ಹೊಸ ಶಾಸಕರಿಗೆ ಭಾಷಣ ಮಾಡಲಿದ್ದಾರೆ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ!

ಬೆಂಗಳೂರು: ಹೊಸತಾಗಿ ಆಯ್ಕೆಯಾದ ಶಾಸಕರಿಗೆ ನಡೆಸುವ ವಿಶೇಷ ತರಬೇತಿ ಶಿಬಿರದಲ್ಲಿ ವಿವಾದಾತ್ಮಕ ಗುರು ರವಿಶಂಕರ್ ಗುರೂಜಿ ಸೇರಿದಂತೆ ಬಿಜೆಪಿ ನಾಮನಿರ್ದೇಶಿತ ರಾಜ್ಯಸಭಾ ಸಂಸದ ಡಾ. ವಿರೇಂದ್ರ ಹೆಗಡೆ, ಬಲಪಂಥೀಯ ಭಾಷಣಕಾರ ಡಾ. ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿಯ ಆಶಾ ದೀದಿ ಹಾಗೂ  ಮೊಹಮ್ಮದ್ ಕುಂಞ ಮೋಟಿವೇಷನ್ ಭಾಷಣ ಮಾಡಲಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ”ನೆಲಮಂಗಲದಲ್ಲಿರುವ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದಲ್ಲಿ ಹೊಸತಾಗಿ ಆಯ್ಕೆಯಾದ ಶಾಸಕರಿಗೆ ಮೂರು ದಿನಗಳ ಕಾಲ ವಿಶೇಷ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಶಾಸಕರಿಗೆ ಆರೋಗ್ಯ ಹಾಗೂ ಬೌದ್ಧಿಕ ತರಬೇತಿ ನಡೆಯಲಿದೆ. ಜೂನ್ 26 ಮಧ್ಯಾಹ್ನ 12 ಗಂಟೆಗೆ ಶಿಬಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ” ಎಂದು‌ ತಿಳಿಸಿದ್ದಾರೆ.

ಇದನ್ನೂ ಓದಿ: ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನದಂತೆ ಇಲ್ಲವೇ?;  ವಿವಾದ ಸೃಷ್ಟಿಸಿದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ

”ನೂತನವಾಗಿ 70 ಜನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಯುವ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ‌. ಇವರ ಸಕ್ರಿಯವಾಗಿ ಭಾಗವಹಿಸುವಿಕೆ ಅಗತ್ಯವಾಗಿದೆ. ಅವರ ಪ್ರತಿಭೆ ಬಿಂಬಿಸಲು ಸಚಿವಾಲಯದಿಂದ ಮೂರು ದಿನದ ಪ್ರಕೃತಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಸದನದಲ್ಲಿ ಶಾಸಕರು ಹೇಗಿರಬೇಕು? ಸದನದ ನಿಯಮಾವಳಿಗಳೇನು? ಪ್ರಶ್ನೋತ್ತರ ಅವಧಿ, ಬಜೆಟ್ ಪ್ರಕ್ರಿಯೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುವುದು” ಎಂದು‌ ಖಾದರ್ ತಿಳಿಸಿದ್ದಾರೆ.

ಶಿಬಿರದಲ್ಲಿ ಹಿರಿಯ ಶಾಸಕರ ಜೊತೆ ಸಂವಾದ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಅವರು ಹೇಳಿದ್ದು, “ಮಾಜಿ ಸಿಎಂ ಯಡಿಯೂರಪ್ಪ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೂತನ ಶಾಸಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಹಿರಿಯರ ಅನುಭವ ತಿಳಿದುಕೊಳ್ಳಲು ಇದರಿಂದ ಅವಕಾಶ ಆಗಲಿದೆ” ಎಂದು ಖಾದರ್ ಹೇಳಿದ್ದಾರೆ.

ಸ್ಪೀಕರ್‌ ಯು.ಟಿ. ಖಾದರ್ ಅವರ ಈ ನಡೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಮೋಟಿವೇಷನಲ್ ಭಾಷಣಕ್ಕೆ ಬಲಪಂಥೀಯರೇ ಬೇಕಿತ್ತೆ ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂತನ ಶಾಸಕರಿಗೆ ಮೋಟಿವೇಷನಲ್ ಭಾಷಣ ಮಾಡಲಿರುವ ಡಾ. ವಿರೇಂದ್ರ ಹೆಗಡೆ ಬಿಜೆಪಿಯಿಂದ ನಾಮನಿರ್ದೇಶನಗೊಂಡ ರಾಜ್ಯಸಭಾ ಸಂಸದರಾಗಿದ್ದು ಅವರು ಈಗಾಗಲೆ ಹಲವಾರು ವಿವಾದಗಳಿಗೆ ಸಿಲುಕಿದ್ದಾರೆ. ಡಾ. ಗುರುರಾಜ್ ಕರ್ಜಗಿ ಅವರು ಮೋದಿ ಪರವಾಗಿ ಭಾಷಣ ಮಾಡುವ ಬಲಪಂಥೀಯ ಭಾಷಣಕಾರಾಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಪರಿಸರಕ್ಕೆ ಧಕ್ಕೆ ತಂದಿರುವ ವಿವಾದದಲ್ಲಿ ಸಿಲುಕಿದ್ದಾರೆ.

ಸೌಜನ್ಯ ಅಸಹಜ ಸಾವಿನ ಪ್ರಕರಣ ಹಲವು ತಿರುವುಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ ವಿರೇಂದ್ರ ಹೆಗೆಡೆಯವರನ್ನು ಕರೆಯಿಸುವ ಮೂಲಕ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಇದೆ ಎಂದು ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸೌಜನ್ಯ ಪ್ರಕರಣದ ಅಪರಾಧಿ ಎಂದು ಬಂಧಿಸಲ್ಪಟ್ಟಿದ್ದ ವ್ಯಕ್ತಿ ನಿರ್ದೋಷಿ  ಎಂದು ಕೋರ್ಟ್‌ ತೀರ್ಪನ್ನು ಪ್ರಕಟಿಸಿದೆ.  ಈ ಹಿಂದೆ ಹಲವು ಸಂಘಟನೆಗಳು ಇದೆ ಮಾತನ್ನು ಹೇಳಿದ್ದು ಈಗ ನಿಜವಾಗಿದೆ. ಬಂಧಿಸಿರುವ ವ್ಯಕ್ತಿ ನಿಜವಾದಿ ಅಪರಾಧಿಯಲ್ಲ, ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವಿದು. ನಿಜವಾದ ಆರೋಪಿಗಳು ವಿರೇಂದ್ರ ಹೆಗ್ಗಡೆ ಕುಟುಂಬದವರು ಎಂದು ಸಂಘಟನೆಗಳು ಆಗ ಹೋರಾಟವನ್ನು ನಡೆಸಿದ್ದವು.

ಹೊಸ ಶಾಸಕರಿಗೆ, ವಿವಾದಿತ ವ್ಯಕ್ತಿಗಳ ಮೂಲಕ ಪಾಠ, ಸಂವಾಧ ನಡೆಸುತ್ತಿರುವುದು ಎಷ್ಟು ಸರಿ? ನೈತಿಕತೆ ಇಲ್ಲದ ಇವರುಗಳು ಏನು ನೈತಿಕತೆ ಹೇಳುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

Donate Janashakthi Media

Leave a Reply

Your email address will not be published. Required fields are marked *