ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗೆ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ
ಡಿಜಿಟಲ್ ಭಾರತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಪೈಕಿ ಯುವ ಸಮೂಹದ ನಿರುದ್ಯೋಗ ಸರ್ಕಾರವನ್ನೂ, ನಾಗರಿಕರನ್ನೂ ಕಾಡುತ್ತಿರುವ ಜಟಿಲ ಸಮಸ್ಯೆ. 2024ರ ಅಧಿಕೃತ ವರದಿಯೊಂದರ ಅನುಸಾರ ಸೆಕಂಡರಿ ಹಂತದವರೆಗೆ ವಿದ್ಯಾರ್ಜನೆ ಪೂರೈಸಿರುವ ಯುವ ಸಮುದಾಯದಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 18.4ರಷ್ಟಿದೆ. ಪದವೀಧರರಲ್ಲಿ ಇದು ಶೇಕಡಾ 29.1ರಷ್ಟಿರುವುದು ಶೋಚನೀಯ ಅಂಶ. ಓದು ಬರಹ ಅರಿಯದ ಜನಸಂಖ್ಯೆಗೆ ಹೋಲಿಸಿದರೆ, ಈ ದರಗಳು ಕ್ರಮವಾಗಿ ಆರು ಪಟ್ಟು ಮತ್ತು ಒಂಬತ್ತು ಪಟ್ಟು ಹೆಚ್ಚಾಗಿದೆ. ಅಂದರೆ ವಿದ್ಯಾಭ್ಯಾಸ ಪೂರೈಸಿರುವ ಅಥವಾ ಕೌಟುಂಬಿಕ ಕಾರಣಗಳಿಂದ ವಿದ್ಯಾಭ್ಯಾಸ ತ್ಯಜಿಸಿರುವ ಯುವ ಸಮೂಹದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಇದು ವಿಡಂಬನೆಯಾಗಿ ಕಂಡರೂ ವಾಸ್ತವ.
-ನಾ ದಿವಾಕರ
2014ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕೇಂದ್ರ ಬಿಜೆಪಿ-ಎನ್ಡಿಎ ಸರ್ಕಾರದ ಘೋಷ ವಾಕ್ಯ ಇರುವುದು ನಿರುದ್ಯೋಗ ನಿವಾರಣೆ ಅಥವಾ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ. ಈ ದೃಷ್ಟಿಯಿಂದಲೇ ಅಗ್ನಿವೀರ್ನಂತಹ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡಿರುವುದಲ್ಲದೆ, ಉದ್ಯೋಗಕ್ಕಾಗಿ ಹಂಬಲಿಸದೆ ಯುವ ಸಮೂಹ ಸ್ವಾವಲಂಬಿಯಾಗಲು ಸ್ಟಾರ್ಟ್ ಅಪ್ ಔದ್ಯಮಿಕ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯವಾಗಲೀ, ಆದ್ಯತೆಯಾಗಲೀ ಅಲ್ಲ ಎಂಬ ನವ ಉದಾರವಾದದ ಮಾರುಕಟ್ಟೆ ಮಂತ್ರವನ್ನೇ ಭಾರತದ ಸರ್ಕಾರಗಳೂ ಅನುಸರಿಸುತ್ತಿದ್ದರೂ, ಭಾರತದ ಸನ್ನಿವೇಶದಲ್ಲಿ ಇದು ಕಾರ್ಯಸಾಧ್ಯವಾಗುವುದಿಲ್ಲ ಎನ್ನುವುದು ಈ ವೇಳೆಗಾಗಲೇ ಅರಿವಾಗಿರಬಹುದು.
ಇಂಟರ್ನ್ಷಿಪ್ ಯೋಜನೆಯ ಸ್ವರೂಪ
ಈ ದೃಷ್ಟಿಯಿಂದಲೇ 2024ರ ಬಜೆಟ್ನಲ್ಲಿ ಕೆಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ನೀಗಿಸುವ ಸಲುವಾಗಿ, ಕೈಗಾರಿಕೆಗಳಲ್ಲಿ ಉದ್ಯೋಗಾರ್ಹತೆ ಪಡೆಯಲು ನೆರವಾಗಬಹುದಾದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿಗೊಳಿಸಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ, ಇಂಟರ್ನ್ಷಿಪ್ ಯೋಜನೆ, ದೇಶದ ವಿದ್ಯಾವಂತ ಯುವಜನತೆಗೆ ಉತ್ತಮ ಉದ್ಯೋಗಗಳನ್ನು ಪಡೆಯುವ ನಿಟ್ಟಿನಲ್ಲಿ ಬಹಳ ನಿರೀಕ್ಷೆಗಳನ್ನೂ ಹುಟ್ಟುಹಾಕಿತ್ತು. ಆದರೆ ಈ ಯೋಜನೆಯು ಮೂಲತಃ ಉದ್ಯೋಗದ ಗ್ಯಾರಂಟಿ ನೀಡುವುದಿಲ್ಲ ಎಂದು ವಿತ್ತಸಚಿವರು “ಈ ಯೋಜನೆಯ ಮೂಲ ಉದ್ದೇಶ ಉದ್ಯೋಗಗಳನ್ನು ಒದಗಿಸುವುದಲ್ಲ, ಬದಲಾಗಿ ಮಾರುಕಟ್ಟೆಯಲ್ಲಿರಬಹುದಾದ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಯುವ ಸಮೂಹವು ಮಾರುಕಟ್ಟೆಗೆ ತೆರೆದುಕೊಳ್ಳುವಂತೆ ಮಾಡುವುದು ಆಗಿರುತ್ತದೆ. ಈ ದೃಷ್ಟಿಯಿಂದಲೇ ಯುವ ಸಮೂಹಕ್ಕೆ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ ” ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ನೀರಾವರಿಗೆ 7000 ಕೋಟಿ ರೂ. ಅನುದಾನ: ಸಿಎಂ ಸಿದ್ದರಾಮಯ್ಯ
ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕ/ಯುವತಿಯರಿಗೆ ದೇಶದ ಅತ್ಯುನ್ನತ 500 ಉದ್ಯಮಗಳಲ್ಲಿ ಇಂಟರ್ನ್ಷಿಪ್ ತರಬೇತಿ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಂಪನಿಗಳು ವಿಶಾಲ ವ್ಯಾಪ್ತಿಯ ಎಲ್ಲ ಆಯಾಮಗಳನ್ನೂ ಒಳಗೊಂಡಿದ್ದು ಆಟೋಮೊಬೈಲ್, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಬ್ಯಾಂಕಿಂಗ್, ಹಣಕಾಸು, ಮಾರಾಟ ಕ್ಷೇತ್ರ, ಮಾರುಕಟ್ಟೆ ಮತ್ತಿತರ ವಲಯಗಳನ್ನೂ ಒಳಗೊಳ್ಳುವುದು ಯೋಜನೆಯ ಉದ್ದೇಶಗಳಲ್ಲೊಂದಾಗಿತ್ತು. 12 ತಿಂಗಳ ಕಾಲ ನೀಡಲಾಗುವ ಈ ಇಂಟರ್ನ್ಷಿಪ್ ಯೋಜನೆಯಲ್ಲಿ ಕನಿಷ್ಠ 10ನೆ ತರಗತಿಯನ್ನು ಪೂರೈಸಿರುವ 21 ರಿಂದ 24ರ ವಯೋಮಾನದ ಯುವ ಸಮೂಹಕ್ಕೆ ಅವಕಾಶ ಇರುತ್ತದೆ. ಈ ಅಭ್ಯರ್ಥಿಗಳಿಗೆ ಪೂರ್ಣಾವಧಿಯ ಶೈಕ್ಷಣಿಕ ಯೋಜನೆಯಲ್ಲಾಗಲೀ, ಪೂರ್ಣಾವಧಿ ನೌಕರಿಯಲ್ಲಾಗಲೀ ಅವಕಾಶ ಇರುವುದಿಲ್ಲ. ಹಾಗೆಯೇ ಇವರ ಕುಟುಂಬದ ಆದಾಯ ವರ್ಷಕ್ಕೆ 8 ಲಕ್ಷ ರೂಗಳ ಒಳಗೆ ಇರಬೇಕು. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ಐಐಟಿ ಮತ್ತಿತರ ಮುಂದುವರೆದ ಪದವಿ ಗಳಿಸಿದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
ಯೋಜನೆಯ ಪರಿಣಾಮ-ಫಲಿತಾಂಶಗಳು
ಈ ಇಂಟರ್ನ್ಷಿಪ್ ಅಭ್ಯರ್ಥಿಗಳಿಗೆ ನೀಡುವ ಸ್ಟೈಫಂಡ್ ಮಾಹೆಯಾನ 5,000 ರೂಗಳಾಗಿದ್ದು, ಇದರಲ್ಲಿ ಸರ್ಕಾರದಿಂದ 4,500 ರೂ, ಕಂಪನಿಯಿಂದ 500 ರೂಗಳನ್ನು ಭರಿಸಲಾಗುತ್ತದೆ. ಪ್ರವೇಶದ ಹಂತದಲ್ಲಿ ಒಂದೇ ಕಂತಿನಲ್ಲಿ 6,000 ರೂಗಳನ್ನು ನೀಡಲಾಗುತ್ತದೆ. 2024ರ ಅಕ್ಟೋಬರ್ನಲ್ಲಿ ಆರಂಭವಾದ ಯೋಜನೆಯ ಮೊದಲ ಹಂತದಲ್ಲಿ 745 ಜಿಲ್ಲೆಗಳ 280 ಕಂಪನಿಗಳು ಜಾಹೀರಾತು ನೀಡಿ 1.27 ಲಕ್ಷ ಇಂಟರ್ನ್ಷಿಪ್ ಅವಕಾಶಗಳನ್ನು ಒದಗಿಸಿದ್ದವು. ಎರಡನೆ ಹಂತವು 2025ರ ಜನವರಿಯಲ್ಲಿ ಜಾರಿಯಾಗಿದ್ದು 327 ಕಂಪನಿಗಳು 1.18 ಲಕ್ಷ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದವು. ಮೊದಲನೆ ಹಂತದಲ್ಲಿ ಭರ್ತಿಯಾಗದ ಸ್ಥಾನಗಳನ್ನು ಎರಡನೆ ಹಂತದಲ್ಲಿ ಒಳಗೊಳ್ಳಲಾಗಿತ್ತು. ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಬಿತ್ತರಿಸುವ ಸಾಮಾಜಿಕ ಮಾಧ್ಯಮಗಳ ಮತ್ತು ಅಂತರ್ಜಾಲಗಳ ಚಿತ್ರಗಳಲ್ಲಿ, ಈ ಯೋಜನೆಯಿಂದ ತೇರ್ಗಡೆಯಾಗಿ ಹೊರಬಂದ ಅಭ್ಯರ್ಥಿಗಳನ್ನು ಬಿಂಬಿಸಲಾಗುತ್ತದೆ.

ಅಲ್ಪಾವಧಿಯ ವಿಡಿಯೋಗಳ ಮೂಲಕ ಕೆಲವು ಅಭ್ಯರ್ಥಿಗಳು ಈ ಯೋಜನೆಯಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ಮಾತನಾಡಿದ್ದಾರೆ. ಸಹಜವಾಗಿ ಈ ಅವಕಾಶ ಕಲ್ಪಿಸಿದ ಸರ್ಕಾರಕ್ಕೆ ಕೃತಜ್ಞತೆಗಳನ್ನೂ ಸಲ್ಲಿಸುತ್ತಾರೆ. ಆದರೆ ಈ ಯೋಜನೆಗೆ ಸ್ಪಂದಿಸಿರುವ ಯುವ ಸಮೂಹದ ಸಂಖ್ಯೆ, ಆಶಾದಾಯಕವಾಗಿಲ್ಲ. ಮೊದಲನೆ ಹಂತದಲ್ಲಿ 60 ಸಾವಿರ ಅಭ್ಯರ್ಥಿಗಳಿಗೆ ಅವಕಾಶಗಳನ್ನು ನೀಡಲಾಗಿತ್ತು. ಕಂಪನಿಗಳು ಅನೇಕರನ್ನು ಸೂಕ್ತವಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಈ 60 ಸಾವಿರ ಅಭ್ಯರ್ಥಿಗಳ ಪೈಕಿ ಇಂಟರ್ನ್ಷಿಪ್ ತರಬೇತಿಗೆ ಸೇರ್ಪಡೆಯಾದವರು ಕೇವಲ 8,700 ಮಾತ್ರ. ಎರಡನೆ ಹಂತದಲ್ಲಿ 2.14 ಅರ್ಜಿದಾರರು ಇದ್ದರೂ, 72 ಸಾವಿರ ಅಭ್ಯರ್ಥಿಗಳಿಗೆ ಅವಕಾಶ ಒದಗಿಸಲಾಗಿತ್ತು ಆದರೆ ಸೇರ್ಪಡೆಯಾದವರು ಕೇವಲ 23 ಸಾವಿರ ಮಾತ್ರ.
ಈ ನಿರಾಶಾದಾಯಕ ಫಲಿತಾಂಶಕ್ಕೆ ತಜ್ಞರು ಮತ್ತು ಯುವ ಸಬಲೀಕರಣ-ಉದ್ಯೋಗ ವಲಯದ ಕಾರ್ಯಕರ್ತರು ಹಲವು ಕಾರಣಗಳನ್ನು ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುದು, 21-24ರ ವಯೋಮಾನದ ಯುವಜನತೆ ಸಾಮಾನ್ಯವಾಗಿ ವಿದ್ಯಾಭ್ಯಾಸ ಪೂರೈಸಿ ಉದ್ಯೋಗವನ್ನು ಅರಸುತ್ತಿರುತ್ತಾರೆ. ಹಾಗಾಗಿ ಉದ್ಯೋಗ ಖಾತರಿ ನೀಡದ ಇಂಟರ್ನ್ಷಿಪ್ ಯೋಜನೆಯಲ್ಲಿ ಆಸಕ್ತಿ ತೋರುವುದಿಲ್ಲ. ಉದಾಹರಣೆಗೆ ಎರಡನೆ ಹಂತದಲ್ಲಿ ತಮಿಳುನಾಡು ಮತ್ತು ಮಹಾರಾಷ್ಟ್ರದ ಕಂಪನಿಗಳು ತಲಾ 15 ಸಾವಿರಕ್ಕೂ ಹೆಚ್ಚು ಇಂಟರ್ನ್ಷಿಪ್ ಅವಕಾಶಗಳನ್ನು ಒದಗಿಸಿದ್ದವು. ಗುಜರಾತ್ 11 ಸಾವಿರ, ಕರ್ನಾಟಕ 10 ಸಾವಿರ ಅವಕಾಶಗಳನ್ನು ಕಲ್ಪಿಸಿದ್ದವು. ಆದರೆ ಮಹಾರಾಷ್ಟ್ರವನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ದಾಖಲಾಗಿರುವುದು ಕೇವಲ 300 ಅಭ್ಯರ್ಥಿಗಳು. ಅತಿ ಹೆಚ್ಚಿನ ಅಭ್ಯರ್ಥಿಗಳು ದಾಖಲಾಗಿರುವುದು ಅಸ್ಸಾಂ 1,408, ಉತ್ತರಪ್ರದೇಶ 1,067, ಬಿಹಾರ 634, ಒಡಿಷಾ 420 ಮತ್ತು ಕೇರಳ 516 ಈ ರಾಜ್ಯಗಳಲ್ಲಿ.
ವಾಸ್ತವಿಕ ನೆಲೆಯ ಸಮಸ್ಯೆಗಳು
ಎಸ್ ಪಿ ಜೈನ್ ಇನ್ಸ್ಟಿಟ್ಯೂಟ್ ಆಫ್ ಮೇನೇಜ್ಮೆಂಟ್ ಆಂಡ್ ರಿಸರ್ಚ್ ಸಂಸ್ಥೆಯ ಸಂಶೋಧಕ ಪ್ರಾಧ್ಯಾಪಕ ತನೋಜ್ ಮೇಶರಾಮ್, ಸ್ಟೈಫಂಡ್ ಮೊತ್ತವು ಬಹಳ ಕಡಿಮೆಯಾಗಿರುವುದರಿಂದ, ಬೇರೆ ಯಾವುದೇ ಪರ್ಯಾಯ ಇಲ್ಲದ ಯುವಜನರು ಮಾತ್ರ ಈ ಯೋಜನೆಗೆ ನೋಂದಾಯಿಸಿಕೊಳ್ಳುತ್ತಾರೆ, ಅಸ್ಸಾಂನಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅಲ್ಲಿ ಹೆಚ್ಚಿನ ನೋಂದಣಿ ಕಂಡುಬರುತ್ತದೆ ಎಂದು ಹೇಳುತ್ತಾರೆ. ಇದಕ್ಕೆ ಇತರ ಕಾರಣಗಳೂ ಸಾಕಷ್ಟಿವೆ. ಕೆಲವು ತರಬೇತಿ ಪಡೆದ ಅಭ್ಯರ್ಥಿಗಳ ಅನುಸಾರ ತರಬೇತಿಯು ತೃಪ್ತಿಕರವಾಗಿರುವುದಿಲ್ಲ. ಒಂದು ಕಂಪನಿಯು ಕೇವಲ ಏಳು ದಿನಗಳು ಮಾತ್ರ ತರಬೇತಿ ನೀಡಿರುವುದನ್ನು ಅಭ್ಯರ್ಥಿಯೊಬ್ಬರು ಉಲ್ಲೇಖಿಸುತ್ತಾರೆ. ಅಷ್ಟೇ ಅಲ್ಲದೆ ತರಬೇತಿಯು ಪ್ರಾಥಮಿಕ ಸ್ವರೂಪದ್ದಾಗಿದ್ದು, ಅಪೇಕ್ಷಿತ ಕೌಶಲಗಳನ್ನು ಪರಿಚಯಿಸುವುದಷ್ಟೇ ಆಗುತ್ತದೆ ಎಂದೂ ಹೇಳುತ್ತಾರೆ. ಇಂಟರ್ನ್ಷಿಪ್ ಅವಧಿಯಲ್ಲಿ ತಮಗೆ ಹೆಚ್ಚಿನ ಕೆಲಸ ಕೊಡುವುದಿಲ್ಲ, ಸಾಫ್ಟ್ವೇರ್ ಕಲಿತು ಬಂದಿರುವವರಿಗೆ ಇದು ಪುನರಾವರ್ತನೆಯಾಗುತ್ತದೆ ಎಂಬ ಆಕ್ಷೇಪಗಳೂ ಕೇಳಿಬರುತ್ತವೆ.
ವಾಸ್ತವ ಅನುಭವದ ಹಿನ್ನೆಲೆಯಲ್ಲಿ ನೋಡಿದಾಗ ಅಭ್ಯರ್ಥಿಗಳಿಗೆ ಪ್ರವೇಶದ ಸಂದರ್ಭದಲ್ಲಿ ನೀಡುವ 6,000 ರೂ ಮತ್ತು ಮಾಸಿಕ 5,000 ರೂಗಳು, ಅವರ ನಿರ್ವಹಣೆಗೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. ಕೆಲವೊಮ್ಮೆ ಹಲವು ಕಿಲೋಮೀಟರ್ಗಳಿಗೂ ಹೆಚ್ಚು ದೂರದ ಕಂಪನಿಗಳಿಗೆ ಪ್ರಯಾಣ ಮಾಡಬೇಕಾಗುತ್ತದೆ. ಸಾರಿಗೆ ವೆಚ್ಚ, ಊಟ ತಿಂಡಿಯ ವೆಚ್ಚ ಮತ್ತು ಮೊಬೈಲ್ ಮತ್ತಿತರ ಸೇವೆಗಳ ಖರ್ಚುಗಳನ್ನು ನಿಭಾಯಿಸುವುದು ದುಸ್ತರವಾಗುತ್ತದೆ. ಕಂಪನಿ ಇರುವ ಸ್ಥಳದಲ್ಲೇ ತಂಗುವುದಾದರೆ, ಬಾಡಿಗೆ ಇತರ ವೆಚ್ಚಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಬಡಕುಟುಂಬಗಳಿಂದ ಬಂದವರಿಗೆ ಈ ಇಂಟರ್ನ್ಷಿಪ್ ಯೋಜನೆಯು ಅತ್ಮವಿಶ್ವಾಸವನ್ನು ಉಂಟುಮಾಡಲು ನೆರವಾಗುವುದಾದರೂ, ತರಬೇತಿಯ ಅವಧಿ ಪೂರೈಸಿದ ನಂತರ ಈ ಅಭ್ಯರ್ಥಿಗಳು ಕಲಿತಿರುವ ವಿಷಯಗಳ ಬಗ್ಗೆ ಸಂದರ್ಶನಗಳನ್ನು ಎದುರಿಸಬೇಕಾಗುತ್ತದೆ. ಇವರಿಗೆ ಸೂಕ್ತವಾದ ಉದ್ಯೋಗ ಇರುವ ಕಂಪನಿಗಳಲ್ಲಿ ಮಾತ್ರ ಅವಕಾಶ ಗಳಿಸಲು ಸಾಧ್ಯವಾಗುತ್ತದೆ.
ಇದನ್ನೂ ನೋಡಿ: ಕಾನೂನು ಅರಿವು | ಮಕ್ಕಳ ಕಸ್ಟಡಿ ಮತ್ತು ಪಾಲನೆ ಕಾನೂನುಗಳು | ಜನಶಕ್ತಿ ಮೀಡಿಯಾ, ಧ್ವನಿ ಲೀಗಲ್ ಟ್ರಸ್ಟ್
ವಯೋಮಿತಿಯನ್ನು 18 ವರ್ಷಗಳಿಗೆ ನಿಗದಿಪಡಿಸುವುದರಿಂದ ಹೆಚ್ಚಿನ ಯುವಜನತೆಗೆ ಉಪಯೋಗವಾಗುತ್ತದೆ ಎಂಬ ಅಭಿಪ್ರಾಯವನ್ನೂ ತಜ್ಞರು ವ್ಯಕ್ತಪಡಿಸುತ್ತಾರೆ. ಹಾಗೆಯೇ ಸ್ಟೈಫಂಡ್ ಮೊತ್ತ ಅತಿ ಕಡಿಮೆ ಇರುವುದರಿಂದ, ಅವರಿಗೆ ಯಾವುದೂ ವಸತಿ ಸೌಲಭ್ಯ ನೀಡದೆ ಹೋದರೆ, ಅವರ ಕುಟುಂಬದ ಆರ್ಥಿಕ ಸ್ಥಿತಿಗತಿಗಳು ನಿರ್ಣಾಯಕವಾಗುತ್ತವೆ. ಅಭ್ಯರ್ಥಿಗಳ ಮನೆಗೆ ಹತ್ತಿರ ಇರುವ ಕಂಪನಿಗಳಲ್ಲೇ ಇಂಟರ್ನ್ಷಿಪ್ ದೊರೆತರೆ ಕೊಂಚಮಟ್ಟಿಗೆ ಕುಟುಂಬದ ಹೊರೆ ಕಡಿಮೆಯಾಗುತ್ತದೆ ಎಂದೂ ತಜ್ಞರು ಹೇಳುತ್ತಾರೆ. ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಈ ಯೋಜನೆಯಡಿ ಇಂಟರ್ನ್ಷಿಪ್ ಪಡೆಯುವ ಯುವ ಜನರ ಕಲಿಕಾವಧಿ ಮತ್ತು ಇತರ ಸಮಸ್ಯೆಗಳ ಮೇಲ್ವಿಚಾರಣೆ ನಡೆಸುವ ಯಾವುದೇ ಕಾರ್ಯತಂತ್ರವನ್ನು ಸರ್ಕಾರ ರೂಪಿಸಿಲ್ಲ. ಇಂಟರ್ನ್ಷಿಪ್ ಮುಗಿದ ನಂತರವೂ ಅಭ್ಯರ್ಥಿಯ ಪಾಡು ಏನಾಗುತ್ತದೆ ಎಂದು ವಿಚಾರಿಸುವ ಯಾವುದೇ ಕಾರ್ಯಯೋಜನೆ ರೂಪಿಸಲಾಗಿಲ್ಲ.
ಕಂಪನಿಗಳು ಇಂಟರ್ನ್ಷಿಪ್ ಒದಗಿಸಲು ಸರ್ಕಾರ ಕಡ್ಡಾಯ ಮಾಡಲಾಗಲೀ, ಒತ್ತಡ ಹೇರಲಾಗಲೀ ಸಾಧ್ಯವಿಲ್ಲವಾದರೂ, ಈ ಕಂಪನಿಗಳು ತಾವು ತರಬೇತಿ ನೀಡಿದ ಅಭ್ಯರ್ಥಿಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿಯನ್ನು ಒದಗಿಸುವ ಒಂದು ಯೋಜನೆಯೂ ಸದ್ಯದಲ್ಲಿ ಜಾರಿಯಲ್ಲಿಲ್ಲ. ಒಂದು ವರ್ಷ ಇಂಟರ್ನ್ಷಿಪ್ ಪೂರೈಸಿದ ನಂತರವೂ ಎಲ್ಲಿಯೂ ಉದ್ಯೋಗ ದೊರೆಯದೆ ಹೋದರೆ ಯುವಜನರು ಹತಾಶೆಗೊಳಗಾಗುವುದು ಸಹಜ. ಕೆಲವು ಸಂದರ್ಭಗಳಲ್ಲಿ ಕಂಪನಿಗಳೇ ನಡೆಸುವ ಉದ್ಯೋಗ ಮೇಳಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಗಳು ಇನ್ನೂ ಹೆಚ್ಚಿನ ಸ್ಟೈಫಂಡ್ ನೀಡುತ್ತವೆ. ಸಹಜವಾಗಿಯೇ ಯುವ ಸಮೂಹ ಅಂತಹ ಕಂಪನಿಗಳಿಂದ ಆಕರ್ಷಿತರಾಗುತ್ತಾರೆ. ಬೆಂಗಳೂರು, ಚೆನ್ನೈ ಮುಂತಾದ ನಗರಗಳಲ್ಲಿ ಈ ಯೋಜನೆಯಡಿ ಪ್ರವೇಶ ಪಡೆದರೂ, ಸರ್ಕಾರ ಒದಗಿಸುವ ಸ್ಟೈಫಂಡ್ ಮೊತ್ತವು ಅಭ್ಯರ್ಥಿಗಳ ಜೀವನ ನಿರ್ವಹಣೆಗೆ ಸಮರ್ಪಕವಾಗಿರುವುದಿಲ್ಲ.
ಭವಿಷ್ಯದ ಚಿಂತೆಯಲ್ಲಿ ಯುವಸಮೂಹ
ಇಂಟರ್ನ್ಷಿಪ್ ಮುಗಿದ ಮೇಲೆ ಅಭ್ಯರ್ಥಿಗಳು ಕಲಿತ ಕೌಶಲಗಳಿಗೆ ಸೂಕ್ತವಾದ ನೌಕರಿ ದೊರೆಯದೆ ಹೋದರೆ, ಒಂದು ವರ್ಷದ ಕಲಿಕೆ ನಿರರ್ಥಕವೂ ಆಗುತ್ತದೆ. ಸರ್ಕಾರದ ಉದ್ದೇಶ ಒಳ್ಳೆಯದೇ ಆದರೂ, ಆರ್ಥಿಕ ವ್ಯವಸ್ಥೆಯಲ್ಲಿ ಉತ್ಪಾದನಾ ಕೈಗಾರಿಕೆಗಳು (Manufacturing Industries) ಹೆಚ್ಚು ಇಲ್ಲದಿರುವುದರಿಂದ, ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ದೊಡ್ಡ ನಗರಗಳಲ್ಲಿ ಯಾವುದೋ ಒಂದು ನೌಕರಿ ಗಳಿಸುವ ಅವಕಾಶಗಳು ಇರುವುದಾದರೂ, ಸಣ್ಣಪುಟ್ಟ ಊರುಗಳಲ್ಲಿ ಹತ್ತನೆ ತರಗತಿ ಪೂರೈಸಿರುವ ಯುವ ಜನರಿಗೆ ತಯಾರಿಕೆ ಅಥವಾ ಉತ್ಪಾದನಾ ಕೈಗಾರಿಕೆಗಳು ಇಲ್ಲದಿದ್ದರೆ, ಉದ್ಯೋಗ ಎನ್ನುವುದು ಗಗನ ಕುಸುಮವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಜ್ಞಾನಿಕ ನೆಲೆಯಲ್ಲಿ ಯೋಚನೆ ಮಾಡಬೇಕಿದೆ.
ಅನೇಕ ಅಭ್ಯರ್ಥಿಗಳು ತಾವು ಇಂಟರ್ನ್ಷಿಪ್ ಪೂರೈಸಿದ ಉದ್ದಿಮೆಗಳಲ್ಲೇ ನೌಕರಿಗಾಗಿ ಅರ್ಜಿ ಸಲ್ಲಿಸಿದರೂ ಕೆಲಸದ ಅನುಭವ ಕೇಳಲಾಗುತ್ತದೆ. ಇದು ಅನೇಕ ಯುವಕ ಯುವತಿಯರಿಗೆ ಅಡ್ಡಗೋಡೆಯಾಗಿ ಪರಿಣಮಿಸುತ್ತದೆ. ಕೌಶಲ ಗಳಿಸಿದ್ದರೂ, ಕೆಲಸದ ಅನುಭವ ಇಲ್ಲದಿದ್ದರೆ ನೌಕರಿಯ ಅವಕಾಶಗಳು ಲಭಿಸುವುದಿಲ್ಲ ಎನ್ನುವುದು ಸಾಮಾನ್ಯವಾಗಿ ಕಾಣುವ ವಿದ್ಯಮಾನ. ಈ ದೃಷ್ಟಿಯಿಂದ ನೋಡಿದಾಗ ಸರ್ಕಾರದ ಮಹತ್ವಾಕಾಂಕ್ಷೆಯ ಇಂಟರ್ನ್ಷಿಪ್ ಯೋಜನೆ ಏಕೆ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ ಎಂದು ಅರ್ಥವಾಗುತ್ತದೆ. ಭಾರತದ ಯುವ ಸಮೂಹವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ಪೂರಕ ಪರಿಹಾರೋಪಾಯಗಳನ್ನು ಸೂಚಿಸುವ ನಿಟ್ಟಿನಲ್ಲಿ ಸರ್ಕಾರಗಳು ಇನ್ನೂ ಕ್ರಿಯಾಶೀಲವಾಗಬೇಕಿದೆ.
ಇಲ್ಲವಾದರೆ, ಬಹುತೇಕ ಯುವಕರು ಗಿಗ್ ಕಾರ್ಮಿಕರಾಗಿ, ಹೆಚ್ಚಿನ ವ್ಯಾಸಂಗ ಮಾಡಲಾಗದವರು ಕಟ್ಟಡ ನಿರ್ಮಾಣದಂತಹ ನೌಕರಿಗಳಲ್ಲಿ ಜೀವನ ಸವೆಸಬೇಕಾಗುತ್ತದೆ. ಈ ಉದ್ಯೋಗಗಳು ಸೃಷ್ಟಿಸುವ ಅನಿಶ್ಚಿತತೆ ಮತ್ತು ಅಭದ್ರತೆಯೇ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರಕವಾಗುತ್ತದೆ. ನವ ಉದಾರವಾದಿ ಕಾರ್ಪೋರೇಟ್ ಆರ್ಥಿಕತೆಯನ್ನೇ ಆರಾಧಿಸುವ, ಅನುಸರಿಸುವ ಸರ್ಕಾರಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಇಲ್ಲವಾದರೆ, ಇಂಟರ್ನ್ಷಿಪ್ ನಂತಹ ಮಹತ್ವಾಕಾಂಕ್ಷಿ ಯೋಜನೆಗಳೂ ಸಹ ಆಲಂಕರಿಕವಾಗಿಬಿಡುತ್ತವೆ. ಭಾರತದ ಎಲ್ಲ ರಾಜಕೀಯ ಪಕ್ಷಗಳೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.
(ಈ ಲೇಖನದ ಮಾಹಿತಿ, ದತ್ತಾಂಶಗಳಿಗೆ ಆಧಾರ : Why young Indians are not interested in the prime minister’s ambitious internship scheme ಜೊಹಾನಾ ದೀಕ್ಷಾ – ದ ಸ್ಕ್ರೋಲ್ 12 ಸೆಪ್ಟಂಬರ್ 2025 )
