ಭೈರಪ್ಪ ಆರೆಸ್ಸೆಸ್ ಅಜೆಂಡಾಗಳು, ಪ್ರಶ್ನೆಗಳನ್ನು ಇಟ್ಟುಕೊಂಡು ಕಾದಂಬರಿಗಳನ್ನು ಬರೆಯುತ್ತಿದ್ದರೆ? : ಜಿ.ಎನ್.‌ ನಾಗರಾಜ 

ಒಂದು ಕಾಲದಲ್ಲಿ ನಾನು ಭೈರಪ್ಪನವರ ಅಭಿಮಾನಿ. ಆಗ ತಾನೇ ನಾನು ಹೈಸ್ಕೂಲಿನಿಂದ ಪಿಯುಸಿಗೆ, ಅನಕೃ, ತರಾಸು, ಕೊರಟಿಯಂತಹವರ ಕಾದಂಬರಿಗಳ ಓದಿನಿಂದ ಭೈರಪ್ಪನವರ ಕಾದಂಬರಿ ಓದಿಗೆ ಪ್ರೊಮೋಷನ್ ತೆಗೆದುಕೊಂಡಿದ್ದೆ. ಅವರ ವಂಶವೃಕ್ಷ , ಗೃಹಭಂಗ, ದೂರ ಸರಿದರು ಕಾದಂಬರಿಗಳ ಬಗ್ಗೆ ಗೆಳೆಯರ ಜೊತೆಗೆ ಮಾತಾಡುತ್ತಿದ್ದೆ. ಕೃಷಿ ಕಾಲೇಜಿನ ನಾವು ಕೆಲ ಗೆಳೆಯರು ಸೇರಿ ರೂಪಿಸಿಕೊಂಡಿದ್ದ ಸಾಹಿತ್ಯ ವೃಂದ ಮತ್ತು ಇಂತಹ ಎರಡು ಮೂರು ಸಾಹಿತ್ಯ ಚರ್ಚಾಕೂಟಗಳಲ್ಲಿ ಅವರ ಕಾದಂಬರಿಗಳ ಬಗ್ಗೆ ಭಾಷಣ ಮಾಡಿದ್ದೆ.
ಜಿ.ಎನ್.‌ ನಾಗರಾಜ 

ಅನಕೃ, ತರಾಸು ಕಾದಂಬರಿಗಳ ತೆಳು ಸುಪರ್‌ಫಿಷಿಯಾಲಿಟಿಗೆ ಹೋಲಿಸಿದರೆ ಇವರ ಕಾದಂಬರಿಗಳ ಆಳ, ಸಂಕೀರ್ಣತೆ ನನ್ನನ್ನು ಆಕರ್ಷೀಸಿತ್ತು. ನಂತರ ಕಾರಂತರ ಕಾದಂಬರಿಗಳನ್ನು ಓದಲಾರಂಭಿಸಿದ ಮೇಲೆ ಈ ಮೋಹ ಅಳಿಯಿತಾದರೂ ಹೊಸದಾಗಿ ಪ್ರಕಟವಾದ ಅವರ ಕಾದಂಬರಿಗಳನ್ನು ಓದುತ್ತಿದ್ದೆ. ಇದು ಧರ್ಮ ಶ್ರೀ ಎಂಬ ಕಾದಂಬರಿ ಓದುವವರೆಗೂ ಮುಂದುವರಿಯಿತು. ಈ ಕಾದಂಬರಿ ನನಗೆ ವಾಕರಿಕೆ ತರಿಸಿತು. ಇವರು ಇಂತಹ ಕಾದಂಬರಿಯನ್ನೂ ಬರೆದಿದ್ದಾರಲ್ಲಾ, ಅಮಾನವೀಯತೆಯನ್ನು ಧರ್ಮ ಶ್ರೀ ಎಂದು ಪರಿಗಣಿಸಿದಿದ್ದಾರಲ್ಲ ಎಂದು. ಸಾಹಿತಿ

ನಾನು ಅವರು ಮೊದಲು ಒಳ್ಳೆಯ ಸತ್ವಯುತ ಕಾದಂಬರಿಗಳನ್ನು ಬರೆದು ನಂತರ ಈ ದಾರಿಗೆ ತಿರುಗಿದ್ದಾರೆ ಎಂದುಕೊಂಡಿದ್ದೆ. ಆದರೆ ನಂತರ ಅವರು ವಂಶವೃಕ್ಷ ಬರೆದ ಸಮಯದಲ್ಲಿಯೇ ಈ ಕಾದಂಬರಿಯನ್ನೂ ಬರೆದಿದ್ದಾರೆ ಎಂದು ಗಮನಿಸಿ ಮತ್ತಷ್ಟು ಖೇದವೆನಿಸಿತು. ಸಾಹಿತಿ

ಇದನ್ನೂ ಓದಿ: ಬೆಂಗಳೂರು | ಅರೆಕಾಲಿಕ ಕಾನೂನು ಸ್ವಯಂ ಸೇವಕರನ್ನು ನೇಮಿಸಲು ಕಾನೂನು ಸೇವಗಳ ಪ್ರಾಧಿಕಾರ ತೀರ್ಮಾನ

ಆನಂತರ ಅವರ ಕಾದಂಬರಿಗಳ ಹೂರಣವನ್ನು ಎಚ್ಚರದಿಂದ ಗಮನಿಸುತ್ತಾ ಬಂದೆ. ಧರ್ಮ ಶ್ರೀ, ತಬ್ಬಲಿಯು ನೀನಾದೆ ಮಗನೆ, ದಾಟು, ಪರ್ವ ಕವಲು,ಆವರಣ ಇಂತಹ ಕಾದಂಬರಿಗಳು. ಯಾವ ಯಾವ ಕಾಲದಲ್ಲಿ ಯಾವ ವಿಷಯಗಳ ಬಗ್ಗೆ ಕಾದಂಬರಿ ಬರೆದಿದ್ದಾರೆ ಎಂದು ಗಮನಿಸಿದರೆ ಅವೆಲ್ಲ ಆಯಾ ಕಾಲದಲ್ಲಿ ಆರೆಸ್ಸೆಸ್ ಕೈಗೆತ್ತಿಕೊಂಡ ಅಜೆಂಡಾಗಳು, ಯಾವ ಪ್ರಶ್ನೆಗಳನ್ನು ಎತ್ತಿಕೊಂಡು ಘೋರ ಗಲಭೆಗಳನ್ನು ಸೃಷ್ಟಿಸುತ್ತಿತ್ತೋ ಅದೇ ವಿಷಯಗಳನ್ನು ಇಟ್ಟುಕೊಂಡು ಕಾದಂಬರಿಗಳನ್ನು ಬರೆಯುತ್ತಿದ್ದರು. ಆ ಕಾದಂಬರಿಗಳಲ್ಲಿ ಕೆಲವು ಜನಪ್ರಿಯವೂ ಆಗುತ್ತಿದ್ದವು. ಸಾಹಿತಿ

ಉದಾಹರಣೆಗೆ ಗೋಹತ್ಯೆ ಪ್ರಶ್ನೆಯ ಮೇಲೆ ಗಲಭೆ ಎಬ್ಬಿಸುತ್ತಿದ್ದ ಸಮಯದಲ್ಲಿ ತಬ್ಬಲಿಯು ನೀನಾದೆ ಮಗನೆ, ಮೀಸಲಾತಿ ವಿರೋಧಿ ಭಾವನೆ ಬಡಿದೆಬ್ಬಿಸಲು ದಾಟು, ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಇಲ್ಲದ ನೆಲೆ ಕಲ್ಪಿಸಲು ಆವರಣ, ಪ್ರಗತಿಪರ ಮಹಿಳೆಯರನ್ನು ಕೀಳ್ಗಳೆಯಲು ಹಲವು ಕಾದಂಬರಿಗಳು ಹೀಗೆ.

ಈ ಅಂಶವನ್ನು ಗಮನಿಸಿದಾಗ ನಾನು ಬಹಳಷ್ಟು ಆರೆಸ್ಸೆಸ್ ಕಾರ್ಯಕರ್ತರಾಗಿದ್ದವರ ಅನುಭವಗಳನ್ನು ಬರೆದ ಪುಸ್ತಕಗಳ ನೆನಪು ಬಂತು. ಆರೆಸ್ಸೆಸ್‌ನಲ್ಲಿ ವಿವಿಧ ಸ್ಥಾನಗಳಲ್ಲಿ ಇರುವವರ ವಿಶೇಷ ಸೆಲ್‌ಗಳನ್ನು ಮಾಡುತ್ತಾರೆ, ಐಎಎಸ್ ಅಧಿಕಾರಿಗಳು, ಪತ್ರಕರ್ತರು, ವಿವಿ ಪ್ರಾಧ್ಯಾಪಕರು, ಶಿಕ್ಷಕರು ಇತ್ಯಾದಿ ವೃತ್ತಿಗಳ ಸೆಲ್. ಅವುಗಳಲ್ಲಿ ಬಹಳ ಮುಂದಾಲೋಚನೆಯಿಂದ ಆರೆಸ್ಸೆಸ್‌ನ ಅಜೆಂಡಾಕ್ಕೆ ಯಾರು ಯಾವ ಸಮಯದಲ್ಲಿ ಏನು ಮಾಡಬೇಕು ಎಂದು ಚರ್ಚಿಸಿ ನಿಯೋಜಿಸಲಾಗುತ್ತದೆ ಎಂದು. ಇಂತಹುದೇ ಒಂದು ಸೆಲ್‌ನಿಂದ ಭೈರಪ್ಪನವರಿಗೆ ಸೂಚನೆ ಸಿಗುತ್ತಿತ್ತೇ ಎಂಬ ಬಲವಾದ ಅನುಮಾನ ನನಗೆ.

ಹಾಗೆ ಅವರು ಆಗಾಗ್ಗೆ ನೀಡುತ್ತಿದ್ದ ವಿಕೃತ ಜನದ್ರೋಹಿ ಹೇಳಿಕೆಗಳು ಕೂಡಾ ಅವರದೇ ಸ್ವಂತದ್ದಾ ಅಥವಾ… ಗೊತ್ತಿಲ್ಲ. ಅಷ್ಟೇ ಅಲ್ಲ, ಅವರ ಕಾದಂಬರಿಗಳು ಕನ್ನಡಕ್ಕಿಂತ ಹೆಚ್ಚು ಪ್ರತಿ ಮಾರಾಟವಾಗಿರುವುದು ಹಿಂದಿ, ಮರಾಠಿ ಅನುವಾದಗಳಲ್ಲಿ. ಎಲ್ಲಿ ಆರೆಸ್ಸೆಸ್ ಬೆಳವಣಿಗೆ, ಬಿಜೆಪಿ ಅಧಿಕಾರ ಕಣ್ಣಿಗೆ ಕಾಣುತ್ತದೋ ಅಲ್ಲೆಲ್ಲಾ ಇವರ ಓದುಗರು ವಿಪುಲವಾಗಿದ್ದಾರೆ.

ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಸೇರಿದಂತೆ ದೊರಕಿದ ಕೆಲವು ಗೌರವಗಳು ಬಿಜೆಪಿ ಸರ್ಕಾರಗಳು ಹಾಗೂ ಮೋದಿ ಸರ್ಕಾರದ ಅವಧಿಯಲ್ಲಿ ಎಂಬುದು ಅವರ ಗೌರವಕ್ಕೊಂದು ಕಳಂಕ.

ಅವರ ನಿಧನದ ಸಮಯದಲ್ಲಿ ಅಂತಹುದೇ ಆರೆಸ್ಸೆಸ್ ಅಜೆಂಡಾದ ಭಾಗವಾಗಿರುವ ಸಿದ್ಧ ಪ್ರಸಿದ್ಧರು ಹಲವರು ಭೈರಪ್ಪನವರ ತುತ್ತೂರಿ ಊದುತ್ತಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗದಂತೆ ಮಾಡಿಬಿಟ್ಟರಲ್ಲಾ ಎಂದು ಹಳಹಳಿಸುತ್ತಿದ್ದಾರೆ.

ನನ್ನ ಒಂದು ಕಾಲದ ಅಭಿಮಾನಕ್ಕೆ ಪಾತ್ರರಾಗಿದ್ದ ಭೈರಪ್ಪನವರಿಗೆ ಅಂತಿಮ ಅಂಜಲಿಗಳು.

ಇದನ್ನೂ ನೋಡಿ: ಸಂಸ್ಕೃತಿ ಕಮಾಡಿಟಿ ಆಗ್ತಿದೆ. ಡಾ. ಸಿದ್ದನಗೌಡ ಪಾಟೀಲ Janashakthi Media

Donate Janashakthi Media

Leave a Reply

Your email address will not be published. Required fields are marked *