ಡೊನೇಷನ್‌ ಮಾಫೀಯಾಗೆ ಕಡಿವಾಣ ಯಾಕಿಲ್ಲ!

ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಖಾಸಗಿ ಶಾಲೆಗಳಲ್ಲಿ ಡೊನೇಷನ್‌ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಖಾಸಗಿ ಶಾಲೆಗಳು ಶಿಕ್ಷಣ ಕೇಂದ್ರಗಳಾಗಿರದೆ ಮಾರುಕಟ್ಟೆಯ ಕೇಂದ್ರಗಳಾಗಿದ್ದು, ಡೊನೇಷನ್‌ ಹೆಸರಲ್ಲಿ ಪಾಲಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಎಂಬುದು ಗೊತ್ತಿದ್ದು ಸರ್ಕಾರ ಪದೇ ಪದೇ ನಿದ್ರೆಗೆ ಜಾರುತ್ತಿದೆ. ಮಾಫೀಯಾ

-ಗುರುರಾಜ ದೇಸಾಯಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದ ತಕ್ಷಣವೇ ಅಲ್ಲಲ್ಲಿ ಫ್ಲೆಕ್ಸ್‌ಗಳು ಆರ್ಭಟಿಸುತ್ತವೆ. ಫ್ಲೆಕ್ಸ್‌ ಭರಾಟೆಗೆ ಪೋಷಕರಲ್ಲಿ ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಿಕೊಳ್ಳಬೇಕು ಎಂಬ ಪೈಪೋಟಿಯ ಮಾತುಗಳು ಕೇಳಿ ಬರುತ್ತವೆ.. ಖಾಸಗಿ ಶಾಲೆಗಳು ಇಷ್ಟು ಸಾಕು! ಖಾಸಗಿ ಶಾಲಾ ಶಿಕ್ಷಕರು ಮನೆ ಮನೆಗೆ ಭೇಟಿ ಮಾಡಿ ಶಾಲೆಗೆ ಅಡ್ಮೀಶನ್‌ ಮಾಡಿಸುವಂತೆ ಕರಪತ್ರ ಕೂಡಾ ಹಂಚಿ ಇನ್ನಷ್ಟು ಗೊಂದಲಕ್ಕೆ ಸಿಲುಕಿಸುತ್ತಾರೆ. ಪೋಷಕರಿಗೆ ಇಲ್ಲಿಂದಲೆ ಗೊಂದಲ ಆರಂಭವಾಗುತ್ತದೆ. ನನ್ನ ಮಗು ಯಾವ ಶಾಲಾಗೆ ಹೋಗಬೇಕು? ಯಾವ ಶಾಲೆ ಸಿಬಿಎಸ್‌ಸಿ, ಯಾವ ಶಾಲೆ ಐಸಿಎಸ್‌ಸಿ, ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಇದೆಯಾ? ಆ ಶಾಲೆಯಲ್ಲಿ ಡೊನೇಶ್‌ನ್‌ ಜಾಸ್ತಿಯಂತೆ, ಡೊನೇಶನ್‌ ಜಾಸ್ತಿ ತೊಗೊಳ್ತಾರೆ ಅಂದ್ರೆ ಆ ಶಾಲೆ ಸೂಪರ್‌ ಆಗಿರುತ್ತೆ ಅಂತೆಲ್ಲ ರಾತ್ರಿಯೆಲ್ಲ ಯೋಚಿಸಿ, ವಿಚಾರಿಸಿ ಅಡ್ಮೀಶನ್‌ಗೆ ರೆಡಿಯಾಗ್ತಾರೆ. ಖಾಸಗಿ ಶಾಲೆಗಳಿಗೆ ಬೇಕಿರುದು ಕೂಡಾ ಇದೆ! ಪೋಷಕರನ್ನು ನೈಸ್‌ ಮಾಡ್ತಾ ಮನಸೋ ಇಚ್ಚೇ ಡೊನೇಷನ್‌ ಪಡೆಯುತ್ತಾರೆ. ಮಾಫೀಯಾ

ಎಲ್‌ಕೆಜಿಗೆ 40 ಸಾವಿರ, ಯುಕೆಜಿಗೆ 50 ಸಾವಿರ, 8 ನೇ ತರಗತಿಗೆ 75 ಸಾವಿರ ಪಿಯುಸಿಗೆ 1 ಲಕ್ಷ. ಸಿಇಟಿ ಕೋಚಿಂಗ್‌ ನಾವೇ ಕೊಡ್ತೇವೆ ಹಾಸ್ಟಲ್‌ ವ್ಯವಸ್ಥೆ ಇದೆ ಅಂತಾ ಅದಕ್ಕೊಂದು ಲಕ್ಷ.. ಹೀಗೆ ಸಾವಿರದಿಂದ ಆರಂಭವಾಗಿ ಲಕ್ಷಕ್ಕೆ ಬಂದು ನಿಲ್ಲುತ್ತದೆ. ಕೆಲ ಖಾಸಗಿ ಶಾಲೆಗಳಲ್ಲಿ ಮಗು ಹುಟ್ಟಿದ ತಕ್ಷಣವೇ ನೇಮಕಾತಿಗೆ ಅವಕಾಶ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹುತೇಕ ಖಾಸಗಿ ಶಾಲಾ– ಕಾಲೇಜುಗಳು ಲೇಖನ ಸಾಮಗ್ರಿ ಮಾರಾಟಕ್ಕೆ ಇಳಿದಿವೆ. ಮಾಫೀಯಾ

ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ

ವ್ಯಾಪಾರಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಪ್ರವೇಶದ ಸಂದರ್ಭದಲ್ಲೇ ಒದಗಿಸುವುದನ್ನು ರೂಢಿಸಿಕೊಂಡಿವೆ. ನೋಟ್‌ ಪುಸ್ತಕ, ಬೈಂಡ್‌ ಕಾಗದ, ಬಣ್ಣದ ಪೆನ್ಸಿಲ್‌, ನಕ್ಷೆ, ಎರಡು ಜೊತೆ ಬಟ್ಟೆ ಶೂ ಸಾಕ್ಸ್‌ ಸೇರಿದಂತೆ ಬಹಳಷ್ಟು ವಸ್ತುಗಳನ್ನು ಹಣ ಪಾವತಿಸಿ ಶಾಲೆಯಲ್ಲೇ ಅವುಗಳನ್ನು ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಮಾರುಕಟ್ಟೆಗಿಂತ ಹೆಚ್ಚಿನ ದರಗಳಲ್ಲಿ ಇವುಗಳನ್ನು ಮಾರಲಾಗುತ್ತಿದ್ದು, ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ರೀತಿ ಶಾಲಗಳಲ್ಲಿ ಮಾರಾಟ ಮಾಡಬಾರದು ಎಂದು ಹಲವು ಬೋರ್ಡ್‌ಗಳು ಹೇಳುತ್ತಲೇ ಬಂದಿವೆ. ಮಾಫೀಯಾ

ಖಾಸಗಿ ಶಾಲೆಗಳ ಶುಲ್ಕ ನಿಗದಿ ಹೇಗೆ?

ಯಾವ ಶಾಲೆ ಎಷ್ಟು ಹಣ ಪಡಿಬೇಕು ಎಂಬ ಲೆಕ್ಕಾಚಾರದ ನಿಯಮ ಇದೆ. ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಿರ್ಧರಿಸುತ್ತಾರೆ. ವಿದ್ಯಾರ್ಥಿಗಳ ಸಂಖ್ಯೆ, ಖರ್ಚುವೆಚ್ಚ ಸಿಬ್ಬಂದಿಗಳ ವೇತನ, ಹೀಗೆ ಎಲ್ಲವನ್ನೂ ಲೆಕ್ಕ ಹಾಕಿ ಶುಲ್ಕ ನಿಗದಿ ಮಾಡ್ತಾರೆ. ಇನ್ನಷ್ಟು ಸರಳವಾಗಿ ವಿವರಿಸುವುದಾದರೆ, ಒಂದು ಶಾಲೆಯಲ್ಲಿ 500 ಜನ ವಿದ್ಯಾರ್ಥಿಗಳಿದ್ದಾರೆ, 20 ಜನ ಸಿಬ್ಬಂದಿಗಳಿದ್ದಾರೆ, ಸರಾಸರಿ ಒಬ್ಬರಿಗೆ 15 ಸಾವಿರ ರೂ ವೇತನದಂತೆ ಲೆಕ್ಕ ಹಾಕಿದರೆ ವಾರ್ಷಿಕವಾಗಿ 36 ಲಕ್ಷ ರೂ ಆಗುತ್ತದೆ. ಮಾಫೀಯಾ

ಇನ್ನೂ ಶಾಲೆಯ ಖರ್ಚು 10 ಲಕ್ಷ ಎಂದಿಟ್ಟುಕೊಳ್ಳಿ ಒಟ್ಟು ಒಂದು ವರ್ಷಕ್ಕೆ ಆ ಶಾಲೆಯ ಖರ್ಚು 46 ಲಕ್ಷ ರೂ ಆಗುತ್ತದೆ, ಬೇಡ 50 ಲಕ್ಷ ಅಂತಲೇ ಇಟ್ಟುಕೊಳ್ಳಿ, ಇದನ್ನು ಐದುನೂರು ವಿದ್ಯಾರ್ಥಿಗಳಿಂದ ಭಾಗಿಸಿದಾಗ ಸಿಗುವ ಉತ್ತರವೇ ಆ ಶಾಲೆಯಲ್ಲಿ ಮಗುವಿಗೆ ಕಟ್ಟಬೇಕಾದ ಶುಲ್ಕ, ಅಂದರೆ 10 ಸಾವಿರ ರೂಪಾಯಿಯನ್ನು ಶಿಕ್ಷಣ ಇಲಾಖೆ ನಿಗದಿ ಪಡಿಸಿರುತ್ತದೆ. ಬೇಡ 15 ಸಾವಿರ ಅಂತಲೇ ಇಟ್ಟುಕೊಳ್ಳಿ.. ಈಗ ಯೋಚಿಸಿ ನೀವೆಷ್ಟು ಫೀಸ್‌ ಕೊಟ್ಟಿದ್ದೀರಿ, ನಿಮ್ಮಿಂದ ಆ ಖಾಸಗಿ ಶಾಲೆ ಎಷ್ಟು ವಸೂಲು ಮಾಡಿದೆ ಎಂದು. ಮಾಫೀಯಾ

ವಸೂಲಿ ನಿಯಂತ್ರಣ ಸಾಧ್ಯವಿಲ್ಲವೆ?

ಅಯ್ಯೂ ಇಷ್ಟೊಂದು ಫೀಸ್‌ ಕಟ್ಟಿಬಿಟ್ವಲ್ಲ ಅಂತ ಕೈ ಕೈ ಹಿಸಿಕಿಕೊಳ್ತಾ ಇದ್ದೀರಾ, ಇದಕ್ಕೋಂದು ದಾರಿ ಇದೆ. ಆ ಖಾಸಗಿ ಶಾಲೆಯ ಮೇಲೆ ನೀವು ದೂರು ನೀಡಬಹುದು! ಅದು ಹೇಗೆ ಅಂತೀರಾ? ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷ ಣ ರೆಗ್ಯುಲೇಟಿಂಗ್‌ ಪ್ರಾಧಿಕಾರ ಎಂದು ಇದೆ. ಇಂಗ್ಲೀಷ್‌ನಲ್ಲಿ ಅದನ್ನು DISTRICT EDUCATION REGULATING. AUTHORITY ಎಂದು ಕರೆಯುತ್ತಾರೆ. ಸಂಕ್ಷಿಪ್ತವಾಗಿ ಡೇರಾ ಎಂದು ಕರೆಯುತ್ತಾರೆ. ಇನ್ನೂ ಈ ಡೇರಾದ ಕೆಲಸ ಏನು ಅಂದ್ರೂ, ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡುವುದು. ಈ ಕಾಯ್ದೆ ಇವತ್ತು, ನಿನ್ನೆ ಜಾರಿಯಾದದ್ದಲ್ಲ, ತುಂಬಾ ವರ್ಷದಿಂದ ಜಾರಿಯಲ್ಲಿದೆ. ಇಂತಹದ್ದೊಂದು ಸಮಿತಿ ಇದೆ ಎನ್ನುವಂತದ್ದು ಜಿಲ್ಲಾಧಿಕಾರಿಗಳಿಗೆ ಗೊತ್ತಿಲ್ಲ ಅನಿಸುವಷ್ಟರ ಮಟ್ಟಿಗೆ ಈ ಕಾಯ್ದೆ ಇದೆ. ಹಾಗಾಗಿ ಇದಕ್ಕೆ ದೂರು ಬರೋದು ದೂರದ ಮಾತು ಅಂತಾ ಹೇಳಿದ್ರು ತಪ್ಪಾಗಲಿಕ್ಕಿಲ್ಲ. ಮಾಫೀಯಾ

ಈ ಕಾಯ್ದೆ ಹಲ್ಲುಕಿತ್ತ ಹಾವಿನಂತಾಗೋದಕ್ಕೆ ಕಾರಣವೂ ಇದೆ. ಖಾಸಗಿ ಶಾಲೆ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿದೆ ಎಂದು ಪೋಷಕರೆ ಶಾಲೆಯ ವಿರುದ್ಧ ದೂರು ನೀಡಬೇಕು. ಯಾವ ಪೋಷಕರು ದೂರು ಕೊಡೋದಕ್ಕೆ ದೈರ್ಯ ಮಾಡುವುದಿಲ್ಲ. ಯಾಕೆ ಅಂದ್ರೆ ಅವರ ಮಕ್ಕಳ ಶಿಕ್ಷಣ ಭವಿಷ್ಯದಿಂದ ಅವರು ಹಿಂಜರಿಯುತ್ತಾರೆ. ಮಗುವನ್ನು ಟಾರ್ಗೇಟ್‌ ಮಾಡಿಬಿಟ್ರೆ ಹೇಗೆ ಎಂಬ ಭಯದಿಂದ ಅವರು ದೂರು ಕೊಡಲು ಮುಂದೆ ಬರುವುದಿಲ್ಲ. ಹೀಗಿದ್ದಾಗ ಡೇರಾ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಮೂರು ತಿಂಗಳಿಗೊಮ್ಮ ಸಭೆ ಸೇರಬೇಕು.

ಮುಖ್ಯವಾಗಿ ಪೋಷಕರು ದೂರು ನೀಡುವಂತೆ ಮಾಡಲು ಜಾಗೃತಿ ಮೂಢಿಸಬೇಕು, ಪ್ರೋತ್ಸಾಹಿಸಿ, ಗೌಪ್ಯತೆಯನ್ನು ಕಾಪಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಖಾಸಗಿ ಶಾಲೆಗಳ ಅಕೌಂಟ್‌ ಪರಿಶೀಲನೆ ಮಾಡಿದ್ರೆ ಯಾವ ಶಾಲೆ ಎಷ್ಟು ಹಣ ಪಡೆದಿದೆ ಎಂಬ ಲೆಕ್ಕಾಚಾರ ಸಿಕ್ಕು ಬಿಡುತ್ತೆ. ಈ ಡೇರಾ ಸಮಿತಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಬೇಕು ಎಂದು ವಿದ್ಯಾರ್ಥಿ ಪೋಷಕರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಇವೆ, ಶಿಕ್ಷಣ ತಜ್ಞರು ಇದರ ಅಪಾಯಗಳನ್ನು ಎಚ್ಚರಿಸುತ್ತಲೇ ಬಂದಿದ್ದಾರೆ, ಆದರೆ ಸರಕಾರ ಎಚ್ಚೆತ್ತು ಹಣ ಪೀಕುವ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಲಬೇಕಿದೆ.

ಸಾರ್ವತ್ರಿಕ ಶಿಕ್ಷಣವನ್ನು ಬಲಪಡಿಸಿ, ಸಮಾನ ಗುಣಮಟ್ಟದ ಶಿಕ್ಷಣ ನೀಡಿದ್ದರೆ ಇಂತಹ ವಸೂಲಿಗಳು ನಡೆಯುತ್ತಿರಲಿಲ್ಲ, ಆದರೆ ಸರಕಾರವೇ ಸರಕಾರಿ ಮತ್ತು ಖಾಸಗಿ ಶಾಲೆ ಎಂಬ ಎರಡು ಆಯ್ಕೆಯನ್ನು ನೀಡಿ ಪೋಷಕರನ್ನು ಗೊಂದಲ್ಲಕೆ ಸಿಲುಕಿಸಿದೆ. 224 ಶಾಸಕರಲ್ಲಿ ಬಹುತೇಕ ಶಾಸಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ, ಹಾಗಾಗಿ ಶಿಕ್ಷಣ ಕ್ಷೇತ್ರ ಮಾರಾಟದ ಸರಕಾಗಿ ಬಿಟ್ಟಿದೆ. ಇನ್ನಾದರೂ ಸರಕಾರ ಎಚ್ಚೆತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಂತಾಗಲಿ, ಅಲ್ಲಿಯವರೆಗೆ ಖಾಸಗೀ ಶಾಲೆಗಳನ್ನು ತನ್ನ ನಿಯತ್ರಣಕ್ಕೆ ತೆಗೆದುಕೊಳ್ಳಲಿ, ಆಗ ಡೊನೇಷನ್‌ ಎಂಬ ಮಾಫೀಯಾವನ್ನು ನಿಲ್ಲಿಸಲು ಸಾಧ್ಯ.

ಇದನ್ನೂ ನೋಡಿ: ಖಾಸಗಿ ಶಾಲೆಗಳು ಪಡೆಯುತ್ತಿರುವುದು ಶುಲ್ಕವೋ! ವಸೂಲಿಯೋ!!? Janashakthi Media

Donate Janashakthi Media

Leave a Reply

Your email address will not be published. Required fields are marked *