ಭಾರತದಲ್ಲಿ ವ್ಯಾಪಕ ಬಡತನ : ಬಿಹಾರದ ಜಾತಿಗಣತಿ ಕಣ್ಣು ತೆರೆಸಬೇಕು

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

5 ಟ್ರಿಲಿಯನ್ ಡಾಲರ್ ಜಿಡಿಪಿಯ ಗುರಿ ಸಾಧಿಸುವುದೇ ತನ್ನ ಕಿರೀಟದಲ್ಲಿ ಸಿಕ್ಕಿಸಿಕೊಳ್ಳುವ ಕಟ್ಟಕಡೆಯ ಗರಿ ಎಂಬಂತೆ ಸಾರುತ್ತಲೇ ಬಂದಿದೆ ಬಿಜೆಪಿ ಒಕ್ಕೂಟ ಸರ್ಕಾರ. ಆದರೆ, ಈ ಜಿಡಿಪಿ ಹೊಗಳಿಕೆಯ ಹಿಂದೆ ಒಂದು ಭಯಾನಕ ಸತ್ಯವಿದೆ. ಒಟ್ಟು ಜನಸಂಖ್ಯೆಯಲ್ಲಿ ಜಾತಿವಾರು ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಡೆಸಿದ ಒಂದು ಸಮೀಕ್ಷೆಯ ಅಂಕಿ-ಅಂಶಗಳು ದೇಶದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಸಂಪೂರ್ಣ ಬಡತನದಲ್ಲಿ ಮುಳುಗಿದ್ದಾರೆ ಎಂದು ಹೇಳುತ್ತವೆ. ಇದು, ಒಂದು ನಿರಾಶಾದಾಯಕ ವಾಸ್ತವವೂ ಹೌದು. ಆದರೆ ಬಿಜೆಪಿ ಸರ್ಕಾರವು ಅನುಮಾನಾಸ್ಪದವಾದ ‘ಬಹು ಆಯಾಮೀಯ ಬಡತನ’ ಎಂಬ ಪರಿಕಲ್ಪನೆಯನ್ನು ಆಧರಿಸಿ, ಜಿಡಿಪಿ ಬೆಳವಣಿಗೆಯು ಬಡತನವನ್ನು ತಂತಾನೇ ನಿರ್ಮೂಲನೆ ಮಾಡುತ್ತದೆ ಎಂದು ಹೇಳುತ್ತಲೇ ಇದೆ. ಇದು ಅದರ ನಿಲುವಿನ ಟೊಳ್ಳುತನವೋ ಅಥವ ಒಳ ಉದ್ದೇಶವೋ. ಏನೇ ಇರಲಿ, ಈಗ ಬಿಹಾರ ಜಾತಿ ಜನಗಣತಿಯ ಫಲಿತಾಂಶಗಳು ಇಂಥಹ ಸರಕಾರೀ ಪ್ರಚಾರದಿಂದ ಆಕರ್ಷಿತರಾದ ಎಲ್ಲರ ಕಣ್ಣುಗಳನ್ನೂ ತೆರೆಸಬೇಕು.  

ಬಿಹಾರ ಜಾತಿ ಸಮೀಕ್ಷೆಯ ಒಂದು ಗಮನಾರ್ಹ ಅಂಶವೆಂದರೆ, ಸರ್ಕಾರಗಳು ಅಧಿಕೃತವಾಗಿ ಹೇಳುವುದಕ್ಕಿಂತಲೂ ಹೆಚ್ಚಿನ ಮಟ್ಟದ ಬಡತನವು ದೇಶದಲ್ಲಿದೆ ಎಂದು ಅನೇಕ ವರ್ಷಗಳಿಂದಲೂ ಎಡಪಂಥೀಯರು ಹೇಳುತ್ತಾ ಬಂದಿರುವ ಸಂಗತಿ ನಿಜವೆಂದು ಅದು ದೃಢಪಡಿಸಿದೆ. ಬಿಹಾರದ ಶೇ. 34.1ರಷ್ಟು ಜನರ ಕೌಟುಂಬಿಕ ಮಾಸಿಕ ಆದಾಯವು 6,000 ರೂ ಅಥವಾ ಅದಕ್ಕಿಂತಲೂ ಕಡಿಮೆ ಇದೆ ಎಂದು ಸಮೀಕ್ಷೆ ಹೇಳುತ್ತದೆ. ಮಾಸಿಕ 6000 ರೂ.ಗಳ ಆದಾಯವು, ಸರ್ಕಾರವೇ ಅಧಿಕೃತವಾಗಿ ನಿಗದಿಪಡಿಸಿದ “ಬಡತನ ರೇಖೆ”ಯ ಮಟ್ಟಕ್ಕೆ ಹೊಂದಿಕೆಯಾಗುತ್ತದೆ. ಆದರೆ, ಬಡತನ ರೇಖೆಯ ಉಲ್ಲೇಖವನ್ನೇ ಸರ್ಕಾರ ಇತ್ತೀಚೆಗೆ ನಿಲ್ಲಿಸಿಬಿಟ್ಟಿದೆ. ಕೆಲವು ವರ್ಷಗಳ ಹಿಂದೆ ಉಲ್ಲೇಖ ಮಾಡುತ್ತಿದ್ದ ಈ “ಬಡತನ ರೇಖೆ” ಮಾನದಂಡದ ಬದಲಿಗೆ, ಸರ್ಕಾರವು ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳು ರೂಪಿಸಿದ “ಬಹು ಆಯಾಮದ ಬಡತನ”ಎಂಬ ಪರಿಕಲ್ಪನೆಯನ್ನು ಬಳಸುತ್ತದೆ. ಈ “ಬಹು ಆಯಾಮದ ಬಡತನ” ಪರಿಕಲ್ಪನೆಯ ಪ್ರಕಾರವಾಗಿ ನೋಡಿದರೆ, ದೇಶದಲ್ಲಿ ಕೇವಲ ಶೇ. 15ರಷ್ಟು ಮಂದಿ ಮಾತ್ರ ಬಡತನದಲ್ಲಿರುವುದು ಕಂಡುಬರುತ್ತದೆ! ಬಿಹಾರವು ಇಡೀ ದೇಶದ ಪ್ರತಿಬಿಂಬವಲ್ಲ ಎಂಬುದು ನಿಜ. ಆದರೆ, ಬಿಹಾರ ಸಮೀಕ್ಷೆಯ ಅಂಕಿ- ಅಂಶಗಳು ದೇಶದಲ್ಲಿ ಬಡತನದ ವ್ಯಾಪಕತೆಯನ್ನು ಅಲ್ಲಗಳೆಯಲಾಗದಷ್ಟು ಸಮಗ್ರವಾಗಿವೆ.

ಬಡತನವನ್ನು ಅಳೆಯಲು 6,000 ರೂ.ಗಳ ಮಟ್ಟವನ್ನು ಒಂದು ಮಾನದಂಡವಾಗಿ ತೆಗೆದುಕೊಳ್ಳುವ ತರ್ಕವು ಈ ಕೆಳಗಿನ ಕಾರಣಕ್ಕಾಗಿ ಉದ್ಭವಿಸುತ್ತದೆ. ಸರ್ಕಾರವೇ ನೇಮಿಸಿದ್ದ ತೆಂಡೂಲ್ಕರ್ ಸಮಿತಿಯು, 2011-12ರ ವರ್ಷಕ್ಕಾಗಿ, ಗ್ರಾಮೀಣ ಭಾರತದ ಬಡತನ ರೇಖೆಯನ್ನು ನಿರ್ಧರಿಸಲು ದೈನಿಕ 29 ರೂ.ಗಳ ಮಟ್ಟವನ್ನು ಶಿಫಾರಸು ಮಾಡಿತ್ತು. 2011-12 ಮತ್ತು 2021-22ರ ನಡುವೆ ಕೃಷಿ ಕಾರ್ಮಿಕ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಶೇ. 77.5ರಷ್ಟು ಏರಿಕೆಯಾಗಿದೆ. ಈ ಏರಿಕೆ ಆಧರಿತ ಲೆಕ್ಕಾಚಾರದ ಪ್ರಕಾರ, 2021-22ರ ಬಡತನ ರೇಖೆಯ ಮಟ್ಟವು ದೈನಿಕ 51.47 ರೂ.ಗಳಾಗುತ್ತದೆ. ಅಂದರೆ, ತಿಂಗಳಿಗೆ 6177ರೂ. ಗಳಿಗಿಂತ ಕಡಿಮೆ ವರಮಾನ ಗಳಿಸುವ ನಾಲ್ಕು ಜನರ ಒಂದು ಗ್ರಾಮೀಣ ಕುಟುಂಬವನ್ನು ಬಡತನದ ರೇಖೆಯ ಕೆಳಗಿದೆ ಎಂದು ಪರಿಗಣಿಸಲಾಗುತ್ತದೆ. ಮೇಲಾಗಿ, ಸರ್ಕಾರ ನಿಗದಿಪಡಿಸಿದ ಮಾನದಂಡದ ಪ್ರಕಾರವೇ, ಮಾಸಿಕ 6000 ರೂ.ಗಳ ವರಮಾನವನ್ನು ಗ್ರಾಮೀಣ ಬಡತನದ ಮಾನದಂಡವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಮರ್ಥನೀಯವೂ ಹೌದು.

ನಗರ ಬಡತನ ಮಾನದಂಡವು ತುಸು ಹೆಚ್ಚಿನ ಮಟ್ಟದ್ದೇ ಇರಬೇಕಾಗುತ್ತದೆ. ನಗರ ಮತ್ತು ಗ್ರಾಮೀಣ ಜನರ ಬಡತನದ ವ್ಯಾಪ್ತಿಯನ್ನು ಒಟ್ಟಾರೆಯಾಗಿ ನೋಡುವುದಕ್ಕಾಗಿ, ಮಾಸಿಕ 6,000 ರೂ.ಗಳ ಮಟ್ಟವನ್ನೇ ಈ ಎರಡೂ ಪ್ರದೇಶಗಳಿಗೂ ಮಾನದಂಡವಾಗಿ ತೆಗೆದುಕೊಳ್ಳುವುದರಿಂದ ಬಡತನದ ಅಗಾಧತೆಯನ್ನು ಸಂಪೂರ್ಣವಾಗಿ ಕೀಳಂದಾಜು ಮಾಡಿದಂತಾಗುತ್ತದೆ. ಆದಾಗ್ಯೂ, ಬಡತನದ ಪ್ರಮಾಣವನ್ನು ಉತ್ಪ್ರೇಕ್ಷಿಸಿ ಹೇಳುತ್ತಿದ್ದಾರೆ ಎಂದು ಯಾರೂ ನಮ್ಮ ಮೇಲೆ ಆರೋಪ ಹೊರಿಸಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಉದ್ದೇಶಪೂರ್ವಕವಾಗಿಯೇ ನಾವು ಮಾಸಿಕ 6,000 ರೂ.ಗಳ ಏಕರೂಪದ ಮಾನದಂಡವನ್ನೇ ಈ ದತ್ತಾಂಶಗಳಿಗೆ ಅನ್ವಯಿಸಿ ನೋಡೋಣ.

ಭಯಾನಕ ಸತ್ಯ -ನಿರಾಶಾದಾಯಕ ವಾಸ್ತವ

ಮಾಸಿಕ 6,000 ರೂ.ಗಳ ಮಾನದಂಡವು ಸರ್ಕಾರದ ಅಧಿಕೃತ ಮಾನದಂಡದೊಂದಿಗೆ ಹೋಲುತ್ತದೆಯಾದರೂ, ನಿಜಕ್ಕೂ ಅದು ಸೂಕ್ತವಲ್ಲ. ತೆಂಡೂಲ್ಕರ್ ಸಮಿತಿಯು ಸರ್ಕಾರದಿಂದ ಅಧಿಕೃತವಾಗಿ ನೇಮಕಗೊಂಡ ಒಂದು ಸಮಿತಿಯಾಗಿದ್ದುದರಿಂದ, ಬಡತನ ರೇಖೆಯನ್ನು ಸೂಚಿಸುವಲ್ಲಿ ಸರ್ಕಾರದ ಬಯಕೆಯನ್ನು ಗೌರವಿಸಲು ಅದು ಬದ್ಧವಾಗಿತ್ತು. ಆದರೆ ನಾವು ಸಮಸ್ಯೆಯನ್ನು ತುಸು ಭಿನ್ನವಾಗಿ ನೋಡೋಣ. ಗ್ರಾಮೀಣ ಭಾರತದ ಪ್ರತಿ ವ್ಯಕ್ತಿಗೆ ದಿನಕ್ಕೆ 2200 ಕ್ಯಾಲೊರಿಗಳ ಅವಶ್ಯಕತೆಯನ್ನು ಬಡತನದ ಮಾನದಂಡವಾಗಿ ಯೋಜನಾ ಆಯೋಗವೇ ಮೂಲತಃ ಒಪ್ಪಿಕೊಂಡಿತ್ತು. ಗ್ರಾಮೀಣ ಭಾರತದಲ್ಲಿ 2200 ಕ್ಯಾಲೊರಿಗಳ ಸೇವನೆಗಾಗಿ ತಗಲುವ ತಲಾ ವೆಚ್ಚವು, 2017-18 ರಲ್ಲಿ, ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ತಲಾ 70 ರೂ.ಗಳಾಗುತ್ತದೆ. ಅಂದರೆ, ದೈನಿಕ 2200 ಕ್ಯಾಲೊರಿಗಳ ಸೇವನೆಗಾಗಿ ನಾಲ್ಕು ಜನರ ಒಂದು ಕುಟುಂಬವು ತಿಂಗಳಿಗೆ 8400 ರೂ.ಗಳನ್ನು ಖರ್ಚುಮಾಡಬೇಕಾಗುತ್ತದೆ. 2017-18 ಮತ್ತು 2021-22ರ ಅವಧಿಯಲ್ಲಿ, ಕೃಷಿ ಕಾರ್ಮಿಕರ ಬೆಲೆ ಸೂಚ್ಯಂಕದ ಪ್ರಕಾರ ಬೆಲೆಗಳಲ್ಲಿ ಶೇ. 21ರಷ್ಟು ಹೆಚ್ಚಳವಾಗಿದೆ.

ಹಾಗಾಗಿ, 2021-22 ರಲ್ಲಿ ಗ್ರಾಮೀಣ ಭಾರತದ ಬಡತನವನ್ನು ವ್ಯಾಖ್ಯಾನಿಸುವ ಮಾನದಂಡದ ಪ್ರಕಾರ, ನಾಲ್ಕು ಸದಸ್ಯರ ಕುಟುಂಬದ ಮಾಸಿಕ ವೆಚ್ಚವು 10,164 ರೂ.ಗಳಾಗುತ್ತದೆ.  ಆದ್ದರಿಂದ, ಗ್ರಾಮೀಣ ಬಡತನವನ್ನು ವ್ಯಾಖ್ಯಾನಿಸುವ ಕುಟುಂಬ ಆದಾಯದ ಮಾನದಂಡವಾಗಿ ನಾವು ಕನಿಷ್ಠ ಪಕ್ಷ 10,000 ರೂ.ಗಳನ್ನಾದರೂ ತೆಗೆದುಕೊಳ್ಳಬೇಕಾಗುತ್ತದೆ. ನಗರ ಬಡತನವನ್ನು ವ್ಯಾಖ್ಯಾನಿಸುವ ವರಮಾನದ ಮಟ್ಟವು ಇನ್ನೂ ಹೆಚ್ಚಿನ ಮಟ್ಟದಲ್ಲೇ ಇರಬೇಕಾಗುತ್ತದೆ. ಆದರೆ, ಬಡತನವನ್ನು ಅತಿಶಯಗೊಳಿಸಿದ ಆರೋಪವನ್ನು ನಮ್ಮ ಮೇಲೆ ಹೊರಿಸುವ ಅವಕಾಶವನ್ನು ತಪ್ಪಿಸುವ ಸಲುವಾಗಿ ನಾವು ಉದ್ದೇಶಪೂರ್ವಕವಾಗಿಯೇ ನಗರ ಮತ್ತು ಗ್ರಾಮೀಣ ಕುಟುಂಬಗಳ ಆದಾಯಗಳೆರಡಕ್ಕೂ ಸಮಾನವಾಗಿ 10,000 ರೂ.ಗಳ ಮಾನದಂಡವನ್ನೇ ಅನ್ವಯಿಸೋಣ.

ಬಿಹಾರ ಜಾತಿ ಸಮೀಕ್ಷೆಯ ಪ್ರಕಾರ, ಆ ರಾಜ್ಯದ ಶೇ. 64ರಷ್ಟು ಮಂದಿಯ ವರಮಾನವು ಈ ಮಾನದಂಡದ ಮಟ್ಟಕ್ಕಿಂತಲೂ ಕೆಳಗಿರುವುದು ಕಂಡುಬರುತ್ತದೆ. 2022-23 ವರ್ಷದಲ್ಲಿ ಭಾರತದ ಪ್ರಮುಖ ರಾಜ್ಯವೊಂದರ ಜನಸಂಖ್ಯೆಯಲ್ಲಿ ಕನಿಷ್ಠ ಶೇ.64ರಷ್ಟು ಮಂದಿ ಸಂಪೂರ್ಣ ಬಡತನದಲ್ಲಿ ಮುಳುಗಿದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳಲೂ ಸಹ ಆಶ್ಚರ್ಯವಾಗುತ್ತದೆ. ಸರ್ಕಾರದ ಅಧಿಕೃತ ವಕ್ತಾರರು ಜಿಡಿಪಿಯ ಬೆಳವಣಿಗೆಯೇ ದೇಶದ ಎಲ್ಲಾ ಆರ್ಥಿಕ ಸಮಸ್ಯೆಗಳಿಗೂ ಪರಿಹಾರವೆಂಬಂತೆ ಜಿಡಿಪಿಯ ಬೆಳವಣಿಗೆಯ ಬಗ್ಗೆ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. 5 ಟ್ರಿಲಿಯನ್ ಡಾಲರ್ ಜಿಡಿಪಿಯ ಗುರಿ ಸಾಧಿಸುವುದೇ ತನ್ನ ಕಿರೀಟದಲ್ಲಿ ಸಿಕ್ಕಿಸಿಕೊಳ್ಳುವ ಕಟ್ಟಕಡೆಯ ಗುರಿ ಎಂಬಂತೆ ಸಾರುತ್ತಲೇ ಬಂದಿದೆ ಸರ್ಕಾರ. ಆದರೆ, ಜಿಡಿಪಿ ಬೆಳವಣಿಗೆಯ ಈ ಹೊಗಳಿಕೆಯ ಹಿಂದೆ ಒಂದು ಭಯಾನಕ ಸತ್ಯವಿದೆ. ನಾವು ಬಿಹಾರ ಜಾತಿ ಸಮೀಕ್ಷೆಯ ಅಂಕಿ ಅಂಶಗಳನ್ನು ಇಡೀ ದೇಶಕ್ಕೆ ಅನ್ವಯಿಸಿ ಲೆಕ್ಕಹಾಕಿದರೆ, ಭಾರತದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ಸಂಪೂರ್ಣ ಬಡತನದಲ್ಲಿ ಮುಳುಗಿದ್ದಾರೆ ಎಂಬುದು ಕಂಡುಬರುತ್ತದೆ. ಇದುವೇ ಆ ಭಯಾನಕ ಸತ್ಯ.

ಈ ಭಯಾನಕ ಸತ್ಯದ ಒಂದು ಮಿನುಗು ನೋಟವು ಈಗಾಗಲೇ ಹಲವಾರು ಇತರ ಸೂಚಕಗಳ ಮೂಲಕ, ಅದರಲ್ಲೂ ವಿಶೇಷವಾಗಿ ಒಟ್ಟು 125 ದೇಶಗಳ ಪೈಕಿ ಭಾರತವನ್ನು 111ನೇ ಸ್ಥಾನದಲ್ಲಿರಿಸಿರುವ ಜಾಗತಿಕ ಹಸಿವು ಸೂಚ್ಯಂಕದ ಮೂಲಕ, ಲಭ್ಯವಿದೆ. ಆದರೆ, ಇಂಥಹ ಪ್ರತಿಯೊಂದು ಸೂಚಕವನ್ನೂ ಕ್ಷುಲ್ಲಕವೆಂದು ಸರ್ಕಾರ ತಳ್ಳಿಹಾಕಿದೆ. ಒಟ್ಟು ಜನಸಂಖ್ಯೆಯಲ್ಲಿ ಜಾತಿವಾರು ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ನಡೆಸಿದ ಒಂದು ಸಮೀಕ್ಷೆಯೂ ಸಹ ದೇಶದಲ್ಲಿ ಬಡತನವನ್ನು ಮತ್ತು ಅದರ ಅಗಾಧತೆಯನ್ನು ಹೇಳುತ್ತದೆ. ಇದು, ಒಂದು ನಿರಾಶಾದಾಯಕ ವಾಸ್ತವವೂ ಹೌದು.

ಇದನ್ನೂ ಓದಿ: ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ

ಬಿಜೆಪಿಯ ತರ್ಕದ ಟೊಳ್ಳುತನ ಮತ್ತು ಒಳಉದ್ದೇಶ

ಈ ನಿರಾಶಾದಾಯಕ ವಾಸ್ತವವು ನಿರ್ದಿಷ್ಟವಾಗಿ ಅರ್ಥವ್ಯವಸ್ಥೆಯ ಬಗ್ಗೆ ಬಿಜೆಪಿಯು ಹೊಂದಿರುವ ನಿಲುವಿನ ಟೊಳ್ಳುತನವನ್ನು, ಅಷ್ಟೇ ಏಕೆ, ಬಿಜೆಪಿಯ ಒಳಉದ್ದೇಶವನ್ನು ಬಹಿರಂಗಪಡಿಸುತ್ತದೆ. ಬಿಜೆಪಿಯು ಏಕಸ್ವಾಮ್ಯ ಬಂಡವಾಳಶಾಹಿಗಳ, ಅದರಲ್ಲೂ ವಿಶೇಷವಾಗಿ ಬಂಟ( ಕ್ರೋನಿ) ಏಕಸ್ವಾಮ್ಯ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಪಕ್ಷವಾಗಿದೆ ಎಂಬ ಅಂಶವು ಎಲ್ಲರಿಗೂ ಸ್ಪಷ್ಟವಾಗಿದೆ. ಹಾಗೆ ನೋಡಿದರೆ, ಎಲ್ಲ ಫ್ಯಾಸಿಸ್ಟ್ ಸಂಘಟನೆಗಳೂ ಈ ಲಕ್ಷಣವನ್ನು ಹೊಂದಿವೆ. ಆದರೆ, ಜಿಡಿಪಿಯ ಬೆಳವಣಿಗೆಯು ಭಾರತದ ಅರ್ಥವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಅಂಥಹ ಬೆಳವಣಿಗೆಯನ್ನು ಬಂಡವಾಳಶಾಹಿಗಳು, ಅದರಲ್ಲೂ ವಿಶೇಷವಾಗಿ ಏಕಸ್ವಾಮ್ಯ ಬಂಡವಾಳಶಾಹಿಗಳು ಮಾತ್ರವೇ ಆಗುಮಾಡುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಯು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ.

ಜಿಡಿಪಿಯ ಬೆಳವಣಿಗೆಗಾಗಿ ಬಂಡವಾಳಗಾರರಿಗೆ ವರ್ಗಾವಣೆ ರೂಪದಲ್ಲಿ ಪ್ರೋತ್ಸಾಹಕಗಳೂ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ಒದಗಿಸುತ್ತಿದೆ. ಮತ್ತು, ಜಿಡಿಪಿ ಬೆಳವಣಿಗೆಗೆ ಒತ್ತು ನೀಡುವ ಮೂಲಕ ಏಕಸ್ವಾಮ್ಯ ಬಂಡವಾಳಶಾಹಿಗಳ ಹಿತಾಸಕ್ತಿಗಳೇ “ರಾಷ್ಟ್ರದ ಹಿತಾಸಕ್ತಿಗಳು” ಎಂಬಂತೆ ವರ್ತಿಸುತ್ತದೆ. ವಿಶ್ವದ ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ತನ್ನ ಜಿಡಿಪಿ ಬೆಳವಣಿಗೆಯೇ ಅತಿ ಹೆಚ್ಚಿನದೆಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ಭಾರತದ ಜಿಡಿಪಿ ಬೆಳವಣಿಗೆಯು ದೇಶದ ಮೂರನೇ ಎರಡರಷ್ಟು ಭಾಗದ ಜನರನ್ನು ಸಂಪೂರ್ಣ ಬಡತನದಲ್ಲಿ ಮುಳುಗಿಸಿದೆ ಎಂಬ ವಾಸ್ತವವು ಬಿಜೆಪಿಯ ತರ್ಕದ ಟೊಳ್ಳುತನ ಮತ್ತು ಒಳಉದ್ದೇಶ ಈ ಎರಡನ್ನೂ ಎತ್ತಿ ತೋರುತ್ತದೆ.

ಬಹು ಆಯಾಮದ ಬಡತನ ಸೂಚ್ಯಂಕದ ಆವಿಷ್ಕಾರದ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕೇಳಬಹುದು. ಈ ಸೂಚ್ಯಂಕವು ಬೌದ್ಧಿಕ ಗೊಂದಲವನ್ನು ಆಧರಿಸಿದೆ ಎಂದೇ ಹೇಳಬಹುದು. ಪ್ರತಿಯೊಂದು ಉತ್ಪಾದನಾ ವಿಧಾನವೂ ಒಂದು ನಿರ್ದಿಷ್ಟ ರೀತಿಯಲ್ಲಿ ನಡೆದುಕೊಳ್ಳುವ ಬಡವರನ್ನು ಹೊಂದಿರುತ್ತದೆ. ಆದ್ದರಿಂದ, ಪ್ರತಿಯೊಂದು ಉತ್ಪಾದನಾ ವಿಧಾನವೂ ಬಡತನವನ್ನು ಗುರುತಿಸಲು ತನ್ನದೇ ಆದ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ. ಉದಾಹರಣೆಗೆ, ಪಾಳೆಗಾರಿ ಪದ್ಧತಿಯ ಅಡಿಯಲ್ಲಿ ಬಡತನವು, ಮಕ್ಕಳು ಹಸಿವಿನಿಂದ ಬಳಲುವ, ಅಶಿಕ್ಷಿತರಾಗಿ ಉಳಿಯುವ ಮತ್ತು ಶ್ರಮಿಕ ಪಡೆಗೆ ಸೇರಬೇಕಾದ ಅನಿವಾರ್ಯತೆಯ ಮೂಲಕ ಅವರನ್ನು ಒಂದು ತೀವ್ರ ಶೋಷಣೆಗೆ ಒಳಪಡಿಸುವ ನಿರ್ದಿಷ್ಟ ರೂಪವನ್ನು ತಳೆಯುತ್ತದೆ. ಮತ್ತೊಂದೆಡೆ, ಬಂಡವಾಳಶಾಹಿಯ ಅಡಿಯಲ್ಲಿ ಬಡತನವು, ವಿಶೇಷವಾಗಿ ಮುಂದುವರಿದ ಬಂಡವಾಳಶಾಹಿಯ ಅಡಿಯಲ್ಲಿ, ಕೆಲಸ ಮಾಡಲೇಬೇಕಾದ ಒತ್ತಾಯಕ್ಕೆ ಮಕ್ಕಳನ್ನು ಒಳಪಡಿಸುವ ನಿರ್ದಿಷ್ಟ ರೂಪವನ್ನು ತಳೆಯುವುದಿಲ್ಲ.

ಆದರೆ, ಮಕ್ಕಳು ನಿರ್ಲಕ್ಷಕ್ಕೊಳಗಾದ ಶಾಲೆಗಳು, ಕಳಪೆ ಆರೋಗ್ಯ ಸೌಲಭ್ಯಗಳು, ಓಬಿರಾಯನ ಕಾಲದ ಸಲಕರಣೆಗಳು, ಜೀರ್ಣಾವಸ್ಥೆಯಲ್ಲಿರುವ ಪೀಠೋಪಕರಣಗಳು, ಮತ್ತು ಕೊಳಕು ಪರಿಸರ ವಾಸದೊಂದಿಗೆ ಬದುಕುತ್ತಾರೆ ಮತ್ತು ಅಪರಾಧಗಳ ಲೋಕಕ್ಕೆ ತಳ್ಳಲ್ಪಡುತ್ತಾರೆ. ಮುಂದುವರೆದ ಬಂಡವಾಳಶಾಹಿಯಲ್ಲಿ ಬಡತನ ಮತ್ತು ಅಪರಾಧಗಳ ನಡುವೆ ಒಂದು ಬಲವಾದ ನಂಟು ಇದೆ. ಅದರ ಬಗ್ಗೆ ಒಂದು ಕಾರಣವನ್ನು ಹೇಳಬಹುದಾದರೆ, ಬಡತನದ ಬಗ್ಗೆ ಕೈಗೊಳ್ಳುವ ಸಮೀಕ್ಷೆಗಳು ಜೈಲು ಕೈದಿಗಳನ್ನು ಒಳಗೊಳ್ಳದ ಕಾರಣದಿಂದಾಗಿ ಅಪೂರ್ಣವಾಗುತ್ತವೆ.

ಮಕ್ಕಳು ಶಾಲೆಗೆ ಹೋಗುತ್ತಾರೋ ಇಲ್ಲವೋ ಎಂಬುದನ್ನು ಆಧರಿಸಿ ಬಡತನವನ್ನು ವ್ಯಾಖ್ಯಾನಿಸುವುದು ಒಂದು ಪಾಳೇಗಾರಿ ಸಮಾಜದಲ್ಲಿ ಅರ್ಥಪೂರ್ಣವಾಗಿರುತ್ತದೆ. ಆದರೆ, ಮಕ್ಕಳು ಶಾಲೆಗಳಿಗೆ ಹೋಗುತ್ತಿರುವ ಮುಂದುವರಿದ ಬಂಡವಾಳಶಾಹಿ ಸಮಾಜದಲ್ಲಿ ಅಲ್ಲ. ಅಲ್ಲಿ ಬಡ ಮಕ್ಕಳು ಹೋಗುವ ಶಾಲೆಗಳ ಗುಣಮಟ್ಟವು ಅತ್ಯಂತ ಕಳಪೆಯದ್ದೇ ಆಗಿರುತ್ತದೆ. ಹಾಗಾಗಿ, ಬಡತನವನ್ನು ಗುರುತಿಸುವ ಮಾನದಂಡಗಳು ಒಂದು ಉತ್ಪಾದನಾ ವಿಧಾನದಿಂದ ಇನ್ನೊಂದಕ್ಕೆ ಭಿನ್ನವಾಗಿರಬೇಕಾಗುತ್ತದೆ. ಮತ್ತು, ಅನೇಕ ರೀತಿಯ ಉತ್ಪಾದನಾ ವಿಧಾನಗಳ ಮಿಶ್ರಣವನ್ನು ಹೊಂದಿರುವ ನಮ್ಮಂತಹ ಸಮಾಜದಲ್ಲಿ ಎಲ್ಲ ರೀತಿಯ ಬಡತನವನ್ನು ಅಳೆಯುವ ಒಂದು ಮಾನದಂಡವನ್ನು ಹೊಂದಬೇಕು ಎಂದಾದರೆ, ಅದು ಆದಾಯದ ಮಟ್ಟವೇ.

ಇದನ್ನೂ ಓದಿ: ಹಿಮಾಲಯದ ತಾರುಣ್ಯವೂ ಅಭಿವೃದ್ಧಿಯ ಹಪಹಪಿಯೂ

ಅಳತೆ ಮಾಡಲು ಆದಾಯವು ಒಂದು ಸುಲಭದ ಪರಿಕಲ್ಪನೆಯಲ್ಲ. ಹಾಗಾಗಿ, ಸುಲಭವಾಗಿ ಅಳೆಯಬಹುದಾದ ಒಂದು ಬದಲಿಯನ್ನು ಕಂಡುಹಿಡಿಯಬೇಕಾಗುತ್ತದೆ. ಪೌಷ್ಠಿಕತೆಯ ಮಟ್ಟವು, ಅಂತಹ ಒಂದು ಬದಲಿ ಅಳತೆಯಾಗಿದೆ. ಸ್ವತಃ ಅದು ಮುಖ್ಯವೂ ಹೌದು. ನಾವು ಬಡತನವನ್ನು ಪಾಳೇಗಾರಿ ವ್ಯವಸ್ಥೆಯೊಳಗೆ ನೋಡಲಿ ಅಥವಾ ಬಡತನವನ್ನು ಮುಂದುವರಿದ ಬಂಡವಾಳಶಾಹಿ ವ್ಯವಸ್ಥೆಯೊಳಗೆ ನೋಡಲಿ, ಬಡವರು ಯಾವಾಗಲೂ ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನೇ ಕಾಣುತ್ತೇವೆ. ಒಂದು ವ್ಯವಸ್ಥೆಯಲ್ಲಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಶ್ರಮಿಕ ಪಡೆಗೆ ಸೇರುತ್ತಿರಬಹುದು, ಮತ್ತೊಂದರಲ್ಲಿ ಅವರು ಕಳಪೆ ಗುಣಮಟ್ಟದ ಶಾಲೆಗಳಿಗೆ ಹೋಗುತ್ತಿರಬಹುದು. ಬಹು ಆಯಾಮದ ಬಡತನ ಸೂಚ್ಯಂಕದ ಸಮಸ್ಯೆಯೆಂದರೆ, ಪೌಷ್ಠಿಕತೆಯ ಬಗ್ಗೆ ಅದು ನೀಡುವ ಪಾಮುಖ್ಯತೆಯು ಬಹಳ ಕಡಿಮೆಯೇ (ಮತ್ತು, ಶಾರೀರಿಕ ಎತ್ತರ- ತೂಕ ಅನುಪಾತ ಸೂಚ್ಯಂಕದಂತಹ ಕಳಪೆ ಅಂದಾಜನ್ನು ಪರಿಗಣಿಸುತ್ತದೆ). ಮತ್ತು, ಅದೇ ಸಮಯದಲ್ಲಿ ಬಡತನ ನಿವಾರಣೆಯನ್ನು ಸೂಚಿಸುವ ಶಾಲಾ ಹಾಜರಾತಿ ಮತ್ತು ಸಲಕರಣೆಗಳ ಬಳಕೆ, ಇಂಥಹ ಕೆಲವು ಅಂಶಗಳನ್ನು ಪರಿಗಣಿಸುತ್ತದೆ. ಆದರೆ, ಈ ಅಂಶಗಳು ಪಾಳೇಗಾರಿ ಬಡತನದಿಂದ ಬಂಡವಾಳಶಾಹಿ ಬಡತನಕ್ಕೆ ಹೊಂದಿದ ಬದಲಾವಣೆಯನ್ನು ಮಾತ್ರ ಸೂಚಿಸುತ್ತವೆ.

ಇಂಥಹ ಒಂದು ಅನುಮಾನಾಸ್ಪದವಾದ ಬಹು ಆಯಾಮ ಬಡತನದ ಪರಿಕಲ್ಪನೆಯನ್ನು ಆಧರಿಸಿ ಬಿಜೆಪಿ ಸರ್ಕಾರವು, ಜಿಡಿಪಿ ಬೆಳವಣಿಗೆಯು ಬಡತನವನ್ನು ತಂತಾನೇ ನಿರ್ಮೂಲನೆ ಮಾಡುತ್ತದೆ ಎಂದು ಹೇಳುತ್ತಿದೆ. ಇಂಥಹ ಸರಕಾರೀ ಪ್ರಚಾರದಿಂದ ಆಕರ್ಷಿತರಾದ ಎಲ್ಲರ ಕಣ್ಣನ್ನೂ ಬಿಹಾರ ಜಾತಿ ಜನಗಣತಿಯ ಫಲಿತಾಂಶಗಳು ತೆರೆಸಬೇಕು.

ಸಮಾನತೆ – ಸಮತ್ವ – ವಾಸ್ತವತೆ
(ಚಿತ್ರಕೃಪೆ: ಎಲ್‌ಎಒಟಿ ಬ್ಲಾಗ್)

ವಿಡಿಯೋ ನೋಡಿ: ದುಡಿವ ಜನರು ಬೆಕ್ಕುಗಳಲ್ಲ, ಹುಲಿಗಳೆಂದು ನೆನಪಿಸಲು ‘ಮಹಾಧರಣಿ’: ಸಿದ್ದನಗೌಡ ಪಾಟೀಲ್Janashakthi Media

Donate Janashakthi Media

Leave a Reply

Your email address will not be published. Required fields are marked *