ಕೂಳೂರು ರಸ್ತೆ ಅಪಘಾತದಲ್ಲಿ ಮಹಿಳೆ ಸಾವು: ಬಿಜೆಪಿ ಶಾಸಕ, ಸಂಸದರು ನೇರ ಹೊಣೆ – ಡಿವೈಎಫ್‌ಐ ಆರೋಪ

ಮಂಗಳೂರು: ಕೂಳೂರು ರಸ್ತೆ ಅಪಘಾತದಲ್ಲಿ ಮಹಿಳೆ ಮೃತ ಪಟ್ಟಿರುವ ಘಟನೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಪ್ರತೀ ಬಾರಿ ಹೆದ್ದಾರಿ ಅವ್ಯವಸ್ಥೆಗೆ ಪ್ರಾಣ ಕಳೆದುಕೊಂಡ ಅಮಾಯಕರ ಸಾವಿಗೆ ಬಿಜೆಪಿ ಶಾಸಕರು, ಸಂಸದರೇ ನೇರ ಹೊಣೆ ಎಂದು ಆರೋಪಿಸಿದೆ. ಜಿಲ್ಲಾಡಳಿತ ಹೆದ್ದಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಮೃತರಿಗೆ ಗರಿಷ್ಠ ಮಟ್ಟದ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ಇಂದು ಸಂಜೆ 4-30ಕ್ಕೆ ಕೂಳೂರು ಜಂಕ್ಷನ್ ಬಳಿ ಡಿವೈಎಫ್‌ಐ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಜಿಲ್ಲೆಯಲ್ಲಿರುವ ಹೆದ್ದಾರಿಗಳು ಸಂಪೂರ್ಣ ಹದಗೆಟ್ಟಿದ್ದು, ನಿರಂತರ ಅಪಘಾತಗಳಿಂದ ಹಲವಾರು ಸಾವು ನೋವುಗಳು ಉಂಟಾಗುತ್ತಲೇ ಇವೆ. ಇಲ್ಲಿನ ರಾಷ್ಟೀಯ ಹೆದ್ದಾರಿ ಸೇರಿದಂತೆ ನಗರದ ರಸ್ತೆಗಳೆಲ್ಲವೂ ಗುಂಡಿಗಳಿಂದ ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಸ್ಥಳೀಯ ಆಡಳಿತಗಳು ಕೂಡಾ ಇದರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು, ಎಷ್ಟು ನೋವುಗಳು ಉಂಟಾಗಬೇಕು ಎಂದು ಸಂಬಂಧಬಪಟ್ಟ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಡಿವೈಎಫ್‌ಐ ಪ್ರಶ್ನಿಸಿದೆ.

ಇದನ್ನೂ ಓದಿ: ಮದ್ದೂರು ಪ್ರಕರಣ |ಗಣೇಶ ವಿಸರ್ಜನೆಯ ವೇಳೆ ಪ್ರಚೋದನಕಾರಿ ನಡೆವಳಿಕೆ ಗಲಭೆಗೆ ಯತ್ನ- ಜಾಗೃತ ನಾಗರಿಕರು ಕರ್ನಾಟಕ ಖಂಡನೆ

ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳ ವಿರುದ್ದ, ಅವೈಜ್ಞಾನಿಕ ಕಾಮಗಾರಿಗಳ ವಿರುದ್ದ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದರೂ, ಇಲ್ಲಿನ ಬಿಜೆಪಿ ಸಂಸದರು, ಶಾಸಕರುಗಳು ಸಂಪೂರ್ಣ ನಿರ್ಲಕ್ಷ್ಯವನ್ನು ವಹಿಸಿರುವುದು ರಸ್ತೆಗಳ ಹೆಸರಿನಲ್ಲಿ ಕಾಂಟ್ರಾಕ್ಟರ್ ಗಳ ಜೊತೆಗೆ ಜನಪ್ರತಿನಿಧಿಗಳು ಕೂಡಾ ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲ ಲಕ್ಷಣಗಳೂ ಎದ್ದು ಕಾಣುತ್ತಿವೆ. ಇಲ್ಲದಿದ್ದಲ್ಲಿ ಇಲ್ಲಿನ ರಸ್ತೆಗಳಲ್ಲಿ ನಡೆಯುತ್ತಿರುವ ಸಾವು ನೋವುಗಳಿಗೆ ಸಂಸದರು ಹಾಗೂ ಶಾಸಕರು ಉತ್ತರ ನೀಡಬೇಕು ಎಂದು ಡಿವೈಎಫ್‌ಐ ಆಗ್ರಹಿಸಿದೆ.

ಕೂಳೂರಿನ ಹೆದ್ದಾರಿಯಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ತಿಂಗಳ ಅವಧಿ ಒಳಗೆ ಎರಡನೇ ಸಾವು ಸಂಭವಿಸಿದೆ‌. ಹಾಗಿದ್ದರೂ ಬಾಯಿ ಬಿಡದ ಶಾಸಕರುಗಳು ಹಾಗೂ ಸಂಸದರ ನಡೆಗೆ ಜಿಲ್ಲೆಯ ಜನ ಆಕ್ರೋಶಿತರಾಗಿದ್ದಾರೆ. ಸಂಸದರು ಇದಕ್ಕೆ ಸ್ಪಷ್ಟವಾದ ಉತ್ತರ ನೀಡುವುದರ ಜೊತೆಗೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ಬಲವಾಗಿ ಒತ್ತಾಯಿಸಿದೆ.

ಕೂಳೂರಿನಲ್ಲಿ‌ ನಿನ್ನೆಯ ದಿನ ಅಪಘಾತದಲ್ಲಿ ಮೃತರಾದ ಮಾಧವಿ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರವನ್ನು ಒದಗಿಸಬೇಕು ಮತ್ತು ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಹಾಗೂ ಸಂಸದರು ಮತ್ತು ಶಾಸಕರುಗಳ ಬೇಜವಾಬ್ದಾರಿ ವಿರುದ್ದ ಡಿವೈಎಫ್‌ಐ ನೇತೃತ್ವದಲ್ಲಿ ಇಂದು ಸಂಜೆ ಕೂಳೂರಿನಲ್ಲಿ‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!

Donate Janashakthi Media

Leave a Reply

Your email address will not be published. Required fields are marked *