ಬೆಂಗಳೂರು: ರಾಜ್ಯಾದ್ಯಂತ ಮಾದಿಗ ಮಹಾ ಒಕ್ಕೂಟದ ನೇತೃತ್ವದಲ್ಲಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಆಗಸ್ಟ್ 1ರಂದು ಭಾರೀ ಪ್ರತಿಭಟನೆ ನಡೆಯಿತು. ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಪ್ರಸಂಗ ನಡೆದಿದೆ. ಪರಿಶಿಷ್ಟ
ನಗರದ ಫ್ರೀಡಂ ಪಾರ್ಕ್ನಲ್ಲಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಶಿಷ್ಟ
ಈ ವೇಳೆ ಮಾತನಾಡಿದ ನಾರಾಯಣಸ್ವಾಮಿ, ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಿ. ಒಂದು ವೇಳೆ ಜಾರಿ ಮಾಡದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಮಾದಿಗರು ಅಸಹಕಾರ ಚಳವಳಿ ನಡೆಸಲಿದ್ದೇವೆ. ನಾವು ಇನ್ನು ಕಾಯಲ್ಲ, ಓಲೈಕೆಗೆ ಬಗ್ಗಲ್ಲ. ಮುಂದಿನ ಚುನಾವಣೆವರೆಗೂ ಯಾವುದೇ ಕಾರಣಕ್ಕೂ ಕಾಯಲ್ಲ ಎಂದು ಎಚ್ಚರಿಸಿದರು. ಪರಿಶಿಷ್ಟ
ಇದನ್ನೂ ಓದಿ: 13 ವರ್ಷದ ಬಾಲಕನನ್ನು ಅಪಹರಿಸಿ ಸುಟ್ಟು ಹಾಕಿದ ಅಪಹರಣಕಾರರು
ನಾವು ಬೀದಿಗಿಳಿದರೆ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ. ಸುಮಾರು 40 ವರ್ಷಗಳಿಂದಾದ ಅನ್ಯಾಯವನ್ನು ಪರಿಗಣಿಸಿ ಮೀಸಲಾತಿ ಕೊಡಬೇಕಿದೆ. ಅನೇಕ ದಶಕಗಳಿಂದಾದ ಅನ್ಯಾಯ ಪರಿಗಣಿಸಿ ಹೆಚ್ಚು ಮೀಸಲಾತಿ ಕೊಡದೇ ಇದ್ದರೆ ರಾಜ್ಯದ ಮಾದಿಗರು ಹೋರಾಟಕ್ಕೆ ಸನ್ನದ್ಧರಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಬೀದರ್: ಮಾದಿಗ ಒಕ್ಕೂಟದಿಂದ ಬೀದರ್ನಲ್ಲಿಯೂ ಪ್ರತಿಭಟನೆ ನಡೆಯಿತು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ಕಾರ್ಯಕರ್ತರು ಕೇಶಮುಂಡನ ಮಾಡಿಸಿಕೊಂಡು ಸರ್ಕಾರ ವಿರುದ್ಧ ಕಿಡಿಕಾರಿದರು.
ಕಲಬುರಗಿ: ಜಿಲ್ಲೆಯಲ್ಲಿ ಇಂದು ನಡೆದ ಪ್ರತಿಭಟನೆಯ ವೇಳೆ ಮನವಿ ಸಲ್ಲಿಕೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಅವರೇ ಬರಬೇಕು. ತಮ್ಮ ಅಹವಾಲು ಆಲಿಸಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಗೇಟ್ ಎದುರು ಧರಣಿ ಕುಳಿತರು. ಈ ವೇಳೆ ಪೊಲೀಸರು ಮನವೊಲಿಸಲು ಯತ್ನಿಸಿದರೂ ಕ್ಯಾರೇ ಎನ್ನದ ಪ್ರತಿಭಟನಾಕಾರರು ಜೈ ಮಾದಿಗ ಜೈ, ಜೈ ಮಾದಿಗ ಘೋಷಣೆ ಮೊಳಗಿಸಿದರು.
ಬಳ್ಳಾರಿ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಮಾದಿಗ ಒಕ್ಕೂಟದಿಂದ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಯಿತು. ನಗರದ ಅಂಬೇಡ್ಕರ್ ಸಂಘದ ಜಿಲ್ಲಾ ಕಚೇರಿ ಮುಂಭಾಗದಿಂದ ಗಡಗಿ ಚೆನ್ನಪ್ಪ ಸರ್ಕಲ್ವರೆಗೆ ನೂರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.
ಈ ವೇಳೆ ಸರ್ಕಾರದ ವಿರುದ್ದ ಘೋಷಣೆ ಕೂಗಲಾಯ್ತು. ಅಲ್ಲದೆ ಇಲ್ಲಿ ಸಮುದಾಯದ ಮುಖಂಡರೊಬ್ಬರು ತಲೆ ಬೋಳಿಸಿಕೊಂಡು ಸರ್ಕಾರದ ವಿರುದ್ದ ತನ್ನ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ಸಾಗಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಲಾಯ್ತು.
ಕೊಪ್ಪಳ: ಇತ್ತ ಕೊಪ್ಪಳ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿಯೂ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಸಂದರ್ಭದಲ್ಲಿ ಸಮುದಾಯದ ಮುಖಂಡರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ಹಾಗೂ ಜಟಾಪಟಿ ನಡೆಯಿತು. ಈ ವೇಳೆ ಹೋರಾಟಗಾರರು ಪೊಲೀಸರ ವಿರುದ್ಧವೇ ಘೋಷಣೆಗಳನ್ನು ಕೂಗಿದರು. ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲಾ ರಾಜಕೀಯ ಪಕ್ಷಗಳು ಒಳ ಮೀಸಲಾತಿ ವಿಚಾರದಲ್ಲಿ ಕಳೆದ ಮೂರೂವರೆ ದಶಕಗಳಿಂದ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದು, ಈಗಲಾದರೂ ಮೀಸಲಾತಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯಾದಗಿರಿ: ಜಿಲ್ಲೆಯ ಮಾದಿಗ ಸಮಾಜದ ಸಾವಿರಾರು ಜನರು ಇಂದು ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅಲೆಮಾರಿ,ಅರೆಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ ನಾದ್, ದೇಶದ ಬೇರೆ, ಬೇರೆ ರಾಜ್ಯಗಳಲ್ಲಿ ಈಗಾಗಲೇ ಒಳಮೀಸಲಾತಿ ಜಾರಿ ಮಾಡಲಾಗಿದೆ. ಅಲ್ಲಿ ಇರದ ತೊಂದರೆ ನಮ್ಮ ರಾಜ್ಯದಲ್ಲಿ ಅಂತಾದ್ದೇನು ತೊಂದರೆ ಇದೆ ಎಂದು ಅವರು ಪ್ರಶ್ನಿಸಿದರು.
ಚಿತ್ರದುರ್ಗ: ಮಾದಿಗ ಮಹಾಸಭಾ ಸದಸ್ಯರು ಚಿತ್ರದುರ್ಗ ಜಿಲ್ಲೆಯಲ್ಲಿ ತಮಟೆ ಚಳವಳಿ ನಡೆಸಿದರು. ಒಳಮೀಸಲಾತಿ ಜಾರಿಗೊಳಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಬಗ್ಗೆ ಮಾತನಾಡುವುದು ತಪ್ಪೆ? ಯಾಕೆ ಅಪಪ್ರಚಾರ ಮಾಡ್ತೀರಿ? Janashakthi Media
