ಬೆಂಗಳೂರು: ಧರ್ಮಸ್ಥಳ ಅಸಹಜ ಸಾವುಗಳ ಕುರಿತಾಗಿ ಕಳೆದ ಎರಡು ಮೂರು ದಶಕಗಳಿಂದ ಅನೇಕ ಬಾರಿ ಸುದ್ದಿಗಳು ಹೊರಬಂದು ಹಿಂದಿನ ಸೌಜನ್ಯ ಪ್ರಕರಣದ ವರೆಗೂ ಅನೇಕ ಪ್ರತಿಭಟನೆಗಳು ನಡೆದಿವೆ. ಆದರೆ ಅಲ್ಲಿನ ಅಸಹಜ ಸಾವುಗಳು ಮತ್ತು ಪತ್ತೆಯಾಗದ ಪ್ರಕರಣಗಳು ನ್ಯಾಯಯುತ ಅಂತ್ಯವನ್ನು ಕಂಡಿಲ್ಲ ಎಂದು ಅಖಿಲ ಭಾರತ ವಕೀಲರ ಒಕ್ಕೂಟ (AILU) ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ ಆರೋಪಿಸಿದ್ದಾರೆ.
ಈಗ ಮತ್ತೊಮ್ಮೆ ಧರ್ಮಸ್ಥಳದ ಪ್ರಕರಣಗಳಿಗೆ ತಿರುವು ದೊರೆತಿದ್ದು ಈ ಹಿಂದೆ ಧರ್ಮಸ್ಥಳ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಓರ್ವ ನೌಕರರು ಅನೇಕ ಶವಗಳನ್ನು ಹೂತಿಟ್ಟಿರುವ ಬಗ್ಗೆ ಸ್ಫೋಟಕ ಮಾಹಿತಿಯುಳ್ಳ ಫಿರ್ಯಾದಿಯನ್ನು ಸ್ಥಳೀಯ ಪೋಲೀಸು ಠಾಣೆಗೆ ನೀಡಿದ್ದು, ದ.ಕ. ಜಿಲ್ಲಾ ಎಸ್. ಪಿ.ಯವರನ್ನೂ ತಮ್ಮ ವಕೀಲರೊಂದಿಗೆ ಭೇಟಿಯಾಗಲು ಪ್ರಯತ್ನಿಸಿ, ನಂತರ ಪ್ರತಿಜ್ಞಾಬದ್ಧ ಫಿರ್ಯಾದಿ ಹೇಳಿಕೆಯನ್ನು ಸ್ಥಳೀಯ ಬೆಳ್ತಂಗಡಿ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಕೂಡ ನೀಡಿರುತ್ತಾರೆ ಎಂದರು.
ಅದಾಗ್ಯೂ ಸಾಕ್ಷಿ ಪಿರ್ಯಾದುದಾರ ತಾನೇ ಭಾಗಿಯಾದ ಈ ಗಂಭೀರ ಪ್ರಕರಣದ ಕುರಿತು ಖುದ್ದು ಒಪ್ಪಿಕೊಂಡು ಶರಣಾಗತಿಯಾಗಿ ಹೂತಿಟ್ಟ ಶವಗಳನ್ನು ಆಯಾಯ ಪ್ರದೇಶಕ್ಕೆ ತೆರಳಿ ತೋರಿಸುವುದಾಗಿ ಬೇಡಿಕೊಂಡು ಶೀಘ್ರತನಿಖೆಗೆ ಒತ್ತಾಯಿಸುತ್ತಿದ್ದರೂ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಈ ಕುರಿತು ಇನ್ನೂ ಸೂಕ್ತ ಗಮನ ಹರಿಸದೆ ಕಾಲಹರಣ ಮಾಡುತ್ತಾ ಇರುವುದನ್ನು ಗಮನಿಸಿದರೆ ಇಡೀ ಪೋಲೀಸು ವ್ಯವಸ್ಥೆಯೇ ಅಪರಾಧಿಗಳನ್ನು ರಕ್ಷಿಸಿ ಸತ್ಯವನ್ನು ಮುಚ್ಚಿ ಹಾಕಲು ಕಟಿಬದ್ಧರಾಗಿದ್ದಾರೋ ಎಂಬ ಸಂಶಯ ಜಿಲ್ಲೆಯ ನ್ಯಾಯಪ್ರಿಯರನ್ನು ಕಾಡುತ್ತಿದೆ ಎಂದರು.
ಇದನ್ನೂ ಓದಿ: ಮಸ್ಕಿ| 4000 ವರ್ಷ ಹಳೆಯ ಮಾನವ ವಸತಿ ಪ್ರದೇಶದ ಕುರುಹುಗಳು ಪತ್ತೆ
ಸಾಕ್ಷಿ ಪಿರ್ಯಾದುದಾರ ಸಿದ್ಧನಿದ್ದರೂ ಫಿರ್ಯಾದಿ ದಾಖಲಿಸಿ ಸಾಕಷ್ಟು ದಿನಗಳು ಕಳೆದರೂ ಇನ್ನೂ ಶವಗಳನ್ನು ಮಣ್ಣಿನೊಳಗಿಂದ ಮೇಲೆತ್ತಿ ಸೂಕ್ತ ಮಹಜರು ನಡೆಸದ ಪೊಲೀಸ್ ನಡೆಯು ಈ ಗಂಭೀರ ಪ್ರಕರಣವನ್ನು ಶತಾಯಗತಾಯ ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿರುವಂತೆ ಗೋಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಪ್ರಕರಣವು ಇಡೀ ದೇಶವೇ ಬೆಚ್ಚಿ ಬಿದ್ದ ಒಂದು ಗಂಭೀರ ಪ್ರಕರಣವಾಗಿದ್ದು, ಈ ಕುರಿತು ಪೊಲೀಸ್ ವ್ಯವಸ್ಥೆಯು ವಿಳಂಬ ನೀತಿಯನ್ನು ಅನುಸರಿಸಿದ ಪಕ್ಷದಲ್ಲಿ ಸಾಕ್ಷಿ ನಾಶವಾಗಿ ಸತ್ಯ ಮುಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ತಕ್ಷಣವೇ ಸದ್ರಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಬೇಕು. ಈ ಪ್ರಕರಣದಲ್ಲಿ ಸಾಕ್ಷಿ ಪಿರ್ಯಾದುದಾರ ಮತ್ತು ಅವರ ವಕೀಲರಿಗೆ ಅಪಾಯದ ಮುನ್ಸೂಚನೆ ಅಧಿಕವಾಗಿರುವ ಕಾರಣ ಸೂಕ್ತ ಭದ್ರತೆಯನ್ನು ತುರ್ತಾಗಿ ಅವರೆಲ್ಲರಿಗೂ ಒದಗಿಸಬೇಕು. ಪ್ರಕರಣದ ಸಮಗ್ರ ತನಿಖೆಗಾಗಿ ನಿಷ್ಪಕ್ಷಪಾತ ತಜ್ಞ ಎಸ್ಐಟಿ ತನಿಖಾ ದಳವನ್ನು ಕೂಡಲೇ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾತ್ರವಲ್ಲದೆ ಈ ಹಿಂದೆ ಘಟಿಸಿರುವ ಪದ್ಮಲತಾ ಪ್ರಕರಣ ಹಾಗೂ ಧರ್ಮಸ್ಥಳದ ಆನೆಮಾವುತ ನಾರಾಯಣ ಮತ್ತು ಯಮುನಾಳ ಸಾವನ್ನು ಕೂಡ ಮರುತನಿಖೆಗೆ ಒಳಪಡಿಸಬೇಕು. ಕಳೆದ ಎರಡು ಮೂರು ದಶಕಗಳಿಂದ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿನ ಅಸಹಜ ಸಾವು ಮತ್ತು ಪತ್ತೆಯಾಗದ ಬಲಾತ್ಕಾರ ಮತ್ತು ಸಾವುಗಳ ಪ್ರಕರಣಗಳ ಮರುತನಿಖೆಯನ್ನು ನಡೆಸಬೇಕು ಎಂದರು.
ಈಗಾಗಲೇ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು ತನಿಖಾ ಲೋಪವನ್ನು ಎತ್ತಿ ತೋರಿಸಿದ್ದು ಈ ತನಿಖಾಲೋಪವೆಸಗಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ ಈ ಮೂಲಕ ಮಾನ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣಪ್ರಭಾವ ಲೆಕ್ಕಿಸದೆ ಬಂಧಿಸಬೇಕು | Janashakthi Media
