ಅಸಮಾನ ಒಪ್ಪಂದವನ್ನು ಸಮರ್ಥಿಸಿಕೊಳ್ಳಲು ವಿಧ-ವಿಧ ಕಸರತ್ತುಗಳು – ಪ್ರೊ.ಪ್ರಭಾತ್ ಪಟ್ನಾಯಕ್

ಅತ್ಯಂತ ಅಸಮರ್ಥನೀಯ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಸಮರ್ಥಿಸಿಕೊಳ್ಳಲು ಮೋದಿ ಸರಕಾರ ಹಲವು ತರ್ಕಗಳನ್ನು ಮುಂದಿಡುತ್ತಿದೆ. ಈ ಹಾಸ್ಯಾಸ್ಪದ ತರ್ಕಗಳಲ್ಲಿ ಯಾವುದೂ ಕೂಡ ಈ ಒಪ್ಪಂದವು ಒಂದು “ಅಸಮಾನ ಒಪ್ಪಂದ” ಎಂಬುದನ್ನು ಮತ್ತು ಟ್ರಂಪ್‌ಗೆ ಬೆಣ್ಣೆ ಹಚ್ಚಬಯಸುವ ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅದನ್ನು ಟ್ರಂಪ್ ಆಡಳಿತವು ಭಾರತದ ಜನರ ಮೇಲೆ ಹೇರಿದೆ ಎಂಬ ಸಂಗತಿಯನ್ನು ಮರೆಮಾಚುವುದು ಸಾಧ್ಯವಿಲ್ಲ. ಈಗ ಅಮೆರಿಕದ ಸುಪ್ರೀಂ ಕೋರ್ಟ್ ಕೂಡ ಟ್ರಂಪ್ ಅವರ ಸುಂಕ ದಾಳಿಯು ಸಂವಿಧಾನಬಾಹಿರವೆಂದು ತೀರ್ಪು ನೀಡಿರುವುದರಿಂದ, ಭಾರತ ಸರ್ಕಾರವು ಟ್ರಂಪ್ ಸುಂಕ ದಾಳಿಗೆ ತಲೆಬಾಗಿದ್ದ ಮೂಲ ಪರಿಸ್ಥಿತಿ ಈಗ ಬದಲಾಗಿದೆ. ಆದ್ದರಿಂದ, ಈ “ಅಸಮಾನ ಒಪ್ಪಂದ”ದಿಂದ ಹೊರಬರಲು ಭಾರತ ಸರ್ಕಾರಕ್ಕೆ ಒಂದು ಒಳ್ಳೆಯ ಅವಕಾಶ ಈಗ ಒದಗಿ ಬಂದಿದೆ. ಈಗಲಾದರೂ ಈ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅದನ್ನು ಈ ದೇಶದ ಜನತೆ ಕ್ಷಮಿಸುವುದಿಲ್ಲ.
ಅನು:ಕೆ.ಎಂ.ನಾಗರಾಜ್

ಸಮರ್ಥನೀಯವೇ ಅಲ್ಲದ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಸಮರ್ಥಿಸಿಕೊಳ್ಳುವ ಹತಾಶೆಯಲ್ಲಿ, ಮೋದಿ ಸರ್ಕಾರವು ಒಂದರ ನಂತರ ಒಂದು ಅಸಂಬದ್ಧ ತರ್ಕಗಳನ್ನು ಬಳಸುತ್ತಿದೆ. ರೈತ ಸಂಘಟನೆಗಳು ವಿರೋಧಿಸುತ್ತಿರುವ ಅಮೆರಿಕದ ಕೆಂಪು ಜೋಳ, ಸೋಯಾಬೀನ್ ಮತ್ತು ಹಿಂಡಿದ ಧಾನ್ಯಗಳು (ಹಿಂಡಿ) ಮುಂತಾದ ಸರಕುಗಳ ಸುಂಕ-ಮುಕ್ತ ಆಮದುಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆಯುವುದರಿಂದ ಪಶು ಆಹಾರದ ವೆಚ್ಚಗಳು ಕಡಿಮೆಯಾಗುತ್ತವೆ ಮತ್ತು ಅದರಿಂದ ರೈತರಿಗೆ ಸಹಾಯವಾಗುತ್ತದೆ ಎಂಬುದು ಅದು ಮಂಡಿಸಿರುವ ತರ್ಕÀಗಳಲ್ಲಿ ಒಂದು. ಬೇರೆ ರೀತಿಯಲ್ಲಿ ಹೇಳುವುದಾದರೆ, ವ್ಯಾಪಾರ ಒಪ್ಪಂದವನ್ನು ಸಮರ್ಥಿಸಿಕೊಳ್ಳಲು, ಈ ಒಪ್ಪಂದದಿAದ ಭಾರತದ ರೈತರು ಬಳಸುವ ವಿವಿಧ ರೀತಿಯ ಆಮದು ಲಾಗುವಾಡುಗಳ ದೇಶೀಯ ಬೆಲೆಗಳು ಇಳಿಯುತ್ತವೆ ಎಂಬ ತರ್ಕವನ್ನು ಮೋದಿ ಸರ್ಕಾರ ಹೂಡಿದೆ.

ಆಮದು ಸರಕುಗಳು ಅಗ್ಗವಾಗಿರುವುದರಿಂದ ಅವು ಪ್ರಯೋಜನಕಾರಿ ಎನ್ನುವ ಆಧಾರದ ಮೇಲೆ ಸರಕುಗಳ ಆಮದನ್ನು ಅನುಮತಿಸುವುದಾದರೆ, ದೇಶವು ಯಾವುದೇ ಸುಂಕಗಳನ್ನು ಹೊಂದಿರಬಾರದು ಎಂದಾಗುತ್ತದೆ.

ಈ ವಾದವು ಅಸಂಬದ್ಧವಾಗಿದೆ. ಏಕೆಂದರೆ ಎಲ್ಲ ಸುಂಕಗಳನ್ನು ವಿಧಿಸುವ ಮೂಲ ಕಾರಣವೇ ದೇಶೀಯ ಸರಕುಗಳ ಉತ್ಪಾದನಾ ವೆಚ್ಚವು ಅವುಗಳ ಆಮದು ಬೆಲೆಗಳಿಗಿಂತಲೂ ಅಧಿಕವಾಗಿರುತ್ತದೆ ಎಂಬುದು. ಆಮದು ಸರಕುಗಳು ಅಗ್ಗವಾಗಿರುವುದರಿಂದ ಅವು ಪ್ರಯೋಜನಕಾರಿ ಎನ್ನುವ ಆಧಾರದ ಮೇಲೆ ಸರಕುಗಳ ಆಮದನ್ನು ಅನುಮತಿಸುವುದಾದರೆ, ದೇಶವು ಯಾವುದೇ ಸುಂಕಗಳನ್ನು ಹೊಂದಿರಬಾರದು ಎಂದಾಗುತ್ತದೆ.

ಹಾಗೆ ನೋಡಿದರೆ, ಸುಂಕಗಳನ್ನು ಎರಡು ಭಿನ್ನವಾದ ಕಾರಣಗಳಿಂದಾಗಿ ವಿಧಿಸಲಾಗುತ್ತದೆ: ಮೊದಲನೆಯದು, ಸುಂಕಗಳು ಆಮದು ಮಾಡಿಕೊಳ್ಳಬೇಕಾದ ಸರಕುಗಳ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತವೆ ಮತ್ತು ದೇಶದಲ್ಲಿ ಉದ್ಯೋಗವನ್ನು ನೇರವಾಗಿ ಮತ್ತು ಪರೋಕ್ಷವಾಗಿ ಹೆಚ್ಚಿಸುತ್ತವೆ. ಉದಾಹರಣೆಗೆ, ಪಶು ಆಹಾರದ ದೇಶೀಯ ಉತ್ಪಾದನೆಯು ಅದನ್ನು ಉತ್ಪಾದಿಸುವ ವಲಯಗಳಲ್ಲಿ ನೇರವಾಗಿ ಉದ್ಯೋಗವನ್ನು ಸೃಷ್ಟಿಸುವುದು ಮಾತ್ರವಲ್ಲದೆ, ಅಧಿಕವಾಗಿ, ಅಂತಹ ಉತ್ಪನ್ನಗಳ ದೇಶೀಯ ಉತ್ಪಾದಕರ ಕೈಯಲ್ಲಿ ವರಮಾನವನ್ನು ಇರಿಸುವುದರಿಂದ ಇನ್ನೊಂದು ವಲಯದಲ್ಲಿ ಎರಡನೆಯ ಹಂತದ ಉದ್ಯೋಗಗಳನ್ನು ಮತ್ತು ಅದರ ಪರಿಣಾಮವಾಗಿ ಮತ್ತೊಂದು ವಲಯದಲ್ಲಿ ಮೂರನೆಯ ಹಂತದ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಇದು ಹಲವಾರು ಇತರ ಸರಕುಗಳಿಗೆ ಬೇಡಿಕೆಯನ್ನು ಉಂಟುಮಾಡುತ್ತದೆ. ಹಾಗಾಗಿ, ಸರಕುಗಳನ್ನು ಆಮದು ಮಾಡಿಕೊಳ್ಳುವುದರಿಂದ ಇಂಥಹ ಆದಾಯವನ್ನು ಮತ್ತು ಉದ್ಯೋಗಗಳನ್ನು ಉಂಟುಮಾಡುವ ಪರಿಣಾಮಗಳು ವಿದೇಶಗಳಿಗೆ “ಸೋರಿಕೆ”ಯಾಗುತ್ತವೆ. ಎರಡನೆಯದು, ಸರಕುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯ ಅಗತ್ಯವಾಗುತ್ತದೆ. ಆದರೆ, ವಿದೇಶಿ ವಿನಿಮಯದ ನಮ್ಮ ಸಂಗ್ರಹದ ಪರಿಸ್ಥಿತಿ ಸಾಕಷ್ಟು ಅನುಕೂಲಕರವಾಗಿಲ್ಲವಾದ್ದರಿಂದ, ಆಮದು ಸರಕುಗಳ ದೇಶೀಯ ಉತ್ಪಾದನೆಯು ಅಮೂಲ್ಯ ವಿದೇಶಿ ವಿನಿಮಯವನ್ನು ಸಂರಕ್ಷಿಸುವ ಪ್ರಯೋಜನಕಾರಿ ಪರಿಣಾಮವನ್ನು ಹೊಂದಿದೆ.

ಲಾಗುವಾಡು ಸರಕುಗಳ ಬೆಲೆಗಳನ್ನು ಕೆಳ ಮಟ್ಟದಲ್ಲಿಡುವುದು ಅಗತ್ಯವೆಂದು ಪರಿಗಣಿಸಿದರೆ, ಈ ಉದ್ದೇಶಕ್ಕಾಗಿ ಸರ್ಕಾರವು ಹಣಕಾಸಿನ ಸಬ್ಸಿಡಿಯನ್ನು ನೀಡಬಹುದು. ಇದು ಈ ಸರಕಿನ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುವುದರ ಜೊತೆಯಲ್ಲೇ ವಿದೇಶಿ ವಿನಿಮಯವನ್ನೂ ಉಳಿಸುತ್ತದೆ ಮತ್ತು ಆ ಮೂಲಕ ವಿದೇಶಿ ಸಾಲವನ್ನು ಇಳಿಸುತ್ತದೆ.ಯುಎಸ್ ಸರ್ಕಾರ ತನ್ನ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದಲೂ ಮಾಡುತ್ತಿರುವುದು ಇದನ್ನೇ.

ಇದನ್ನೂ ಓದಿ : ರೈತರ ಭೂಮಿ ಕಬಳಿಸಿ ಕಾರ್ಪೊರೇಟ್ ಕುಳಗಳಿಗೆ ಮಣೆ ಹಾಕುತ್ತಿರುವ ಕ್ರಮ ಖಂಡನೀಯ – AIDWA

ಸುಂಕ-ಕಡಿತದ ಬದಲು ಸಬ್ಸಿಡಿ ಕೊಡಬಾರದೇಕೆ?

ಆದರೆ, ಅಂತಿಮ ಉತ್ಪನ್ನವಾಗಿ ತಯಾರಾಗುವ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ದೇಶವನ್ನು ಸ್ಪರ್ಧಾತ್ಮಕವಾಗಿಸುವ ಸರಕುಗಳ ಬೆಲೆಗಳನ್ನು ತಗ್ಗಿಸುವ ಮತ್ತು ಅದರಿಂದಾಗಿ ಅಧಿಕ ರಫ್ತು ಮಾಡುವುದು ಸಾಧ್ಯವಿರುವ ಅಗ್ಗದ ಸರಕುಗಳ ಆಮದುಗಳನ್ನು, ಅದರಲ್ಲೂ ವಿಶೇಷವಾಗಿ ಲಾಗುವಾಡಾಗಿ ಬಳಸುವ ಸರಕುಗಳ ಆಮದುಗಳಿಂದ ದೇಶವು ಹೊಂದುವ ಪ್ರಯೋಜನಗಳನ್ನು ಏಕೆ ತಾನೇ ತ್ಯಜಿಸಬೇಕು ಎಂದು ಕೇಳಬಹುದು. ಹಾಗೆ ನೋಡಿದರೆ, ಅಂಥಹ ಲಾಗುವಾಡು ಸರಕುಗಳ ಬೆಲೆಗಳನ್ನು ಕೆಳ ಮಟ್ಟದಲ್ಲಿಡುವುದು ಅಗತ್ಯವೆಂದು ಪರಿಗಣಿಸಿದರೆ, ಈ ಉದ್ದೇಶಕ್ಕಾಗಿ ಸರ್ಕಾರವು ಹಣಕಾಸಿನ ಸಬ್ಸಿಡಿಯನ್ನು ನೀಡಬಹುದು. ಇದು ಈ ಸರಕಿನ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುವುದರ ಜೊತೆಯಲ್ಲೇ ವಿದೇಶಿ ವಿನಿಮಯವನ್ನೂ ಉಳಿಸುತ್ತದೆ ಮತ್ತು ಆ ಮೂಲಕ ವಿದೇಶಿ ಸಾಲವನ್ನು ಇಳಿಸುತ್ತದೆ.

ಯುಎಸ್ ಸರ್ಕಾರ ತನ್ನ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದಲೂ ಮಾಡುತ್ತಿರುವುದು ಇದನ್ನೇ. ಈ ಸಬ್ಸಿಡಿಯ ಪ್ರಮಾಣವು ಅದೆಷ್ಟು ಬೃಹತ್ತಾಗಿದೆ ಎಂದರೆ, ಕೆಲವು ವರ್ಷಗಳಲ್ಲಿ ಅದು ಕೃಷಿ ಉತ್ಪಾದನೆಯ ಒಟ್ಟು ಮೌಲ್ಯದ ಅರ್ಧದಷ್ಟಕ್ಕೆ ಸಮನಾಗಿರುತ್ತದೆ. ಅಮೆರಿಕದಲ್ಲಿ ಕೃಷಿಯನ್ನು ಅವಲಂಬಿಸಿರುವ ವ್ಯಕ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ, ಈ ಸಬ್ಸಿಡಿಯನ್ನು ನೇರ ವರಮಾನ ಬೆಂಬಲದ ರೂಪದಲ್ಲಿ ನೀಡಬಹುದು ಮತ್ತು ಅದನ್ನು ನೀಡುತ್ತಿರುವುದೂ ಹೌದು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದಂತಹ ದೇಶಗಳು ನೀಡುವ ಸಬ್ಸಿಡಿಗಳನ್ನು ತೀವ್ರವಾಗಿ ಟೀಕಿಸುವ ಅಮೆರಿಕವು ತನ್ನ ರೈತರಿಗೆ ಬಹಳ ಎಚ್ಚರಿಕೆಯಿಂದ ಮತ್ತು ಪಕ್ಷಪಾತ ದೃಷ್ಟಿಯಿಂದ ನೀಡುತ್ತಿರುವ ಸಬ್ಸಿಡಿಗಳನ್ನು, ಅವು “ಮಾರುಕಟ್ಟೆಯನ್ನು ವಿರೂಪಗೊಳಿಸುವುದಿಲ್ಲ” ಎಂಬ ಒಂದು ಸಂಪೂರ್ಣ ಹುಸಿ ತರ್ಕದ ಮೇಲೆ, ನಿಷೇಧಿತ ಸಬ್ಸಿಡಿಗಳ ವ್ಯಾಪ್ತಿಯಿಂದ ಹೊರಗಿಟ್ಟಿದೆ. ತನ್ನ ರೈತರಿಗೆ ಭಾರಿ ಸಬ್ಸಿಡಿಗಳನ್ನು ನೀಡುತ್ತಿರುವ ಯುರೋಪಿಯನ್ ಒಕ್ಕೂಟಕ್ಕೂ ಇದು ಅನ್ವಯಿಸುತ್ತದೆ. ಮೂರನೇ ಜಗತ್ತಿನ ರೈತರಿಗೆ ನೀಡುವ ಸರ್ಕಾರಿ ಸಬ್ಸಿಡಿಗಳಿಗಿಂತ ಭಿನ್ನವಾಗಿ, ತನ್ನ ಸಬ್ಸಿಡಿಗಳು “ಮಾರುಕಟ್ಟೆಯನ್ನು ವಿರೂಪಗೊಳಿಸದಿರುವ” ಕಾರಣದ ಮೇಲೆ ಅವುಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಅನುಮತಿಸಬೇಕು ಎಂಬ ಒಂದು ಹುಸಿ ವಾದವನ್ನು ಮಂಡಿಸುತ್ತದೆ.

ಹತ್ತಿಯ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿಯಲ್ಲಿ ಆಮದು ಮಾಡಿಕೊಳ್ಳುವ ಸರಕುಗಳಲ್ಲಿ ಹತ್ತಿಯೂ ಒಂದು. ಇದು ಭಾರತದ ರೈತರಿಗೆ ಹಾನಿಯನ್ನು ಉಂಟುಮಾಡುತ್ತದೆ. ಭಾರತದಲ್ಲಿ ಕಚ್ಚಾ ಹತ್ತಿ ಮಾರುಕಟ್ಟೆಯು ಮುಂಬರುವ ತೊಂದರೆಗಳ ನಿರೀಕ್ಷೆಯಲ್ಲಿ ಈಗಾಗಲೇ ವಾಸ್ತವವಾಗಿ ಖಿನ್ನತೆಗೆ ಒಳಗಾಗಿದೆ. ಹತ್ತಿಯ ವಿಷಯದಲ್ಲಿ ಕೆಲವು ವರ್ಷಗಳ ಹಿಂದೆ ಅಮೆರಿಕದ ಪ್ರತಿ ರೈತನಿಗೆ $127 ಸಾವಿರದಷ್ಟು ಸಬ್ಸಿಡಿ ದೊರಕುತ್ತಿತ್ತು. ಈ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಗೆ ಬ್ರೆಜಿಲ್ ನೀಡಿದ ದೂರಿನ ಪರಿಣಾಮವಾಗಿ ಸಬ್ಸಿಡಿಯನ್ನು ಇಳಿಕೆ ಮಾಡಬೇಕಾಯಿತು. ಆದಾಗ್ಯೂ, ಈಗಲೂ ಸಹ ಪ್ರತಿ ರೈತನಿಗೆ ಒಂದು ಕೋಟಿ ರೂ.ಗಳಷ್ಟು (ಪ್ರಸ್ತುತ ವಿನಿಮಯ ದರದಲ್ಲಿ ರೂಪಾಯಿಗೆ ಪರಿವರ್ತಿಸಿದಾಗ) ಸಬ್ಸಿಡಿ ಸಿಗುತ್ತಿದೆ. ಅಮೆರಿಕದಲ್ಲಿ ಹತ್ತಿ ಬೆಳೆಯುವ ರೈತರ ಸಂಖ್ಯೆಯು 27,000 ಕ್ಕಿಂತ ಕಡಿಮೆ ಇರುವುದರಿಂದ, ಅಂತಹ ಬೃಹತ್ ಸಬ್ಸಿಡಿಗಳನ್ನು ನೀಡುವುದು ಅಮೆರಿದ ಸರ್ಕಾರಕ್ಕೆ ಆಡಳಿತಾತ್ಮಕವಾಗಿ ಕಷ್ಟವೇನಲ್ಲ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್@ ಫೇಸ್ ಬುಕ್

ಅಗ್ಗದ ಆಮದು: ಶುದ್ಧ ಹುಸಿ ತರ್ಕ

ಆದ್ದರಿಂದ ಮುಖ್ಯವಾದ ಅಂಶವೆಂದರೆ, ಈ “ಅಗ್ಗದ ಆಮದು ವಾದ”ವೇ ಇಡಿಯಾಗಿ ಸುಳ್ಳೇ ಸುಳ್ಳು: ಅದನ್ನು ಒಪ್ಪಿಕೊಂಡರೆ ದೇಶದಲ್ಲಿ ವರಮಾನಗಳು ಮತ್ತು ಉದ್ಯೋಗಗಳು ಬಹಳವಾಗಿ ಕುಗ್ಗುತ್ತವೆ ಮಾತ್ರವಲ್ಲ, ಸಬ್ಸಿಡಿ ಬೆಂಬಲಿತ ಯುರೋಪಿಯನ್ ಒಕ್ಕೂಟದ ಮತ್ತು ಅಮೆರಿಕದ ಧಾನ್ಯಗಳು ಭಾರತದ ಮಾರುಕಟ್ಟೆಯನ್ನು ತುಂಬಿ ಬಿಡುತ್ತವೆ. ಧಾನ್ಯ ಬೆಳೆಯುವ ಸ್ವತಃ ಭಾರತದ ಲಕ್ಷಾಂತರ ರೈತರಿಗೆ ಹಾನಿಯಾಗುತ್ತದೆ ಮತ್ತು ಆಹಾರ ಭದ್ರತೆಯೂ ದುರ್ಬಲಗೊಳ್ಳುತ್ತದೆ.

ಅದೇ ರೀತಿ, ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಭಾರತದ ಸರಕುಗಳಿಗೆ $30 ಟ್ರಿಲಿಯನ್ ಅಮೇರಿಕನ್ ಮಾರುಕಟ್ಟೆಯನ್ನು ತೆರೆಯುತ್ತದೆ ಎಂಬ ನೆಲೆಯಲ್ಲಿ ಸರ್ಕಾರವು ಅದನ್ನು ಸಮರ್ಥಿಸಿಕೊಳ್ಳುವುದು ಅತ್ಯಂತ ಹಾಸ್ಯಾಸ್ಪದವಾಗಿದೆ. ಈ ಸಂಖ್ಯೆಯ ಅಂಶವು ಅಮೆರಿಕದ ಜಿಡಿಪಿಯ ಗಾತ್ರವನ್ನು ಸೂಚಿಸುತ್ತದೆ. ಅಂದರೆ, ಅದರ ಸರಕು ಮತ್ತು ಸೇವೆಗಳ ಒಟ್ಟು ವಹಿವಾಟನ್ನು ಸರಿಸುಮಾರು ಸೂಚಿಸುತ್ತದೆ. ಭಾರತವು ಒಂದು ಬಹಳ ಯಶಸ್ವೀ ರಫ್ತುದಾರ ದೇಶವಾಗುವುದು ಸಾಧ್ಯವಾದರೂ ಸಹ, ಈ ಮಾರುಕಟ್ಟೆಯ ಒಂದು ಭಾಗವನ್ನು ಮಾತ್ರ ಹಿಡಿಯಬಹುದು. ಆದ್ದರಿಂದ, ಟ್ರಿಲಿಯನ್‌ಗಟ್ಟಲೆಯ ಮಾರುಕಟ್ಟೆಯನ್ನು ಹಿಡಿಯುವುದು ಕೇವಲ ಆಡಂಬರದ ಮಾತುಗಳಷ್ಟೇ. ಈ ವಾದವನ್ನು ಗಂಭೀರವಾಗಿ ತೆಗೆದುಕೊಂಡರೆ, ಯಾವುದೇ ಒಂದು ಅರ್ಥವ್ಯವಸ್ಥೆಯೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದವನ್ನು ಕೇವಲ ಅದರ ಗಾತ್ರದ ನೆಲೆಯಲ್ಲಿ, ಅದು ಭಾರತಕ್ಕೆ ಎಷ್ಟೇ ಪ್ರತಿಕೂಲವಾಗಿದ್ದರೂ, ಸಮರ್ಥಿಸಬಹುದು.

ಹಾಸ್ಯಾಸ್ಪದ ವಾದಗಳು

ಈ ಒಪ್ಪಂದವನ್ನು ವಿರೋಧಿಸುವ ರೈತರನ್ನು ಅವರ ನಿರ್ದಿಷ್ಟ ಹಿತಾಸಕ್ತಿಗಳ ಆಧಾರದ ಮೇಲೆ ವಿಭಜಿಸುವ ತಂತ್ರವನ್ನು ಸರ್ಕಾರವು ಇತ್ತೀಚೆಗೆ ಅವಲಂಬಿಸಿದೆ. ಉದಾಹರಣೆಗೆ, ಉತ್ತರಪ್ರದೇಶದ ಪಶ್ಚಿಮ ಭಾಗದ ರೈತರಿಗೆ, ಈ ಒಪ್ಪಂದವು ಗೋಧಿ ಅಥವಾ ಅಕ್ಕಿ ಅಥವಾ ಅವರು ಬೆಳೆಯುವ ಯಾವುದೇ ಪ್ರಮುಖ ಬೆಳೆಯನ್ನೂ ತಟ್ಟುವುದಿಲ್ಲ, ಆದುದರಿಂದ ಅದನ್ನು ವಿರೋಧಿಸಬೇಡಿ ಎಂದು ಹೇಳಲಾಯಿತು. ಅಂದರೆ, ಸರ್ಕಾರದ ಪ್ರಕಾರ, ಅವರ ಮೇಲೆ ಪರಿಣಾಮ ಬೀರಿದರೆ ಮಾತ್ರ ಅವರು ಒಪ್ಪಂದವನ್ನು ಆಕ್ಷೇಪಿಸಬೇಕು, ಇಲ್ಲವಾದರೆ, ಅದನ್ನು ಅಕ್ಷೇಪಿಸಬಾರದು!. ಜಮ್ಮು ಮತ್ತು ಕಾಶ್ಮೀರ ಅಥವಾ ಹಿಮಾಚಲ ಪ್ರದೇಶದ ಹಣ್ಣು ಬೆಳೆಗಾರರು ಅಥವಾ ಮಹಾರಾಷ್ಟ್ರದ ಹತ್ತಿ ಬೆಳೆಗಾರರು ಇದರಿಂದ ಪ್ರತಿಕೂಲ ಪರಿಣಾಮಗಳಿಗೆ ಒಳಗಾಗುತ್ತಾರೆ ಎಂಬ ಅಂಶ ಅವರಿಗೆ ಸಂಬಂಧಿಸಿಲ್ಲ ಎಂದು ಸರ್ಕಾರ ಹೇಳುತ್ತದೆ. ಇದು ರೈತರ ಒಗ್ಗಟ್ಟನ್ನು ಮುರಿಯುವ ಲಜ್ಜಾಹೀನ ಪ್ರಯತ್ನ ಮಾತ್ರವಲ್ಲ, ಒಂದು ಪ್ರಜಾಪ್ರಭುತ್ವದ ಅಗತ್ಯವಾಗಿ ಅವರನ್ನು ಕಾಳಜಿಯುಳ್ಳ ನಾಗರಿಕರನ್ನಾಗಿ ಮಾಡುವ ಬದಲು ಕೇವಲ ಸ್ವಾರ್ಥ-ಪರರನ್ನಾಗಿ ಮಾಡುವ ಪ್ರಯತ್ನವೂ ಹೌದು. ಇದು ಅವರ ಪೌರತ್ವಕ್ಕೆ ಮಾಡುವ ಅವಮಾನವಾಗುತ್ತದೆ ಮತ್ತು ಪ್ರಜಾಪ್ರಭುತ್ವದ ವಿರುದ್ಧ ಒಂದು ಹೊಡೆತವಾಗುತ್ತದೆ, ಏಕೆಂದರೆ, ಒಂದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಎಲ್ಲರ ಯೋಗಕ್ಷೇಮದಲ್ಲಿ ಆಸಕ್ತಿ ಹೊಂದಿರಬೇಕಾಗುತ್ತದೆ ಮತ್ತು ಇತರರ ಯೋಗಕ್ಷೇಮದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಕ್ರಮವನ್ನೂ, ಅದು ತನಗೆ ಯಾವುದೇ ಹಾನಿಯನ್ನು ಉಂಟುಮಾಡದಿದ್ದರೂ ಸಹ, ವಿರೋಧಿಸಬೇಕಾಗುತ್ತದೆ.

ಈ ಹಾಸ್ಯಾಸ್ಪದ ವಾದಗಳಲ್ಲಿ ಯಾವುದೂ ಕೂಡ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಒಂದು “ಅಸಮಾನ ಒಪ್ಪಂದ” ಎಂಬುದನ್ನು ಮತ್ತು ಟ್ರಂಪ್ ಅವರಿಗೆ ಬೆಣ್ಣೆ ಹಚ್ಚಬಯಸುವ ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅದನ್ನು ಟ್ರಂಪ್ ಆಡಳಿತವು ಭಾರತದ ಜನರ ಮೇಲೆ ಹೇರಿದೆ ಎಂಬ ಸಂಗತಿಯನ್ನು ಮರೆಮಾಚುವುದು ಸಾಧ್ಯವಿಲ್ಲ. ಆದರೆ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರ ಸುಂಕ ದಾಳಿಯು ಸಂವಿಧಾನಬಾಹಿರವೆಂದು, ಸುಂಕಗಳನ್ನು ಮನ ಬಂದಂತೆ ವಿಧಿಸುವುದು ಅವರ ಅಧಿಕಾರದ ವ್ಯಾಪ್ತಿಯೊಳಗಿಲ್ಲವೆಂದು ಮತ್ತು ಹಾಗೆ ಮಾಡುವ ಮೂಲಕ ಅವರು ಯುಎಸ್ ಕಾಂಗ್ರೆಸ್‌ನ ಅಧಿಕಾರವನ್ನು ಕಿತ್ತುಕೊಂಡಿದ್ದಾರೆಂದು ತೀರ್ಪು ನೀಡಿರುವುದರಿಂದ, ಭಾರತ ಸರ್ಕಾರವು ಟ್ರಂಪ್ ಸುಂಕ ದಾಳಿಗೆ ತಲೆಬಾಗಿದ್ದ ಮೂಲ ಪರಿಸ್ಥಿತಿ ಈಗ ಬದಲಾಗಿದೆ. ಆದ್ದರಿಂದ, ಈ “ಅಸಮಾನ ಒಪ್ಪಂದ”ದಿಂದ ಹೊರಬರಲು ಭಾರತ ಸರ್ಕಾರಕ್ಕೆ ಒಂದು ಒಳ್ಳೆಯ ಅವಕಾಶ ಈಗ ಒದಗಿ ಬಂದಿದೆ. ಈಗಲಾದರೂ ಈ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅದನ್ನು ಈ ದೇಶದ ಜನತೆ ಕ್ಷಮಿಸುವುದಿಲ್ಲ.

ಈ ಹಾಸ್ಯಾಸ್ಪದ ವಾದಗಳಲ್ಲಿ ಯಾವುದೂ ಕೂಡ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಒಂದು “ಅಸಮಾನ ಒಪ್ಪಂದ” ಎಂಬುದನ್ನು ಮತ್ತು ಟ್ರಂಪ್ ಅವರಿಗೆ ಬೆಣ್ಣೆ ಹಚ್ಚಬಯಸುವ ಭಾರತ ಸರ್ಕಾರದ ಒಪ್ಪಿಗೆಯೊಂದಿಗೆ ಅದನ್ನು ಟ್ರಂಪ್ ಆಡಳಿತವು ಭಾರತದ ಜನರ ಮೇಲೆ ಹೇರಿದೆ ಎಂಬ ಸಂಗತಿಯನ್ನು ಮರೆಮಾಚುವುದು ಸಾಧ್ಯವಿಲ್ಲ.

ರಫ್ತು-ಪ್ರಧಾನ ಬೆಳವಣಿಗೆ”ಯ ಕಾರ್ಯತಂತ್ರ

ಈ ಸನ್ನಿವೇಶದಲ್ಲಿ ಇನ್ನೂ ಒಂದು ಅಭಿವೃದ್ಧಿ ಕಾರ್ಯತಂತ್ರಕ್ಕೆ ಸಂಬಂಧಿಸಿದ ಆಳವಾದ ಅಂಶವೂ ಇದೆ. ಭಾರತ-ಯುಎಸ್ ಒಪ್ಪಂದವು ಒಂದು ಅಸಮಾನ ಒಪ್ಪಂದವಾಗಿರದಿದ್ದರೂ ಸಹ, ಅದರ ಹಿಂದಿರುವ ಮೂಲಭೂತ ಗ್ರಹಿಕೆಯು ತಪ್ಪಾಗಿಯೇ ಇದೆ. ಭಾರತ ಸರ್ಕಾರವು ಇತ್ತೀಚೆಗೆ ಯೂರೋಪಿಯನ್ ಒಕ್ಕೂಟ, ಇಂಗ್ಲೆಂಡ್, ಯುಎಇ ಮುಂತಾದ ದೇಶಗಳೊಂದಿಗೆ ಸಹಿ ಹಾಕಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಸರಣಿಗೆ ಆಧಾರವಾಗಿರುವ ಈ ಗ್ರಹಿಕೆಯು “ರಫ್ತು-ಪ್ರಧಾನ ಬೆಳವಣಿಗೆ”ಯ ಪ್ರಯೋಜನಗಳನ್ನು ಎತ್ತಿಹಿಡಿಯುತ್ತದೆ. “ರಫ್ತು-ಪ್ರಧಾನ ಬೆಳವಣಿಗೆ”ಯ ಹಿಂದಿರುವ ಸಿದ್ಧಾಂತವು ವಿಶ್ವ ಮಾರುಕಟ್ಟೆಯ ಒಟ್ಟು ಬೇಡಿಕೆಯ ಬೆಳವಣಿಗೆಯು ಹೊರಗಡೆಯಿಂದ ಜನಿಸಿದ ಅಂಶಗಳಿಂದ ಕೂಡಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗಾಗಿ, ಒಂದು ದೇಶವು ರಫ್ತು ಬೆಳವಣಿಗೆಯ ಉನ್ನತ ದರವನ್ನು ಸಾಧಿಸುವಲ್ಲಿ ಯಶಸ್ವಿಯಾಗುವಾಗ ಅದು ಅನಿವಾರ್ಯವಾಗಿ ಮತ್ತೊಂದು ದೇಶಕ್ಕೆ ಹಾನಿ ಮಾಡಿರುತ್ತದೆ.

“ರಫ್ತು-ಪ್ರಧಾನ ಬೆಳವಣಿಗೆ”ಯ ಕಾರ್ಯತಂತ್ರವು ಜಾಗತಿಕ ದಕ್ಷಿಣದ ಒಂದು ದೇಶವನ್ನು ಮತ್ತೊಂದು ದೇಶದೊಂದಿಗೆ ಪೈಪೋಟಿಗೆ ಇಳಿಯುವಂತೆ ಮಾಡುವುದು ಮಾತ್ರವಲ್ಲದೆ, ಇತರ ಎರಡು ನ್ಯೂನತೆಗಳನ್ನು ಹೊಂದಿದೆ: ಮೊದಲನೆಯದು, ರಫ್ತುಗಳನ್ನು ಉತ್ತೇಜಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಬೇಕಾಗಿರುವುದರಿಂದ ರಫ್ತು-ಪ್ರಧಾನ ಬೆಳವಣಿಗೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಮತ್ತು, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಕುಂದಿಸುತ್ತದೆ ಹಾಗೂ ವಸಾಹತುಶಾಹಿ ಕಾಲದ “ಪ್ರದೇಶಾತೀತತೆ”ಯನ್ನು ಪರಿಚಯಿಸುತ್ತದೆ; ಮತ್ತು ಎರಡನೆಯದು, ಅರ್ಥವ್ಯವಸ್ಥೆಯನ್ನು ಛಿದ್ರಗೊಳಿಸುತ್ತದೆ. ಅಂದರೆ, ರಫ್ತು ಪ್ರಯತ್ನದಲ್ಲಿ ಕೆಲವು ವಲಯಗಳು ಯಶಸ್ವಿಯಾಗುತ್ತವೆ ಮತ್ತು ವಿದೇಶಿ ಸ್ಪರ್ಧೆಯಿಂದ ಅಹಿತಕಾರೀ ಅನುಭವಗಳಿಗೆ ಈಡಾದ ವಲಯಗಳು ಸೊರಗಿ, ಹಿಂದುಳಿದು ಬಿಡುತ್ತವೆ.

ರಫ್ತುಗಳನ್ನು ಉತ್ತೇಜಿಸಲು ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಬೇಕಾಗಿರುವುದರಿಂದ ರಫ್ತು-ಪ್ರಧಾನ ಬೆಳವಣಿಗೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ, ಮತ್ತು, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಕುಂದಿಸುತ್ತದೆ.

ಪ್ರಜಾಸತ್ತಾತ್ಮಕವಾದ ಮತ್ತು ಸಮತೋಲಿತವಾದ, ಅದೇ ವೇಳೆಗೆ ಜಾಗತಿಕ ದಕ್ಷಿಣದ ಇತರ ದೇಶಗಳ ಬಗ್ಗೆ ಮತ್ಸರ ಹುಟ್ಟಿಸದ, ಅಭಿವೃದ್ಧಿಯ ಒಂದು ಕಾರ್ಯತಂತ್ರವೆಂದರೆ, ಕೈಗಾರಿಕೆಗಳ “ರಫ್ತು”ಗಳನ್ನು ಇತರ ದೇಶಗಳ ಕಡೆಗೆ ತಿರುಗಿಸುವುದರ ಬದಲಾಗಿ ದೇಶೀಯ ಕೃಷಿ ವಲಯದೆಡೆಗೆ ತಿರುಗಿಸುವುದು. ಈ ಕಾರ್ಯತಂತ್ರವು ಹೆಚ್ಚು ಸಮಾನತಾವಾದಿಯಾಗಿದೆ. ಏಕೆಂದರೆ ಇದು ಇಡೀ ಅರ್ಥವ್ಯವಸ್ಥೆಯ ಬೆಳವಣಿಗೆಯನ್ನು ರೈತ ಕೃಷಿಯ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುತ್ತದೆ. ಭಾರತ ಸ್ವತಂತ್ರವಾದ ನಂತರ ಈ ಕಾರ್ಯತಂತ್ರವನ್ನೇ ಅನುಸರಿಸಲಾಯಿತು. ಆದರೆ, ಅದು ಉನ್ನತ ಜಿಡಿಪಿ ಬೆಳವಣಿಗೆ ತರಲಿಲ್ಲ ಎಂಬ ತರ್ಕವನ್ನು ಭೂಸುಧಾರಣೆಗಳು ಮತ್ತು ಇತರ ಕ್ರಮಗಳ ಮೂಲಕ ರೈತ ಕೃಷಿಯ ಉನ್ನತ ಬೆಳವಣಿಗೆ ಸಾಧಿಸುವ ಮೂಲಕ ಎದುರಿಸಬೇಕಾಗಿತ್ತು. ಆದರೆ ಹಾಗೆ ಮಾಡದೆ, ನವ-ಉದಾರವಾದವನ್ನು ಪರಿಚಯಿಸುವ ಮೂಲಕ ಆ ಕಾರ್ಯತಂತ್ರವನ್ನು ಸಂಪೂರ್ಣವಾಗಿ ಕೈಬಿಡಲಾಯಿತು.. ಇದನ್ನು ಎಷ್ಟು ಬೇಗ ದೇಶವು ಅರಿತುಕೊಳ್ಳುತ್ತದೆಯೋ, ಅಷ್ಟೂ ಒಳ್ಳೆಯದು.

ಇದನ್ನೂ ನೋಡಿ : ಸಾಹಿತ್ಯ ಓದಿಗೆ ವಿಮರ್ಶಾತ್ಮಕ ದೃಷ್ಟಿ ಅಗತ್ಯ – ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *