ದಸರಾ ಉದ್ಘಾಟನೆ| ಕೋಟ್ಯಾಂತರ ಕನ್ನಡಿಗರು ತೋರಿಸುವ ಪ್ರೀತಿ, ಅಭಿಮಾನವೇ ನಂಗೆ ಸಾಕು – ಭಾನುಮುಷ್ತಾಕ್ ಪ್ರತಿಕ್ರಿಯೆ

ಹಾಸನ: ಮೈಸೂರು ದಸರಾ ಉದ್ಘಾಟನೆಗೆ ತಮ್ಮ ಹೆಸರು ಘೋಷಣೆಯಾದ ನಂತರ ವ್ಯಕ್ತವಾದ ವಿರೋಧಕ್ಕೆ ಸಾಹಿತಿ ಭಾನುಮುಷ್ತಾಕ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, “ಈ ವಿಷಯದಲ್ಲಿ ನಾನು ಹೆಚ್ಚಿನ ಮಾತಾಡುವುದಿಲ್ಲ. ಕೋಟ್ಯಾಂತರ ಕನ್ನಡಿಗರು ತೋರಿಸುತ್ತಿರುವ ಪ್ರೀತಿ, ಅಭಿಮಾನವೇ ಸಾಕು. ಒಬ್ಬರಿಬ್ಬರ ನೆಗೆಟಿವಿಟಿಗೆ ಪ್ರತಿಕ್ರಿಯೆ ಕೊಡಬೇಕಾದ ಅಗತ್ಯವಿಲ್ಲ”. ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ರಾಜಕೀಯ ಮಾಡಬೇಕಾದ ವಿಷಯಕ್ಕೂ, ಮಾಡಬಾರದ ವಿಷಯಕ್ಕೂ ರಾಜಕಾರಣಿಗಳು ಜವಾಬ್ದಾರರಾಗಿರಬೇಕು” ಎಂದು ಚಾಟಿ ಬೀಸಿದರು.

ಸಾಧನೆ ಕುರಿತು ಮಾತನಾಡಿ, “ಬೂಕರ್ ಪ್ರಶಸ್ತಿ ಸುಲಭವಾಗಿ ಸಿಗುವುದಿಲ್ಲ. ಅದನ್ನು ಅಗ್ಗವಾಗಿ ನೋಡಬೇಡಿ. ಕನ್ನಡವನ್ನು ನಾನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸಿದ್ದೇನೆ. ಅಲ್ಲಿ ಜನರು ಕನ್ನಡದ ಒಂದೊಂದು ಪುಟ ಓದಿ ಆಶ್ಚರ್ಯ ಪಡುತ್ತಾರೆ. ಇಷ್ಟು ಸಾಧನೆ ಮಾಡಿದ ನನಗೆ ಕೆಸರು ಎರಚಲು ಯಾರಿಗೂ ಹಕ್ಕಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಮೈಸೂರು | ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆಗೆ ಸಿಪಿಐ(ಎಂ) ಸ್ವಾಗತ

“ಕನ್ನಡವನ್ನು ನಾನು ದೇವತೆಯಾಗಿ ಮಾಡುವುದಲ್ಲ, ಬದುಕಿನ ಭಾಷೆಯಾಗಿ ಬಳಸಿದ್ದೇನೆ. ನನ್ನ ಮೂವರು ಹೆಣ್ಣುಮಕ್ಕಳನ್ನೂ ಕನ್ನಡ ಶಾಲೆಯಲ್ಲಿ ಓದಿಸಿದ್ದೇನೆ. ಕನ್ನಡದ ಜೊತೆಗಿನ ನನ್ನ ನಂಟು ಸಂದೇಹಾಸ್ಪದವಲ್ಲ” ಎಂದು ಹೇಳಿದರು.

ವಿರೋಧಕ್ಕೆ ತಿರುಗೇಟು: “೨೦೨೩ರ ಜನಸಾಹಿತ್ಯ ಸಮ್ಮೇಳನದಲ್ಲಿ ನಾನು ಹೇಳಿದ ಮಾತುಗಳನ್ನು ಕೆಲವರು ತಿರುಚಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು, ದಲಿತರ ಪರವಾಗಿ ನಾನು ಧ್ವನಿ ಎತ್ತಿದ್ದೇನೆ. ಅದನ್ನೇ ನನ್ನ ವಿರುದ್ಧ ಬಳಸಿದ್ದಾರೆ. ಆದರೆ ಕನ್ನಡ ನನ್ನಷ್ಟಾಗಿ ಪ್ರೀತಿಸಿದವರು, ಕನ್ನಡವನ್ನು ನನ್ನಷ್ಟಾಗಿ ಅಂತರರಾಷ್ಟ್ರೀಯ ವೇದಿಕೆಯವರೆಗೆ ಕೊಂಡೊಯ್ದವರು ಯಾರು?” ಎಂದು ಪ್ರಶ್ನಿಸಿದರು. “ನನ್ನ ಸಾಧನೆಯೇ ಸಾಕ್ಷಿ ? ನಂಬಿದವರನ್ನು ಕನ್ನಡ ಎಂದಿಗೂ ಕೈಬಿಡುವುದಿಲ್ಲ” ಎಂದು ಭಾನುಮುಷ್ತಾಕ್ ದೃಢವಾಗಿ ಹೇಳಿದರು.

ಇದನ್ನೂ ನೋಡಿ :ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *