ಹುಬ್ಬಳ್ಳಿ: ಇಬ್ಬರು ರೈತರು, ರವಿರಾಜ್ ಮತ್ತು ಬಸನಗೌಡ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ನಡೆದಿದ್ದೂ, ಅದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಬ್ಬರು
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೈತರು ಧೈರ್ಯವಾಗಿರಬೇಕು. ಆತ್ಮಹತ್ಯೆ ಒಂದೇ ಪರಿಹಾರವಲ್ಲ. ನಾನು ದೊಡ್ಡ ಕುಟುಂಬದಿಂದ ಬಂದವನಾಗಿದ್ದರೂ ಕಷ್ಟಗಳನ್ನು ಎದುರಿಸಿದ್ದೇನೆ ಎಂದರು.
ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸುತ್ತೇನೆ ಎಂದು ಲಾಡ್ ಭರವಸೆ ನೀಡಿದರು. ಅಲ್ಲದೇ ಬೆಳೆ ವಿಮೆಯಲ್ಲಿ ಯಾವುದೇ ಅನ್ಯಾಯವಾಗಿದ್ದರೆ, ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: ನೋಟಿಸ್ ಬಂದಿದ್ದರೆ ತಕ್ಷಣವೇ ಉತ್ತರಿಸಿ: ಟೀ-ಅಂಗಡಿ ಮಾಲೀಕರಿಗೆ GST ತಜ್ಞರ ಸಲಹೆ
ಶಾಸಕರ ಖರೀದಿ ಬಿಜೆಪಿ ಟ್ರಿಕ್ಸ್; ಜೋಶಿಗೆ ತಿರುಗೇಟು:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಶಾಸಕರ ಖರೀದಿ ಆರೋಪದ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಲಾಡ್, ಶಾಸಕರ ಖರೀದಿ ಬಿಜೆಪಿಯವರ ಟ್ರಿಕ್ಸ್ ಇದು. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯವರು ಎಷ್ಟು ಶಾಸಕರನ್ನು ಖರೀದಿಸಿದ್ದಾರೆಂದು ಹೇಳಲಿ.
ದೇಶದ ವಿಷಯಗಳ ಬಗ್ಗೆ ಕೇಳಿದರೆ ಅವರು ಮಾತನಾಡುವುದಿಲ್ಲ. ಕೇಂದ್ರ ಸಚಿವರು ಕೇವಲ ರಾಜ್ಯವನ್ನು ಟೀಕಿಸಿ ಹೋಗುತ್ತಾರೆ. ಬಿಜೆಪಿಯವರಿಗೆ ಲೆಕ್ಕ-ಬುಕ್ಕ ಇಲ್ಲ, ಕೇವಲ ಮಾತಿನಲ್ಲಿ ಕಾಲ ಕಳೆಯುತ್ತಾರೆ ಎಂದು ಲಾಡ್ ವಾಗ್ದಾಳಿ ನಡೆಸಿದರು.
ನೆರೇಗಾ ಮುಗಿಸುವ ಹುನ್ನಾರ:
ನರೇಗಾ ಯೋಜನೆಯ ಕುರಿತಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನರೇಗಾದಲ್ಲಿ ಎಷ್ಟು ಕೆಲಸವಾಗಿದೆ, ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಬಿಜೆಪಿಯವರು ಹೇಳಲಿ. ಅವರ ಉದ್ದೇಶವೇ ನರೇಗಾ ಯೋಜನೆಯನ್ನು ಮುಗಿಸುವುದು. ಬಿಜೆಪಿಯವರ ಬಂಡವಾಳ ಬಯಲಾಗಿದೆ ಎಂದು ಆರೋಪಿಸಿದರು.
ಯಾರು ಸಿಎಂ ಆಗುತ್ತಾರೆ, ಯಾರು ಬಿಡುತ್ತಾರೆ ಎಂಬ ಚರ್ಚೆ ಅನಗತ್ಯ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ, ಎಂದು ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ಇದನ್ನೂ ನೋಡಿ: ಅಖಿಲ ಭಾರತ ಮುಷ್ಕರಕ್ಕೆ ಎಡಪಕ್ಷಗಳ ಬೆಂಬಲ Janashakthi Media
