ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಎಸ್ಐಟಿ ತನಿಖೆಯಾಗಲಿ: ಬೃಂದಾ ಕಾರಟ್

ಮಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿ, ಎಸ್ಐಟಿ ತನಿಖೆ ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಒತ್ತಾಯಿಸಿದ್ದಾರೆ.

ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೃಂದಾ ಕಾರಟ್‌ ಇದೇ ಸಂದರ್ಭದಲ್ಲಿ ವಿನಾಯಕ ಬಾಳಿಗಾರ ಮನೆಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈನಿಂದ ಕೊಲೆಗೀಡಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯಾಗಿ ಆರು ವರ್ಷಗಳೇ ಕಳೆದರೂ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ. ಪೊಲೀಸರು ಈ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ. ಆರೋಪಿಗಳು ಆಡಳಿತ ಪಕ್ಷದ ಬೆಂಬಲದಿಂದ ರಕ್ಷಣೆ ಪಡೆಯುತ್ತಿದ್ದಾರೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳ ಪತ್ತೆಗಾಗಿ ಪ್ರಕರಣದ ಸಮಗ್ರ ತನಿಖೆಗೆ ಎಸ್ಐಟಿ ರಚಿಸಬೇಕಾದ ಅಗತ್ಯವಿದೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ.

ಬಾಳಿಗಾ ಸೋದರಿಯರಿಗೆ ಧೈರ್ಯ ತುಂಬಿದ ಬೃಂದಾ ಕಾರಟ್, ನ್ಯಾಯದ ಹೋರಾಟದಲ್ಲಿ ಕುಟುಂಬದೊಂದಿಗೆ ಸಿಪಿಐ(ಎಂ) ಇರಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ನೀಲಾ, ಕೆ.ಪ್ರಕಾಶ್, ರಾಜ್ಯ ಮುಖಂಡರಾದ ಎಸ್.ವೈ.‌ಗುರುಶಾಂತ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ನ್ಯಾಯವಾದಿ ಆಶಾ ನಾಯಕ್, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಡಾ.ಕೃಷ್ಣಪ್ಪ ಕೊಂಚಾಡಿ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *