ಮದ್ದೂರ | ಸೆ.22ಕ್ಕೆ ಸೌಹಾರ್ದ – ಸಾಮರಸ್ಯ ನಡಿಗೆ

ಮದ್ದೂರ : ಇತ್ತೀಚಿಗೆ ಮದ್ದೂರಿನಲ್ಲಿ ಸಂಭವಿಸಿದ ಗಲಭೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ನಡುವೆ ಸೌಹಾರ್ದತೆ, ಸಾಮರಸ್ಯ ಬೆಳೆಸಲು ಪರಸ್ಪರ ವಿಶ್ವಾಸದಿಂದ ಸಹಬಾಳ್ವೆ ನಡೆಸಲು ಮನವಿ ಮಾಡಲು ಸೌಹಾರ್ದ – ಸಾಮರಸ್ಯ ನಡಿಗೆ ನಡೆಸಲು ತೀರ್ಮಾನಿಸಲಾಗಿದೆ.

ಜನಪರ ಸಂಘಟನೆಗಳ ಮುಂದಾಳತ್ವದಲ್ಲಿ ದಿನಾಂಕ: 22.09. 2025 ರ ಸೋಮವಾರ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿನ ಬುದ್ಧಿಜೀವಿಗಳು, ಬರಹಗಾರರು ಮತ್ತು ಹೋರಾಟಗಾರರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 10.30ಕ್ಕೆ ಟಿ.ಬಿ. ವೃತ್ತದಲ್ಲಿರುವ ರೈತ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರ ಪ್ರತಿಮೆಯ ಬಳಿಯಿಂದ ಆರಂಭಗೊಳ್ಳುವ ನಡಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಐತಿಹಾಸಿಕ ಶಿವಪುರ ಧ್ವಜ ಸತ್ಯಾಗ್ರಹದ ಬಳಿ ಸಮಾವೇಶಗೊಳ್ಳಲಿದೆ.

ಇದನ್ನೂ ಓದಿ : ಬೆಂಗಳೂರು | ಸಂಚಾರ ದಟ್ಟಣೆ, ರಸ್ತೆಗುಂಡಿ : ಬ್ಲ್ಯಾಕ್‌ಬಕ್ ಕಂಪನಿ ಬೆಳ್ಳಂದೂರು ದಿಂದ ಕಾಡುಬೀಸನಹಳ್ಳಿಯ ಸ್ಥಳಾಂತರ

ವಿಸ್ತಾರವಾಗುತ್ತ ಹೋಗುವುದು ಜೀವನ, ಸಂಕುಚಿತಗೊಳ್ಳುತ್ತ ಸಾಗುವುದು ಸಾವು; ಪ್ರೀತಿಯೇ ಜೀವನ, ದ್ವೇಷವೇ ಸಾವು ಎಂದರು ಮಹಾನ್ ಸಂತ ವಿವೇಕಾನಂದರು. ಆದರೆ ಈಗ ಆಗುತ್ತಿರುವುದೇನು? ಮತೀಯ ಶಕ್ತಿಗಳು ತಾವೂ ಸಂಕುಚಿತಗೊಳ್ಳುತ್ತ, ಜನರನ್ನೂ ಸಂಕುಚಿತಗೊಳಿಸುತ್ತಾ ಸಮೂಹ ನಾಶದೆಡೆಗೆ ಮನುಕುಲವನ್ನು ಕೊಂಡೊಯ್ಯುತ್ತಿದ್ದಾರೆ…

ಎಲ್ಲಾ ಧರ್ಮದ, ಜಾತಿಯ ಜನ ಸೇರಿ ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ತ್ರಿವರ್ಣ ಧ್ವಜ ಹಾರಿಸಿ ಐಕ್ಯತೆ ಮೆರೆದು ವಸಾಹತುಶಾಹಿಗಳ ದಬ್ಬಾಳಿಕೆ ಮತ್ತು ಕುತಂತ್ರಗಳನ್ನು ಸೋಲಿಸಿದ ಮದ್ದೂರಿನಲ್ಲಿ ಈಗ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ತೂರಿದ ಕಲ್ಲೊಂದು ಕಿಡಿಯಾಗಿ, ಕಾಡ್ಗಿಚ್ಚಾಗಿ ಮನೆ, ಮನಗಳನ್ನು ಸುಡುತ್ತಿದೆ. ಜೊತೆಯಾಗೇ ಉಟ್ಟ, ಉಂಡ, ಆಟವಾಡಿ ಬದುಕಿದ ಜೀವಗಳು ಪರಸ್ಪರ ಅನುಮಾನದಿಂದ ನೋಡುವ, ದ್ವೇಷಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳನ್ನು ಕ್ರಿಮಿನಲ್‌ಗಳಾಗಿ ನೋಡುವ ಬದಲು ಅವರನ್ನು ಒಂದು ಧರ್ಮದ ವಾರಸುದಾರರನ್ನಾಗಿ ಮಾಡುವ ಆ ಮೂಲಕ ಒಂದಿಡೀ ಧರ್ಮದ ಜನರನ್ನೇ ಕ್ರಿಮಿನಲ್‌ಗಳಾಗಿ ಬಿಂಬಿಸುವ ಕ್ಷುಲ್ಲಕ ರಾಜಕಾರಣ ಮೆರೆಯುತ್ತಿದೆ.

ಆದರೆ ಮದ್ದೂರಿನ ನೆಲ ಅಷ್ಟು ಸುಲಭಕ್ಕೆ ಇಂತಹುದಕ್ಕೆ ಬಲಿಯಾಗುವುದಿಲ್ಲ. ಬಲಿಯಾಗಲು ಬಿಡಲೂ ಬಾರದು. ಒಕ್ಕಲಿಗರ ಹೊಟ್ಟೆಯಲ್ಲಿ ಹುಟ್ಟಿ ವಿಶ್ವಮಾನವನಾದ ಕುವೆಂಪು ನಮಗೆ ಆದರ್ಶವಾಗಿದ್ದಾರೆ. ಹಿಂದೂ ಧರ್ಮದ ಮಹಾನ್ ಚೇತನ ವಿವೇಕಾನಂದರ ಆದರ್ಶಗಳು ನಮ್ಮ ಮುಂದಿವೆ. ಕಂದಾಚಾರಗಳನ್ನು ಕಿತ್ತೆಸೆದ ಬಸವಣ್ಣ, ಕುಲದ ನೆಲೆಯನ್ನೇ ಪ್ರಶ್ನಿಸಿದ ಕನಕದಾಸ ನಮ್ಮ ಮುಂದಿನ ಕಂದೀಲುಗಳಾಗಿದ್ದಾರೆ. ಆದರೆ ಮತೀಯ ಶಕ್ತಿಗಳು ಕಂದೀಲು ಬೆಳಕನ್ನು ನುಂಗಿ ನೊಣೆದು ಕತ್ತಲ ಲೋಕವನ್ನು ಸೃಷ್ಟಿಸಲು ಪಣತೊಟ್ಟು ನಿಂತಿದ್ದಾರೆ.

ಆದ್ದರಿಂದ ನಾಗರೀಕರಾದ ನಮ್ಮ ಜವಾಬ್ದಾರಿ ಅಪಾರವಾಗಿದೆ. ಯಾವುದೇ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವ ಕ್ರಿಮಿನಲ್‌ಗಳನ್ನು ಕ್ರಿಮಿನಲ್‌ಗಳಾಗಿಯೇ ನೋಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ನೀಡಿರುವ ಕಾನೂನಿನ ವ್ಯಾಪ್ತಿಯಲ್ಲಿ ಕ್ರಿಮಿನಲ್‌ಗಳಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕ್ರಿಮಿನಲ್‌ಗಳನ್ನು ಒಂದು ಧರ್ಮಕ್ಕೆ ಆರೋಪಿಸುವುದು ಕ್ರಿಮಿನಲ್‌ಗಳನ್ನು ರಕ್ಷಿಸುವ ಉದ್ದೇಶವೇ ಆಗಿದೆ. ಆದ್ದರಿಂದ ಇಂತಹ ಹುನ್ನಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.
ಮದ್ದೂರಿನ ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯವನ್ನು ಉಳಿಸಿಕೊಳ್ಳಲು ವಿವೇಕಾನಂದರು ಹೇಳಿದಂತೆ ಪ್ರೀತಿಯೇ ಜೀವನ, ದ್ವೇಷವೇ ಸಾವು ಎಂಬುದನ್ನು ಮನಗಾಣಿಸಲು, ಆ ಮೂಲಕ ಇಡೀ ನಾಡಿಗೆ ಪ್ರೀತಿ ಹಂಚಲು ಈ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆದ್ದರಿಂದ ನಾಗರೀಕರು, ಸಂಘ ಸಂಸ್ಥೆಗಳು, ವಿದ್ಯಾರ್ಥಿ ಯುವಜನ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ.

ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು | ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ SIT ಶೋಧ; ಮಾನವನ ಅವಶೇಷಗಳು ಪತ್ತೆ! Janashakthi Media

Donate Janashakthi Media

Leave a Reply

Your email address will not be published. Required fields are marked *