ಬ್ರಹ್ಮಾಂಡ ಗುರೂಜಿ ಅಲಿಯಾಸ್‌ ನರೇಂದ್ರ ಬಾಬು ವಿರುದ್ದ ದೂರು‌ ದಾಖಲು

ಬೆಂಗಳೂರು: ಮಹಾಲಯ ಅಮಾವಾಸ್ಯೆಯ ದಿನ ಪಿತೃಗಳಿಗೆ ಇಟ್ಟಿದ್ದ ಪಿಂಡವನ್ನು ವಿಶೇಷ ಚೇತನರಿಗೆ ಹಾಗೂ ಭಿಕ್ಷುಕರಿಗೆ ನೀಡಿ ಎಂದು ಹೇಳಿದ್ ಬೃಹತ್‌ ಬ್ರಹ್ಮಾಂಡ ಗುರೂಜಿ ಅಲಿಯಾಸ್‌ ನರೇಂದ್ರ ಬಾಬು ವಿರುದ್ದ ಪೊಲೀಸ್‌ ಠಾಣೆಯಲ್ಲಿ ಸೆಪ್ಟೆಂಬರ್. 22 ರಂದು ದೂರು ದಾಖಲಾಗಿದೆ.

ವಿಶೇಷ ಚೇತನರೊಬ್ಬರು ಈ ಕುರಿತು ದೂರು ದಾಖಲಿಸಿದ್ದು, ಖಾಸಗಿ ಚಾನಲ್‌ ಹಾಗೂ ಗುರೂಜಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್. 21 ರಂದು ಖಾಸಗಿ ಚಾನಲ್‌ ಒಂದರಲ್ಲಿ ಬ್ರಹ್ಮಾಂಡ ಗುರೂಜಿ ಎಂದೇ ಪ್ರಸಿದ್ದರಾಗಿರುವ ನರೇಂದ್ರ ಬಾಬು ಶರ್ಮ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ಪಿತೃಪಕ್ಷದಲ್ಲಿ ಮಾಡಬೇಕಾದ ವಿಧಿವಿಧಾನಗಳ ಬಗ್ಗೆ ವಿವರಣೆ ನೀಡುತ್ತಾ, ಮೃತಪಟ್ಟವರಿಗೆ ಇಡುವ ಎಡೆಯನ್ನು ಮನೆಯವರು ಅಥವಾ ಬೇರೆಯವರು ತಿನ್ನ ಬಾರದು. ಅದನ್ನು ಕುರೂಪಿಗಳಿಗೆ , ಭಿಕ್ಷುಕರಿಗೆ ಹಾಗೂ ಅಂಗವಿಕಲರಿಗೆ ನೀಡಬೇಕೆಂದು ಸಲಹೆ ನೀಡಿದ್ದರು. ಈ ವಿವರಣೆ ಹಲವರಲ್ಲಿ ಆಕ್ರೋಶ ಉಂಟುಮಾಡಿತ್ತು.

ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಮರುಪರಿಶೀಲಿಸುವಂತೆ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲ ಪತ್ರ

ಹರೀಶ್‌ ಎಂಬ ವಿಶೇಷ ಚೇತರೊಬ್ಬರು ಠಾಣೆಗೆ ತೆರಳಿ, ಹುಟ್ಟಿನಿಂದ ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದೇನೆ. ಮೃತಪಟ್ಟವರಿಗೆ ಇಡುವ ಪಿಂಡವನ್ನು ನಮ್ಮಂಥವರಿಗೆ ನೀಡಿ ಎಂದು ಹೇಳುವ ಮೂಲಕ ಗುರೂಜಿ ಎಂದು ಹೇಳಿಕೊಳ್ಳುವ ಈ ವ್ಯಕ್ತಿ ನಮಗೆ ಅವಮಾನವೆಸಗಿದ್ದಾನೆ. ಈತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಿಸಿದ್ದಾರೆ.

ಹರೀಶ್‌ ನೀಡಿರುವ ದೂರಿನ ಆಧಾರದ ಮೇರೆಗೆ ಎನ್‌ಸಿಆರ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ನರೇಂದ್ರ ಬಾಬು ಹಾಗೂ ಖಾಸಗಿ ಚಾನಲ್‌ ಗೆ ನೋಟಿಸ್‌ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಸಹ ನರೇಂದ್ರ ಬಾಬು ಈ ರೀತಿ ಹಲವು ವಿವಾದಾಸ್ಪದ ಹೇಳಿಕೆಗಳನ್ನು ನೀಡಿ ಕುಖ್ಯಾತಿ ಗಳಿಸಿದ್ದರು. ಬೆಳಗ್ಗೆ ಎದ್ದ ತಕ್ಷಣ ಸವಿತಾ ಸಮಾಜದವರ ಮುಖ ನೋಡಬಾರದು. ಅದು ದರಿದ್ರ ಎಂದು ಹೇಳಿಕೆ ನೀಡಿದ್ದರು. ಇದರಿಂದ ರಾಜ್ಯಾದ್ಯಂತ ಸವಿತಾ ಸಮಾಜದ ಬಂಧುಗಳು ಗುರೂಜಿ ವಿರುದ್ದ ಪ್ರತಿಭಟನೆ ನಡೆಸಿದ್ದರು. ಬಳಿಕ ನರೇಂದ್ರ ಬಾಬು ಶರ್ಮಾ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದರು.

ಮಾತು ಮಾತಿಗೆ ಮುಂಡೇದೇ, ಹಾಳಾಗಿ ಹೋಗ್ತೀರಾ ಎಂದೆಲ್ಲಾ ಶುಭಾಶೀರ್ವಾದಗಳನ್ನು ನೀಡುವ ಬ್ರಹ್ಮಾಂಡ ಗಾತ್ರದ ನರೇಂದ್ರ ಬಾಬು ವಿರುದ್ದ ಈ ರೀತಿಯ ಹಲವು ಆರೋಪಗಳು ಇವೆಯಾದರೂ ಇದುವರೆಗೂ ಈತ ತನ್ನ ವರ್ತನೆ ಬದಲಿಸಿಕೊಂಡಿಲ್ಲ. ಇದೇ ರೀತಿಯ ಹಾಸ್ಯಾಸ್ಪದ ವರ್ತನೆಯಿಂದ ಒಮ್ಮೆ ಬಿಗ್‌ ಬಾಸ್‌ ಕಿರುತೆರೆ ಕಾರ್ಯಕ್ರಮಕ್ಕೂ ಸಹ ಆಯ್ಕೆಯಾಗಿದ್ದರು.

ಇದನ್ನೂ ನೋಡಿ: ಬ್ಯಾಂಕ್ ನೌಕರರಿಗೆ ಜೀವನವನ್ನು ಮುಡಿಪಾಗಿಟ್ಟದ್ದ ರತ್ನಾಕರ್ ಶೆಣೈ Janashakthi Media

Donate Janashakthi Media

Leave a Reply

Your email address will not be published. Required fields are marked *