ಶಿವಮೊಗ್ಗ: ‘ಸಂಸದ ಬಿ.ವೈ.ರಾಘವೇಂದ್ರ ಅವರ ಜನ್ಮದಿನದ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಮ್ಮ ಸ್ಥಾನದ ಘನತೆ ಮರೆತು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಆಗಸ್ಟ್ 12ರಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಸಿ.ಯೋಗೀಶ್, “ಷಡಾಕ್ಷರಿ ಅವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿ” ಎಂದು ಸಲಹೆ ನೀಡಿದರು.
‘ಶಿವಮೊಗ್ಗದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಆ. 5ರಂದು ಸಂಸದ ಬಿ.ವೈ.ರಾಘವೇಂದ್ರ ರ ಜನ್ಮದಿನ ಆಚರಣೆಯ ಸಿದ್ಧತೆಗೆ ನಡೆದ ಪೂರ್ವಭಾವಿ ಸಮಾರಂಭದಲ್ಲಿ ಸಿ.ಎಸ್.ಷಡಾಕ್ಷರಿ ಭಾಗಿಯಾಗಿದ್ದಾರೆ. ಅವರೇ ಆ ಸಭೆಯ ಪ್ರಾಯೋಜಕರಂತೆ ವರ್ತಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವರು ಸಭೆಯಲ್ಲಿ ಭಾಗವಹಿಸಿದ್ದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು. ಸಭೆಯ ಚಿತ್ರವನ್ನು ಇದೇ ವೇಳೆ ಅವರು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಒಳಮೀಸಲಾತಿ | ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್
‘ಷಡಾಕ್ಷರಿ ನೌಕರರ ಸಂಘದ ಅಧ್ಯಕ್ಷರಾಗುವ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವುದು ಸಲ್ಲ. ಇದು ನೌಕರರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರು ಷಡಾಕ್ಷರಿ ಅವರಿಗೆ ಸದಸ್ಯತ್ವ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಿ’ ಎಂದರು.
‘ಮುಂಬರುವ ಚುನಾವಣೆಯಲ್ಲಿ ಷಡಾಕ್ಷರಿ ಶಿವಮೊಗ್ಗದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇದೆಯಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯೋಗೀಶ್, ‘ಬಿಜೆಪಿ, ಆರ್ಎಸ್ಎಸ್ನವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಜಾಗವಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದವರೆಲ್ಲ ಮೂಲ ಕಾಂಗ್ರೆಸ್ಸಿಗರೇ ಆಗಿದ್ದರು. ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಮಣೆ ಹಾಕುತ್ತದೆ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ನಪ್ಪ, ಬಾಬು, ನವೀನ್ಕುಮಾರ್, ನಾಗರಾಜ್, ಶಿವಕುಮಾರ್, ವಿಶ್ವನಾಥ್, ಕಾಶಿ, ಯಮುನಾ ರಂಗೇಗೌಡ, ರಾಜು, ಮುನಾವರ್ ಹಾಜರಿದ್ದರು.
ಇದನ್ನೂ ನೋಡಿ: ಉತ್ತರಾಖಂಡದಲ್ಲಿ ಮೇಘಸ್ಫೋಟ : ಕೊಚ್ಚಿಹೋದ ಮನೆಗಳು Janashakthi Media
