ಹಾಸನ : ಮೈಸೂರು ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಆಯ್ಕೆಯನ್ನು ಸಿಪಿಐ(ಎಂ) ಸ್ವಾಗತಿಸುತ್ತದೆ ಮತ್ತು ಇದರ ವಿರುದ್ದ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಮುಖಂಡರ ನಡೆಯನ್ನು ಖಂಡಿಸುತ್ತದೆ. ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ಕುಮಾರ್ ತಿಳಿಸಿದರು.
ಮೈಸೂರು ದಸರಾವನ್ನು ಉಧ್ಘಾಟಿಸಲು ನಾಡಿನ ಹಿರಿಯ ಸಾಹಿತಿ, ತಮ್ಮ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡದ ಕೀರ್ತಿಯನ್ನ ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ. ಮಾತ್ರವಲ್ಲ ಈ ಮೂಲಕ ಸರ್ಕಾರ ಸೂಕ್ತ ಗೌರವವನ್ನು ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ದೀರ್ಘ ಇತಿಹಾಸ ಇದೆ
ವಿಶ್ವವಿಖ್ಯಾತ ಮೈಸೂರು ದಸರಾ ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನವೇ ಹೊರತು ಅದೊಂದು ಧಾರ್ಮಿಕ ಅಲ್ಲ. ಹಾಗಾಗಿ ವಿಶ್ವವಿಖ್ಯಾತ ಕರ್ನಾಟಕದ ಸಾಂಸ್ಕೃತಿಕ ಉತ್ಸವ ಮೈಸೂರು ದಸರಾವನ್ನು ಕನ್ನಡ ನಾಡಿನ ಸಾಹಿತ್ಯದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಂದ ಉದ್ಘಾಟಿಸುವುದು ಅತ್ಯಂತ ಸಮಯೋಚಿತವಾಗಿದೆ. ಈ ಸಂದರ್ಭದಲ್ಲಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅಲ್ಲದೆ ಬೇರೆ ಯಾವುದೇ ಆಯ್ಕೆ ಸೂಕ್ತವಾಗುವುದಿಲ್ಲ. ಸರಕಾರದ ಈ ನಿರ್ಧಾರವನ್ನು ಸಿಪಿಐ(ಎಂ) ಹಾಸನ ಜಿಲ್ಲಾ ಸಮಿತಿ ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯ ಕೆಲ ಮುಖಂಡರು ಬಾನು ಅವರ ಆಯ್ಕೆಯ ವಿರುದ್ಧ ಮಾತನಾಡಿದ್ದಾರೆ. ದಸರಾವನ್ನು ರಾಜ್ಯ ಸರ್ಕಾರದ ಕೋಟ್ಯಾಂತರ ರೂಗಳ ಅನುದಾನದಲ್ಲಿ ಸಂಘಟಿಸಲಾಗುತ್ತದೆ. ಅಂದರೆ ಅದು ನೇರವಾಗಿ ಈ ರಾಜ್ಯದ ಜನತೆಯ ತೆರಿಗೆಯ ಹಣ. ಕರ್ನಾಟಕ ಯಾವುದೋ ಒಂದು ಧರ್ಮ ಅಥವಾ ಜಾತಿಗೆ ಸೇರಿಲ್ಲ. ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಇದು ಸರ್ವ ಜನಾಂಗದ ಶಾಂತಿಯ ತೋಟ. ರಾಜ ಪ್ರಭುತ್ವವನ್ನು ಕೊನೆಗಾಣಿಸಿ ನಾವಿಂದು ಭಾರತದ ಸಂವಿಧಾನದ ಅಡಿಯಲ್ಲಿ, ಅದರ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಇದನ್ನು ಅರ್ಥ ಮಾಡಿಕೊಳ್ಳಲಾಗದ ಬಿಜೆಪಿ ನಾಯಕರು ರಾಜ್ಯದ ಸೌಹಾರ್ದತೆಗೆ ಕೊಳ್ಳಿ ಇಡಲು ಹುನ್ನಾರ ನಡೆಸಿದ್ದಾರೆ. ಇದನ್ನು ಸಿಪಿಐ(ಎಂ) ತೀರ್ವವಾಗಿ ಖಂಡಿಸುತ್ತದೆ ಆಗ್ರಹಿಸಿದರು.
ಕನ್ನಡದ ಕಂಪು ಬಾನು ಮುಷ್ತಾಕ್ ಅವರ ಮೂಲಕ ಅಂತರಾಷ್ಟ್ರೀಯವಾಗಿ ಪಸರಿಸಿದಾಗ ಅವರು ಮುಸ್ಲಿಂ ಸಮುದಾಯವರು ಎಂಬ ಕಾರಣಕ್ಕಾಗಿ ಒಂದು ಅಭಿನಂದನೆಯನ್ನೂ ಸಲ್ಲಿಸದ ಇವರು ಭಾರತದ ಜಾತ್ಯಾತೀತ ಪರಂಪರೆಯ ವಿರೋಧಿಗಳು. ಬಿಜೆಪಿ ಆರಂಭದಿಂದಲೂ ತನ್ನ ಸಿದ್ದಾಂತವನ್ನೇ ಮಹಿಳಾ ವಿರೋಧಿಯಾಗಿ, ಅಲ್ಪಸಂಖ್ಯಾತ ವಿರೋಧಿಯಾಗಿ, ದಲಿತ ವಿರೋಧಿಯಾಗಿ ರೂಪಿಸಿಕೊಂಡು ಬಂದಿದೆ ಮತ್ತು ಅದರ ಆಧಾರದಲ್ಲೇ ಕೀಳು ರಾಜಕಾರಣ ಮಾಡುತ್ತಿದೆ. ಆದರೆ ರಾಜ್ಯದ ಜನತೆ ಇಂತಹ ಕೀಳು ರಾಜಕಾರಣಕ್ಕೆ ಎಂದಿಗೂ ಬೆಲೆಕೊಟ್ಟವರಲ್ಲಾ… ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುವ ನಾಡ ಹಬ್ಬ ತನ್ನ ಸೌಹಾರ್ದ ಪರಂಪರೆಯನ್ನ ಮುಂದುವರೆಸಲಿ.. ಇದೇ ದಸರಾವನ್ನ 2017 ರಲ್ಲಿ ಕವಿ ನಿಸಾರ್ ಅಹಮದ್ ಅವರು ಉಧ್ಘಾಟಿಸಿದ್ದಾರೆ. ಆಗಲೂ ನಾಡಿನ ಜನ ಸಂಭ್ರಮಿಸಿದ್ದಾರೆ.
ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡವುದನ್ನು ವಿರೋಧಿಸುವ ಮೂಲಕ ಬಿಜೆಪಿ ಮತ್ತು ಸಂಘಪರಿವಾರದ ಶಕ್ತಿಗಳು ನಿಜವಾಗಿಯೂ ಕರ್ನಾಟಕ ಹಾಗೂ ಕನ್ನಡ ಭಾಷೆಯ ಸಾಂಸ್ಕೃತಿಕ ಪರಂಪರೆಯ ವಿರೋಧಿಗಳು ಎಂದು ನಿರೂಪಿಸುತ್ತಿದ್ದಾರೆ. ಸರಕಾರ ಇಂತಹ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ವಿರೋಧಿಗಳಿಗೆ ಮಣಿಯಬಾರದು ಹಾಗೂ ಅಂತಹ ದುಷ್ಟಶಕ್ತಿಗಳನ್ನು ನಿಯಂತ್ರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ನೋಡಿ: ಕಾನೂನು ಅರಿವು|ಜೀವನಾಂಶ ಅಂದರೇನು? ಅದನ್ನು ಪಡೆಯುವುದು ಹೇಗೆ?Janashakthi Media
