಗಳನ್ನು ವಿವರಿಸಿಲ್ಲ.
ಜಿಎಸ್ಟಿ ದರ ಇಳಿಕೆಯಿಂದಾಗಿ ಬಳಕೆಯ ವೆಚ್ಚಗಳು ಅದೆಷ್ಟು ಹೆಚ್ಚುತ್ತವೆ ಎಂದರೆ, ಆದಾಯ ನಷ್ಟವು ಅಲ್ಪವೇ ಆಗಿರುತ್ತದೆ (ಕೆಳ ಮಟ್ಟದ ತೆರಿಗೆ ದರಗಳನ್ನು ಬಹು ದೊಡ್ಡ ಒಟ್ಟು ಮೊತ್ತಕ್ಕೆ ಅನ್ವಯಿಸುವುದರಿಂದ) ಎಂದು ಹೇಳುತ್ತಿರುವುದರಿಂದ, ಈ ಪ್ರಶ್ನೆ ಉದ್ಭವಿಸುತ್ತದೆ: ಬಳಕೆಯ ಮಟ್ಟವು ಏರಿಕೆಯಾಗುವಷ್ಟು ಮಟ್ಟಿಗಿನ ಕೊಳ್ಳುವ ಶಕ್ತಿ ಎಲ್ಲಿಂದ ಬರುತ್ತದೆ? ತಳ-ಮಟ್ಟದ ಬಳಕೆಯ ಮೇಲಿನ ತೆರಿಗೆ ರಿಯಾಯಿತಿಗಳು 100 ರೂಗಳಿಷ್ಟಿದ್ದರೆ, ತಳ-ಮಟ್ಟದ ಮೇಲೆ 100 ರೂಗಳಿಗಿಂತಲೂ ಮೇಲಿನ ಬಳಕೆಯ ಹೆಚ್ಚಳ ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಂತಹ ಒಂದು ಸಂದರ್ಭದಲ್ಲಿ ಆದಾಯ ನಷ್ಟವು 100 ರೂ ಇರುತ್ತದೆ, ಒಂದು ಪೈಸೆಯೂ ಕಡಿಮೆಯಾಗುವುದಿಲ್ಲ. ಆದರೆ, 100 ರೂಗಳ ತೆರಿಗೆ ರಿಯಾಯಿತಿಗಳ ಕಾರಣದಿಂದಾಗಿ ತಳ-ಮಟ್ಟದ ಬಳಕೆ ವೆಚ್ಚಗಳ ಮೇಲೆ 200 ರೂಗಳ ಬಳಕೆ ವೆಚ್ಚಗಳ ಏರಿಕೆ ಆಗಿರುತ್ತದೆ ಎಂದು ಹೇಳಿದರೆ, ವಾಸ್ತವ ಆದಾಯ ನಷ್ಟವು ತಳ-ಮಟ್ಟದ ಬಳಕೆಯ ಮೇಲಿನ ತೆರಿಗೆ ರಿಯಾಯಿತಿಗಳಿಗಿಂತಲೂ ಕಡಿಮೆ ಇರುತ್ತದೆ.
ಆಗ 100 ರೂಗಳ ಅಧಿಕ ಕೊಳ್ಳುವ ಶಕ್ತಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ತೆರಿಗೆ ರಿಯಾಯಿತಿಗಳು ಗ್ರಾಹಕರನ್ನು ಎಷ್ಟರಮಟ್ಟಿಗೆ ಉತ್ಸುಕರನ್ನಾಗಿ ಮಾಡುತ್ತದೆ ಎಂದರೆ ಅವರು ಬಳಕೆಯನ್ನು ಹೆಚ್ಚಿಸಲು ತಮ್ಮ ಉಳಿತಾಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಅಥವಾ ಸಾಲ ತೆಗೆದುಕೊಳ್ಳುತ್ತಾರೆ ಎಂದು ಹೇಳಬಹುದು. ಇದನ್ನು ಒಂದು ಕ್ಷಣ ಒಪ್ಪಿಕೊಂಡರೂ ಸಹ, ಗ್ರಾಹಕ ಸರಕುಗಳು ಅಗ್ಗವಾಗಿರುವುದರ ಲಾಭ ಪಡೆಯಲು ದುಡಿಯುವ ಜನರನ್ನು ಸಾಲಕ್ಕೆ ಅರ್ಹರೆಂದು ಪರಿಗಣಿಸಲಾಗುವುದಿಲ್ಲ ಅಥವಾ ಅವರು ಹೆಚ್ಚಿನ ಮಟ್ಟದ ಉಳಿತಾಯವನ್ನು ಹೊಂದಿರುವುದಿಲ್ಲ ಎಂಬುದಂತೂ ಸತ್ಯ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬಳಕೆಗೆ ಉತ್ತೇಜನ ಎಂದು ಕರೆಯಲ್ಪಡುವ ಈ ಉತ್ತೇಜನವು ದುಡಿಯುವ ಜನರಿಂದ ಬರುತ್ತದೆ ಎಂದು ನಿರೀಕ್ಷಿಸಲಾಗದು.
ತಾತ್ಕಾಲಿಕಉತ್ತೇಜನೆ
ತೆರಿಗೆ ಕಡಿತದಿಂದಾಗಿ ಸರಕುಗಳು ಸ್ವಲ್ಪ ಅಗ್ಗವಾಗುತ್ತಿರುವುದನ್ನು ಇದ್ದಕ್ಕಿದ್ದಂತೆ ಕಂಡುಕೊಂಡ ಸಂಬಳದಾರರೂ ಸೇರಿದಂತೆ ಮಧ್ಯಮ ವರ್ಗದ ಗ್ರಾಹಕರು ಬಹುಶಃ ಸಾಲ ಪಡೆಯುವ ಮೂಲಕ (ಅಥವಾ ಉಳಿತಾಯವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ) ಹೆಚ್ಚು ಸರಕುಗಳನ್ನು ಖರೀದಿಸಬಹುದು. ಅಂತಹ ಒಂದು ಸಂದರ್ಭದಲ್ಲಿಯೂ ಸಹ ಈ ಉತ್ತೇಜನವು ತಾತ್ಕಾಲಿಕವಾಗಿರುತ್ತದೆ. ಸಾಲವನ್ನು ಮರುಪಾವತಿಸುವ ಸಮಯ ಬಂದಾಗ (ಅಥವಾ ಅವರು ಪಾವತಿಸಲು ಒಪ್ಪಿಕೊಂಡ ಸಮಾನ ಮಾಸಿಕ ಕಂತುಗಳು ಬಾಕಿ ಇರುವಾಗ) ಅವರು ತಮ್ಮ ಬಳಕೆಯನ್ನು ಕಡಿತಗೊಳಿಸಬೇಕಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಲ ಆಧಾರಿತ ಬಳಕೆಯ ಹೆಚ್ಚಳವು ನೀಡುವ ಉತ್ತೇಜನವು ತಾತ್ಕಾಲಿಕ ಮಾತ್ರವಲ್ಲದೆ, ಅರ್ಥಶಾಸ್ತ್ರಜ್ಞ ಜೋಸೆಫ್ ಶುಂಪೀಟರ್ “ಸ್ವಯಂ-ಹಣದುಬ್ಬರವಿಳಿತ” ಎಂದು ಕರೆದ ಪ್ರಕ್ರಿಯೆಯ ಮೂಲಕ ನಿರರ್ಥಕಗೊಳ್ಳುತ್ತದೆ. ಮೇಲೆ ತಿಳಿಸಿದ ಮೂರನೆಯಮಾರ್ಗದ ಮೂಲಕ ಅರ್ಥವ್ಯವಸ್ಥೆಗೆ ಕೊಳ್ಳುವ ಶಕ್ತಿಯನ್ನು ತುಂಬುವ ಕಾರ್ಯವು ಕ್ಷಣಿಕವಾಗಿರುತ್ತದೆ ಮತ್ತು ಸ್ವಯಂ-ನಿರರ್ಥಕಗೊಳ್ಳುತ್ತದೆ.
ಆದ್ದರಿಂದ, ಡೊನಾಲ್ಡ್ ಟ್ರಂಪ್ ಅವರ ಸುಂಕದ ದಾಳಿಯಿಂದ ಭಾರತದ ಅರ್ಥವ್ಯವಸ್ಥೆಯ ಮೇಲೆ ಉಂಟಾಗುವ ಸಂಕೋಚನದ ಪರಿಣಾಮಗಳನ್ನು ಎದುರಿಸಲು ಮೋದಿ ಸರ್ಕಾರವು ಏನನ್ನೂ ಮಾಡಿಲ್ಲ ಎಂಬುದು ತಿಳಿದುಬರುತ್ತದೆ. ಅಡ್ಡ ಪರಿಣಾಮಗಳಿಗೆ ಒಳಗಾದ ಕಿರು ಉತ್ಪಾದಕರಿಗೆ ಹಣಕಾಸಿನ ಸಬ್ಸಿಡಿಗಳನ್ನು ಒದಗಿಸುವ ಮತ್ತು ಅದನ್ನು ಶ್ರೀಮಂತರ ಮೇಲೆ ಹೆಚ್ಚು ತೆರಿಗೆಗಳನ್ನು ಹೇರುವ ಮೂಲಕ (ಬಹುಶಃ ಸಂಪತ್ತು ತೆರಿಗೆಯೂ ಸೇರಿದಂತೆ) ಅವರಿಗೆ ಪಾವತಿಸುವ ಸ್ಪಷ್ಟ ಕ್ರಮವನ್ನೂ ಸಹ ಅದು ಅಳವಡಿಸಿಕೊಂಡಿಲ್ಲ. ಅದು ಘೋಷಣೆ ಮಾಡಿದ ಜಿಎಸ್ಟಿ ರಿಯಾಯಿತಿಗಳೇ ಸ್ವತಃ ಬಳಕೆಯನ್ನು ಹೆಚ್ಚಿಸುವುದಿಲ್ಲ ಮತ್ತು ಆ ಮೂಲಕ ಟ್ರಂಪ್ರ ಕ್ರಮಗಳನ್ನು ಎದುರಿಸುವಂತಾಗಲು ಅರ್ಥವ್ಯವಸ್ಥೆಗೆ ಯಾವ ಉತ್ತೇಜನವನ್ನೂ ಒದಗಿಸುವುದಿಲ್ಲ, ಏಕೆಂದರೆ ಅವು ಕೊಳ್ಳುವ ಶಕ್ತಿಯನ್ನು ತುಂಬುವಂತವುಗಳಲ್ಲ.
ಇದನ್ನೂ ನೋಡಿ: ನಾಟಕ | “ಪ್ಲಾಸ್ಟಿಕ್ ಅಸುರ” Janashakthi Media
ಮೋದಿ ಸರ್ಕಾರವು ಹಿಡಿಯಬಹುದಾದಬಹುಶಃ ಪ್ರಜ್ಞಾಪೂರ್ವಕವಾಗಿಸಂಕೋಚನ-ವಿರೋಧಿಕ್ರಮವಾಗಿರದಒಂದುದಾರಿಯಿದೆ. ಇದು ಆಳುವ ವರ್ಗಗಳ ಎಲ್ಲಾ ವಿಭಾಗಗಳ ಅನುಮೋದನೆಪಡೆಯಬಹುದಾದದ್ದು. ಅದೆಂದರೆ,ಸಾರ್ವಜನಿಕ ವಲಯದ ಬ್ಯಾಂಕ್ಗಳ ಷೇರುಗಳ/ಇಕ್ವಿಟಿಯ ಮಾರಾಟದಿಂದವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವುದು, ನಿಜ,ಇದೊಂದುವಿತ್ತೀಯಕೊರತೆಹೆಚ್ಚಿಸುವಕ್ರಮಎಂದುಗುರುತಿಸಲ್ಪಟ್ಟಿಲ್ಲ. ಆದರೆಯಾವುದೇ ಅವಧಿಯಲ್ಲಿಯೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವು ಬೃಹತ್ ವಿತ್ತೀಯ ಕೊರತೆಯು ಉಂಟುಮಾಡುವಂತಹ ಸ್ಥೂಲ ಆರ್ಥಿಕ ಪರಿಣಾಮವನ್ನೇ ಉಂಟುಮಾಡುತ್ತದೆ: ಖಾಸಗೀಕರಣವು ಸರ್ಕಾರದ ಇಕ್ವಿಟಿಯನ್ನು ಖಾಸಗಿಯವರ ಕೈಯಲ್ಲಿ ಇರಿಸಿದರೆ, ವಿತ್ತೀಯ ಕೊರತೆಯು ಸರ್ಕಾರಿ ಬಾಂಡ್ಗಳನ್ನು ಖಾಸಗಿಯವರ ಕೈಯಲ್ಲಿ ಇರಿಸುತ್ತದೆ. ಈ ಎರಡೂ ಕ್ರಮಗಳು ಬಹುತೇಕ ಒಂದೇ ರೀತಿಯ ಪರಿಣಾಮಗಳನ್ನು ಬೀರುತ್ತವೆ.
ಆದರೆ, ಸಂಪೂರ್ಣವಾಗಿ ಹುಸಿಯಾದ ಮತ್ತು ಅಪ್ರಾಮಾಣಿಕ ಕಾರಣಗಳಿಗಾಗಿ, ಐಎಂಎಫ್ ಮತ್ತು ಜಾಗತಿಕ ಹಣಕಾಸು ಬಂಡವಾಳದ ಇತರ ಸಂಸ್ಥೆಗಳು ಈ ಸರಳ ಮತ್ತು ಸ್ಪಷ್ಟ ವಿದ್ಯಮಾನವನ್ನು ಗುರುತಿಸುವುದಿಲ್ಲ ಮಾತ್ರವಲ್ಲ, ವಿತ್ತೀಯ ಕೊರತೆಯನ್ನು ವಿರೋಧಿಸುತ್ತವೆ ಮತ್ತು ಖಾಸಗೀಕರಣವನ್ನು ಬಯಸುತ್ತವೆ. ಮೋದಿ ಸರ್ಕಾರವು ಸಾರ್ವಜನಿಕ ವಲಯದ ಸ್ವತ್ತುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಜಾಗತೀಕರಣಗೊಂಡ ಹಣಕಾಸು ಬಂಡವಾಳವನ್ನು ಮತ್ತು ದೇಶೀಯ ದೊಡ್ಡ ದೊಡ್ಡ ವ್ಯಾಪಾರೋದ್ಯಮಿಗಳನ್ನು ಸಂತುಷ್ಟಗೊಳಿಸುತ್ತದೆ. ಖಾಸಗೀಕರಣದ ಮೂಲಕ ಪಡೆದ ಆದಾಯದಿಂದ ಕೈಗೊಂಡ ವೆಚ್ಚಗಳು, ಈ ಆದಾಯವು ಕೊರತೆ ಹಣಕಾಸಿಗಿಂತ ಭಿನ್ನವಾಗಿರದ ಕಾರಣ, ಅರ್ಥವ್ಯವಸ್ಥೆಯ ಮೇಲೆ ಕೆಲವು ಸಂಕೋಚನ-ವಿರೋಧಿ ಪರಿಣಾಮವನ್ನು ಅನುದ್ದಿಶ್ಯವಾಗಿ ಬೀರುತ್ತವೆ. ಆದರೆಇಂಥಹ ಖಾಸಗೀಕರಣವು ಬಂಡವಾಳದ ಕೇಂದ್ರೀಕರಣವನ್ನು ಮತ್ತು ಬೆಳೆಯುತ್ತಿರುವ ಸಂಪತ್ತಿನ ಅಸಮಾನತೆಯನ್ನು ಮತ್ತಷ್ಟು ತ್ವರಿತಗೊಳಿಸುತ್ತದೆ.

ಜಿಎಸ್ಟಿ
-ಆಗ ‘ಬಚಾವೋ’
-ಈಗ ‘ಬಚತ್ ಉತ್ಸವ್’
ವ್ಯಂಗ್ಯಚಿತ್ರ: ಸತೀಶ ಆಚಾರ್ಯ
