ಬೆಂಗಳೂರು: ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು. ರಾಜ್ಯದ 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನ ಶಾಸಕರಿಗೆ ಮೋಟಿವೇಶನಲ್ ಭಾಷಣ ಮಾಡಲೆಂದು ವಿವಾದಾತ್ಮಕ ಬಲಪಂಥೀಯ ಹಾಗೂ ಧಾರ್ಮಿಕ ನಾಯಕರನ್ನು ಆಹ್ವಾನಿಸಿದ್ದಕ್ಕಾಗಿ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಶಿಬಿರದ ಆಮಂತ್ರಣ ಪತ್ರದಿಂದ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ ಹಾಗೂ ಬಲಪಂಥೀಯ ಭಾಷಣಕಾರ ಗುರುರಾಜ ಕರ್ಜಗಿ ಅವರಿಬ್ಬರ ಹೆಸರನ್ನು ಕೈ ಬಿಡಲಾಗಿದೆ. ಉಳಿದಂತೆ ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸಂಸದ ಡಾ. ವಿರೇಂದ್ರ ಹೆಗ್ಗಡೆ, ಜಮಾತೆ ಇಸ್ಲಾಮಿ ಮುಖಂಡ ಮುಹಮ್ಮದ್ ಕುಂಞಿ ಹಾಗೂ ಬ್ರಹ್ಮಕುಮಾರಿಸ್ ಸಂಸ್ಥೆಯ ಬಿ.ಕೆ. ವೀಣಾ ಮತ್ತು ಬಿ.ಕೆ. ಭುವನೇಶ್ವರಿ ಅವರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಹೊಸ ಶಾಸಕರಿಗೆ ಭಾಷಣ ಮಾಡಲಿದ್ದಾರೆ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ!
ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿಯನ್ನು ಪ್ರತಿಯೊಬ್ಬ ಶಾಸಕ ಬೆಳೆಸಿಕೊಳ್ಳಬೇಕು. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಬೇಕು” ಎಂದು ಹೇಳಿದರು.
“ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ಧವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ” ಎಂದು ಹೇಳಿದರು.
“ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ ‘ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾನೆ?’ ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ ‘THE HINDU’ ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡರೆ ಸವಾಲನ್ನು ಗೆದ್ದು ಏನನ್ನಾದರೂ ಸಾಧಿಸಬಹುದು” ಎಂದು ಮುಖ್ಯಮಂತ್ರಿ ಹೇಳಿದರು.
ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು.
5/6
– ಮುಖ್ಯಮಂತ್ರಿ @siddaramaiah…— CM of Karnataka (@CMofKarnataka) June 26, 2023
“ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು. ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು” ಎಂದು ನೂತನ ಶಾಸಕರಿಗೆ ಕಿವಿಮಾತು ಹೇಳಿದರು.