ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು – ಭಾಗ 1

ಹೊರಳುದಾರಿಯಲ್ಲಿರುವ ಭಾರತದಲ್ಲಿ ತಳಸಮಾಜದ ವಿಘಟನೆ ಅನಾಹುತಕಾರಿಯಾಗುತ್ತದೆ
(ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟಗಳು ಮೂರು ಕವಲುಗಳಾಗಿ ಹರಿಯುತ್ತಿದ್ದು , ಈ ಹೋರಾಟಗಳಲ್ಲಿ ಮುನ್ನಲೆಗೆ ಬಾರದ ತಾತ್ವಿಕ ಅಂಶಗಳನ್ನು ನಾಲ್ಕು ಭಾಗದ ಲೇಖನದಲ್ಲಿ ಚರ್ಚಿಸಲಾಗಿದೆ.  ಅನುಪಾತ, ಶೇಕಡಾವಾರು ಹಂಚಿಕೆ ಇತ್ಯಾದಿ ಅಂಕಿ ಸಂಖ್ಯೆಗಳನ್ನು ಹೊರಗಿಟ್ಟು ಸಮಾಜದ ವಾಸ್ತವ ನೆಲೆಗಟ್ಟಿನಲ್ಲಿ ವಿಷಯ ಮಂಡಿಸಲಾಗಿದೆ.) ಐಕ್ಯತೆ

ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ, ನವ ಬಂಡವಾಳಶಾಹಿ ಮತ್ತು ನವ ಉದಾರವಾದಿ ಆರ್ಥಿಕ ನೀತಿಗಳು ಭಾರತವನ್ನು ಸಂಪೂರ್ಣವಾಗಿ ತನ್ನ ಸಂಕೋಲೆಗಳಲ್ಲಿ ಬಂಧಿಸಿದೆ. ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಸ್ವಾಭಾವಿಕೀಕರಣಗೊಳಿಸುವ (Naturalise) ಆಳುವ ವರ್ಗಗಳ ಪ್ರಯತ್ನಗಳು ಸಫಲವಾಗುತ್ತಿದ್ದು, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂಬ ಅಭಿಪ್ರಾಯವನ್ನು ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಮುಖ್ಯವಾಹಿನಿ ಸಂವಹನ ಮಾಧ್ಯಮಗಳು ಹಾಗೂ ರಾಜಕೀಯ ಚಿಂತನಾ ಕೂಟಗಳು (Think Tanks) ಉತ್ಪಾದಿಸಿ, ತಳಸಮಾಜದ ಕಟ್ಟಕಡೆಯ ವ್ಯಕ್ತಿಗೂ ವ್ಯವಸ್ಥಿತವಾಗಿ ತಲುಪಿಸುತ್ತಿವೆ. ತಮ್ಮ ಪೂರ್ವಾಶ್ರಮದ ಅಸಮಾನತೆ ಮತ್ತು ಅವಮಾನಗಳನ್ನು ಮರೆತು ವರ್ತಮಾನದ ಸಾಮಾಜಿಕ ಅನ್ಯಾಯಗಳನ್ನು ಸಹಿಸಿಕೊಳ್ಳುವ ಒಂದು ವರ್ಗವನ್ನೂ ಈ ವಿಚಾರಧಾರೆಗಳು ಸೃಷ್ಟಿಸಿವೆ. ಐಕ್ಯತೆ

– ನಾ ದಿವಾಕರ

ಅಭಿವೃದ್ಧಿಯ ಫಲಾನುಭವಿ ವರ್ಗಗಳು ತಳಸಮಾಜದ ತಲ್ಲಣಗಳಿಗೆ ವಿಮುಖವಾಗುತ್ತಿದ್ದಂತೆಯೇ ತಳಸಮಾಜಗಳನ್ನು ಪ್ರತಿನಿಧಿಸುವ ಹಿತವಲಯದ (Comfort Zone) ಸಮುದಾಯಗಳು ನಿರ್ಲಿಪ್ತವಾಗಿವೆ. ಸಂಘಟನಾತ್ಮಕವಾಗಿ ನಿಷ್ಕ್ರಿಯವಾಗಿರುವುದನ್ನೂ ಗುರುತಿಸಬಹುದು. ವರ್ತಮಾನದ ನೆಲದ ವಾಸ್ತವಗಳಿಗೆ (Ground Realities) ವಿಮುಖವಾಗಿ, ಚರಿತ್ರೆಯ ವೈಭವಗಳಿಗೆ ತೆರೆದುಕೊಳ್ಳುವ ಒಂದು ವಿಕೃತ ಚಿಂತನಾಧಾರೆ, ನವ ಭಾರತದ ವೈಶಿಷ್ಟ್ಯವಾಗಿದ್ದು ಇದು ಎಲ್ಲ ಸಮಾಜಗಳನ್ನೂ ಆವರಿಸಿರುವುದು ದುರದೃಷ್ಟಕರ. ಈ ವಿಚಾರಧಾರೆಯ ಸಮ್ಮೋಹನಕ್ಕೊಳಗಾಗಲು ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳು ಒರಗು ಗೋಡೆಗಳಾಗಿ ಪರಿಣಮಿಸುತ್ತಿವೆ. 50 ವರ್ಷಗಳ ಹಿಂದಿದ್ದ ಅಸಮಾನತೆ, ತಾರತಮ್ಯ, ದೌರ್ಜನ್ಯಗಳು ಇಂದಿಗೂ ಜೀವಂತವಾಗಿದ್ದರೂ ಅದನ್ನು ಸಮಸ್ಯಾತ್ಮಕವಾಗಿ ಕಾಣದ ಒಂದು ಸಮಾಜ ನವ ಭಾರತದ ಸಾರ್ವಜನಿಕ ಸಂಕಥನಗಳನ್ನು ನಿರ್ದೇಶಿಸುತ್ತಿರುವುದು ವಾಸ್ತವ. ಐಕ್ಯತೆ

ಸಮ ಸಮಾಜದ ಕನಸುಗಳ ನಡುವೆ

ಈ ವ್ಯತ್ಯಯಗಳ ನಡುವೆ ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ವಿವಾದ ಮತ್ತು ಅದರ ಸುತ್ತ ನಿರ್ಮಾಣವಾಗಿರುವ ತಾತ್ವಿಕ ಒಳಸೂಕ್ಷ್ಮಗಳನ್ನು ಪರಾಮರ್ಶಿಸಬೇಕಿದೆ.  ಜಾತಿ ಶೋಷಣೆ ಇರುವವರೆಗೂ ಮೀಸಲಾತಿ ಇರುತ್ತದೆ ಎಂಬ ವಾದ ಒಪ್ಪುವಂತಹುದೇ. ಆದರೆ ಈ ವಾದಗಳ ನಡುವೆ ಕ್ಷೀಣ ಧ್ವನಿಯಲ್ಲಿ ʼ ಮಾರುಕಟ್ಟೆ ಆರ್ಥಿಕತೆ ಒಪ್ಪುವವರೆಗೆ ಮಾತ್ರ ಮೀಸಲಾತಿ ಇರುತ್ತದೆ ʼ ಎಂಬ ದಿಟ್ಟ ಪ್ರತಿಪಾದನೆ ಭಾರತದ ಮೇಲ್ವರ್ಗ-ಮೇಲ್ಜಾತಿ ಮತ್ತು ಮೇಲ್ಪದರ ಸಮಾಜದ ಸಮ್ಮತಿಯೊಂದಿಗೆ ಆಳವಾಗಿ ಬೇರೂರುತ್ತಿರುವುದನ್ನು ಗಮನಿಸಲು ವಿಫಲವಾಗುತ್ತಿದ್ದೇವೆ. ನವ ಉದಾರವಾದ ಎಂದರೆ ಕೇವಲ ಆರ್ಥಿಕ ನೀತಿಗಳಿಗೆ ಸಂಬಂಧಿಸಿದ ವಿದ್ಯಮಾನ ಎಂಬ ಸೀಮಿತ ದೃಷ್ಟಿಕೋನ ನಮ್ಮ ಸಾಮಾಜಿಕ ಸಂಕಥನಗಳನ್ನೂ ಸಂಕುಚಿತಗೊಳಿಸುತ್ತಿದೆ. ಐಕ್ಯತೆ

ಇದನ್ನೂ ಓದಿ: ಕರ್ನಾಟಕದಲ್ಲಿ ಜನಗಣತಿಗೆ 1 ಲಕ್ಷ ಶಿಕ್ಷಕರ ನಿಯೋಜನೆ- ತೀವ್ರ ವಿರೋಧ

ಇತ್ತೀಚಿನ ಆದೇಶದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಬೌದ್ಧ,ಸಿಖ್‌ ಧರ್ಮಗಳನ್ನು ಹೊರತುಪಡಿಸಿ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿಗೆ ಮತಾಂತರವಾಗುವ ಪರಿಶಿಷ್ಟ ಜಾತಿ/ಪಂಗಡಗಳು, ಸಾಂವಿಧಾನಿಕ ಮೀಸಲಾತಿ ಮತ್ತು ರಕ್ಷಣಾ ಕಾನೂನುಗಳಿಗೆ ಅರ್ಹವಾಗುವುದಿಲ್ಲ ಎಂದು ಹೇಳಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ನ್ಯಾಯಾಂಗದ ಈ ತೀರ್ಪನ್ನು ಗೌರವಿಸುತ್ತಲೇ ಇದರ ಹಿಂದಿರುವ ತಾತ್ವಿಕ ರಾಜಕೀಯ ಒಳಾರ್ಥಗಳನ್ನೂ ಗ್ರಹಿಸಬೇಕಿದೆ. ನವ ಉದಾರವಾದವನ್ನು ಒಪ್ಪಿಕೊಂಡಿರುವ ಭಾರತದ ರಾಜಕೀಯ ಪಕ್ಷಗಳಿಗೆ ಈಗ ಮೀಸಲಾತಿ ಒಂದು ಹೊರೆಯಾಗಿ ಕಾಣುತ್ತಿದೆ. ಆದರೆ ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೀಸಲಾತಿ ನಿರ್ಣಾಯಕ ಅಸ್ತ್ರವಾಗಿಯೂ ಕಾಣುತ್ತಿದೆ. ಉದ್ಯೋಗ ಸೃಷ್ಟಿಸುವುದು, ನಿರುದ್ಯೋಗವನ್ನು ನಿವಾರಿಸಲು ಯುವ ಸಮಾಜಕ್ಕೆ ಅವಕಾಶಗಳನ್ನು ಕಲ್ಪಿಸುವುದು ಚುನಾಯಿತ ಸರ್ಕಾರಗಳ ಜವಾಬ್ದಾರಿಯೂ ಅಲ್ಲ, ಬಾಧ್ಯತೆಯೂ ಅಲ್ಲ ಎಂಬ ಸೂತ್ರವನ್ನು ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಒಪ್ಪಿಕೊಂಡಿವೆ. ಐಕ್ಯತೆ

ಹಾಗಾಗಿ ಶಾಲಾ ಕಾಲೇಜುಗಳಿಂದ ವ್ಯಾಸಂಗ ಮುಗಿಸಿ ಅಥವಾ ಅರ್ಧಕ್ಕೇ ಬಿಟ್ಟು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುವ ಯುವಸಮಾಜ ಬಂಡವಾಳಶಾಹಿ ಮಾರುಕಟ್ಟೆಯ ಜಗುಲಿಯಲ್ಲಿ ಕಾಣುವ ಉದ್ಯೋಗಗಳನ್ನೇ ಆಶ್ರಯಿಸಬೇಕಿದೆ. ನಿರಂತರವಾಗಿ ನಡೆಯುತ್ತಿರುವ ಉದ್ಯೋಗ ಮೇಳಗಳು ಇದಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕ ವಲಯದಲ್ಲಿ (Public Sector), ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಉದ್ಯೋಗ ಸೃಷ್ಟಿಸಬೇಕಾದ ಸರ್ಕಾರಗಳು, ಈ ಉದ್ಯೋಗ ಮೇಳಗಳನ್ನೇ ಮಹತ್ಸಾಧನೆ ಎಂದು ಬಿಂಬಿಸುವ ಮೂಲಕ, ಭ್ರಮಾಧೀನ ಸಮಾಜವನ್ನು ಸಮ್ಮೋಹನಗೊಳಿಸುತ್ತಿದೆ. ಐಕ್ಯತೆ

ಕರ್ನಾಟಕ ಸರ್ಕಾರ 2026ರ ಬಜೆಟ್‌ನಲ್ಲಿ ಖಾಲಿ ಇರುವ 56 ಸಾವಿರ ಉದ್ಯೋಗಗಳನ್ನು ಭರ್ತಿಮಾಡುವುದನ್ನೇ ಕ್ರಾಂತಿಕಾರಕ ಎಂದು ಬಿಂಬಿಸುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಈ ಭರವಸೆಯನ್ನೂ ಕಾಣಲಾಗುವುದಿಲ್ಲ. ಆದರೆ ಎರಡೂ ಕಡೆ ಹೊಸ ಸರ್ಕಾರಿ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಸೊಲ್ಲೆತ್ತುವುದಿಲ್ಲ. ಇದಕ್ಕೆ ಕಾರಣ, ಗುತ್ತಿಗೆ ನೌಕರ, ಅತಿಥಿ ಬೋಧಕ/ಉಪನ್ಯಾಸಕ ಮೊದಲಾದ ಮಾರುಕಟ್ಟೆ ಪರಿಭಾಷೆಯ ಉದ್ಯೋಗಾವಕಾಶಗಳು. ನಾಳಿನ ಭರವಸೆಯೇ ಇಲ್ಲದ ಈ ಉದ್ಯೋಗಿಗಳಿಗೆ, ಗಿಗ್‌ ಕಾರ್ಮಿಕರಿಗೆ ಆರೋಗ್ಯ ವಿಮೆ, ಸಾಮಾಜಿಕ ರಕ್ಷಣೆ ಮೊದಲಾದ ಸೌಲಭ್ಯಗಳನ್ನು ರೂಪಿಸುವ ಸರ್ಕಾರಗಳು, ಶಾಶ್ವತ ನೌಕರಿಯ ಬಗ್ಗೆ ಕ್ಷಣ ಮಾತ್ರವೂ ಯೋಚಿಸುವುದಿಲ್ಲ. ಆಶಾ, ಅಂಗನವಾಡಿ , ಸ್ವಚ್ಚತಾ ಕಾರ್ಮಿಕರೂ ಸಹ ಇದೇ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಐಕ್ಯತೆ

ತಳಸಮಾಜದ ವಾಸ್ತವಗಳ ನಡುವೆ

ಸಂವಿಧಾನ ಮತ್ತು ಸಾಂವಿಧಾನಿಕ ರಕ್ಷಣೆಯನ್ನು ಅವಲಂಬಿಸಿರುವ ತಳಸಮಾಜದ ಅಪಾರ ಜನಸ್ತೋಮ ಗಮನಿಸಬೇಕಿರುವುದು, ಈ ಯಾವುದೇ ಉದ್ಯೋಗ ವಲಯಗಳಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆ ಇರುವುದಿಲ್ಲ, ಅಸಮಾನತೆಯನ್ನು ಹೋಗಲಾಡಿಸುವ ಔದಾತ್ಯ ಇರುವುದಿಲ್ಲ, ಸಾಮಾಜಿಕವಾಗಿ-ಆರ್ಥಿಕವಾಗಿ ಶೋಷಣೆಗೊಳಗಾಗುವ ಅವಕಾಶವಂಚಿತ ಸಮುದಾಯಗಳ ಬಗ್ಗೆ ಕಾಳಜಿಯೂ ಇರುವುದಿಲ್ಲ. ಸಹಜವಾಗಿ ಸಾಮಾಜಿಕ ತಾರತಮ್ಯ-ಶೋಷಣೆ ಮತ್ತು ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಸಾಂವಿಧಾನಿಕ ನಿಯಮ , ಮೀಸಲಾತಿ ಇಲ್ಲಿ ಅನ್ವಯಿಸುವುದಿಲ್ಲ. ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಬಂದು ನೆರೆಯುವ ಜೀವನಾಕಾಂಕ್ಷಿಗಳನ್ನು ಉದ್ಯೋಗಾಕಾಂಕ್ಷಿಗಳು ಎಂಬ ಸಂಕುಚಿತ ಆವರಣದಲ್ಲಿಟ್ಟು, ಈ ಯುವ ಸಮಾಜವನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸಲಾಗುತ್ತಿದೆ. ಇದು ನವ ಉದಾರವಾದ ಸೃಷ್ಟಿಸುತ್ತಿರುವ ಅಪಾಯ. ಐಕ್ಯತೆ

ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಹೋರಾಡುತ್ತಿರುವ ಸಂಘಟನೆಗಳು, ಸರ್ಕಾರಿ ವಲಯದಲ್ಲೇ ಅವಕಾಶಗಳು ಕ್ಷೀಣಿಸುತ್ತಿರುವುದರ ವಿರುದ್ಧ ಹೋರಾಡುತ್ತಿಲ್ಲ. ಸರ್ಕಾರಗಳು ಕಲ್ಪಿಸುವ ನೌಕರಿಗಳಲ್ಲಿ ಒಂದು ಭಾಗವನ್ನು ಮೀಸಲಾತಿಯ ರೂಪದಲ್ಲಿ ಶೋಷಿತ ಸಮುದಾಯಗಳಿಗೆ ನೀಡುವುದು ಸಾಂವಿಧಾನಿಕ ನಿಯಮ. ಈ ಸಮೀಕರಣವನ್ನು ಭಂಗಗೊಳಿಸಲು ಯಾವ ಪಕ್ಷಗಳೂ ಮುಂದಾಗುವುದಿಲ್ಲ. ಆದರೆ ಸರ್ಕಾರಿ ವಲಯಗಳಲ್ಲಿ ಶಾಶ್ವತ ನೌಕರಿಯ ಪ್ರಮಾಣವನ್ನೇ ಕಡಿಮೆ ಮಾಡುವ ಮೂಲಕ, ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದಿರುವ ಜನಸಮುದಾಯಗಳಿಗೆ ಅವಕಾಶಗಳನ್ನೇ ನಿರಾಕರಿಸಲಾಗುತ್ತಿದೆ. ಲಭ್ಯವಿರುವುದರಲ್ಲೇ ಅಥವಾ ಚುನಾಯಿತ ಸರ್ಕಾರಗಳು ಒದಗಿಸುವುದರಲ್ಲೇ ತಮ್ಮ ಸಾಂವಿಧಾನಿಕ ಪಾಲನ್ನು ಪಡೆದುಕೊಳ್ಳಲು ತಳಸ್ತರದ ಜಾತಿ ಸಮುದಾಯಗಳು ಹೋರಾಡುವುದು ಅನಿವಾರ್ಯವಾಗಿದೆ. ಐಕ್ಯತೆ

ಈ ಹೋರಾಟಗಳನ್ನು ನಾವು ಮೀಸಲಾತಿ ಹೋರಾಟ ಅಥವಾ ಒಳಮೀಸಲಾತಿ ಹೋರಾಟ ಎಂದು ವರ್ಗೀಕರಿಸುತ್ತಿದ್ದೇವೆ. ಈ ಹೋರಾಟಗಳ ಮೂಲಕ ಮೀಸಲಾತಿ ಪ್ರಮಾಣವನ್ನು, ಅನುಪಾತವನ್ನು ಹೆಚ್ಚಿಸಲು ಆಗ್ರಹಿಸಲಾಗುತ್ತಿದೆ. ಈವರೆಗೂ ಮೀಸಲಾತಿ ಸೌಲಭ್ಯವನ್ನೇ ಪಡೆಯದ ಸಮುದಾಯಗಳು ತಮ್ಮ ಪಾಲು ಕೇಳಲಾರಂಭಿಸಿವೆ. ಸಾಮಾಜಿಕವಾಗಿ-ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ರೂಪಿಸುತ್ತಿವೆ. ಉದಾಹರಣೆಗೆ ಮಹಾರಾಷ್ಟ್ರದ ಮರಾಠರು, ಹರಿಯಾಣದ ಜಾಟರು ಒಬಿಸಿ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಈ ನಡುವೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾದಿಗ ಸಮುದಾಯ ತನ್ನ ಪಾಲನ್ನು ಕೇಳುತ್ತಿದೆ. ಇದು ʼ ಒಳಮೀಸಲಾತಿ ʼ  ಹೋರಾಟದ  ಕೇಂದ್ರ ಬಿಂದು ಆಗಿರುವುದನ್ನು ಕರ್ನಾಟಕದಲ್ಲೂ ಕಾಣುತ್ತಿದ್ದೇವೆ.

ವಂಚಿತ ಸಮಾಜಗಳ ನಡುವೆ

ಈ ಯಾವುದೇ ಹೋರಾಟಗಳಲ್ಲೂ ಸಾಂವಿಧಾನಿಕ ಮೀಸಲಾತಿ ಸೌಲಭ್ಯದಿಂದ ವಂಚಿತರಾದ ಜನಸಮುದಾಯಗಳ ದೃಷ್ಟಿಯಿಂದ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಹಕ್ಕೊತ್ತಾಯಗಳು ಕೇಳಿಬರುತ್ತಿಲ್ಲ. ಅಂದರೆ ಸಾರ್ವಜನಿಕ ಉದ್ದಿಮೆಗಳ ರಕ್ಷಣೆ ಮತ್ತು ವಿಸ್ತರಣೆಗಾಗಿ, ಖಾಸಗೀಕರಣದ ವಿರುದ್ಧ, ಕಾರ್ಪೋರೇಟ್‌ ಮಾರುಕಟ್ಟೆಯ ಅನಿಶ್ಚಿತ ಉದ್ಯೋಗ ಮಾದರಿಗಳ ವಿರುದ್ಧ ಹೋರಾಟಗಳು ನಡೆಯುತ್ತಿಲ್ಲ. ಇದು ನಡೆಯಬೇಕಾದರೆ ನವ ಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಹೋರಾಟ ರೂಪಿಸಬೇಕು. ಉದ್ಯೋಗ ನಮ್ಮ ಸಾಂವಿಧಾನಿಕ ಹಕ್ಕು (Constitutional Right) ಆದರೆ ಮೂಲಭೂತ ಹಕ್ಕು (Fundamental Right) ಅಲ್ಲ. ಮೀಸಲಾತಿಯೂ ಇದೇ ಪರಿಧಿಯಲ್ಲೇ ನಿರ್ವಚಿಸಲ್ಪಡುತ್ತದೆ.

ಸಂವಿಧಾನದ ನಿರ್ದೇಶಕ ತತ್ವಗಳಲ್ಲಿರುವ ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವ ಸಂವಿಧಾನ ತಿದ್ದುಪಡಿಗಾಗಿ ಬಹುಶಃ ಯಾವುದೇ ಜನಾಂದೋಲನಗಳು ನಡೆದಿಲ್ಲ. ನವ ಉದಾರವಾದಿ ಮಾರುಕಟ್ಟೆಗೆ, ಬಂಡವಾಳಶಾಹಿ ಸರ್ಕಾರಗಳಿಗೆ ಇದು ವರದಾನವಾಗಿ ಪರಿಣಮಿಸಿದೆ. ಕರ್ನಾಟಕದಲ್ಲಿ ತೀವ್ರವಾಗುತ್ತಿರುವ ಒಳಮೀಸಲಾತಿ ಹೋರಾಟಗಳನ್ನು, ಒಳಮೀಸಲಾತಿಯ ಆಗ್ರಹವನ್ನೇ, ಆಳುವ ವರ್ಗಗಳ (ಮನುವಾದಿ ಎಂದು ಕರೆಯುವುದು ಇತ್ತೀಚಿನ ಫ್ಯಾಷನ್)‌ ಪಿತೂರಿ ಎಂದು ಆರೋಪಿಸುತ್ತಿರುವವರಿಗೆ, ಈ ವಾಸ್ತವಿಕತೆಯನ್ನು ಗ್ರಹಿಸಲಾಗುತ್ತಿಲ್ಲ. ಈ ಹೋರಾಟಗಳು ದಲಿತ ಸಮಾಜವನ್ನು ಒಡೆದು ಆಳುವ ಮನುವಾದಿಗಳ ತಂತ್ರಗಾರಿಕೆ ಎಂದು ವ್ಯಾಖ್ಯಾನಿಸುವ ಮೂಲಕ, 77 ವರ್ಷಗಳ ಸಾಂವಿಧಾನಿಕ ಆಳ್ವಿಕೆಯಲ್ಲಿ , ಸಮಾಜವಾದ ಮತ್ತು ಸಾಮಾಜಿಕ ನ್ಯಾಯದ ವಾಗ್ದಾನಗಳ ಹೊರತಾಗಿಯೂ, ಸಾಂವಿಧಾನಿಕ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿರುವ ಜನಸಂಖ್ಯೆ ಅಪಾರ ಸಂಖ್ಯೆಯಲ್ಲಿದೆ ಎಂಬ ಕಟು ಸತ್ಯವನ್ನು ನಿರಾಕರಿಸಲಾಗುತ್ತಿದೆ.

ನಮ್ಮ ನಡುವೆ ಈ ಸಮುದಾಯಗಳು ಇವೆ. ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಿವೆ. ಸಾಮಾಜಿಕ ತಾರತಮ್ಯ ಮತ್ತು ದೌರ್ಜನ್ಯಕ್ಕೊಳಗಾಗುತ್ತಲೇ ಇವೆ. ಆರ್ಥಿಕವಾಗಿ ಇಂದಿಗೂ ಕೆಳಸ್ತರದಲ್ಲೇ ಇವೆ. ಸಾಂವಿಧಾನಿಕವಾಗಿ ಲಭ್ಯವಾಗಬೇಕಾದ ಸವಲತ್ತುಗಳಿಂದ, ಸೌಲಭ್ಯಗಳಿಂದ ಹೊರಗುಳಿದಿವೆ. ಇಂದಿಗೂ ಮೇಲ್ಜಾತಿ-ಮೇಲ್ವರ್ಗಗಳ ಮರ್ಜಿಗೆ ಒಳಗಾಗಿ, ಪರಾವಲಂಬಿ ಬದುಕನ್ನು ಸಾಗಿಸುತ್ತಿವೆ. ನವ ಆರ್ಥಿಕತೆಯಲ್ಲಿ ಮಾರುಕಟ್ಟೆ ವ್ಯತ್ಯಯಗಳಿಂದ ಈ ಸಮುದಾಯಗಳ ನಿತ್ಯಜೀವನ ದುರ್ಭರವಾಗುತ್ತಿದೆ. ಎಲ್ಲರನ್ನೂ ಒಳಗೊಳ್ಳಬೇಕಾದ (Inclusive) ಸಾಮಾಜಿಕ ವ್ಯವಸ್ಥೆಯಲ್ಲಿ ಇನ್ನೂ ಹೊರಗುಳಿದಿವೆ. ಈ ಎಲ್ಲ ಅಂಶಗಳನ್ನೂ ಸತ್ಯ ಎಂದು ಪ್ರಮಾಣೀಕರಿಸುವುದಾದರೆ, ಈ ಜನಸಂಖ್ಯೆ ತನ್ನ ಸುಭದ್ರ ಭವಿಷ್ಯಕ್ಕಾಗಿ ಯಾರನ್ನು ಆಶ್ರಯಿಸಬೇಕು? ಐಕ್ಯತೆ

ಒಳಮೀಸಲಾತಿಯ ಒಳಸುಳಿಗಳು

ಕರ್ನಾಟಕದಲ್ಲಿ ಅಧಿಕೃತವಾಗಿ ಪರಿಶಿಷ್ಟ ಜಾತಿ (ಎಸ್‌ಸಿ) ಎಂದು ವರ್ಗೀಕರಿಸಲ್ಪಟ್ಟಿರುವ ಕೊರಚ, ಲಂಬಾಣಿ (ಬಂಜಾರ) ಮತ್ತು ಭೋವಿ ಸಮದಾಯಗಳನ್ನು ಮೀಸಲಾತಿ ಸಮೀಕರಣದಿಂದ ಹೊರಗಿಡಿ ಎಂಬ ಬೇಡಿಕೆ ಇತರ ಪರಿಶಿಷ್ಟ ಜಾತಿ ಗುಂಪುಗಳಿಂದಲೇ ಕೇಳಿಬರುತ್ತಿದೆ. ಏಕೆ ಹೊರಗಿಡಬೇಕು ? ಈ ಸಮುದಾಯಗಳು ಆರ್ಥಿಕವಾಗಿ ಸಬಲವಾಗಿದೆಯೇ, ಸಾಮಾಜಿಕ ಸಮಾನತೆ ಪಡೆದುಕೊಂಡಿದೆಯೇ, ಪೂರ್ಣ ಸಾಕ್ಷರತೆ ಮತ್ತು ಉದ್ಯೋಗ ಪಡೆದಿದೆಯೇ, ಶೈಕ್ಷಣಿಕವಾಗಿ ಮುಂದುವರೆದಿದೆಯೇ, ಸಾಮಾಜಿಕ ತಾರತಮ್ಯ-ದೌರ್ಜನ್ಯ ಮತ್ತು ಅಸಮಾನತೆಗಳಿಂದ ಮುಕ್ತವಾಗಿದೆಯೇ ? ಇಲ್ಲ ಎಂದಾದರೆ, ಈ ಕ್ರೂರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮೀಸಲಾತಿಯನ್ನು ಬಿಟ್ಟು ಮತ್ತಾವ ಆಯ್ಕೆ ಇದೆ ? ಅಥವಾ ಭಾರತದ ಜಾತಿ ವ್ಯವಸ್ಥೆಯಲ್ಲಿ ಅಂಬೇಡ್ಕರ್‌ ಹೊರತಾಗಿ ಮತ್ತಾವ ತಾತ್ವಿಕ ಹೋರಾಟದ ಹಾದಿ ಇದೆ? ಐಕ್ಯತೆ

ಕಮ್ಯುನಿಸ್ಟ್‌ ಪಕ್ಷಗಳು ತಮ್ಮ ವರ್ಗ ಹೋರಾಟದ ನಡುವೆ ಈ ಕೆಳಸ್ತರದ ಅತ್ಯಂತ ಶೋಷಿತ ಸಮುದಾಯಗಳನ್ನು ಜಾತಿ ಅಸ್ಮಿತೆಗಳ ನೆಲೆಯಲ್ಲಿ ಪರಾಮರ್ಶಿಸಿ ಹೋರಾಟ ನಡೆಸಿದ್ದಲ್ಲಿ ಜೈಭೀಮ್-ಲಾಲ್‌ ಸಲಾಂ ಇವರ ಘೋಷಣೆಯಾಗಬಹುದಿತ್ತು. ಎಡಪಂಥೀಯ ಪಕ್ಷಗಳು ಈಗ ಎಚ್ಚೆತ್ತಿವೆ. ಆದರೆ ಜಾತಿ ಅಸ್ಮಿತೆಯ ಪ್ರತ್ಯೇಕತೆ, ಮೇಲರಿಮೆ-ಕೀಳರಿಮೆ, ಸೈದ್ಧಾಂತಿಕ ಕೋಶೀಕರಣ (Cellularisation) ಹಾಗೂ ಏಕಮುಖಿ ಚಿಂತನಾಧಾರೆಗಳಿಂದ ಭ್ರಮಾಧೀನವಾಗಿರುವ ಈ ಸಮುದಾಯಗಳನ್ನು ಜಾಗೃತಗೊಳಿಸಲು ತಳಮಟ್ಟದಿಂದಲೇ ಕ್ರಿಯಾಶೀಲ ಪ್ರಯತ್ನಗಳು ನಡೆಯಬೇಕಾಗುತ್ತದೆ. ಈ ಸಮುದಾಯಗಳಲ್ಲಿ ಅನಕ್ಷರತೆ ಅಥವಾ ಸಾಮಾಜಿಕ ಅರಿವಿನ ಕೊರತೆಯೂ ಇರುವುದರಿಂದ, ತತ್ವ ಸಿದ್ದಾಂತಗಳನ್ನು ಗ್ರಾಂಥಿಕವಾಗಿ ತಲುಪಿಸಲಾಗುವುದಿಲ್ಲ. ಅದು ಕೇವಲ ಔಪಚಾರಿಕ ಕ್ರಿಯೆಯಾಗುತ್ತದೆ. ಮಾರ್ಕ್ಸ್‌, ಅಂಬೇಡ್ಕರ್‌ ಅವರನ್ನು ವರ್ತಮಾನದ ಸಂದಿಗ್ಧತೆಗಳ ನೆಲೆಯಲ್ಲಿ ಮರುವ್ಯಾಖ್ಯಾನಿಸಿ ಈ ನಿರ್ಲಕ್ಷಿತ ಸಮುದಾಯಗಳಿಗೆ ತಲುಪಿಸಬೇಕಾಗುತ್ತದೆ.

ಯಾವುದೇ ಕಾರಣಕ್ಕೂ ಒಳಮೀಸಲಾತಿ ಜಾರಿಗೊಳಿಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿದಿರುವ ಬಲಗೈ ಸಮುದಾಯ ತನ್ನ ಬಹುಸಂಖ್ಯಾವಾದಿ (60 ಲಕ್ಷ ಜನಸಂಖ್ಯೆ ಇರುವುದಾಗಿ ಹೇಳಲಾಗುತ್ತಿದೆ) ರಾಜಕಾರಣವನ್ನು ಮುನ್ನಲೆಗೆ ತಂದಿದೆ. ಒಂದು ಫಲಾನುಭವಿ ಸಮಾಜ ತನ್ನ ಹಕ್ಕುಗಳನ್ನು ರಕ್ಷಿಸಲು ಹೋರಾಡುವುದು ಸಹಜವೇ. ಆದರೆ ಕಣ್ಣೆದುರಿನಲ್ಲೇ ಇರುವ ಇತರೆ ಕೆಳಸ್ತರದ ಜಾತಿಗಳ ಅಸಮಾನತೆ ಮತ್ತು ಅವಕಾಶಹೀನತೆಗೆ ಕುರುಡಾಗುವುದು, ಬಹುಸಂಖ್ಯಾವಾದದ (Majoritarianism) ಲಕ್ಷಣ. ಮೈಸೂರಿನ ಒಡೆಯರ್‌ ಆಳ್ವಿಕೆಯಲ್ಲಿ ಮಿಲ್ಲರ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಾಗ  ವ್ಯಕ್ತವಾದ ಮೇಲ್ಜಾತಿಯ ಪ್ರತಿರೋಧಕ್ಕೂ, ಮಾರ್ಚ್‌ 25ರ ಬೃಹತ್‌ ʼಬಲಗೈ ಸಮಾವೇಶದʼ ಧ್ವನಿಗೂ ವ್ಯತ್ಯಾಸವೇನಿದೆ ? ನಾವು ಕಷ್ಟಪಟ್ಟು ಸಂಪಾದಿಸಿಕೊಂಡಿದ್ದೇವೆ ಎನ್ನುವ ಸ್ವಾಭಿಮಾನದ ಧ್ವನಿಗಿಂತಲೂ ಹೆಚ್ಚಾಗಿ, ಅಂಬೇಡ್ಕರ್‌ ಅವರ ಹೋರಾಟಗಳು ನಡೆದಿದ್ದೇ ನಮ್ಮ, ಅಂದರೆ ಒಂದು ಸಮುದಾಯದ, ಹಕ್ಕುಗಳಿಗಾಗಿ ಎಂಬ ಧ್ವನಿ ಗಟ್ಟಿಯಾಗಿ ಕೇಳಿಬರುತ್ತಿದೆ.

ಇದನ್ನೂ ನೋಡಿ: ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *