ಮುಂದುವರೆದ ಬಂಡವಾಳಶಾಹಿ ದೇಶಗಳೂ ಸೇರಿದಂತೆ ಜಗತ್ತಿನಾದ್ಯಂತ ಈಗ ದುಡಿಯುವ ಜನಗಳ ಮೇಲೆ ನಿರುದ್ಯೋಗ ಮತ್ತು ಹಣದುಬ್ಬರದ ಮೂಲಕ ಆರ್ಥಿಕ ದಾಳಿ ನಡೆಯುತ್ತಿದೆ ಮಾತ್ರವಲ್ಲ, ಅದನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗುವಂತೆ ಅವರ ರಾಜಕೀಯ ಹಕ್ಕುಗಳನ್ನು ನಿರ್ಬಂಧಿಸುವ ರಾಜಕೀಯ ದಾಳಿಯೂ ನಡೆಯುತ್ತಿದೆ. ಇದು ಬಂಡವಾಳಶಾಹಿ ಜಗತ್ತಿನಾದ್ಯಂತವೂ ದೊಡ್ಡ ರೀತಿಯಲ್ಲಿ ಹೊರಹೊಮ್ಮಿರುವ ನವ-ಫ್ಯಾಸಿಸಂನ ಸ್ವರೂಪವನ್ನು ಪಡೆದುಕೊಂಡಿದೆ. ಇವೆರಡೂ ಸಾಲದೆಂಬಂತೆ ಈಗ ‘ರೆವ್ಡಿ’, ‘ಬಿಟ್ಟಿ ಭಾಗ್ಯ’, 70-90 ಗಂಟೆಗಳ ಕೆಲಸ ಇತ್ಯಾದಿ ರೂಪಗಳಲ್ಲಿ ಸೈದ್ಧಾಂತಿಕ ದಾಳಿಯೂ ಆರಂಭವಾಗುತ್ತಿದೆ. ಆದರೆ ವಿಡಂಬನೆಯೆಂದರೆ, ಇಂತಹ ದಾಳಿಗಳು ಬಂಡವಾಳಶಾಹಿ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುತ್ತವೆ. ಟ್ರಂಪ್
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು : ಕೆ.ಎಂ.ನಾಗರಾಜ್
ಇಂದಿನ ಬಂಡವಾಳಶಾಹಿಯ ಅಡಿಯಲ್ಲಿ, ದುಡಿಯುವ ಜನರ ಮೇಲೆ ನಡೆಯುತ್ತಿರುವ ದಾಳಿಯು ಬಂಡವಾಳಶಾಹಿಯ ಆರಂಭದ ಕಾಲದಲ್ಲಿ ನಡೆಯುತ್ತಿದ್ದ ದಾಳಿಯನ್ನು ನೆನಪಿಸುವ ರೀತಿಯಲ್ಲಿದೆ. ಈ ದಾಳಿಯು ಮೂರನೇ ಜಗತ್ತಿನಲ್ಲಿ ಮಾತ್ರವಲ್ಲದೆ ಮುಂದುವರಿದ ಬಂಡವಾಳಶಾಹಿ ದೇಶಗಳೂ ಸೇರಿದಂತೆ ವಿಶ್ವಾದ್ಯಂತವೂ ನಡೆಯುತ್ತಿದೆ ಮತ್ತು ಇದು ಆರ್ಥಿಕ, ರಾಜಕೀಯ ಮತ್ತು ಸೈದ್ಧಾಂತಿಕ, ಈ ಮೂರೂ ನೆಲೆಗಳಲ್ಲಿಯೂ ಇದೆ. ಟ್ರಂಪ್
ಬಂಡವಾಳಶಾಹಿ ಜಗತ್ತನ್ನು ಪ್ರಸ್ತುತ ಬಾಧಿಸುತ್ತಿರುವ ತೀವ್ರ ಹಣದುಬ್ಬರ ಮತ್ತು ಹೆಚ್ಚುತ್ತಿರುವ ನಿರುದ್ಯೋಗ, ಈ ಎರಡೂ ಅಂಶಗಳ ಪರಿಣಾಮವಾಗಿ ಆರ್ಥಿಕ ನೆಲೆಯಲ್ಲಿ ನಡೆಯುತ್ತಿರುವ ದಾಳಿಯ ಬಗ್ಗೆ ಸಾಕಷ್ಟು ಚರ್ಚೆ ಮಾಡಲಾಗಿದೆ. ಹಣದುಬ್ಬರದಲ್ಲಿ ಏರಿಕೆ ಆರಂಭವಾದದ್ದು ದೊಡ್ಡ ಬಂಡವಾಳಿಗರ ವಿಭಾಗದಿಂದಾಗಿ, ನಿರ್ದಿಷ್ಟವಾಗಿ ಯುಎಸ್‌ನಲ್ಲಿಇದ್ದಕ್ಕಿದ್ದಂತೆ ಲಾಭದ ಪ್ರಮಾಣವನ್ನು ಹೆಚ್ಚಿಸಿದ್ದರಿಂದಾಗಿ ಅದು ಆರಂಭವಾಯಿತು. ಆನಂತರದಲ್ಲಿ, ಅದು ಬಂಡವಾಳಶಾಹಿ ಜಗತ್ತಿನಾದ್ಯಂತವೂ ಪಸರಿಸಿತು (ಈ ರೀತಿ ಪಸರಿಸಿದ್ದು ಹೇಗೆ ಎಂದು ಇಲ್ಲಿ ಚರ್ಚಿಸುತ್ತಿಲ್ಲ, ಅದರ ಹರಡಿಕೆಯ ಕಾರ್ಯವಿಧಾನವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು). ಟ್ರಂಪ್
ಮತ್ತು ನಿರುದ್ಯೋಗವು ವಿಶ್ವ ಬಂಡವಾಳಶಾಹಿ ಬಿಕ್ಕಟ್ಟಿನಿಂದಾಗಿ ಮತ್ತು ಎಲ್ಲೆಡೆಯೂ ಕಾರ್ಮಿಕ ವರ್ಗದ ಹಿತಗಳನ್ನು ಬಲಿಗೊಟ್ಟು, ಅಂದರೆ, ಉದ್ಯೋಗಗಳನ್ನು ಉದ್ದೇಶಪೂರ್ವಕವಾಗಿ ಕಡಿತಗೊಳಿಸುವ ಮೂಲಕ ಹಣದುಬ್ಬರವನ್ನು ನಿಗ್ರಹಿಸುವ ಅಧಿಕೃತ ಪ್ರಯತ್ನಗಳ ಸಂಯೋಜಿತ ಫಲಿತಾಂಶವಾಗಿ ಏರಿಕೆಯಾಗಿದೆ. ನಿರುದ್ಯೋಗದ ಹೆಚ್ಚಳದ ಪರಿಣಾಮವಾಗಿಯೇ ಕಾರ್ಮಿಕರ ಕೂಲಿ-ಚೌಕಾಸಿಯ ಬಲ ಸಾಕಷ್ಟು ಇಳಿಕೆಯಾಗುತ್ತದೆ, ಇಂತಹ ಇಳಿಕೆಯಿಂದಾಗಿ ಅವರು ಬೆಲೆ ಏರಿಕೆಯನ್ನು ಸರಿದೂಗಿಸಿಕೊಳ್ಳಲು ಹೆಚ್ಚಿನ ಹಣ-ಕೂಲಿಗಾಗಿ ಚೌಕಾಶಿ ಮಾಡುವುದು ಸಾಧ್ಯವಾಗದ ಕಾರಣದಿಂದಾಗಿ ಹಣದುಬ್ಬರವು ಕ್ರಮೇಣ ಹೋಗಿಬಿಡುತ್ತದೆ ಎಂಬುದು ಬಂಡವಾಳಶಾಹಿಪ್ರಭುತ್ವದಅಧಿಕೃತ ಆಶಯ. ಟ್ರಂಪ್
ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ತ್ವರಿತವಾಗಿ ಗುರುತಿನ ಚೀಟಿ ವಿತರಿಸಿ: ತುಷಾರ್ ಗಿರಿ ನಾಥ್
ಎರಿಕ್ ಹಾಬ್ಸ್ಬಾಮ್‌ರಂತಹ ಇತಿಹಾಸಕಾರರು ಹೇಳಿರುವಂತೆ ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭದ ವರ್ಷಗಳಲ್ಲಿ ಬಡತನದ ಏರಿಕೆಯು ಬಂಡವಾಳಶಾಹಿಯ ಲಕ್ಷಣವಾಗಿತ್ತು. ಅದೇ ರೀತಿಯಲ್ಲಿ ಇಂದಿನ ಬಂಡವಾಳಶಾಹಿಯ ಅಡಿಯಲ್ಲಿಯೂ ದುಡಿಯುವ ಜನರ ಸ್ಥಿತಿ-ಗತಿಗಳು ಹದಗೆಡುತ್ತಿವೆ.
ಒಂದು ಉದಾಹರಣೆಯಾಗಿ, 2011ರಲ್ಲಿ ಅಮೇರಿಕದ ಒಬ್ಬ ಪುರುಷ ಕೆಲಸಗಾರನ ಸರಾಸರಿ ನಿಜ ವೇತನವು 1968ರಲ್ಲಿ ಇದ್ದುದಕ್ಕಿಂತಲೂ ತುಸು ಕಡಿಮೆ ಇತ್ತು ಎಂಬುದನ್ನು ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ತೋರಿಸಿಕೊಟ್ಟಿದ್ದರು. ಹಾಗೆ ನೋಡಿದರೆ, ಪ್ರಸ್ತುತ ಹಣದುಬ್ಬರದ ಸಂದರ್ಭದಲ್ಲಿ ಇಂದಿನ ನಿಜ ವೇತನವು 2011ರಲ್ಲಿ ಇದ್ದುದಕ್ಕಿಂತಲೂ ಕಡಿಮೆಯೇ ಮತ್ತು 1968ಕ್ಕೆ ಹೋಲಿಸಿದರೂ ಕಡಿಮೆಯೇ ಇದೆ. ಇದಕ್ಕೆ, 1968ಕ್ಕೆ ಹೋಲಿಸಿದರೆ ಇರುವ ಹೆಚ್ಚುವರಿ ನಿರುದ್ಯೋಗವನ್ನು ಸೇರಿಸಿದಾಗ (ಅಧಿಕೃತ ನಿರುದ್ಯೋಗ ದರವು ಈ ಸಂಗತಿಯನ್ನು ಮರೆಮಾಚುತ್ತದೆ, ಏಕೆಂದರೆ, ಹೆಚ್ಚು ನಿರುದ್ಯೋಗ ಇರುವ ಅವಧಿಯಲ್ಲಿ ಅದರಿಂದ ನಿರುತ್ಸಾಹಿತರಾಗುವ ಕಾರ್ಮಿಕರು ಉದ್ಯೋಗ ಅರಸಲು ಹೋಗದಿರುವಂತಹ ಸನ್ನಿವೇಶವನ್ನು ಅದು ಪರಿಗಣಿಸುವುದಿಲ್ಲ), ಅಮೇರಿಕದ ಕಾರ್ಮಿಕರ ಸ್ಥಿತಿ-ಗತಿಗಳು ಇಂದು ಹದಗೆಟ್ಟಿವೆ ಎಂಬುದರಲ್ಲಿ ಸಂದೇಹವಿಲ್ಲ. ಟ್ರಂಪ್
ಇದೇ ಮಾತನ್ನು ಇತರ ಮುಂದುವರಿದ ಬಂಡವಾಳಶಾಹಿ ದೇಶಗಳ ಕಾರ್ಮಿಕರ ಬಗ್ಗೆಯೂ ಹೇಳಬಹುದು. ಭಾರತ ಮತ್ತು ಮೂರನೇ ಜಗತ್ತಿನ ಇತರ ದೇಶಗಳಲ್ಲಿ, 1980ರ ದಶಕದ ನಂತರದ ಅವಧಿಯಲ್ಲಿ ಆಹಾರ ಧಾನ್ಯಗಳ ತಲಾ ಸೇವನೆ (ಇದರಲ್ಲಿ ನೇರ ಸೇವನೆಯಲ್ಲದೆ, ಪಶು ಉತ್ಪನ್ನಗಳಲ್ಲಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳಲ್ಲಿ ಬಳಕೆಯಾಗುವ ಧಾನ್ಯಗಳೂ ಸೇರಿವೆ) ಕಡಿಮೆಯಾಗಿರುವುದರಿಂದ ಜನರ ಪೌಷ್ಠಿಕತೆಯ ಮಟ್ಟದಲ್ಲಿ ಇಳಿಕೆಯಾಗಿದೆ ಎಂಬುದಕ್ಕೆ ಪುರಾವೆಗಳಿವೆ. ಹಾಗಾಗಿ, ದುಡಿಯುವ ಜನರ ಬಡತನದ ಮಟ್ಟವು ಏರಿಕೆಯಾಗಿದೆ ಎಂದುನಿಸ್ಸಂದೇಹವಾಗಿ ತೀರ್ಮಾನಿಸಬಹುದು. ಆದ್ದರಿಂದ, ಬಂಡವಾಳಶಾಹಿ ಜಗತ್ತಿನಲ್ಲಿ ದುಡಿಯುವ ಜನರ ಮೇಲೆ, ವಿಶೇಷವಾಗಿ ದುಡಿಯುವ ಬಡವರ ಮೇಲೆ, ಆರ್ಥಿಕವಾಗಿ ದಾಳಿ ಮಾಡಲಾಗಿದೆ ಎಂಬುದನ್ನು ಅನುಮಾನಿಸಲಾಗದು. ಟ್ರಂಪ್
ನವ-ಫ್ಯಾಸಿಸ್ಟ್ ರಾಜಕೀಯ ದಾಳಿ
ದುಡಿಯುವ ಜನರ ಮೇಲೆ ಇಂತಹ ಆರ್ಥಿಕ ದಾಳಿಯನ್ನು, ಅವರ ರಾಜಕೀಯ ಹಕ್ಕುಗಳನ್ನು ನಿರ್ಬಂಧಿಸದೆ, ಅಂದರೆ, ಅದೇ ಸಮಯದಲ್ಲಿ ಅವರ ಮೇಲೆ ರಾಜಕೀಯವಾಗಿ ದಾಳಿ ಮಾಡದೆ, ಮುಂದುವರೆಸಿಕೊಂಡು ಹೋಗುವುದು ಅಸಾಧ್ಯವೇ. ಈ ರಾಜಕೀಯ ದಾಳಿಯು ಬಂಡವಾಳಶಾಹಿ ಜಗತ್ತಿನಾದ್ಯಂತವೂ ಒಂದು ದೊಡ್ಡ ರೀತಿಯಲ್ಲಿ ಹೊರಹೊಮ್ಮಿರುವ ನವ-ಫ್ಯಾಸಿಸಂನ ಸ್ವರೂಪವನ್ನು ಪಡೆದುಕೊಂಡಿದೆ. ಈಗ ಅನೇಕ ದೇಶಗಳಲ್ಲಿ ನವ-ಫ್ಯಾಸಿಸ್ಟ್ ನಾಯಕರು ಆಡಳಿತವನ್ನು ಮುನ್ನಡೆಸುತ್ತಿದ್ದಾರೆ. ಟ್ರಂಪ್
ಅರ್ಜೆಂಟೀನಾದ ಮಿಲೀಯಿಂದ ಹಿಡಿದು ಇಟಲಿಯ ಮೆಲೋನಿಯವರೆಗೆ, ಅಮೆರಿಕದಲ್ಲಿ ಟ್ರಂಪ್, ಭಾರತದಲ್ಲಿ ಮೋದಿ, ಹಂಗೇರಿಯಲ್ಲಿ ಓರ್ಬನ್, ಟರ್ಕಿಯಲ್ಲಿ ಎರ್ಡೋಗನ್, ಇಸ್ರೇಲ್‌ನಲ್ಲಿ ನೆತನ್ಯಾಹು (ಅವರ ಹೆಸರನ್ನು ಹೇಳುವುದೇ ಬೇಡ, ಅವರನ್ನು ಯಾರೊಂದಿಗೂ ಹೋಲಿಸಲಾಗದು), ಮುಂತಾದವರ ಉದ್ದವಾದ ಪಟ್ಟಿಯೇ ಇದೆ. ಇನ್ನೂ ಹಲವು ದೇಶಗಳಲ್ಲಿ ನವ-ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರವನ್ನು ಪಡೆಯಲು ತುದಿಗಾಲಲ್ಲಿ ನಿಂತಿವೆ. ಉದಾಹರಣೆಗೆ, ಜರ್ಮನಿಯಲ್ಲಿ ಎಎಫ್‌ಡಿ ಮತ್ತು ಫ್ರಾನ್ಸಿನಲ್ಲಿ ಮರೀನೆ ಲೆ ಪೆನ್ ಅವರ ಪಕ್ಷ (ತಿಂಗಳುಗಳ ಹಿಂದೆ ಫ್ರಾನ್ಸಿನಲ್ಲಿ ನಡೆದ ಚುನಾವಣೆಗಳಲ್ಲಿ ದಿಢೀರನೆ ಒಟ್ಟಾದ ಎಡಪಂಥೀಯರು ಲೆ ಪೆನ್ ಅವರ ಪಕ್ಷವು ಬಹುಮತ ಪಡೆಯುವುದನ್ನು ತಡೆದರು). ಟ್ರಂಪ್
ಈ ನವ-ಫ್ಯಾಸಿಸ್ಟ್ ಶಕ್ತಿಗಳು ದುಡಿಯುವ ಜನರ ಮೇಲೆ ನಡೆಸುತ್ತಿರುವ ರಾಜಕೀಯ ದಾಳಿಯು, ಕಾರ್ಮಿಕರ ಶಾಸನಬದ್ಧ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಮತ್ತು ಅದರ ಜೊತೆಗೆ ಅಸಹಾಯ ಅಲ್ಪಸಂಖ್ಯಾತರನ್ನು”ಅನ್ಯ”ರನ್ನಾಗಿಸಿ ಬಹುಸಂಖ್ಯಾತರು ಅವರ ವಿರುದ್ಧ ಹಗೆ ಸಾಧಿಸುವ ಕಥನವನ್ನು ಸೃಷ್ಟಿಸಿ ಕಾರ್ಮಿಕರನ್ನು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರನ್ನು ದಮನಿಸುತ್ತದೆ. ಕಥನದ ಈ ರೀತಿಯ ಬದಲಾವಣೆಯು ದುಡಿಯುವ ಜನರ ದೈನಂದಿನ ಲೌಕಿಕ ಜೀವನದ ಸಮಸ್ಯೆಗಳನ್ನು ಹಿನ್ನೆಲೆಗೆ ತಳ್ಳುತ್ತದೆ ಮಾತ್ರವಲ್ಲ, ಅದು ದುಡಿಯುವವರನ್ನು ಧಾರ್ಮಿಕ ಅಥವಾ ಜನಾಂಗೀಯ ಆಧಾರದ ಮೇಲೆ ವಿಭಜಿಸುತ್ತದೆ (ಈ ಆಧಾರದ ಮೇಲೆಯೇ ಅಲ್ಪಸಂಖ್ಯಾತರನ್ನು”ಅನ್ಯ”ರನ್ನಾಗಿ ಮಾಡಲಾಗುತ್ತದೆ). ಹಾಗಾಗಿ ದುಡಿಯುವ ಜನತೆಯು ತಮ್ಮ ಮೇಲೆ ಹೇರಲಾದ ಆರ್ಥಿಕ ಸಂಕಷ್ಟಗಳ ವಿರುದ್ಧ ಒಗ್ಗಟ್ಟಿನ ಪ್ರತಿರೋಧ ಒಡ್ಡುವುದು ಸಾಧ್ಯವಾಗುವುದಿಲ್ಲ. ಟ್ರಂಪ್
“ಬಿಟ್ಟಿ ಗಿರಾಕಿಗಳು”, “90 ಗಂಟೆಗಳ ವಾರ” ಇತ್ಯಾದಿ
ದುಡಿಯುವ ಜನರ ಮೇಲಿನ ಈ ಆರ್ಥಿಕ ಮತ್ತು ರಾಜಕೀಯ ದಾಳಿಗಳಷ್ಟೇ ಸಾಲದು ಎಂಬಂತೆ ಅವರ ಮೇಲೆ ನಡೆಯುತ್ತಿರುವ ಸೈದ್ಧಾಂತಿಕ ದಾಳಿಯು ಈಗ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಇದೂ ಕೂಡ ಯಾರೋ ಒಬ್ಬ ಅಥವಾ ಇನ್ನೊಬ್ಬ ವ್ಯಕ್ತಿ ಆಗಾಗ ಕೊಡುವ ವಿಚಿತ್ರ ಹೇಳಿಕೆಗಳಿಗೆ ಮಾತ್ರ ಸೀಮಿತವಲ್ಲ. ಇಂತಹ ದುಡಿಯುವ ಜನ-ವಿರೋಧಿ ಹೇಳಿಕೆಗಳನ್ನು ವಿಶ್ವಾದ್ಯಂತ ಮಾಡಲಾಗುತ್ತಿದೆ. ಈ ವಿದ್ಯಮಾನವು ದುಡಿಯುವ ಜನರ ಮೇಲೆ ನಡೆಯಬಹುದಾದ ಒಂದು ಸೈದ್ಧಾಂತಿಕ ದಾಳಿಯ ಮುನ್ಸೂಚನೆಯಾಗಿದೆ.
ಭಾರತದಲ್ಲಿ ಇಂತಹ ಆಥಿಕ ವಂಚನೆಗೆ ಎದುರಾಗಿ, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಅಸಮರ್ಥವಾಗಿರುವ ಆರ್ಥಿಕ ಆಳ್ವಿಕೆಯೊಳಗೇ ರಾಜಕೀಯ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವ ಬೇರೆ ಬೇರೆ ರಾಜಕೀಯ ಪಕ್ಷಗಳು ಜನಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸುವ ಆಶ್ವಾಸನೆಗಳನ್ನು ನೀಡುತ್ತಿವೆ. ದುಡಿಯುವ ಜನರ ಆರ್ಥಿಕ ದಾರಿದ್ರ್ಯವನ್ನು ತೊಡೆದುಹಾಕಲು ಅತ್ಯಲ್ಪ ಮೊತ್ತದ ಈ ವರ್ಗಾವಣೆಗಳು ಏನೇನೂ ಸಾಲವು(ಸಾಲುತ್ತಿದ್ದರೆ ನಾವು ಹಿಂದೆ ಹೇಳಿದ ಪೌಷ್ಟಿಕಾಂಶದ ಅಭಾವವನ್ನು ಕಾಣುತ್ತಿರಲಿಲ್ಲ). ಆದರೂ, ಅಧಿಕಾರಾರೂಢ ನವ-ಫ್ಯಾಸಿಸ್ಟರು ಮತ್ತು ಪ್ರಧಾನಿ ಮೋದಿಯವರೂ ಸಹ ಈ ವರ್ಗಾವಣೆಗಳನ್ನು “ಬಿಟ್ಟಿ ಭಾಗ್ಯ” ಎಂದೇ ಹೀಯಾಳಿಸುತ್ತಾರೆ. ಚುನಾವಣಾ ಪೈಪೋಟಿಯ ಒತ್ತಡಗಳಿಂದಾಗಿ ಆಳುವ ಪಕ್ಷವು ಕೂಡ ಈಗ ಬಡ ಜನರಿಗೆ ಹಣ ವರ್ಗಾವಣೆಯ ಆಶ್ವಾಸನೆಗಳನ್ನು ನೀಡುತ್ತಿದೆ. ಹಾಗಾಗಿ, ವರ್ಗಾವಣೆಗಳ ಮೇಲಿನ ಈ ದಾಳಿಯನ್ನು ಈಗ ಇತರರು ಕೈಗೆತ್ತಿಕೊಂಡಿದ್ದಾರೆ.
ಕಾರ್ಮಿಕರ ವಾರದ ಕೆಲಸದ ಅವಧಿಯು 90 ಗಂಟೆ ಇರಬೇಕು ಎಂದು ಕೆಲವು ದಿನಗಳ ಹಿಂದೆ ಹೇಳಿದ್ದ ಒಂದು ಬೃಹತ್ ಉದ್ಯಮದ ಮುಖ್ಯ ಕಾರ್ಯನಿರ್ವಾಹಕರು( ಇವರುಗಳು ಭಾರತದ ಕಾರ್ಖಾನೆಗಳಲ್ಲಿ ಹಿಟ್ಲರನ ಆಶ್ವಿಟ್ಝ್ ಯಾತನಾಶಿಬಿರದ ಮಾದರಿಯ ವಾತಾವರಣವನ್ನು ಸೃಷ್ಟಿಸಲು ಬಯಸುತ್ತಾರೆ!), ಈ ಹಣ ವರ್ಗಾವಣೆಗಳಿಂದಾಗಿ “ಬಿಟ್ಟಿ ಗಿರಾಕಿಗಳು” ಕೆಲಸ ಮಾಡದಂತೆ ಪ್ರೇರೇಪಿಸುತ್ತವೆ ಎಂದೂ ಹೇಳುತ್ತಾರೆ. ಅಷ್ಟೇ ಸಾಲದು ಎಂಬಂತೆ ಈಗ ಒಬ್ಬ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೂಡ ಈ ರಾಗಕ್ಕೆ ದನಿಗೂಡಿಸಿದ್ದಾರೆ.
ಹಣ ವರ್ಗಾವಣೆಗಳು ಜನರನ್ನು ಕೆಲಸ ಮಾಡದಂತೆ ತಡೆಯುತ್ತವೆ, ಏಕೆಂದರೆ, ಅವರು ಮನೆಯಲ್ಲೇ ಕೂತು ಏನನ್ನೂ ಮಾಡದೆ “ಬಿಟ್ಟಿ ಭಾಗ್ಯ”ವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಸರ್ಕಾರವು ಹಣ ವರ್ಗಾವಣೆಯ ಬದಲು ಜನರಿಗೆ ಯೋಗ್ಯ ಉದ್ಯೋಗ ಒದಗಿಸುವುದನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕಡ್ಡಾಯಗೊಳಿಸಿದ್ದರೆ, ವಿಷಯ ಬೇರೆಯೇ ಆಗುತ್ತಿತ್ತು. ಆದರೆ, ಅವರು ಮಾತನಾಡಿರುವುದು ವರ್ಗಾವಣೆಯ ವಿರುದ್ಧ ಮಾತ್ರವೇ ಹೊರತು ಸುಯೋಗ್ಯ ಉದ್ಯೋಗ ಒದಗಿಸುವ ಬಗ್ಗೆ ಅಲ್ಲ.
ಕೆಲಸಗಳಿವೆ ಆದರೆ ಕೆಲಸ ಕೇಳುವವರೇ ಇಲ್ಲ ಎಂದು ವಾದಿಸುವ ಇವರು, ಇದಕ್ಕೆ ಸಮರ್ಥನೆಯಾಗಿ ಯಾವುದೇ ಪುರಾವೆಗಳನ್ನು ಒದಗಿಸುವುದಿಲ್ಲ. ಮಾತ್ರವಲ್ಲ, ಇವರು ಕೇಳುವವರಿಲ್ಲ ಎಂದು ಹೇಳುವ ಕೆಲಸಗಳಿಗೆ ಕೊಡುವ ಕೂಲಿಯ ಬಗ್ಗೆಯೂ ಅವರ ಬಳಿ ಯಾವ ಆಧಾರವೂ ಇಲ್ಲ. ಸ್ವತಃ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯೇ (ಐಎಲ್‌ಒ) ಭಾರತದಲ್ಲಿ ಸುಯೋಗ್ಯ ಉದ್ಯೋಗಾವಕಾಶಗಳ ಕೊರತೆಯು ತೀವ್ರವಾಗಿದೆ ಎಂದು ಹೇಳಿದೆ. ಸರ್ಕಾರದ ಉದ್ಯೋಗ ದತ್ತಾಂಶಗಳು ನಿಜಕ್ಕೂ ದೋಷಪೂರಿತವಾಗಿವೆ. ಏಕೆಂದರೆ, ಕುಟುಂಬ ಉದ್ಯಮಗಳಲ್ಲಿ ಮಹಿಳೆಯರ ಕೂಲಿ ಇಲ್ಲದ ಉದ್ಯೋಗಗಳು ಬೆಳೆಯುತ್ತಿದ್ದರೆ, ಅದನ್ನು ಉದ್ಯೋಗದ ಬೆಳವಣಿಗೆ ಎಂದೇ ಸರ್ಕಾರ ಪರಿಗಣಿಸುತ್ತದೆ. ಆದರೆ, ಈ ಬೆಳವಣಿಗೆಯು ಬೇರೆಡೆಯಲ್ಲಿ ಫಲದಾಯಕ ಉದ್ಯೋಗದ ಕೊರತೆ ಇದೆ ಎಂಬುದನ್ನು ಬಿಂಬಿಸುತ್ತದೆ ಮತ್ತು ಈ ಕಾರಣದ ಮೇಲೆ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ಈ ವಿದ್ಯಮಾನವನ್ನು “ಮರೆಮಾಚಿರುವ ನಿರುದ್ಯೋಗ” ಎಂದು ಕರೆಯುತ್ತಾರೆ.
ಸೈದ್ಧಾಂತಿಕ ದಾಳಿ
ಇದೇ ಈ ಸೈದ್ಧಾಂತಿಕ ದಾಳಿಯು ಯುಎಸ್‌ನ ದುಡಿಯುವ ಜನರ ಮೇಲೆಯೂ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ನೇಮಿಸಿದ “ಸರ್ಕಾರದ ದಕ್ಷತಾ ಇಲಾಖೆ”ಯ (ಡಿಒಜಿಇ) ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ರವರ ಹೇಳಿಕೆಗಳನ್ನು ನೋಡಿದರೆ, ಬಡವರಿಗೆ ವೈದ್ಯಕೀಯ ನೆರವು, ವೈದ್ಯಕೀಯ ಸೇವೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆ ಇವುಗಳಲ್ಲಿ ಕಡಿತ ಮಾಡುವಂತೆ ಕಾಣುತ್ತದೆಎಂಬ ಅಭಿಪ್ರಾಯವನ್ನು ಸೆನೆಟರ್ ಬರ್ನಿ ಸ್ಯಾಂಡರ್ಸ್ ಇತ್ತೀಚೆಗೆ ವ್ಯಕ್ತಪಡಿಸಿದ್ದಾರೆ (ಎಂಆರ್ ಆನ್‌ಲೈನ್, ಫೆಬ್ರವರಿ 13). ಅವರ ಪ್ರಕಾರ, ಈ ದಾಳಿಯನ್ನು ಬಡವರಿಗೆ ಸಿಗುತ್ತಿರುವ ಪ್ರಯೋಜನಗಳ ಮೇಲೆ ನಡೆಸಲಾಗುತ್ತಿದೆ, ಏಕೆಂದರೆ, ಈ ಹಣವನ್ನು ಶ್ರೀಮಂತರಿಗೆ ನೀಡುವ ತೆರಿಗೆ ಕಡಿತಗಳ ಕಡೆಗೆ ತಿರುಗಿಸಬಹುದು. ಇಂಥಹ ಪ್ರಯೋಜನ ಪಡೆಯುವವರಲ್ಲಿ, ಸ್ವತಃ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ನಂಥ ಭಾರೀ ಕುಳಗಳೂ ಇದ್ದಾರೆ.
ಸೇಡು ತೀರಿಸಿಕೊಳ್ಳುವ ಈ ಸೈದ್ಧಾಂತಿಕ ದಾಳಿಯು ಯಾವುದನ್ನು “ಪೂರೈಕೆ-ಬದಿಯ ಅರ್ಥಶಾಸ್ತ್ರ” ಎಂದು ಕರೆಯಲಾಗಿದೆಯೋ ಅದರ ಸೂತ್ರಗಳಿಗೆ ಅನುಗುಣವಾಗಿದೆ. ಉದಾರವಾದಿ ಅರ್ಥಶಾಸ್ತ್ರಜ್ಞ ಜಾನ್ ಕೆನ್ನೆತ್ ಗಾಲ್‌ಬ್ರೈತ್, “ಪೂರೈಕೆ-ಬದಿಯ ಅರ್ಥಶಾಸ್ತ್ರ”ದ ಸಾರಾಂಶವೆಂದರೆ, “ಹೆಚ್ಚು ಪ್ರತಿಫಲ ನೀಡಿದರೆ ಶ್ರೀಮಂತರು ಉತ್ತಮವಾಗಿ ಕೆಲಸ ಮಾಡುತ್ತಾರೆ ಮತ್ತು ಕಡಿಮೆ ಸಂಬಳ ನೀಡಿದರೆ ಬಡವರು ಉತ್ತಮವಾಗಿ ಕೆಲಸ ಮಾಡುತ್ತಾರೆ” ಎಂದು ಪ್ರತಿಪಾದಿಸುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದರು. ಇದನ್ನು ಈಗ ಟ್ರಂಪ್ ಮತ್ತು ಮಸ್ಕ್ರಂತಹವರು ವ್ಯಾಪಕವಾಗಿ ಹರಡುತ್ತಿದ್ದಾರೆ.
ಆದರೆ ಇಲ್ಲೊಂದು ವಿಡಂಬನೆಯಿದೆ. ಬಡವರಿಂದ ಹಣ ಕಿತ್ತುಕೊಂಡು ಅದನ್ನು ಶ್ರೀಮಂತರಿಗೆ ನೀಡುವುದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವ ಈ ಸಿದ್ಧಾಂತವನ್ನು ಅನುಸರಿಸಿದರೆ ಬಂಡವಾಳಶಾಹಿ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸುತ್ತದೆ. ಶ್ರೀಮಂತರಿಗೆ ಹೋಲಿಸಿದರೆ ಬಡವರು ತಮ್ಮ ವರಮಾನವನ್ನು ಪೂರ್ಣವಾಗಿ ಬಳಕೆಮಾಡಿಕೊಳ್ಳುವುದರಿಂದ, ಸರ್ಕಾರವು ಸಂಗ್ರಹಿಸುವ ತೆರಿಗೆಯ ಹಣದ ಈ ರೀತಿಯ ಪುನರ್‌ಹಂಚಿಕೆಯು ಒಟ್ಟು ಬಳಕೆಯ ಬೇಡಿಕೆಯನ್ನು ಮತ್ತಷ್ಟು ಕುಗ್ಗಿಸುತ್ತದೆ. ಬಂಡವಾಳಗಾರರು ಮಾಡುವ ಹೂಡಿಕೆಯು ಮಾರುಕಟ್ಟೆಯ ನಿರೀಕ್ಷಿತ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುವುದರಿಂದ, ನಿಜ ಹೂಡಿಕೆಯ ಮಟ್ಟವು ಮಾರುಕಟ್ಟೆಯ ನಿಜ ಬೆಳವಣಿಗೆಯ ಅನುಭವವನ್ನು ಅವಲಂಬಿಸಿರುತ್ತದೆ; ಹಾಗಾಗಿ, ಶ್ರೀಮಂತರಿಗೆ ತೆರಿಗೆ ವಿನಾಯಿತಿಗಳನ್ನು ನೀಡುವುದರಿಂದ ಅವರ ಹೂಡಿಕೆಯು ಅಣುವಿನಷ್ಟೂ ಹೆಚ್ಚುವುದಿಲ್ಲ. ಅಂತಿಮವಾಗಿ, ಒಟ್ಟಾರೆ ಬೇಡಿಕೆಯು (ಬಳಕೆ ಮತ್ತು ಹೂಡಿಕೆಯನ್ನು ಒಟ್ಟಿಗೆ ತೆಗೆದುಕೊಂಡರೆ) ಇಳಿಕೆಯಾಗಿರುವುದು ಕಂಡುಬರುತ್ತದೆ. ಇದು ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುತ್ತದೆ.
ಬಂಡವಾಳಶಾಹಿಯ ಸಮರ್ಥಕರಾಗಿದ್ದ ಮತ್ತು ಬೊಲ್ಶೆವಿಕ್ ಕ್ರಾಂತಿಯಂತಹ ಘಟನೆ ಪಶ್ಚಿಮದಲ್ಲಿ ಏನಾದರೂ ಘಟಿಸಿದರೆ ಅದು ಬಂಡವಾಳಶಾಹಿಯನ್ನು ಹಿಂದಿಕ್ಕಬಹುದೆಂದು ಭಯಭೀತರಾಗಿದ್ದ ಜಾನ್ ಮೇನಾರ್ಡ್ ಕೀನ್ಸ್ 1930ರ ದಶಕದಲ್ಲಿ, ಬಂಡವಾಳಶಾಹಿ ವ್ಯವಸ್ಥೆಯನ್ನು ಸಂರಕ್ಷಣೆ ಮಾಡಲು ಒಟ್ಟಾರೆ ಬೇಡಿಕೆಯನ್ನು ಸರ್ಕಾರದ ಪ್ರಯತ್ನದ ಮೂಲಕ ಹೆಚ್ಚಿಸುವುದು ಅಗತ್ಯವೆಂದು ಪ್ರತಿಪಾದಿಸಿದ್ದರು. ಸಮಕಾಲೀನ ಬಂಡವಾಳಶಾಹಿಯಲ್ಲಿ ನಾವು ನೋಡುತ್ತಿರುವ ವಿದ್ಯಮಾನವು ಕೀನ್ಸ್ ಅವರ ಪ್ರತಿಪಾದನೆಗೆ ವಿರುದ್ಧವಾಗಿದೆ. ಇದು ನಿಸ್ಸಂದೇಹವಾಗಿಯೂ ರಾಜಕೀಯವಾಗಿ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.
ಇದನ್ನೂ ನೋಡಿ: ಫೆಬ್ರವರಿ 28| ರಾಷ್ಟ್ರೀಯ ವಿಜ್ಞಾನ ದಿನಾಚರಣೆ |ಸರ್ ಸಿ.ವಿ.ರಾಮನ್Janashakthi Media