ತಿರುವನಂತಪುರಂ: ಕೇರಳದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭೂಕುಸಿತ, ಮಣ್ಣಿನ ಕುಸಿತ ಹಾಗೂ ಹಠಾತ್ ಪ್ರವಾಹದಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ರಾಜ್ಯದ ಮಳೆ ಪರಿಸ್ಥಿತಿಯನ್ನು ಗಂಟೆಗೊಮ್ಮೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೇರಳದಲ್ಲಿ
ಮಲಪ್ಪುರಂ ಜಿಲ್ಲೆಯ ನಿಲಂಬೂರು–ಅಮರಂಬಲಂ ಪ್ರದೇಶದ ಕೊಟ್ಟಪುಳ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಐವರು ನೀರಿನಲ್ಲಿ ಕೊಚ್ಚಿಹೋಗಿದ್ದರು. ನದಿಗೆ ಸ್ನಾನಕ್ಕೆ ತೆರಳಿದ್ದ ಗುಂಪಿನ ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಇಬ್ಬರ ಮೃತದೇಹಗಳನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆಗೆ ಮೇಲ್ಭಾಗದ ಅರಣ್ಯ ಪ್ರದೇಶದಲ್ಲಿ ಸುರಿದ ಭಾರಿ ಮಳೆ ಕಾರಣ ಎನ್ನಲಾಗಿದೆ.
ಕೊಟ್ಟಾಯಂ ಜಿಲ್ಲೆಯಲ್ಲಿ ಟೀಕೋಯ್ ಸಮೀಪದ ವೇಲತ್ತೂಶೇರಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ತಮಿಳುನಾಡಿನ 35 ವರ್ಷದ ಮಹಿಳೆ ಸಂಗೀತಾ ಅರುಲ್ ಲಾಲ್ ಮೃತಪಟ್ಟಿದ್ದಾರೆ. ವಾಗಮನ್ನಿಂದ ಸ್ನೇಹಿತೆಯೊಂದಿಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆಗೆ ಮಣ್ಣು ಕುಸಿದು ಅವರ ಸ್ಕೂಟರ್ ಸಿಲುಕಿಕೊಂಡಿತ್ತು. ಸ್ನೇಹಿತೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರ್ನಲ್ಲಿ ಮಣ್ಣಿನ ಕುಸಿತದಿಂದ ತಾತ್ಕಾಲಿಕ ಶೆಡ್ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಿಸಿಕೊಳ್ಳಲು ಮೂವರು ಶೆಡ್ನಲ್ಲಿ ಆಶ್ರಯ ಪಡೆದಿದ್ದ ವೇಳೆ ಮಣ್ಣು ಕುಸಿದಿದ್ದು, ಓರ್ವ ಮಹಿಳೆ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಸೌಜನ್ಯಾ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆ ಸೋಮವಾರ ಪಥನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಳಂ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಅವಧಿಯಲ್ಲಿ 115.6ರಿಂದ 204.4 ಮಿ.ಮೀ.ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು-ಮಿಂಚು ಸಹಿತ ಮಳೆ ಮತ್ತು ಗಂಟೆಗೆ 40 ಕಿ.ಮೀ. ವೇಗದವರೆಗೆ ಗಾಳಿ ಬೀಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ವಿಪತ್ತು ನಿರ್ವಹಣಾ ಆಯುಕ್ತೆ ವಿಗ್ನೇಶ್ವರಿ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಅಪಾಯದ ಪ್ರದೇಶಗಳಲ್ಲಿ ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಇಡುಕ್ಕಿ ಮತ್ತು ಕೊಟ್ಟಾಯಂನಲ್ಲಿ ಹವಾಮಾನ ಮುನ್ನೆಚ್ಚರಿಕೆ ಸಂದೇಶಗಳನ್ನು ಜನರಿಗೆ ರವಾನಿಸಲಾಗಿದೆ.
ಕೇರಳದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 17ರವರೆಗೆ ಸಾಮಾನ್ಯಕ್ಕಿಂತ 28ರಷ್ಟು ಮಳೆ ಕೊರತೆ ದಾಖಲಾಗಿದ್ದರೂ, ಇತ್ತೀಚಿನ ಭಾರಿ ಮಳೆಯು ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ. ಮುಂದಿನ ನಾಲ್ಕು ದಿನಗಳಲ್ಲೂ ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮುನ್ನೆಚ್ಚರಿಸಿದೆ.
ಇದನ್ನೂ ನೋಡಿ :ಸೆ.22ರಿಂದ ‘ಎಸ್ಐಆರ್ ಪರಿಶೋಧನೆ-ಪ್ರತಿರೋಧ ಪ್ರವಾಸ’Janashakthi Media
