ಎಥನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಕೋಲಾಹಲ

  • ರಘುನಂದನ್

(ಸಾರಸಂಗ್ರಹ : ವಸಂತರಾಜ ಎನ್.ಕೆ)

E20 (20% ಎಥನಾಲ್ ಮಿಶ್ರಿತ ಪೆಟ್ರೋಲ್) ನ ಪೂರೈಕೆ ಆರಂಭವಾಗಿದ್ದು ಅದರ ಬಳಕೆ ಕಡ್ಡಾಯವಾಗಿದೆ.   ಇದು ಭಾರೀ ಕೋಲಾಹಲ ಉಂಟು ಮಾಡಿದೆ. ಮಾಧ್ಯಮಗಳಲ್ಲಿ ವಾಹನ ಮಾಲೀಕರು, ಚಾಲಕರು, ವಾಹನ ತಯಾರಕರು, ವಿವಿಧ ಉದ್ಯಮಗಳು, ರೈತರು, ತಜ್ಞರು ಮತ್ತು ಕೆಲವು ಹಿತಾಸಕ್ತಿ ಗುಂಪುಗಳ ನಡುವೆ ಭಾರೀ ಚರ್ಚೆಗಳು ನಡೆಯುತ್ತಿವೆ. ವಾಹನ ಮಾಲೀಕರು ಮೈಲೇಜ್ ಕಡಿಮೆಯಾಗುವುದು, ಚಾಲನೆ ಗುಣಮಟ್ಟ ಕುಸಿಯುವುದು, ಎಂಜಿನ್ ಕಾರ್ಯಕ್ಷಮತೆ ಇಳಿಯುವುದು, ನಿರ್ವಹಣಾ ವೆಚ್ಚಗಳು ಹೆಚ್ಚಾಗುವುದು ಮುಂತಾದ ಸಮಸ್ಯೆಗಳ ಬಗ್ಗೆ ದೂರುತ್ತಿದ್ದಾರೆ. ಸರಕಾರ ಅದನ್ನು ಅಲ್ಲಗಳೆಯುತ್ತಿದೆ.  ಕೆಲವು ಉದ್ಯಮ/ಕಂಪನಿಗಳಿಗೆ ದೊಡ್ಡ ಲಾಭ, ಇತರ ಉದ್ಯಮ/ಕಂಪನಿಗಳಿಗೆ ನಷ್ಟದ ಕುರಿತು ಸಹ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಕೃಷಿ, ಪರಿಸರ ಮತ್ತು ಆಹಾರ ಭದ್ರತೆಯ ಮೇಲೆ ಇದರ ಪರಿಣಾಮಗಳ ಬಗೆಗೂ ಗಂಭೀರ ಅನುಮಾನಗಳು ಎದ್ದಿವೆ. ಇವೆಲ್ಲದರ ಬಗ್ಗೆ ಬೆಳಕು ಚೆಲ್ಲುವ ಲೇಖನ. ಎಥನಾಲ್

ರಾಜಧಾನಿ ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ ಕಡ್ಡಾಯವಾಗಿ 20 ಶೇಕಡಾ ಎಥನಾಲ್ ಮಿಶ್ರಿತ ಪೆಟ್ರೋಲ್ (EBP20 ಅಥವಾ E20) ಸರಬರಾಜು ಪ್ರಾರಂಭಿಸಿರುವ ಬಗ್ಗೆ ಕಾರ್ಪೊರೆಟ್  ಮಾಧ್ಯಮ, ಆನ್‌ಲೈನ್ ಮಾಧ್ಯಮ ಹಾಗೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಾಹನ ಮಾಲೀಕರು, ಚಾಲಕರು, ತಜ್ಞರು ಮತ್ತು ಕೆಲವು ಹಿತಾಸಕ್ತಿ ಗುಂಪುಗಳ ನಡುವೆ ಭಾರೀ ಚರ್ಚೆಗಳು ನಡೆಯುತ್ತಿವೆ. 2022ರಲ್ಲಿ ತಿದ್ದುಪಡಿ ಮಾಡಿದ ರಾಷ್ಟ್ರೀಯ ಜೈವಿಕ ಇಂಧನ ನೀತಿ ಪ್ರಸ್ತುತ ಜಾರಿಗೆ ಬಂದಿದ್ದು, 2009ರಲ್ಲಿ ಮೊದಲು ಪ್ರಸ್ತಾಪವಾದ ನಂತರ ಹಲವು ಬದಲಾವಣೆಗಳನ್ನು ಕಂಡಿದೆ. ಮೊದಲಿಗೆ 10% ಎಥನಾಲ್ ಮಿಶ್ರಣ (E10) ಗುರಿಯಾಗಿದ್ದ ಈ ನೀತಿ ನಂತರ 2030ರೊಳಗೆ 20% (E20) ಗುರಿ ಇಟ್ಟುಕೊಂಡಿತ್ತು. ಆದರೆ ತೈಲ ಮಾರಾಟ ಕಂಪನಿಗಳು (OMCs) ಸರಬರಾಜು ಸರಪಳಿಗಳನ್ನು ನಿರೀಕ್ಷೆಗಿಂತ ಬೇಗ ಸ್ಥಿರಗೊಳಿಸಿರುವುದರಿಂದ, E20 ಅನ್ನು 2025ರಲ್ಲಿ – ನಿರೀಕ್ಷೆಗಿಂತ ಐದು ವರ್ಷ ಮೊದಲೇ  – ಜಾರಿಗೆ ತಂದಿದ್ದಾರೆ.

ಪ್ರಸ್ತುತ ಬಳಕೆಯಾಗುತ್ತಿರುವ ಮೊದಲ ತಲೆಮಾರಿನ ಎಥನಾಲ್ ಸಸ್ಯ ಮೂಲ ಸಂಪನ್ಮೂಲಗಳಿಂದ  ಹುದುಗುವಿಕೆ (ಫರ್ಮೆಂಟೇಶನ್) ಮತ್ತು ಭಟ್ಟಿ ಇಳಿಸುವಿಕೆ (ಡಿಸ್ಟಿಲ್ಲಿಂಗ್) ಗಳ  ಮೂಲಕ ತಯಾರಿಸಲಾಗುತ್ತಿದೆ. ಇದರಲ್ಲಿ ಮುಖ್ಯವಾಗಿ ಅಕ್ಕಿ, ಜೋಳ ಹಾಗೂ ಕಬ್ಬು ಬಳಕೆಯಾಗುತ್ತಿದೆ. ಎರಡನೇ ತಲೆಮಾರಿನ ಎಥನಾಲ್, ಅಂದರೆ ಕೃಷಿ ಉಳಿಕೆಗಳಿಂದ ತಯಾರಾಗುವ ಪರಿಸರ ಸ್ನೇಹಿ ಎಥನಾಲ್ ಇನ್ನೂ ಭಾರತದಲ್ಲಿ ಅಭಿವೃದ್ಧಿ ಹಂತದಲ್ಲಿದೆ.

ಜೈವಿಕ ಇಂಧನವನ್ನು ದೀರ್ಘಕಾಲದಿಂದ ಪಳೆಯುಳಿಕೆ ಇಂಧನ (ಕಲ್ಲಿದ್ದಲು, ಪೆಟ್ರೋಲ್, ಗ್ಯಾಸ್)  ಪರ್ಯಾಯವಾಗಿ ಪರಿಗಣಿಸಲಾಗುತ್ತಿದೆ. ಭಾರತ ಸರ್ಕಾರವು ಇದನ್ನು ಪ್ರಬಲವಾಗಿ ಪ್ರೋತ್ಸಾಹಿಸುತ್ತಿದೆ. ಜೈವಿಕ ಇಂಧನದ ವ್ಯಾಪಕ ಬಳಕೆ – ಕರಡು ತೈಲದ ಆಮದು ವೆಚ್ಚವನ್ನು ಕಡಿಮೆ ಮಾಡುವುದು, ಹಸಿರುಮನೆ ಅನಿಲಗಳ ಸೂಸುವಿಕೆಯನ್ನು ತಗ್ಗಿಸುವುದು, ರೈತರಿಗೆ ಹೆಚ್ಚುವರಿ ಆದಾಯ ನೀಡುವುದು ಹಾಗೂ ಉದ್ಯೋಗ ಸೃಷ್ಟಿಸುವುದು ಎಂದು ದಾವೆ ಮಾಡುತ್ತಿದೆ. ಅತಿ ಮುಖ್ಯವಾಗಿ, ಇದು ಅಸ್ತಿತ್ವದಲ್ಲಿರುವ ಪೆಟ್ರೋಲ್ ವಿತರಣಾ ಮೂಲಸೌಕರ್ಯ ಬದಲಾಯಿಸದೆ ಜಾರಿಗೊಳಿಸಬಹುದಾದ ಎಂದು ಹೇಳಲಾಗಿದೆ. ಆದರೆ, ಈ ಎಲ್ಲಾ ಹೇಳಿಕೆಗಳಲ್ಲಿ ಸ್ವಲ್ಪ ಸತ್ಯವಿದ್ದರೂ, ಹಲವು ಆಯಾಮಗಳಲ್ಲಿ ಅವು ಪ್ರಶ್ನಾರ್ಹವೂ ಆಗಿವೆ.

ವಾಹನ ಮಾಲೀಕರು, ಬಳಕೆದಾರರು ದೊಡ್ಡ ಧನಿಯಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಕೆಲವು (ತೈಲ, ಎಥನಾಲ್ ಉತ್ಪಾದನಾ ) ದೊಡ್ಡ ಉದ್ಯಮ/ಕಂಪನಿಗಳಿಗೆ ಲಾಭ, ಇತರ (ಸಕ್ಕರೆ ಉತ್ಯಾದಿ) ಉದ್ಯಮ/ಕಂಪನಿಗಳಿಗೆ ನಷ್ಟದ ಕುರಿತು ಸಹ ಆತಂಕ ವ್ಯಕ್ತಪಡಿಸಲಾಗುತ್ತಿದೆ. ಕೃಷಿ, ಪರಿಸರ ಮತ್ತು ಆಹಾರ ಭದ್ರತೆಯ ಮೇಲೆ ಇದರ ಪರಿಣಾಮಗಳ ಬಗೆಗೂ ಗಂಭೀರ ಅನುಮಾನಗಳು ಎದ್ದಿವೆ.

ಇಂಧನ ದಕ್ಷತೆ ಮತ್ತು ಮೈಲೇಜ್ ಕುಸಿತ

ವಾಹನ ಮಾಲೀಕರು ಮೈಲೇಜ್ ಕಡಿಮೆಯಾಗುವುದು, ಚಾಲನೆ ಗುಣಮಟ್ಟ ಕುಸಿಯುವುದು, ಎಂಜಿನ್ ಕಾರ್ಯಕ್ಷಮತೆ ಇಳಿಯುವುದು, ನಿರ್ವಹಣಾ ವೆಚ್ಚಗಳು ಹೆಚ್ಚಾಗುವುದು ಮುಂತಾದ ಸಮಸ್ಯೆಗಳ ಬಗ್ಗೆ ದೂರುತ್ತಿದ್ದಾರೆ. ಸರ್ಕಾರವು ಇದನ್ನು ತಳ್ಳಿ ಹಾಕಿ, ವಾಹನದ ವಯಸ್ಸು, E20 ಟ್ಯೂನಿಂಗ್ ಮಾಡಲಾಗಿದೆಯೆ, E20 ಅನುಗುಣವಾಗಿ ಇದೆಯೆ – ಇವನ್ನು ಅವಲಂಬಿಸಿ ಗರಿಷ್ಠ 1-6% ಮಟ್ಟದಲ್ಲಿ ಮಾತ್ರ ದಕ್ಷತೆ ಕುಸಿತವಾಗಬಹುದು ಎಂದು ಹೇಳಿದೆ. ಸರಕಾರ, ಪರಿಣತರು, ಕಂಪನಿಗಳು ಎಲ್ಲ ಹೇಳುತ್ತಿರುವುದು ಪ್ರಯೋಗಾಲಯಗಳಲ್ಲಿ ‘ಆದರ್ಶ ಪರಿಸ್ಥಿತಿಗಳಲ್ಲಿ ಮಾಡಿದ ‘ಲ್ಯಾಬ್ ಟೆ್ಸ್ ಕಂಡೀಶನ್ಸ್’ ಫಲಿತಗಳ ಬಗ್ಗೆ. ಆದರೆ, ಮಾಧ್ಯಮ ಸಂದರ್ಶನಗಳಲ್ಲಿ ಹಲವಾರು ವಾಹನ ಬಳಕೆದಾರರು 20% ತನಕ ಮೈಲೇಜ್ ಕುಸಿತವನ್ನು ವರದಿ ಮಾಡಿದ್ದಾರೆ.  ಇವು ವಾಸ್ತವ ಬಳಕೆಯಲ್ಲಿ ಕಂಡು ಬರುತ್ತಿರುವುದು.

ಅಗತ್ಯ E20 ಪೆಟ್ರೋಲ್ ಬಳಕೆ ಹೆಚ್ಚುವುದರಿಂದ ಅದರ ಬೆಲೆ ಕಡಿಮೆ ಮಾಡಬೇಕೆಂದು ಕೆಲವು ಪರಿಣತರು ಸೂಚಿಸಿದ್ದಾರೆ.  ಏಕೆಂದರೆ ಪೆಟ್ರೋಲ್ ಬೆಲೆ ಲೀಟರಿಗೆ 91 ರೂ ಇದ್ದರೆ ಎಥನಾಲ್ ಬೆಲೆ 61 ರೂ ಇದೆ. ಹಾಗಾಗಿ E20 ಪೆಟ್ರೋಲ್ ಮಾರಾಟ ಬೆಲೆ ಕಡಿಮೆಯಾಗಬೇಕು. ಈ ಉಳಿತಾಯವನ್ನು ಪೆಟ್ರೋಲ್ ಕಂಪನಿಗಳು, ಸರಕಾರ ಇಟ್ಟುಕೊಳ್ಳುತ್ತಿವೆ. ಅಂತರರಾಷ್ಟ್ರೀಯ ಬೆಲೆ ಏರಿದಾಗ ಏರಿಸಿ ಬಳಕೆದಾರನಿಗೆ ವರ್ಗಾಯಿಸುತ್ತವೆ. ಆದರೆ ಇಳಿದಾಗ ಉಳಿತಾಯವನ್ನು ಗುಳುಂ ಮಾಡುವುದಿಲ್ಲವೇ ಹಾಗೆ.  E20 ಪೆಟ್ರೋಲ್ ಬೆಲೆ ಇಳಿಕೆಗೆ ಗ್ರಾಹಕರು ಒತ್ತಾಯಿಸಬೇಕಾಗಿದೆ.

ಇದನ್ನೂ ಓದಿ : ಟ್ರಂಪ್ ಸುಂಕಗಳು ಮತ್ತು ಭಾರತದ ಮುಂದಿರುವ ದಾರಿ

ವೈಜ್ಞಾನಿಕ ಅಂಕಿ-ಅಂಶಗಳು ಸ್ಪಷ್ಟವಾಗಿವೆ:

  • ಪೆಟ್ರೋಲ್‌ನ ಕ್ಯಾಲೊರಿಫಿಕ್ ವ್ಯಾಲ್ಯೂ (CV) 46.4 ಮೆಗಾಜೂಲ್/ಕೆಜಿ.
  • ಎಥನಾಲ್‌ನ CV 29.7 ಮೆಗಾಜೂಲ್/ಕೆಜಿ (36% ಕಡಿಮೆ).

ಅಂದರೆ, 10 ಲೀಟರ್ ಪೆಟ್ರೋಲ್‌ನಷ್ಟು ಶಕ್ತಿ ಪಡೆಯಲು 10.8 ಲೀಟರ್ E20 ಬೇಕಾಗುತ್ತದೆ. ದೆಹಲಿಯ ದರದ ಪ್ರಕಾರ ಪ್ರತಿ 10 ಲೀಟರ್‌ಗೆ ಸುಮಾರು ₹70 ಹೆಚ್ಚುವರಿ ವೆಚ್ಚ ಬರುತ್ತದೆ. ಇದು ತಿಂಗಳಿಗೆ ಹಲವಾರು ಬಾರಿ ಇಂಧನ ತುಂಬಿಸಿಕೊಳ್ಳುವ ವಾಹನ ಮಾಲೀಕರಿಗೆ ದೊಡ್ಡ ಹೊರೆ. ವಾಸ್ತವ ವಾಹನ ಬಳಕೆಯ ಪರಿಸ್ಥಿತಿಗಳಲ್ಲಿ ಶೇ.10 ಹೆಚ್ಚುವರಿ ಖರ್ಚು ನಿರೀಕ್ಷಿಸಬಹುದೆಂದು ಪರಿಣತರು ಅಂದಾಜು ಮಾಡಿದ್ದಾರೆ.

ಪೆಟ್ರೋಲ್ ಬೆಲೆ ಲೀಟರಿಗೆ 91 ರೂ ಇದ್ದರೆ ಎಥನಾಲ್ ಬೆಲೆ 61 ರೂ ಇದೆ. ಹಾಗಾಗಿ E20 ಪೆಟ್ರೋಲ್ ಮಾರಾಟ ಬೆಲೆ ಕಡಿಮೆಯಾಗಬೇಕು. ಈ ಉಳಿತಾಯವನ್ನು ಪೆಟ್ರೋಲ್ ಕಂಪನಿಗಳು, ಸರಕಾರ ಇಟ್ಟುಕೊಳ್ಳುತ್ತಿವೆ. ಅಂತರರಾಷ್ಟ್ರೀಯ ಬೆಲೆ ಏರಿದಾಗ ಏರಿಸಿ ಬಳಕೆದಾರನಿಗೆ ವರ್ಗಾಯಿಸುತ್ತವೆ. ಆದರೆ ಇಳಿದಾಗ ಉಳಿತಾಯವನ್ನು ಗುಳುಂ ಮಾಡುವುದಿಲ್ಲವೇ ಹಾಗೆ.  E20 ಪೆಟ್ರೋಲ್ ಬೆಲೆ ಇಳಿಕೆಗೆ ಗ್ರಾಹಕರು ಒತ್ತಾಯಿಸಬೇಕಾಗಿದೆ.

ವಾಹನ ನಿರ್ವಹಣೆ ಮತ್ತು ಹಾನಿ

ಎಥನಾಲ್ ಒಂದು ಆಲ್ಕೋಹಾಲ್ ಆಗಿದ್ದು, ತೇವ ಆಕರ್ಷಕ (ಹೈಗ್ರೋಸ್ಕೋಪಿಕ್) ಸ್ವಭಾವ ಹೊಂದಿದೆ. ಇದರಿಂದಾಗಿ:

  • ರಬ್ಬರ್ ಟ್ಯೂಬ್‌ಗಳು, ಗ್ಯಾಸ್ಕೆಟ್‌ಗಳು, ಸೀಲ್‌ಗಳು, ಇಂಧನ ಫಿಲ್ಟರ್, ಪಂಪ್ ಮುಂತಾದವುಗಳಿಗೆ ಸವೆತ (corrosion) ಹೆಚ್ಚುತ್ತದೆ.
  • ಹಳೆಯ ವಾಹನಗಳಲ್ಲಿ E20-ಅನುಗುಣ ಭಾಗಗಳ ಬದಲಾವಣೆ ಮಾಡದಿದ್ದರೆ, ಹೆಚ್ಚುವರಿ ನಿರ್ವಹಣೆ ಖರ್ಚು ಉಂಟಾಗುತ್ತದೆ (ಸುಮಾರು ₹5,000–7,000).
  • ಇಂಧನ ಫಿಲ್ಟರ್ ಮತ್ತು ಎಂಜಿನ್ ಎಣ್ಣೆ ಹೆಚ್ಚಾಗಿ ಬದಲಾಯಿಸಬೇಕಾಗುತ್ತದೆ.

2023ರ ನಂತರ ಮಾರಾಟವಾದ ಎಲ್ಲಾ ವಾಹನಗಳು E20-ಅನುಗುಣವಾಗಿರಬೇಕು ಎಂಬ ನಿಯಮವಿದ್ದರೂ, ಅನುಷ್ಠಾನ ದುರ್ಬಲವಾಗಿದೆ. ಪ್ರಸ್ತುತ ರಸ್ತೆಗಳಲ್ಲಿ ಓಡುತ್ತಿರುವ ವಾಹನಗಳ 90% ಹಳೆಯವುಗಳಾಗಿವೆ.

ರಾಷ್ಟ್ರೀಯ ಜೈವಿಕ ಇಂಧನ ನೀತಿ  ರೂಪಿಸುವಾಗ ಅದರ ಪರಿಣಾಮ ತಟ್ಟುವ ಎಲ್ಲ ವಿಭಾಗಗಳನ್ನು ಪರಿಗಣಿಸಿ ಸಮಗ್ರ ನೀತಿ ರೂಪಿಸದಿರುವುದೇ ಇದಕ್ಕೆ ಕಾರಣ.  ತೈಲ ಕಂಪನಿಗಳು ಮತ್ತು ಎಥನಾಲ್ ಉತ್ಪಾದಕರ ಹಿತಾಸಕ್ತಿ ಮಾತ್ರ ಪರಿಗಣಿಸಿರುವಂತೆ ಕಾಣುತ್ತದೆ. ವಾಹನ ಬಳಕೆದಾರರು, ವಾಹನ ಉತ್ಪಾದಕರು, ರೈತರು, ಪರಿಸರ ಮತ್ತು ಆಹಾರ ಭದ್ರತೆಯ ಮೇಲೆ ಪರಿಣಾಮ ಹೀಗೆ ಇದಕ್ಕೆ ಇರುವ ಹಲವು ಆಯಾಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ

ಆಹಾರ ಬೆಳೆಗಳ ಮೇಲೆ ಪರಿಣಾಮ

ರಾಷ್ಟ್ರೀಯ ಜೈವಿಕ ಇಂಧನ ನೀತಿಯಲ್ಲಿ ಬದಲಾವಣೆಗಳ ನಂತರ ಎಥನಾಲ್ ಉತ್ಪಾದನೆಗೆ ಬಳಸುತ್ತಿರುವ ಕಚ್ಚಾವಸ್ತುಗಳಲ್ಲಿ ಭಾರೀ ಬದಲಾವಣೆಯಾಗಿದೆ.

ಎಥನಾಲ್ ಉತ್ಪಾದನೆಗಾಗಿ ಬಳಸಲಾಗುತ್ತಿರುವ ಮುಖ್ಯ ಬೆಳೆಗಳು:

ಕಬ್ಬು – ಆರಂಭದಲ್ಲಿ ಪ್ರಮುಖ ಮೂಲ. ರಪ್ಥು ಮಾಡುವಷ್ಟು ಹೆಚ್ಚುವರಿ ಸಕ್ಕರೆ ಉತ್ಪಾದನೆಯಾಗುತ್ತಿದ್ದರೂ, ಆಂತರಿಕ  ಬೇಡಿಕೆ ಮತ್ತು ಉತ್ಪಾದನೆ ನಡುವೆ ಸಮತೋಲನ ಯಾವಾಗಲೂ ಸರಳವಾಗಿರಲಿಲ್ಲ.  ಆದರೆ ಉಪ-ಉತ್ಪನ್ನ  ಮೋಲ್ಯಾಸಿಸ್  ನ್ನು ಎಥನಾಲ್ ಗೆ ಉತ್ಪಾದನೆಗೆ ಬಳಸಲಾರಂಭಿಸಿದ ಮೇಲೆ, ಸಕ್ಕರೆ ಬೆಲೆ ಮತ್ತು ಲಭ್ಯತೆಯ ಮೇಲೆ ಪರಿಣಾಮ ಬೀರಿದೆ ಹಾಗೂ ಇತರ ಅಲ್ಕೊಹಾಲ್ ಕೈಗಾರಿಕೆಗಳಿಗೆ ಹಾನಿಯಾಗಿದೆ. ಮೊದಲ ಹಂತದಲ್ಲಿ ಈ ಏರುಪೇರನ್ನು ನಿಭಾಯಿಸಲು ಎಥನಾಲ್ ಆಮದಿಗೆ ಸಹ ಅನುಮತಿ ನೀಡಲಾಯಿತು! ಮೂಲ ಗುರಿ ಪೆಟ್ರೋಲ್ ಆಮದು ಖರ್ಚು ಕಡಿಮೆ ಮಾಡುವುದಾಗಿದ್ದು, ಅದನ್ನು ಹೆಚ್ಚು ಮಾಡುವ ಪರಿಹಾರ ಹಾಸ್ಯಾಸ್ಪದವಾಗಿತ್ತು. ಈ ಪರಿಸ್ಥಿತಿ ನಿಭಾಯಿಸಲು ಸರಕಾರ ಕಬ್ಬಿನ ರಸವನ್ನು ನೇರವಾಗಿ ಎಥನಾಲ್ ಆಗಿ ಪರಿವರ್ತಿಸುವುದಕ್ಕೆ ಅನುಮತಿ ನೀಡಿತು. ಅದರಿಂದ ಪರಿಸ್ತೀತಿ ಇನ್ನಷ್ಟು ಹದಗೆಟ್ಟಿತು. ಈ ನೀತಿಯನ್ನು ಇತ್ತೀಚೆಗೆ ಕೈಬಿಡಲಾಯಿತು.

ಜೋಳ (ಮೆಕ್ಕೆಜೋಳ) – 2021–22ರಲ್ಲಿ ಶೂನ್ಯದಿಂದ 2023–24ರಲ್ಲಿ 2,860 ಮಿಲಿಯನ್ ಲೀಟರ್ ತನಕ (42% ಒಟ್ಟು ಉತ್ಪಾದನೆ) ಇದರ ಬಳಕೆ ಏರಿತು. 2024-25 ರಲ್ಲಿ ಶೇ. 51ಕ್ಕೆ ಏರಿತು! ಇದರಿಂದ ಎಥನಾಲ್ ಗೂ ಮತ್ತು ಜೋಳಕ್ಕೂ ಬೇಡಿಕೆ ಏರಿತು. ಜೋಳದ ಬೆಲೆಯೂ ಜಾಸ್ತಿಯಾಯಿತು.

ಅಕ್ಕಿ ಮತ್ತು ಕೆಲವು ಧಾನ್ಯಗಳು – ಎಫ್.ಸಿ.ಐ ಗೋದಾಮುಗಳ “ಕೆಟ್ಟ” ಅಕ್ಕಿ ಬಳಕೆಯ ಹೆಸರಿನಲ್ಲಿ ಆರಂಭವಾಗಿ, ವಾಸ್ತವದಲ್ಲಿ ಉತ್ತಮ ಅಕ್ಕಿ ಮತ್ತು ಇತರ ಧಾನ್ಯಗಳನ್ನು ಬಳಸಲಾಗುತ್ತಿದೆ. ಎಥನಾಲ್ ಉತ್ಪಾದಕತೆ ಇತರ ಧಾನ್ಯ (ಪ್ರತಿ ಟನ್ ಗೆ 380-460 ಪ್ರತಿ ಲೀಟರ್), ಮತ್ತು ಮೊಲ್ಯಾಸಿಸ್ (ಪ್ರತಿ ಟನ್ ಗೆ 225 ಲೀಟರ್), – ಇವುಗಳಿಗಿಂತ,  ಅಕ್ಕಿಯದ್ದು (ಪ್ರತಿ ಟನ್ ಗೆ 450-480 ಲೀಟರ್) ಹೆಚ್ಚಿರುವುದರಿಂದ ಅದು ಆಹಾರದಿಂದ ಎಥನಾಲ್ ಉತ್ಪಾದನೆಗೆ ವರ್ಗಾವಣೆಯಾಗುತ್ತಿದೆ.

ಇದರ ಪರಿಣಾಮವಾಗಿ:

  • ಕೋಳಿ ಸಾಕಾಣಿಕೆ ಕೈಗಾರಿಕೆ 15% ಮೇಲ್ಪಟ್ಟು ಜೋಳ ಕೊರತೆಯಿಂದ ಸಂಕಷ್ಟ ಅನುಭವಿಸಿದೆ.
  • ಭಾರತ, ಹಿಂದಿನಂತೆ ಜೋಳ ರಫ್ತು ಮಾಡದೆ, ಈಗ ಆಮದುದಾರವಾಗಿದೆ.
  • ಎಣ್ಣೆಬೀಜ, ಸಣ್ಣ ಧಾನ್ಯಗಳು, ಕಾಳುಗಳು ಇತ್ಯಾದಿ ಪ್ರದೇಶ ಶೇ.10 ರಷ್ಟು ಕಡಿಮೆಯಾಗಿವೆ.
  • ಒಟ್ಟಾರೆ ಆಹಾರ ಭದ್ರತೆಗೆ ಕುತ್ತು ಬರುತ್ತಿದೆ

ಕಬ್ಬು ಬೆಳೆಯ ವಿಸ್ತರಣೆ ನೀರಿನ ಕೊರತೆ ಪ್ರದೇಶಗಳಲ್ಲಿ (ಉದಾ. ವಿದರ್ಭ) ನಡೆಯುತ್ತಿದ್ದು, ಭೂಗರ್ಭಜಲ ಹಾನಿ ಹಾಗೂ ಮಾಲಿನ್ಯ ಹೆಚ್ಚುತ್ತಿದೆ. ಉತ್ತರ ಪ್ರದೇಶದಲ್ಲಿ 70% ಮೇಲ್ಮೈ ನೀರು ಸಕ್ಕರೆ ಕೈಗಾರಿಕೆಯ ತ್ಯಾಜ್ಯದಿಂದ ಮಾಲಿನ್ಯಗೊಂಡಿದೆ.

ಇಂಧನ ಬದಲಾವಣೆ ಗೆ ಎಥನಾಲ್ ಉತ್ಪಾದನೆಯ ಏಕಮಾತ್ರ  ಗುರಿಯೊಂದಿಗೆ ಜೈವಿಕ ಇಂಧನ ನೀತಿಯನ್ನು ರೂಪಿಸಲಾಗಿದೆ.  ಆಹಾರ ಭದ್ರತೆ, ಬೆಳೆ ಸಮತೋಲನ, ರೈತರ ಹಿತಾಸಕ್ತಿ, ಪರಿಸರ ಇತ್ಯಾದಿ ಗುರಿಗಳನ್ನು ಕಡೆಗಣಿಸಲಾಗಿದೆ.  ಹಾಗಾಗಿ  ಜೈವಿಕ ಇಂಧನ ನೀತಿಯಲ್ಲಿ ಇವೆಲ್ಲ ಕಾಳಜಿಗಳನ್ನು  ಒಳಗೊಳ್ಳುವ ಬದಲಾವಣೆ ಬೇಕಾಗಿದೆ.

******

ಇದನ್ನೂ ನೋಡಿ : ಧರ್ಮಸ್ಥಳದ ನಿಗೂಢಗಳು |ಕೊಲೆ ಪ್ರಕರಣಗಳನ್ನು ತನಿಖೆ ಮಾಡಿ ಎನ್ನುವುದು ದೇವಸ್ಥಾನಕ್ಕೆ ಅಪಪ್ರಚಾರವಾ!Janashakthi Media

Donate Janashakthi Media

Leave a Reply

Your email address will not be published. Required fields are marked *