ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ, ಈ ಬಾರಿ ರಾಜಕೀಯ ಹೋರಾಟವು ಗೆಲುವು-ಸೋಲಿನ ಲೆಕ್ಕಾಚಾರವನ್ನು ಮೀರಿ, ಭಯ ಮತ್ತು ಆಯ್ಕೆಯ ನಡುವಿನ ಸಂಕೀರ್ಣ ಮನೋಭಾವವಾಗಿ ರೂಪುಗೊಂಡಿದೆ. ಆಳುವ All India Trinamool Congress (ಟಿಎಂಸಿ) ಮತ್ತು ಸವಾಲು ಹಾಕುತ್ತಿರುವ Bharatiya Janata Party (ಬಿಜೆಪಿ) ಎರಡರ ಮೇಲೂ ಮತದಾರರಲ್ಲಿ ವಿಶ್ವಾಸಕ್ಕಿಂತ ಆತಂಕವೇ ಹೆಚ್ಚಾಗಿದೆ. ಇದೇ ಕಾರಣದಿಂದ, ಈ ಎರಡು ಶಕ್ತಿಗಳ ಪರ್ಯಾಯವಾಗಿ Left Front (ಎಡರಂಗ) ಕಡೆಗೆ ಮತದಾರರು ಮುಖ ಮಾಡುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ, 2026ರ ವಿಧಾನಸಭಾ ಚುನಾವಣೆಯ ಮುನ್ನ “ಯಾರು ಉತ್ತಮ?” ಎಂಬ ಪ್ರಶ್ನೆಯನ್ನು ಬಿಟ್ಟು, “ಯಾರು ಕಡಿಮೆ ಅಪಾಯಕರ?” ಎಂಬ ಪ್ರಶ್ನೆಯೇ ಮತದಾನದ ಕೇಂದ್ರಬಿಂದುವಾಗುತ್ತಿದೆ.
– ಗುರುರಾಜ ದೇಸಾಯಿ
ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ಹವಾ ಶುರುವಾಗಿದೆ. ಆದರೆ ಈ ಬಾರಿ ಒಂದು ವಿಚಿತ್ರ ಬದಲಾವಣೆ ಕಂಡುಬರುತ್ತಿದೆ ಅದು ಏನೆಂದರೆ, “ಯಾರು ಗೆಲ್ಲುತ್ತಾರೆ?” “ಯಾರು ಸೋಲಬೇಕು?” ಎಂಬ ಎಂಬ ಕುತೂಹಲವನ್ನು ಮೀರಿದ್ದು. ಆಳುವಪಕ್ಷ ಮತ್ತು ಅದರ ಸ್ಥಾನ ಪಡೆಯಬೇಕೆಂದಿರುವ ಕೇಂದ್ರದ ಆಳುವ ಪಕ್ಷ ಇವೆರಡರಿಂದಲೂ ಆತಂಕ ಇದೆ. ಈ ಆತಂಕದಿಂದ ನಾವು ಮುಕ್ತರಾಗುವುದು ಹೇಗೆ? ಎಂಬ ಪ್ರಶ್ನೆ ಮತದಾರರಲ್ಲಿ ಮೂಡಿದೆ. 2026ರ ವಿಧಾನಸಭಾ ಚುನಾವಣೆಯ ಮುನ್ನ, ರಾಜ್ಯದ ರಾಜಕೀಯ ವಾತಾವರಣದಲ್ಲಿ ಆಶಯಕ್ಕಿಂತ ಶಂಕೆ, ಭರವಸೆಗಿಂತ ಅಪಾಯದ ಅಳತೆ ಮುಖ್ಯವಾದ ಅಂಶವಾಗಿ ಕಾಣುತ್ತಿದೆ.
ಈ ಬದಲಾವಣೆ ಕೇವಲ ರಾಜಕೀಯ ರುಚಿಯಲ್ಲಿನ ವ್ಯತ್ಯಾಸವಲ್ಲ; ಅದು ಸಾಮಾಜಿಕ-ಆರ್ಥಿಕ ಅನುಭವಗಳ ಒತ್ತಡದಿಂದ ರೂಪುಗೊಂಡ ಮನೋಭಾವ. ನಗರ ಮಧ್ಯಮವರ್ಗದಿಂದ ಗ್ರಾಮೀಣ ಬಡವರ್ಗದವರೆಗೆ, ಮತದಾರರು ಈಗ ತಮ್ಮ ಮತವನ್ನು “ಪರಿವರ್ತನೆಯ ಸಾಧನ”ವಾಗಿ ನೋಡದೆ, “ನಷ್ಟ ನಿಯಂತ್ರಣದ ಸಾಧನ”ವಾಗಿ ಬಳಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ವಿಧಾನಸಭೆ ಅಧಿವೇಶನ | 12 ಮಸೂದೆ ಅಂಗೀಕಾರ
ನಾಲ್ಕು ಆಯ್ಕೆ ಇಬ್ಬರ ಬಗ್ಗೆ ಆತಂಕ
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತವು ಕಳೆದ ಕೆಲವು ವರ್ಷಗಳಲ್ಲಿ ಹಲವು ಆರೋಪಗಳಿಗೆ ಗುರಿಯಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಸ್ಥಗಿತ, ನೇಮಕಾತಿ ಸಂಬಂಧಿತ ವಿವಾದಗಳು, ಮತ್ತು ಹಲವು ಹಗರಣಗಳು ಇವು ವಿಶೇಷವಾಗಿ ನಗರ ಮಧ್ಯಮವರ್ಗ ಮತ್ತು ಯುವಜನರಲ್ಲಿ ಅಸಮಾಧಾನವನ್ನು ಹೆಚ್ಚಿಸಿವೆ.
ಇನ್ನೊಂದೆಡೆ, ಬಿಜೆಪಿಯ ರಾಜಕೀಯ ವಿಸ್ತರಣೆ ಹೊಸ ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ. ಮತಧರ್ಮಾಧಾರಿತ ಪ್ರಚಾರ, ಗುರುತಿನ ರಾಜಕೀಯ, ಮತ್ತು ಪ್ರಚಾರದ ಕುತ್ಸಿತ ಭಾಷೆ ಹಲವು ಸಮುದಾಯಗಳಲ್ಲಿ ಅಸುರಕ್ಷಿತತೆಯ ಭಾವನೆಗಳನ್ನು ಉಂಟುಮಾಡುತ್ತಿದೆ. ಇದು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹೀಗಾಗಿ, ಮತದಾರರು ಎರಡು ವಿಭಿನ್ನ ಚಿಂತನೆಗಳ ನಡುವೆ ಸಿಲುಕಿದ್ದಾರೆ, ಒಂದೆಡೆ ಆಡಳಿತದ ಕಾರ್ಯಕ್ಷಮತೆಯ ಬಗ್ಗೆ ಅಸಮಾಧಾನ, ಮತ್ತೊಂದೆಡೆ ಸಾಮಾಜಿಕ ಸಾಮರಸ್ಯದ ಬಗ್ಗೆ ಆತಂಕ. ಈ ದ್ವಂದ್ವವೇ ಬಂಗಾಳದ ರಾಜಕೀಯದಲ್ಲಿ ಈ ಚುನಾವಣೆ ಮಹತ್ವದ ಪಾತ್ರವಹಿಸಲಿದೆ.
ಪಶ್ಚಿಮ ಬಂಗಾಳದಲ್ಲಿ ಆಡಳಿತದ ಮೇಲೆ ಮೂಡುತ್ತಿರುವ ಅಸಮಾಧಾನವು ಕೇವಲ ವಿರೋಧ ಪಕ್ಷಗಳ ಪ್ರಚಾರದ ಪರಿಣಾಮವಲ್ಲ; ಅದು ದಿನನಿತ್ಯದ ಅನುಭವಗಳಿಂದ ನಿಧಾನವಾಗಿ ರೂಪುಗೊಂಡಿರುವ ಮನೋಭಾವ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತ್ತು ವಿದ್ಯಾವಂತ ಮಧ್ಯಮ ವರ್ಗದಲ್ಲಿ, ಸರ್ಕಾರದ ಕಾರ್ಯಕ್ಷಮತೆ ಕುರಿತು ಪ್ರಶ್ನೆಗಳು ಹೆಚ್ಚು ಸ್ಪಷ್ಟವಾಗಿ ಕೇಳಿಬರುತ್ತಿವೆ.

ಉದ್ಯೋಗ ಸೃಷ್ಟಿಯ ಕೊರತೆ ಈ ಅಸಮಾಧಾನದ ಪ್ರಮುಖ ಅಂಶವಾಗಿದೆ. ಪದವಿ ಪಡೆದ ಯುವಜನರಿಗೆ ತಕ್ಕ ಕೆಲಸ ಸಿಗದಿರುವುದು, ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಳಂಬ ಮತ್ತು ವಿವಾದಗಳು, ಹಾಗೂ ಖಾಸಗಿ ಹೂಡಿಕೆಗಳ ಕೊರತೆಯಿಂದ ಉದ್ಯೋಗಾವಕಾಶಗಳು ಸೀಮಿತವಾಗಿರುವುದು, ಇವೆಲ್ಲವೂ ನಿರಾಶೆಯನ್ನು ಹೆಚ್ಚಿಸಿವೆ. ಉದ್ಯೋಗದ ಪ್ರಶ್ನೆ ಕೇವಲ ಆರ್ಥಿಕ ಸಮಸ್ಯೆಯಾಗಿರದೆ, ಸಾಮಾಜಿಕ ಅಸ್ಥಿರತೆಯ ಮೂಲವಾಗಿಯೂ ಕಾಣುತ್ತಿದೆ.
ಇದಕ್ಕಿಂತಲೂ ಹೆಚ್ಚಾಗಿ, ಕೆಲವು ನೇಮಕಾತಿ ಮತ್ತು ಆಡಳಿತಾತ್ಮಕ ಹಗರಣಗಳು ಸರ್ಕಾರದ ವಿಶ್ವಾಸಾರ್ಹತೆಯನ್ನು ಹಾನಿಗೊಳಪಡಿಸಿವೆ. ಭ್ರಷ್ಟಾಚಾರದ ಆರೋಪಗಳು, ಅಧಿಕಾರದ ದುರುಪಯೋಗದ ಬಗ್ಗೆ ಕೇಳಿಬರುವ ಮಾತುಗಳು ಮತ್ತು ತನಿಖೆಗಳ ಸುತ್ತಲಿನ ರಾಜಕೀಯ ವಾದ-ವಿವಾದಗಳುಇವು ಸಾಮಾನ್ಯ ಮತದಾರರಲ್ಲಿ “ವ್ಯವಸ್ಥೆಯ ಮೇಲೆ ನಂಬಿಕೆ”ಯನ್ನು ಕುಗ್ಗಿಸುತ್ತಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಅಸಮಾಧಾನದ ಸ್ವರೂಪ ಸ್ವಲ್ಪ ವಿಭಿನ್ನವಾಗಿದೆ. ಅಲ್ಲಿ ನೇರ ಹಣ ವರ್ಗಾವಣೆ ಮತ್ತು ಕಲ್ಯಾಣ ಯೋಜನೆಗಳು ಕೆಲವು ಮಟ್ಟಿಗೆ ಬೆಂಬಲವನ್ನು ಉಳಿಸಿಕೊಂಡಿದ್ದರೂ, ಸ್ಥಳೀಯ ಮಟ್ಟದಲ್ಲಿ ಮಧ್ಯವರ್ತಿಗಳ ಪ್ರಭಾವ, ಸಂಪನ್ಮೂಲಗಳ ಹಂಚಿಕೆಯಲ್ಲಿ ಅಸಮಾನತೆ ಮತ್ತು ರಾಜಕೀಯ ಪ್ರಭಾವದ ಆರೋಪಗಳು ಜನರಲ್ಲಿ ಅಸಮಾಧಾನವನ್ನು ಹುಟ್ಟಿಸುತ್ತಿವೆ.
ಮಹಿಳೆಯರು ಮತ್ತು ಬಡ ವರ್ಗಗಳಿಗೆ ಕಲ್ಯಾಣ ಯೋಜನೆಗಳು ನೆರವಾಗಿದ್ದರೂ, ದೀರ್ಘಕಾಲಿಕ ಅಭಿವೃದ್ಧಿ, ಉದ್ಯೋಗ, ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ ಇವುಗಳಲ್ಲಿ ಪ್ರಗತಿ ನಿಧಾನವಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಹೀಗಾಗಿ, ಈ ಅಸಮಾಧಾನವು ಏಕಮುಖವಲ್ಲ; ಅದು ವಿವಿಧ ವರ್ಗಗಳಲ್ಲಿ ವಿಭಿನ್ನ ರೂಪದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಎಲ್ಲವನ್ನು ಒಟ್ಟುಗೂಡಿಸಿದಾಗ, ಆಡಳಿತದ ಮೇಲೆ ಸಂಪೂರ್ಣ ವಿಶ್ವಾಸ ಇಲ್ಲ ಎಂಬುದನ್ನು ತೋರುಸುತ್ತದೆ.
ಟಿಎಂಸಿಯ ದುರಾಡಳಿತ ಹಾಗೂ ಬಿಜೆಪಿ ಕೋಮುದ್ರುವೀಕರಣದಿಂದ ಅಪಯಾವವೇ ಹೆಚ್ಚಿದ್ದು, ಇದರಿಂದ ನಮಗೆ ಕಡಿಮೆ ಆಪಾಯ ಯಾರಿಂದ ಇದೆ ಮತ್ತು ನಮ್ಮ ಬದುಕು ಸಾಗಿಸುವ ಪಕ್ಷದತ್ತ ನಾವು ಮುಖ ಮಾಡುತ್ತೇವೆ ಎಂದೆನ್ನುತ್ತಿದ್ದಾರೆ. ಈ ಮಾತುಗಳನ್ನು ಗಮನಿಸಿದರೆ ಅಲ್ಲಿಯ ಮತದಾರರು ಎಡಪಕ್ಷಗಳತ್ತ ಮತ್ತೆ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಷ್ಟೇನೂ ಪ್ರಭಾವಿ ಅಲ್ಲದಿದ್ದರೂ ಆ ಪಕ್ಷವೂ ಓಕೆ ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ.
ಎಬಿಪಿ ಆನಂದಬಜಾರ್ ಎಂಬ ಮಾಧ್ಯಮ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ (ಇದು ಟಿಎಂಸಿ ಬೆಂಬಲಿತ ಮಾಧ್ಯಮ ಸಂಸ್ಥೆ) ಎಡಪಕ್ಷಗಳು 2011ರ ಸೋಲನ್ನು ಮೆಟ್ಟಿ ನಿಲ್ಲಲಿವೆ ಎಂದು ಹೇಳುತ್ತದೆ. 50ಕ್ಕಿಂತ ಹೆಚ್ಚಿನ ಸ್ಥಾನಗಳು ಎಡಪಕ್ಷದ ಪಾಲಾಗಲಿವೆ. 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪ್ರಬಲ ಪೈಪೋಟಿ ನೀಡಲಿವೆ ಎಂದಿದ್ದಾರೆ. ಸರಕಾರ ರಚನೆಯಲ್ಲಿ ಈ ಬಾರಿ ಎಡಪಕ್ಷಗಳು ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಸರ್ವೆ ಹೇಳುತ್ತದೆ.
ಮತದಾರರ ಪಟ್ಟಿಯ ಪರಿಷ್ಕರಣೆಯ ಲಾಭ ಯಾರಿಗೆ ?
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ, ಸಾಮಾನ್ಯವಾಗಿ ಕಾಣಿಸುವ ಆಡಳಿತಾತ್ಮಕ ಕ್ರಮದ ಗಡಿಯನ್ನು ದಾಟಿ, ಈಗ ಪ್ರಜಾಸತ್ತಾತ್ಮಕ ಹಕ್ಕಿನ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಯಾವುದೇ ಚುನಾವಣಾ ವ್ಯವಸ್ಥೆಯ ಅವಿಭಾಜ್ಯ ಅಂಗವಾದರೂ, ಅದರ ಅನುಷ್ಠಾನದಲ್ಲಿ ಕಾಣುತ್ತಿರುವ ಅಸಂಗತತೆಗಳು ಮತ್ತು ಅಪಾರದರ್ಶಕತೆ, ಸಾಮಾನ್ಯ ನಾಗರಿಕರಲ್ಲಿ ಅನಿಶ್ಚಿತತೆಯ ಭಾವನೆಯನ್ನು ಹುಟ್ಟಿಸಿವೆ.
ಲಕ್ಷಾಂತರ ಮತದಾರರು “ಪರಿಶೀಲನೆಯಲ್ಲಿರುವವರು” ಅಥವಾ “ತೀರ್ಪಿನ ಅಡಿಯಲ್ಲಿ” ಎಂಬ ವರ್ಗದಲ್ಲಿ ಉಳಿದಿರುವುದು ಈ ಅಸುರಕ್ಷತೆಯ ಕೇಂದ್ರಬಿಂದು. ಇವರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆಯ ಅಂಚಿನಲ್ಲಿ ನಿಂತಿದ್ದಾರೆ. ಸಮಸ್ಯೆಯ ಮೂಲದಲ್ಲಿ ಡೇಟಾ ನಿರ್ವಹಣೆಯ ದೋಷಗಳು, ಹೆಸರುಗಳ ವ್ಯತ್ಯಾಸ, ಹಳೆಯ ದಾಖಲೆಗಳ ಅಸಂಗತತೆ ಮತ್ತು ಡಿಜಿಟಲೀಕರಣದ ವೇಳೆ ಉಂಟಾದ ತಪ್ಪುಗಳು ಪ್ರಮುಖ ಪಾತ್ರವಹಿಸುತ್ತಿವೆ. ಸಣ್ಣ ಕಾಗುಣಿತದ ವ್ಯತ್ಯಾಸವೇ ವ್ಯಕ್ತಿಯ ಪೌರತ್ವವನ್ನು ಪ್ರಶ್ನಿಸುವ ಮಟ್ಟಕ್ಕೆ ತಲುಪಿರುವ ಉದಾಹರಣೆಗಳು ಕಾಣಿಸುತ್ತಿವೆ.

ಈ ಪ್ರಕ್ರಿಯೆ ಹೆಚ್ಚು ಸಂಕೀರ್ಣವಾಗುವುದು, ಅದರಲ್ಲಿ ಪಾರದರ್ಶಕತೆ ಕೊರತೆಯಿರುವಾಗ. ಪರಿಶೀಲನೆಗೆ ಒಳಗಾಗುವ ಮಾನದಂಡಗಳು ಸ್ಪಷ್ಟವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಏಕೆ ಕೆಲವರು ಮಾತ್ರ ಪರಿಶೀಲನೆಗೆ ಒಳಗಾಗುತ್ತಾರೆ? ಯಾವ ಆಧಾರದ ಮೇಲೆ ಹೆಸರುಗಳನ್ನು ಅಳಿಸಲಾಗುತ್ತದೆ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ? ಈ ಪ್ರಶ್ನೆಗಳಿಗೆ ಸಮಗ್ರ ಉತ್ತರ ಸಿಗದಿರುವುದು ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತದೆ.
ಸಾಮಾಜಿಕವಾಗಿ ದುರ್ಬಲ ವರ್ಗಗಳು ಈ ಪ್ರಕ್ರಿಯೆಯಲ್ಲಿ ಹೆಚ್ಚು ಪರಿಣಾಮಕ್ಕೊಳಗಾಗುತ್ತಿರುವುದು ಗಮನಾರ್ಹ. ಗ್ರಾಮೀಣ ಮಹಿಳೆಯರು, ಸ್ಥಳಾಂತರಗೊಂಡ ಕಾರ್ಮಿಕರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ದಾಖಲೆಗಳ ಕೊರತೆ ಅಥವಾ ಹೆಸರು ಬದಲಾವಣೆಯಂತಹ ಕಾರಣಗಳಿಂದ ಹೆಚ್ಚಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಾಹದ ನಂತರ ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಅಥವಾ ಶಿಕ್ಷಣದ ಕೊರತೆಯಿಂದ ದಾಖಲೆಗಳ ನಿರ್ವಹಣೆಯಲ್ಲಿ ಇರುವ ಅಸಮರ್ಪಕತೆ—ಇವುಗಳು ಅವರಿಗೆ ದೊಡ್ಡ ಅಡ್ಡಿಯಾಗಿದೆ.
ಇದರೊಂದಿಗೆ, ಈ ಪ್ರಕ್ರಿಯೆ ರಾಜಕೀಯ ವಾದ-ವಿವಾದಗಳ ಕೇಂದ್ರವಾಗಿರುವುದೂ ಅಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಮಿತ್ ಶಾ ಅವರ ಹೇಳಿಕೆಗಳಂತಹ ರಾಜಕೀಯ ಸಂಕೇತಗಳು, ಈ ಕ್ರಮವನ್ನು ಕೇವಲ ಆಡಳಿತಾತ್ಮಕವಲ್ಲ, ರಾಜಕೀಯ ಉದ್ದೇಶ ಹೊಂದಿದ ಕ್ರಮವೆಂಬ ಅನುಮಾನವನ್ನು ಕೆಲವರ್ಗಗಳಲ್ಲಿ ಬಲಪಡಿಸಿವೆ. ಇತ್ತ ರಾಜ್ಯ ಸರ್ಕಾರದ ಟೀಕೆಗಳು ಮತ್ತು ಕೇಂದ್ರದ ಸಮರ್ಥನೆ ಇವುಗಳ ನಡುವೆ ಸಿಲುಕಿರುವ ಸಾಮಾನ್ಯ ಮತದಾರನಿಗೆ ಸ್ಪಷ್ಟತೆ ದೊರೆಯುವುದಿಲ್ಲ.
ಪ್ರಾಯೋಗಿಕವಾಗಿ ನೋಡಿದರೆ, ಈ ಪ್ರಕ್ರಿಯೆಯ ಪರಿಣಾಮ ಜನರ ದೈನಂದಿನ ಜೀವನದ ಮೇಲೂ ಬೀರುತ್ತಿದೆ. ಪರಿಶೀಲನೆಗಾಗಿ ದೂರ ಪ್ರಯಾಣ ಮಾಡುವುದು, ದಾಖಲೆಗಳನ್ನು ಸಂಗ್ರಹಿಸುವ ವೆಚ್ಚ, ಕೆಲಸದ ದಿನ ಕಳೆದುಕೊಳ್ಳುವುದು—ಇವೆಲ್ಲವೂ ಆರ್ಥಿಕ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ. ಮತದಾನದ ಹಕ್ಕು ಕೇವಲ ಒಂದು ಸಂವಿಧಾನಾತ್ಮಕ ಹಕ್ಕು ಮಾತ್ರವಲ್ಲ,
ಅದು ನಾಗರಿಕತ್ವದ ಗುರುತು ಎಂಬುದನ್ನು ಗಮನಿಸಿದರೆ, ಈ ಅಸುರಕ್ಷತೆ ಇನ್ನಷ್ಟು ಗಂಭೀರವಾಗಿ ಕಾಣುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಪರಿಣಾಮವನ್ನು ಪಕ್ಷವಾರು ನೋಡಿದರೆ, ಇದು ಒಂದೇ ರೀತಿಯಲ್ಲಿ ಎಲ್ಲರ ಮೇಲೂ ಬೀಳುವುದಿಲ್ಲ. ಸಾಮಾಜಿಕ ಹಂಚಿಕೆ, ಪ್ರದೇಶವಾರು ಪ್ರಭಾವ ಮತ್ತು ಮತದಾರರ ಮನೋಭಾವವನ್ನು ಆವರಿಸಿದೆ.
ಹಿಂದುತ್ವದ ಅಜೆಂಡಾ ಜಾರಿಗಾಗಿ ಎಸ್‌ಐಆರ್ ನ್ನು ಬಿಜೆಪಿ ನಡೆಸುತ್ತಿದೆ ಎಂಬ ಅಪವಾದ ಕಣ್ಣಿಗೆ ಕಾಣುತ್ತಿದೆ. ಬಿಹಾರದ ಫಲಿತಾಂಶವನ್ನು ಗಮನಿಸಿದರೆ ಬಿಜೆಪಿ ತನಗೆ ಲಾಭ ಮಾಡಿಕೊಳ್ಳಲು ಮತದಾರರ ಪರೀಷ್ಕರಣೆ ಮಾಡುತ್ತಿದೆ. ಬಿಹಾರದಲ್ಲಿ ಆದಂತೆ ಪಶ್ಚಿಮ ಬಂಗಾಳಲದಲ್ಲಿ ಆಗಲೂ ಸಾಧ್ಯವಿಲ್ಲ ಎಂಬುದು ಅಲ್ಲಿಯ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ಆಗಿದೆ.
ಮಸುಕಾದರೂ ಮರೆಯಾಗದ ಎಡಪಂಥದ ಗುರುತು
ಪಶ್ಚಿಮ ಬಂಗಾಳದ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕಾದರೆ, ಎಡಪಂಥೀಯ ಆಡಳಿತದ ದೀರ್ಘ ಅವಧಿಯನ್ನು ಮೀರಿ ನೋಡಲು ಸಾಧ್ಯವಿಲ್ಲ. ಸುಮಾರು ಮೂರೂವರೆ ದಶಕಗಳ ಕಾಲ ಮುಂದುವರಿದ ಆ ಆಡಳಿತವು ಕೇವಲ ಒಂದು ಸರ್ಕಾರವಲ್ಲ; ಅದು ಒಂದು ರಾಜಕೀಯ ಸಂಸ್ಕೃತಿ, ಆಡಳಿತ ಶೈಲಿ ಮತ್ತು ಸಾಮಾಜಿಕ ಮನೋಭಾವವನ್ನು ರೂಪಿಸಿದ ಅವಧಿಯಾಗಿತ್ತು. ಇಂದು ಎಡಪಕ್ಷಗಳು ಚುನಾವಣಾ ಮಟ್ಟದಲ್ಲಿ ದುರ್ಬಲಗೊಂಡಿದ್ದರೂ, ಅವರ ಆ ಅವಧಿಯ ಪರಿಣಾಮಗಳು ಇನ್ನೂ ಬಂಗಾಳದ ರಾಜಕೀಯ ವರ್ತನೆಯಲ್ಲಿ ಜೀವಂತವಾಗಿವೆ.
ಎಡಪಂಥದ ಪ್ರಮುಖ ಸಾಧನೆಗಳಲ್ಲಿ ಭೂಸುಧಾರಣೆ ಮತ್ತು ಪಂಚಾಯತ್ ವ್ಯವಸ್ಥೆಯ ಬಲವರ್ಧನೆ ಪ್ರಮುಖವಾಗಿದೆ. ಭೂಹೀನ ರೈತರಿಗೆ ಹಕ್ಕು ನೀಡುವುದು, ಬಾಡಿಗೆ ರೈತರನ್ನು ಕಾನೂನುಬದ್ಧವಾಗಿ ಗುರುತಿಸುವುದು ಮತ್ತು ಗ್ರಾಮೀಣ ಮಟ್ಟದಲ್ಲಿ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುವುದು, ಇವು ಗ್ರಾಮೀಣ ಸಮಾಜದಲ್ಲಿ ಸಮಾನತೆಯ ಭಾವನೆಯನ್ನು ಬಲಪಡಿಸಿತು. ಇದರ ಪರಿಣಾಮವಾಗಿ, ಬಂಗಾಳದಲ್ಲಿ “ರಾಜಕೀಯ ಜಾಗೃತಿ” ಒಂದು ವಿಶಿಷ್ಟ ಮಟ್ಟಕ್ಕೆ ಏರಿತು. ಸಾಮಾನ್ಯ ಮತದಾರನಿಗೂ ರಾಜಕೀಯದ ಬಗ್ಗೆ ಅರಿವು, ಹಕ್ಕಿನ ಭಾವನೆ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯ ಹೆಚ್ಚಾಯಿತು.
ಈ ಹಿನ್ನೆಲೆ ಇಂದಿಗೂ ಪ್ರಭಾವ ಬೀರುತ್ತದೆ. ಬಂಗಾಳದ ಮತದಾರರು ಇತರ ರಾಜ್ಯಗಳಿಗಿಂತ ಹೆಚ್ಚು ರಾಜಕೀಯವಾಗಿ ಸಂವೇದನಾಶೀಲರಾಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಇದೇ ಕಾರಣ. ಅವರು ಕೇವಲ ಘೋಷಣೆಗಳನ್ನು ನಂಬುವುದಿಲ್ಲ; ಆಡಳಿತದ ಅನುಭವ, ಹಕ್ಕಿನ ಭದ್ರತೆ ಮತ್ತು ಸಾಮಾಜಿಕ ಸಮತೋಲನವನ್ನು ಹೆಚ್ಚು ಸೂಕ್ಷ್ಮವಾಗಿ ಅಳೆಯುತ್ತಾರೆ.

ಆದರೆ ಎಡಪಂಥದ ಆಡಳಿತಕ್ಕೆ ಮಿತಿಗಳೂ ಇದ್ದವು. ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿನ್ನಡೆ, ಹೂಡಿಕೆಗಳಿಗೆ ಅನುಕೂಲಕರ ವಾತಾವರಣದ ಕೊರತೆ, ಉದ್ಯೋಗಾವಕಾಶಗಳ ಕೊರತೆ, ವಿಶೇಷವಾಗಿ ಯುವಜನರಲ್ಲಿ, ನಿಧಾನವಾಗಿ ಅಸಮಾಧಾನವನ್ನು ಹೆಚ್ಚಿಸಿತು.
ಸಿಂಗೂರು ಮತ್ತು ನಂದಿಗ್ರಾಮ ಹೋರಾಟಗಳು ಈ ಅಸಮಾಧಾನದ ತಿರುವುಬಿಂದುಗಳಾಗಿದ್ದವು. ಭೂಸ್ವಾಧೀನದ ಪ್ರಶ್ನೆ ಕೇವಲ ಆರ್ಥಿಕ ವಿಷಯವಲ್ಲ; ಅದು ಹಕ್ಕು, ಗುರುತು ಮತ್ತು ಜೀವನೋಪಾಯದ ಪ್ರಶ್ನೆಯಾಗಿ ರೂಪುಗೊಂಡಿತು. ಈ ಹೋರಾಟಗಳು ಎಡಪಂಥದ “ಜನಪರ” ಇಮೇಜ್‌ಗೆ ಸವಾಲು ಎತ್ತಿ, ಜನಾಭಿಪ್ರಾಯವನ್ನು ತಿರುಗಿಸಿತು. ಇದರ ಪರಿಣಾಮವಾಗಿ, ದೀರ್ಘಕಾಲದ ಆಡಳಿತವು ಅಂತ್ಯ ಕಂಡಿತು.
ಆದರೂ, ಎಡಪಂಥದ ಸಂಪೂರ್ಣ ಅಸ್ತಿತ್ವ ಅಳಿದುಹೋಗಿಲ್ಲ. ಅದರ ಪ್ರಭಾವ ಮೂರು ಪ್ರಮುಖ ಮಟ್ಟಗಳಲ್ಲಿ ಇನ್ನೂ ಕಾಣಿಸುತ್ತದೆ. ಮೊದಲನೆಯದಾಗಿ, ರಾಜಕೀಯ ಸಂಭಾಷಣೆಯ ಮಟ್ಟದಲ್ಲಿ. ಸಾಮಾಜಿಕ ನ್ಯಾಯ, ಹಕ್ಕುಗಳು, ಮತ್ತು ಕಲ್ಯಾಣದ ವಿಚಾರಗಳು ಇನ್ನೂ ಕೇಂದ್ರದಲ್ಲಿವೆ. ಎರಡನೆಯದಾಗಿ, ಸಂಘಟನೆಗಳ ಮಟ್ಟದಲ್ಲಿ, ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ಕೆಲವು ಗ್ರಾಮೀಣ ಜಾಲಗಳು ಇನ್ನೂ ಜೀವಂತವಾಗಿವೆ. ಮೂರನೆಯದಾಗಿ, ಮತದಾರರ ಮನೋಭಾವದಲ್ಲಿ, ಸರ್ಕಾರದ ಮೇಲೆ ಶಂಕೆ, ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಪ್ರತಿರೋಧದ ಮನೋಭಾವ ಇನ್ನೂ ಬಲವಾಗಿದೆ.
ಇಂದಿನ ದ್ವಿಧ್ರುವೀಯ ರಾಜಕೀಯದಲ್ಲಿ ಎಡಪಕ್ಷಗಳು ನೇರವಾಗಿ ಅಧಿಕಾರದ ಸ್ಪರ್ಧೆಯಲ್ಲಿ ಬಲಿಷ್ಠವಾಗಿರದಿದ್ದರೂ, ಅವು “ಮೂರನೇ ಅಂಶ”ವಾಗಿ ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ಅಸಮಾಧಾನಗೊಂಡ ಮತದಾರರಲ್ಲಿ, ನಗರ ಬೌದ್ಧಿಕ ವಲಯಗಳಲ್ಲಿ ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ, ಎಡಪಂಥದ ಆಲೋಚನೆಗಳು ಇನ್ನೂ ಪ್ರತಿಧ್ವನಿಸುತ್ತವೆ.
ಇದರಿಂದಾಗಿ, ಎಡಪಕ್ಷಗಳ ಮತ ಪ್ರಮಾಣ ಕಡಿಮೆಯಾದರೂ, ಅವುಗಳ ಪ್ರಭಾವ ರಾಜಕೀಯ ಸಮೀಕರಣದಲ್ಲಿ ಅಪ್ರತ್ಯಕ್ಷವಾಗಿ ಮುಂದುವರಿಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ, ಅವುಗಳ ಮತಗಳು ಮುಖ್ಯ ಪಕ್ಷಗಳ ಗೆಲುವು-ಸೋಲಿನ ಅಂತರವನ್ನು ನಿರ್ಧರಿಸಬಹುದು.
ಒಟ್ಟಿನಲ್ಲಿ, ಎಡಪಂಥದ ಪ್ರಭಾವವು ಬಂಗಾಳದ ರಾಜಕೀಯದಲ್ಲಿ ಒಂದು “ನಿಶ್ಶಬ್ದ ಶಕ್ತಿ”ಯಂತೆ ಕಾರ್ಯನಿರ್ವಹಿಸುತ್ತಿದೆ. ಅದು ಗೋಚರಿಸುವಷ್ಟು ಬಲಿಷ್ಠವಾಗಿಲ್ಲ, ಆದರೆ ನಿರ್ಲಕ್ಷಿಸುವಷ್ಟು ದುರ್ಬಲವೂ ಅಲ್ಲ,ಇಂದಿನ ಮತದಾರರ ಲೆಕ್ಕಾಚಾರದ ರಾಜಕೀಯದಲ್ಲೂ ತನ್ನ ಪಾತ್ರವನ್ನು ನಿಭಾಯಿಸುತ್ತಲೇ ಇದೆ.
ರಾಜಕೀಯ ದೃವೀಕರಣ
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಧ್ರುವೀಕರಣವು ಕೇವಲ ರಾಜಕೀಯ ಭಾಷಣದಲ್ಲಿ ಕಾಣಿಸುವ ಅಂಶವಲ್ಲ; ಅದು ಅಂಕಿಅಂಶಗಳಲ್ಲಿ ಸ್ಪಷ್ಟವಾಗಿ ಕಾಣಿಸುವ ಸ್ಥಿರ ಪ್ರಕ್ರಿಯೆಯಾಗಿದೆ. ಕಳೆದ ನಾಲ್ಕು ಪ್ರಮುಖ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, ಮತಗಳ ಹಂಚಿಕೆ ಮತ್ತು ಸೀಟುಗಳ ವಿನ್ಯಾಸವು ನಿಧಾನವಾಗಿ ಎರಡು ಪ್ರಮುಖ ಶಕ್ತಿಗಳ (ಟಿಎಂಸಿ ಮತ್ತು ಬಿಜೆಪಿ) ಸುತ್ತ ಸೀಮಿತವಾಗುತ್ತಿರುವುದು ಗೋಚರಿಸುತ್ತದೆ.
2011ರಲ್ಲಿ ಎಡಪಂಥೀಯ ಆಡಳಿತದ ಅಂತ್ಯದ ನಂತರ, ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೂ ಮತ ಪ್ರಮಾಣದಲ್ಲಿ ಎಡಪಕ್ಷಗಳ ಪಾಲು ಇನ್ನೂ ಗಮನಾರ್ಹವಾಗಿತ್ತು. ಆದರೆ ಸೀಟುಗಳ ಹಂಚಿಕೆಯಲ್ಲಿ ಟಿಎಂಸಿ ಸ್ಪಷ್ಟ ಮುನ್ನಡೆ ಸಾಧಿಸಿತು. ಇದು ಮತಗಳ ವಿಭಜನೆಯು ಹೇಗೆ ರಾಜಕೀಯ ಫಲಿತಾಂಶವನ್ನು ಬದಲಾಯಿಸುತ್ತದೆ ಎಂಬುದಕ್ಕೆ ಮೊದಲ ಸೂಚನೆ.
2016ರ ವೇಳೆಗೆ ಈ ಪ್ರಕ್ರಿಯೆ ಇನ್ನಷ್ಟು ಗಾಢವಾಯಿತು. ಟಿಎಂಸಿ ತನ್ನ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡು ಸೀಟುಗಳಲ್ಲಿ ಭಾರೀ ಗೆಲುವು ಸಾಧಿಸಿತು. ಇದೇ ಅವಧಿಯಲ್ಲಿ ಬಿಜೆಪಿ ನಿಧಾನವಾಗಿ ತನ್ನ ನೆಲೆಯನ್ನು ವಿಸ್ತರಿಸಲು ಪ್ರಾರಂಭಿಸಿತು. ಎಡಪಕ್ಷಗಳು ಮತ್ತು ಕಾಂಗ್ರೆಸ್ ನಡುವಿನ ಮತ ವಿಭಜನೆ, ಟಿಎಂಸಿಗೆ ಹೆಚ್ಚುವರಿ ಲಾಭವನ್ನು ನೀಡಿತು.
2021ರ ಚುನಾವಣೆಯಲ್ಲಿ ಧ್ರುವೀಕರಣವು ಸ್ಪಷ್ಟ ರೂಪ ಪಡೆದಿತು. ಬಿಜೆಪಿ ಭಾರೀ ಏರಿಕೆ ಕಂಡು, ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿತು. ಅದರ ಮತ ಪ್ರಮಾಣದಲ್ಲಿ ಕಂಡುಬಂದ ಏರಿಕೆ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಕುಸಿತದೊಡ್ಡಿಗೆ ಸಂಬಂಧಿಸಿದೆ. ಈ ಚುನಾವಣೆಯಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಸೀಟುಗಳನ್ನು ಪಡೆಯಲು ವಿಫಲವಾದುದು, ಮತದಾರರು ತಮ್ಮ ಆಯ್ಕೆಯನ್ನು ಎರಡು ಪ್ರಮುಖ ಶಕ್ತಿಗಳ ನಡುವೆ ಕೇಂದ್ರೀಕರಿಸುತ್ತಿರುವುದನ್ನು ಸೂಚಿಸುತ್ತದೆ.
2024ರ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಧೋರಣೆ ಮುಂದುವರಿದಿದೆ. ಟಿಎಂಸಿ ತನ್ನ ಬಲವನ್ನು ಉಳಿಸಿಕೊಂಡಿದ್ದರೆ, ಬಿಜೆಪಿ ಮತ ಪ್ರಮಾಣವನ್ನು ಮತ್ತಷ್ಟು ವಿಸ್ತರಿಸಿದೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮತ ಪ್ರಮಾಣವನ್ನು ಉಳಿಸಿಕೊಂಡಿದ್ದರೂ, ಅದು ಸೀಟುಗಳಾಗಿ ಪರಿವರ್ತನೆಯಾಗಿಲ್ಲ. ಇದು “ಮತಗಳ ಅಸ್ತಿತ್ವ” ಮತ್ತು “ರಾಜಕೀಯ ಪರಿಣಾಮಕಾರಿತ್ವ” ನಡುವಿನ ಅಂತರವನ್ನು ಸ್ಪಷ್ಟಪಡಿಸುತ್ತದೆ.
ಈ ಕೆಳಗಿನ ನಕ್ಷೆಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳದ ರಾಜಕೀಯ ದೃವೀಕರಣ ಯಾವರೀತಿ ಬದಲಾಗಿದೆ ಎಂಬುದನ್ನು ತಿಳಿಯಬಹುದು.


ಸ್ಥಳೀಯ ಸಮೀಕರಣ: ನೆಲಮಟ್ಟದ ರಾಜಕೀಯದ ಗಾಢತೆ
ಪಶ್ಚಿಮ ಬಂಗಾಳದ ರಾಜಕೀಯವನ್ನು ಅರ್ಥಮಾಡಿಕೊಳ್ಳಲು ಕೇವಲ ವಿಧಾನಸಭೆ ಅಥವಾ ಲೋಕಸಭಾ ಫಲಿತಾಂಶಗಳನ್ನು ನೋಡುವುದರಿಂದ ಸಾಲದು; ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪರಿಷತ್‌ವರೆಗೆ ಹರಡುವ ಸ್ಥಳೀಯ ಸಂಸ್ಥೆಗಳ ರಾಜಕೀಯವೇ ನಿಜವಾದ ನೆಲಮಟ್ಟದ ಸಮೀಕರಣವನ್ನು ನಿರ್ಧರಿಸುತ್ತದೆ. ಇಲ್ಲಿ ಸಂಘಟನೆ, ವ್ಯಕ್ತಿಗತ ಸಂಪರ್ಕ, ಮತ್ತು ದಿನನಿತ್ಯದ ಸಮಸ್ಯೆಗಳ ಪರಿಹಾರ—ಇವು ಮತದಾರರ ನಿರ್ಧಾರದಲ್ಲಿ ಅತ್ಯಂತ ಪ್ರಭಾವಿ ಅಂಶಗಳಾಗುತ್ತವೆ.
ತೃಣಮೂಲ ಕಾಂಗ್ರೆಸ್ ಈ ಮಟ್ಟದಲ್ಲಿ ತನ್ನ ಬಲವನ್ನು ದೀರ್ಘಕಾಲದಿಂದ ನಿರ್ಮಿಸಿಕೊಂಡಿದೆ. ಸ್ಥಳೀಯ ನಾಯಕರು, ಪಂಚಾಯತ್ ಪ್ರತಿನಿಧಿಗಳು ಮತ್ತು ಕಲ್ಯಾಣ ಯೋಜನೆಗಳ ವಿತರಣೆಯ ಮೂಲಕ, ಪಕ್ಷವು ಮತದಾರರೊಂದಿಗೆ ನೇರ ಸಂಪರ್ಕವನ್ನು ಉಳಿಸಿಕೊಂಡಿದೆ. ಸರ್ಕಾರದ ಯೋಜನೆಗಳು, ನೇರ ಹಣ ವರ್ಗಾವಣೆ, ಮಹಿಳಾ ಸಹಾಯ ಯೋಜನೆಗಳು, ಗ್ರಾಮೀಣ ಮೂಲಸೌಕರ್ಯ, ಇವುಗಳ ಮೂಲಕ ಟಿಎಂಸಿ ತನ್ನ ರಾಜಕೀಯ ಪ್ರಭಾವವನ್ನು “ದೈನಂದಿನ ಅನುಭವ”ದ ಭಾಗವನ್ನಾಗಿ ಮಾಡಿದೆ.
ಹೀಗಾಗಿ, ರಾಜ್ಯ ಮಟ್ಟದಲ್ಲಿ ಅಸಮಾಧಾನ ಇದ್ದರೂ, ಸ್ಥಳೀಯ ಮಟ್ಟದಲ್ಲಿ ಸಂಬಂಧಗಳು ಇನ್ನೂ ಬಲವಾಗಿವೆ. ಆದರೆ ಈ ಪ್ರಭುತ್ವ ಏಕಮುಖವಾಗಿಲ್ಲ. ಬಿಜೆಪಿ ಕಳೆದ ಕೆಲವು ವರ್ಷಗಳಲ್ಲಿ ಗ್ರಾಮೀಣ ಬಂಗಾಳದಲ್ಲಿ ತನ್ನ ಸಂಘಟನೆಯನ್ನು ವಿಸ್ತರಿಸಲು ಯಶಸ್ವಿಯಾಗಿದೆ. ಹಿಂದಿನ ಎಡಪಕ್ಷಗಳ ಮತಬ್ಯಾಂಕ್ ಕುಸಿತದಿಂದ ಉಂಟಾದ ರಾಜಕೀಯ ಖಾಲಿಯನ್ನು ಅದು ಬಳಸಿಕೊಂಡಿದೆ. ವಿಶೇಷವಾಗಿ ಉತ್ತರ ಬಂಗಾಳದಲ್ಲಿ ಮತ್ತು ಗಡಿಭಾಗದ ಜಿಲ್ಲೆಗಳಲ್ಲಿ, ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಿದೆ.
ಸ್ಥಳೀಯ ಸಮಸ್ಯೆಗಳು—ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಇವುಗಳನ್ನು ರಾಷ್ಟ್ರೀಯ ಕಥನಗಳೊಂದಿಗೆ ಜೋಡಿಸುವ ಮೂಲಕ ಅದು ತನ್ನ ಪ್ರಭಾವವನ್ನು ಹೆಚ್ಚಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವಾರು ಪ್ರಾಬಲ್ಯ ಈ ಕೆಳಗಿನಂತಿದೆ

ಎಡಪಕ್ಷಗಳ ತಳಮಟ್ಟದ ವ್ಯವಸ್ಥೆ ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಬಲವಾಗಿತ್ತು. ಈಗ ಸಂಘಟನಾ ಎಲುಬು ಇದೆ, ಆದರೆ ಚಲನೆಯ ಶಕ್ತಿ ಕುಂದಿದೆ. ಆದರೆ ಪ್ರತಿ ಗ್ರಾಮದಲ್ಲೂ ಎಡಪಕ್ಷಗಳ ಶಾಖೆಗಳಿವೆ. ಪ್ರಭಾವಿ ನಾಯಕರ ಕೊರತೆ ಇದ್ದಾಗಲೂ ಜನರ ಜೊತೆ ನಿರಂತರವಾಗಿರುವ ಕಾರಣ ಮತವಾಗಿ ಬದಲಾಗುವ ಸಾಧ್ಯತೆಗಳು ಇವೆ.
ಜಿಲ್ಲಾವಾರು ನೋಡಿದರೆ, ಬಂಗಾಳದ ರಾಜಕೀಯ ಸಮೀಕರಣ ಬಹಳ ವಿಭಿನ್ನವಾಗಿದೆ. ಅಲ್ಪಸಂಖ್ಯಾತ ಸಮುದಾಯಗಳ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಟಿಎಂಸಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ಇತ್ತ ಉತ್ತರ ಮತ್ತು ಕೆಲವು ಗಡಿಭಾಗ ಪ್ರದೇಶಗಳಲ್ಲಿ ಬಿಜೆಪಿ ಸ್ಪರ್ಧಾತ್ಮಕ ಬಲವನ್ನು ಗಳಿಸಿದೆ. ಮಾಲ್ಡಾ ಮತ್ತು ಮುರ್ಷಿದಾಬಾದ್‌ನಂತಹ ಪ್ರದೇಶಗಳಲ್ಲಿ ಕಾಂಗ್ರೆಸ್ ಇನ್ನೂ ಸೀಮಿತವಾದರೂ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಈ ಪ್ರಾದೇಶಿಕ ವ್ಯತ್ಯಾಸಗಳು ರಾಜ್ಯದ ಒಟ್ಟಾರೆ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಸ್ಥಳೀಯ ರಾಜಕೀಯದಲ್ಲಿ ಇನ್ನೊಂದು ಪ್ರಮುಖ ಅಂಶವೆಂದರೆ “ವೈಯಕ್ತಿಕ ಸಂಬಂಧಗಳ ರಾಜಕೀಯ”. ಮತದಾರರು ಬಹಳಷ್ಟು ಸಂದರ್ಭಗಳಲ್ಲಿ ಪಕ್ಷದ ಸಿದ್ದಾಂತಕ್ಕಿಂತ ಸ್ಥಳೀಯ ನಾಯಕನ ಮೇಲೆ ಆಧಾರಿಸಿ ನಿರ್ಧಾರ ಮಾಡುತ್ತಾರೆ. ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡಿಸುವ ಸಾಮರ್ಥ್ಯ, ತಕ್ಷಣದ ಸಮಸ್ಯೆಗಳಿಗೆ ಸ್ಪಂದಿಸುವಿಕೆ, ಮತ್ತು ಲಭ್ಯತೆ ಇವುಗಳು ಮತದಾರರ ವಿಶ್ವಾಸವನ್ನು ನಿರ್ಧರಿಸುತ್ತವೆ. ಆದರೆ ಇದೇ ಸ್ಥಳೀಯ ವ್ಯವಸ್ಥೆಯಲ್ಲಿ ಅಸಮಾಧಾನವೂ ಉಂಟಾಗುತ್ತಿದೆ. ಮಧ್ಯವರ್ತಿಗಳ ಪ್ರಭಾವ, ಸಂಪನ್ಮೂಲ ಹಂಚಿಕೆಯಲ್ಲಿ ಅಸಮಾನತೆ ಮತ್ತು ಸ್ಥಳೀಯ ಮಟ್ಟದ ರಾಜಕೀಯ ಒತ್ತಡ, ಇವು ಕೆಲವು ಪ್ರದೇಶಗಳಲ್ಲಿ ವಿರೋಧ ಭಾವನೆಯನ್ನು ಹುಟ್ಟಿಸುತ್ತಿವೆ. ಈ ಅಸಮಾಧಾನ ರಾಜ್ಯ ಮಟ್ಟದ ಚುನಾವಣೆಯಲ್ಲಿ ವಿಭಿನ್ನ ರೀತಿಯಲ್ಲಿ ವ್ಯಕ್ತವಾಗಬಹುದು.
ಒಟ್ಟಿನಲ್ಲಿ, ಬಂಗಾಳದ ರಾಜಕೀಯದಲ್ಲಿ ನೆಲಮಟ್ಟದ ಸಮೀಕರಣವು ಬಹುಪರಿಮಾಣದಾಗಿದೆ. ಒಂದು ಕಡೆ ಟಿಎಂಸಿಯ ಸಂಘಟನಾ ಬಲ ಮತ್ತು ಸ್ಥಳೀಯ ಜಾಲ ಇದ್ದರೆ, ಮತ್ತೊಂದೆಡೆ ಬಿಜೆಪಿಯ ವಿಸ್ತರಣೆ ಮತ್ತು ಪ್ರಾದೇಶಿಕ ವ್ಯತ್ಯಾಸಗಳಿವೆ. ಈ ಗಾಢ ಮತ್ತು ಸಂಕೀರ್ಣ ಸ್ಥಳೀಯ ರಾಜಕೀಯವೇ, ಅಂತಿಮವಾಗಿ, ದೊಡ್ಡ ಚುನಾವಣಾ ಫಲಿತಾಂಶದ ದಿಕ್ಕನ್ನು ನಿರ್ಧರಿಸುವ ಮೂಲ ಅಂಶವಾಗಿದೆ.
“ಕಲ್ಯಾಣ vs ಉದ್ಯೋಗ” ಚುನಾವನಾ ಚರ್ಚೆ
ಪಶ್ಚಿಮ ಬಂಗಾಳದ ಚುನಾವಣಾ ಚರ್ಚೆಯಲ್ಲಿ ಅತ್ಯಂತ ಕೇಂದ್ರಬಿಂದುವಾಗುತ್ತಿರುವ ಪ್ರಶ್ನೆ, ಕಲ್ಯಾಣ ಯೋಜನೆಗಳ ತಕ್ಷಣದ ನೆರವೋ, ಅಥವಾ ಉದ್ಯೋಗ ಸೃಷ್ಟಿಯ ದೀರ್ಘಕಾಲಿಕ ಭರವಸೆಯೋ? ಈ ದ್ವಂದ್ವವು ಕೇವಲ ಆರ್ಥಿಕ ನೀತಿಗಳ ನಡುವಿನ ಆಯ್ಕೆಯಲ್ಲ; ಅದು ಮತದಾರರ ದಿನನಿತ್ಯದ ಬದುಕು ಮತ್ತು ಭವಿಷ್ಯದ ಭದ್ರತೆ ನಡುವಿನ ಸಮತೋಲನದ ಪ್ರಶ್ನೆಯಾಗಿದೆ.
ತೃಣಮೂಲ ಕಾಂಗ್ರೆಸ್ ಸರ್ಕಾರದ ಕಲ್ಯಾಣ ಯೋಜನೆಗಳು, ನೇರ ಹಣ ವರ್ಗಾವಣೆ, ಮಹಿಳಾ ಸಬಲೀಕರಣ ಯೋಜನೆಗಳು, ವಿದ್ಯಾರ್ಥಿ ಸಹಾಯ—ಇವು ರಾಜ್ಯದ ಬಡ ಮತ್ತು ಅಸಂಘಟಿತ ವರ್ಗಗಳಿಗೆ ತಕ್ಷಣದ ಆರ್ಥಿಕ ನೆರವನ್ನು ಒದಗಿಸಿವೆ. ಈ ಯೋಜನೆಗಳು ಕೇವಲ ಹಣಕಾಸಿನ ನೆರವಲ್ಲ; ಅವು “ರಾಜ್ಯ ನಿಮ್ಮೊಂದಿಗಿದೆ” ಎಂಬ ಭಾವನೆಯನ್ನು ಬಲಪಡಿಸುತ್ತವೆ. ಗ್ರಾಮೀಣ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಲ್ಲಿ, ಈ ಯೋಜನೆಗಳು ಜೀವನಮಟ್ಟವನ್ನು ತಾತ್ಕಾಲಿಕವಾಗಿ ಸ್ಥಿರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಆದರೆ ಈ ಮಾದರಿಯ ಮಿತಿಗಳೂ ಸ್ಪಷ್ಟವಾಗುತ್ತಿವೆ. ಕಲ್ಯಾಣ ಯೋಜನೆಗಳು ತಕ್ಷಣದ ಸಂಕಷ್ಟವನ್ನು ತಗ್ಗಿಸಬಹುದು, ಆದರೆ ದೀರ್ಘಕಾಲಿಕ ಆರ್ಥಿಕ ಸ್ಥಿರತೆಯನ್ನು ನಿರ್ಮಿಸಲು ಸಾಕಾಗುವುದಿಲ್ಲ. ಯುವಜನರಲ್ಲಿ, ವಿಶೇಷವಾಗಿ ಪದವೀಧರರಲ್ಲಿ, ಉದ್ಯೋಗಾವಕಾಶಗಳ ಕೊರತೆ ಮತ್ತು ವಲಸೆ ಹೆಚ್ಚುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ನೇಮಕಾತಿಗಳ ವಿಳಂಬ, ಖಾಸಗಿ ಹೂಡಿಕೆಗಳ ಕೊರತೆ ಮತ್ತು ಕೈಗಾರಿಕಾ ಬೆಳವಣಿಗೆಯ ನಿಧಾನಗತಿ, ಇವು ಭವಿಷ್ಯದ ಬಗ್ಗೆ ಆತಂಕವನ್ನು ಹೆಚ್ಚಿಸುತ್ತವೆ.
ಈ ಸಂದರ್ಭದಲ್ಲಿ ಬಿಜೆಪಿ “ಅಭಿವೃದ್ಧಿ” ಮತ್ತು “ಉದ್ಯೋಗ”ದ ಕಥನವನ್ನು ಮುಂದಿಟ್ಟುಕೊಳ್ಳುತ್ತದೆ. ಕೈಗಾರಿಕಾ ಹೂಡಿಕೆ, ಮೂಲಸೌಕರ್ಯ ಮತ್ತು ಕೇಂದ್ರದೊಂದಿಗೆ ಹೊಂದಾಣಿಕೆ—ಇವುಗಳ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು ಎಂಬ ವಾದವನ್ನು ಅದು ಮಾಡುತ್ತದೆ. ಆದರೆ ಈ ವಾದವು ಇನ್ನೂ ನೆಲಮಟ್ಟದಲ್ಲಿ ಸ್ಪಷ್ಟ ಅನುಭವವಾಗಿ ಪರಿವರ್ತನೆಯಾಗಿಲ್ಲ ಎಂಬ ಅಭಿಪ್ರಾಯವೂ ಇದೆ.
ಹೀಗಾಗಿ, ಮತದಾರರ ಮುಂದೆ ಇರುವ ಆಯ್ಕೆ ಬಹಳ ಸೂಕ್ಷ್ಮವಾಗಿದೆ. ಒಂದು ಕಡೆ ತಕ್ಷಣದ ನೆರವು ನೀಡುವ ಕಲ್ಯಾಣ ಮಾದರಿ, ಮತ್ತೊಂದೆಡೆ ಭವಿಷ್ಯದ ಭರವಸೆ ನೀಡುವ ಅಭಿವೃದ್ಧಿ ಮಾದರಿ. ಬಡ ಮತ್ತು ಗ್ರಾಮೀಣ ಮತದಾರರು ಸಾಮಾನ್ಯವಾಗಿ ತಕ್ಷಣದ ಲಾಭವನ್ನು ಹೆಚ್ಚು ಪ್ರಾಮುಖ್ಯತೆ ನೀಡಿದರೆ, ಯುವಜನ ಮತ್ತು ನಗರ ಮಧ್ಯಮವರ್ಗ ದೀರ್ಘಕಾಲಿಕ ಅವಕಾಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಒಟ್ಟಿನಲ್ಲಿ, ಬಂಗಾಳದ ಚುನಾವಣೆಯಲ್ಲಿ “ಕಲ್ಯಾಣ vs ಉದ್ಯೋಗ” ಎಂಬ ಚರ್ಚೆ ಒಂದು ಮೂಲಭೂತ ಪ್ರಶ್ನೆಯನ್ನು ಎತ್ತುತ್ತದೆ. ಜನರು ತಕ್ಷಣದ ಭದ್ರತೆಯನ್ನು ಆರಿಸುತ್ತಾರೆಯೇ, ಅಥವಾ ಭವಿಷ್ಯದ ಸಾಧ್ಯತೆಗಳನ್ನು? ಈ ಪ್ರಶ್ನೆಗೆ ಮತದಾರರು ನೀಡುವ ಉತ್ತರವೇ ಚುನಾವಣಾ ಫಲಿತಾಂಶದ ದಿಕ್ಕನ್ನು ನಿರ್ಧರಿಸಲಿದೆ.
ಹದಿನೈದು ವರ್ಷಗಳ ರಾಜಕೀಯ ಹಿಂಸಾಚಾರದ ಚಿತ್ರಣ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ (All India Trinamool Congress) ಆಡಳಿತದ ಕಳೆದ ಹದಿನೈದು ವರ್ಷಗಳನ್ನು (2011–2026) ಅವಲೋಕಿಸಿದಾಗ, ರಾಜಕೀಯ ಹಾಗೂ ಸಮುದಾಯ ಆಧಾರಿತ ಹಿಂಸಾಚಾರವು ರಾಜ್ಯದ ಪ್ರಮುಖ ಚರ್ಚಾ ವಿಷಯವಾಗಿ ಹೊರಹೊಮ್ಮಿದೆ. ಆದರೆ “ಹಿಂಸಾಚಾರವನ್ನು ಟಿಎಂಸಿ ಮಾತ್ರ ನಡೆಸಿದೆ” ಎಂದು ಹೇಳುವ ಏಕೀಕೃತ ಅಧಿಕೃತ ಅಂಕಿಅಂಶಗಳಿಲ್ಲ. ಬದಲಾಗಿ, ಮಾನವ ಹಕ್ಕು ಸಂಸ್ಥೆಗಳು, ನ್ಯಾಯಾಲಯಗಳ ಅಭಿಪ್ರಾಯಗಳು ಮತ್ತು ರಾಜಕೀಯ ಪಕ್ಷಗಳ
ಪರಸ್ಪರ ಆರೋಪ-ಪ್ರತ್ಯಾರೋಪಗಳ ಆಧಾರದ ಮೇಲೆ ಒಂದು ಸಮಗ್ರ ಚಿತ್ರಣ ರೂಪುಗೊಂಡಿದೆ. ಹೀಗಾಗಿ, ಈ ಹಿಂಸಾಚಾರವು ಪ್ರತ್ಯೇಕ ಘಟನೆಗಳ ಸರಣಿಯಲ್ಲ; ಅದು ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲೇ ಬೇರುಬಿಟ್ಟಿರುವ ಸಮಸ್ಯೆಯಾಗಿದೆ. ಇಲ್ಲಿಯವರೆಗೆ ನಡೆದ ದಾಳಿಗಳಲ್ಲಿ ಟಿಎಂಸಿ ಮತ್ತು ಬಿಜೆಪಿಯದ್ದು ಹೆಚ್ಚುಪಾಲು ಇದೆ.
2011ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದ ನಂತರ, ದೀರ್ಘಕಾಲ ಆಡಳಿತ ನಡೆಸಿದ್ದ ಸಿಪಿಐ(ಎಂ) ನೇತೃತ್ವದ ಎಡರಂಗದ ಕಾರ್ಯಕರ್ತರ ಮೇಲೆ ದೊಡ್ಡ ದಾಳಿಯನ್ನು ನಡೆಸಿತು. ಗ್ರಾಮ ಪಂಚಾಯತ್‌ಗಳಿಂದ ನಗರ ಮಟ್ಟದವರೆಗೂ ರಾಜಕೀಯ ಹಿಡಿತ ಸಾಧಿಸಲು ಎಡಪಕ್ಷಗಳ ಕಾರ್ಯಕರ್ತರನ್ನು ಕೊಲೆ ಮಾಡಲಾಯಿತು. ಅತ್ಯಾಚಾರದ ಬೆದರಿಕೊಯೊಡ್ಡಿ ಎಡಪಕ್ಷಗಳನ್ನು ಬೆಂಬಲಿಬಾರದು ಎಂದು ಹೆದರಿಸಲಾಯಿತು. ಈ ಹಂತದಲ್ಲಿ ಎಡಪಂಥೀಯ ಕಾರ್ಯಕರ್ತರ ಮೇಲೆ ದಾಳಿ, ಪಕ್ಷಾಂತರಕ್ಕೆ ಒತ್ತಡ ಮತ್ತು ಸ್ಥಳೀಯ ಮಟ್ಟದ ಸಂಘರ್ಷಗಳು ಹೆಚ್ಚಾಗಿದ್ದನ್ನು ಪಶ್ಚಿಮ ಬಂಗಾಳದ ಜನ ಇನ್ನೂ
ಮರೆತಿಲ್ಲ.
ಇದನ್ನೂ ನೋಡಿ: ಕುವೆಂಪು: ಮನುಷ್ಯತ್ವದ ಹೊಸ ಭಾಷೆ ಕಟ್ಟಿದ ಯುಗಪ್ರಜ್ಞೆ — ಎಸ್.ಜಿ. ಸಿದ್ದರಾಮಯ್ಯ Janashakthi Media
2015ರ ನಂತರ ಬಿಜೆಪಿ ಬಲವಾಗಿ ಬೆಳೆಯುತ್ತಿದ್ದಂತೆ, ರಾಜ್ಯ ರಾಜಕೀಯದಲ್ಲಿ ಹೊಸ ರೀತಿಯ ಸ್ಪರ್ಧಾತ್ಮಕ ಸಂಘರ್ಷ ಆರಂಭವಾಯಿತು. 2016 ವಿಧಾನಸಭೆ, 2018 ಪಂಚಾಯತ್ ಮತ್ತು 2019 ಲೋಕಸಭೆ ಚುನಾವಣಾ ಅವಧಿಯಲ್ಲಿ ರಾಜಕೀಯ ಹಿಂಸಾಚಾರ ಹೆಚ್ಚಳ ಕಂಡಿತು. ರಾಜಕೀಯ ಹತ್ಯೆಗಳು, ಬೂತ್ ಕಬಳಿಕೆ ಆರೋಪಗಳು ಕೇಳಿ ಬಂದವು. ಬಿಜೆಪಿ ಕೂಡ ತನ್ನ ಹಿಂದುತ್ವದ ಅಜೆಂಡದ ಜಾರಿಗಾಗಿ ಕೋಮುಗಲಭೆಗಳನ್ನೆಬ್ಬಿಸಿತು.
2021ರ ವಿಧಾನಸಭಾ ಚುನಾವಣೆಯ ನಂತರ ಹಿಂಸಾಚಾರ ತನ್ನ ತೀವ್ರತೆಯ ಶಿಖರ ತಲುಪಿತು. National Human Rights Commission ವರದಿಯಲ್ಲಿ ಹತ್ಯೆಗಳು, ಲೈಂಗಿಕ ಹಿಂಸಾಚಾರ ಮತ್ತು ಆಸ್ತಿಪಾಸ್ತಿ ನಾಶದಂತಹ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳನ್ನು ಉಲ್ಲೇಖಿಸಲಾಯಿತು. ಕಲ್ಕತ್ತಾ ಹೈಕೋರ್ಟ್ ಕೂಡ ಕೆಲವು ಪ್ರಕರಣಗಳಲ್ಲಿ ತನಿಖೆಗೆ ಆದೇಶ ನೀಡಿತು. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದರೂ, ಈ ಅಂಕಿಅಂಶಗಳು ವಿವಾದಾತ್ಮಕವಾಗಿಯೇ ಉಳಿದಿವೆ.
ಇದರ ಜೊತೆಗೆ, ಕೋಮು ಹಿಂಸಾಚಾರವೂ ರಾಜ್ಯದಲ್ಲಿ ಹೆಚ್ಚುತ್ತಿರುವುದು ಗಮನಾರ್ಹ. ಆರ್‌ಟಿಐ ಮಾಹಿತಿಯ ಪ್ರಕಾರ, ಕೇವಲ ಹದಿನೆಂಟು ತಿಂಗಳಲ್ಲಿ 65 ಕೋಮು ಹಿಂಸಾಚಾರದ ಪ್ರಕರಣಗಳು ದಾಖಲಾಗಿವೆ. (2021 ರಲ್ಲಿ 30, 2022 ರಲ್ಲಿ 35) ಹೌರಾ ಜಿಲ್ಲೆಯಲ್ಲಿ ಅತಿ ಹೆಚ್ಚು ಘಟನೆಗಳು ನಡೆದಿವೆ. ಕೆಲವು ಪ್ರದೇಶಗಳಲ್ಲಿ ಧಾರ್ಮಿಕ ಉತ್ಸವಗಳು ಮತ್ತು ರಾಜಕೀಯ ತೀವ್ರತೆಗಳ ಸಮಯದಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತವೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
‘ಕೇಂದ್ರ–ರಾಜ್ಯ ಘರ್ಷಣೆಯ ರಾಜಕೀಯ’
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಕೇಂದ್ರ–ರಾಜ್ಯ ಸಂಬಂಧಗಳು ಕೇವಲ ಆಡಳಿತಾತ್ಮಕ ವಿಷಯವಾಗಿಲ್ಲ; ಅವು ಶಕ್ತಿಶಾಲಿ ರಾಜಕೀಯ ಕಥನಗಳಾಗಿ ರೂಪುಗೊಂಡಿವೆ. ಒಂದು ಕಡೆ ಪ್ರಾದೇಶಿಕ ಗುರುತು, ಸ್ವಾಯತ್ತತೆ ಮತ್ತು “ಬಂಗಾಳದ ಗೌರವ”ದ ವಾದವಿದ್ದರೆ, ಇನ್ನೊಂದೆಡೆ ಅಭಿವೃದ್ಧಿ, ಹೂಡಿಕೆ ಮತ್ತು ಕೇಂದ್ರದ ಸಹಕಾರದ ವಾದ ಇದೆ. ಈ ಎರಡೂ ಕಥನಗಳು ಮತದಾರರ ಮನಸ್ಸಿನಲ್ಲಿ ವಿಭಿನ್ನ ರೀತಿಯ ಭಾವನೆಗಳನ್ನು ಹುಟ್ಟಿಸುತ್ತವೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್, ಈ ಘರ್ಷಣೆಯನ್ನು “ಬಾಹ್ಯ ಹಸ್ತಕ್ಷೇಪ vs ಬಂಗಾಳದ ಸ್ವಾಭಿಮಾನ” ಎಂಬ ರೂಪದಲ್ಲಿ ನಿರೂಪಿಸುತ್ತದೆ. ಕೇಂದ್ರದ ಸಂಸ್ಥೆಗಳು, ತನಿಖಾ ಏಜೆನ್ಸಿಗಳು ಮತ್ತು ನೀತಿ ನಿರ್ಧಾರಗಳು ರಾಜ್ಯದ ರಾಜಕೀಯದ ಮೇಲೆ ಅನಾವಶ್ಯಕ ಪ್ರಭಾವ ಬೀರುತ್ತಿವೆ ಎಂಬ ವಾದವನ್ನು ಅದು ಮುಂದಿರುತ್ತದೆ. ಈ ಕಥನವು ವಿಶೇಷವಾಗಿ ಪ್ರಾದೇಶಿಕ ಗುರುತಿಗೆ ಒತ್ತು ನೀಡುವ ಮತದಾರರಲ್ಲಿ ಪ್ರತಿಧ್ವನಿಸುತ್ತದೆ.
ಇನ್ನೊಂದೆಡೆ, ಬಿಜೆಪಿ ಈ ಘರ್ಷಣೆಯನ್ನು “ಅಭಿವೃದ್ಧಿ vs ಅಡ್ಡಿ” ಎಂಬ ರೂಪದಲ್ಲಿ ಚಿತ್ರಿಸುತ್ತದೆ. ಕೇಂದ್ರದೊಂದಿಗೆ ಹೊಂದಾಣಿಕೆ ಇದ್ದರೆ ರಾಜ್ಯಕ್ಕೆ ಹೆಚ್ಚು ಹೂಡಿಕೆ, ಮೂಲಸೌಕರ್ಯ ಮತ್ತು ಯೋಜನೆಗಳ ಲಾಭ ಸಿಗುತ್ತದೆ ಎಂಬ ವಾದವನ್ನು ಅದು ಮಾಡುತ್ತದೆ. “ಡಬಲ್ ಎಂಜಿನ್ ಸರ್ಕಾರ” ಎಂಬ ಪರಿಕಲ್ಪನೆ ಇದೇ ಕಥನದ ಕೇಂದ್ರವಾಗಿದೆ—ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಇದ್ದರೆ ಅಭಿವೃದ್ಧಿ ವೇಗವಾಗುತ್ತದೆ ಎಂಬ ಸಂದೇಶ.
ಈ ಎರಡು ಕಥನಗಳ ನಡುವೆ ಇರುವ ವ್ಯತ್ಯಾಸವು ಕೇವಲ ರಾಜಕೀಯ ವಾದವಲ್ಲ; ಅದು ಮತದಾರರ ಅನುಭವಗಳೊಂದಿಗೆ ಕೂಡಿದೆ. ಒಂದು ವರ್ಗಕ್ಕೆ ಕೇಂದ್ರದ ಹಸ್ತಕ್ಷೇಪ ಅತಿಯಾಗಿ ಕಾಣಿಸಿದರೆ, ಮತ್ತೊಂದು ವರ್ಗಕ್ಕೆ ಅದು ಆಡಳಿತದ ಸುಧಾರಣೆಯಾಗ ಕಾಣಬಹುದು. ಇದೇ ರೀತಿ, “ಅಭಿವೃದ್ಧಿ” ಎಂಬ ವಾದವು ಕೆಲವರಿಗೆ ಭವಿಷ್ಯದ ಭರವಸೆಯಾಗಿ ತೋರುತ್ತದೆ, ಇನ್ನಿತರರಿಗೆ ಅದ ಕೇವಲ ಪ್ರಚಾರದ ಮಾತಾಗಿ ಕಾಣಬಹುದು.
ಕಾರ್ಪೊರೇಟ್ ಹಣದ ನೆರಳಿನಲ್ಲಿ ಬಂಗಾಳ ರಾಜಕೀಯ
ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಮ್ಮ ಚುನಾವಣಾ ಸಾಮ್ರಾಜ್ಯವನ್ನು ನಿರ್ಮಿಸಲು ದೊಡ್ಡ ಮಟ್ಟದಲ್ಲಿ ಕಾರ್ಪೊರೇಟ್ ಹಣಕಾಸಿನ ಮೇಲೆ ಅವಲಂಬಿಸಿವೆ. ಕಂಪನಿಗಳಿಂದ ಹರಿದುಬರುವ ಭಾರೀ ನಿಧಿಗಳು ಪ್ರಚಾರ, ಮಾಧ್ಯಮ ಜಾಹೀರಾತು ಹಾಗೂ ಸಂಘಟನೆ ಬಲವರ್ಧನೆಗೆ ಪ್ರಮುಖ ಆಧಾರವಾಗಿದ್ದು, ಚುನಾವಣೆಗಳನ್ನು ಹೆಚ್ಚು ಹಣಕಾಸು ಆಧಾರಿತವಾಗಿಸುತ್ತಿವೆ. ಇದರ ಪರಿಣಾಮವಾಗಿ ರಾಜಕೀಯ ಸ್ಪರ್ಧೆ ಸಮಾನ ಅವಕಾಶಗಳಿಗಿಂತ ಆರ್ಥಿಕ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ‘ಎಲೆಕ್ಷನ್ ಬಾಂಡ್’ ಯೋಜನೆ ಪ್ರಮುಖ ಪಾತ್ರವಹಿಸಿದೆ. ಬ್ಯಾಂಕ್‌ಗಳ ಮೂಲಕ ಖರೀದಿಸಬಹುದಾದ ಈ ಬಾಂಡ್‌ಗಳ ಮೂಲಕ ಕಂಪನಿಗಳು ಹಾಗೂ ವ್ಯಕ್ತಿಗಳು ತಮ್ಮ ಗುರುತನ್ನು ಬಹಿರಂಗಪಡಿಸದೇ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅವಕಾಶವಿತ್ತು. ಇದರಿಂದ ಭಾರೀ ಮೊತ್ತದ ಹಣ ರಾಜಕೀಯಕ್ಕೆ ಹರಿದರೂ, ಅದರ ಮೂಲದ ಪಾರದರ್ಶಕತೆ ಕುರಿತು ಪ್ರಶ್ನೆಗಳು ಎದ್ದಿವೆ. ಬಿಜೆಪಿ ಮತ್ತು ಟಿಎಂಸಿ ಮುಂತಾದ ದೊಡ್ಡ ಪಕ್ಷಗಳು ಈ ವ್ಯವಸ್ಥೆಯಿಂದ ಹೆಚ್ಚು ಲಾಭ ಪಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ.


ಇದರ ವಿರುದ್ಧವಾಗಿ, ಎಡಪಂಥೀಯ ಮೈತ್ರಿ (ಲೆಫ್ಟ್ ಫ್ರಂಟ್) ಸಣ್ಣ ದೇಣಿಗೆಗಳ ಮೇಲೆ ಅವಲಂಬಿಸಿ ತನ್ನ ಚುನಾವಣಾ ಹೋರಾಟವನ್ನು ಮುಂದುವರಿಸಿದೆ. ಮನೆಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ನೇರ ಸಂಪರ್ಕವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಹೂಗ್ಲಿ ಜಿಲ್ಲೆಯ ಉತ್ತರಪಾರಾದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ಮಕ್ಕಳು ತಾತ್ಕಾಲಿಕ ವ್ಯವಸ್ಥೆಯಲ್ಲಿ ಓದುತ್ತಿರುವಂತಹ ಸಮಸ್ಯೆಗಳು ಜನರ ಜೀವನದ ನಿಜಸ್ಥಿತಿಯನ್ನು ತೋರಿಸುತ್ತವೆ ಎಂದು ಅಭ್ಯರ್ಥಿಗಳು ಒತ್ತಿಹೇಳುತ್ತಾರೆ.
ದೊಡ್ಡ ದೊಡ್ಡ ರಾಜಕೀಯ ಸಭೆ, ಮೆರವಣಿಗೆಯ ಬದಲಾಗಿ ವಿಭಿನ್ನವಾಗಿ ಎಡಪಕ್ಷಗಳು ಪ್ರಚಾರ ನಡೆಸುತ್ತಿವೆ. ನೇರ ಸಂವಾದ ಮತ್ತು ಸ್ಥಳೀಯ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಪ್ರಮುಖ ವಿಚಾರಗಳಾಗಿ ಮುಂದಿಡಲಾಗಿದೆ. 2011ರ ನಂತರ ಕುಗ್ಗಿದ ಸಂಘಟನಾ ಬಲವನ್ನು ಪುನಃ ಕಟ್ಟಿಕೊಳ್ಳಲು, ಬೂತ್ ಮಟ್ಟದ ಜಾಲವನ್ನು ಬಲಪಡಿಸಿ, ಯುವ ಮುಖಂಡರನ್ನು ಮುಂದಿಟ್ಟು 2026ರ ಚುನಾವಣೆಯಲ್ಲಿ ತಮ್ಮ ಹಾಜರಾತಿಯನ್ನು ಮರುಸ್ಥಾಪಿಸಲು ಎಡಪಕ್ಷಗಳು ಪ್ರಯತ್ನಿಸುತ್ತಿವೆ.
2026ರ ಪಶ್ಚಿಮ ಬಂಗಾಳ ಚುನಾವಣೆ ಕೇವಲ ಸರ್ಕಾರ ಆಯ್ಕೆಯ ಪ್ರಶ್ನೆಯಲ್ಲ; ಇದು ಮತದಾರರ ಮನಸ್ಸಿನ ನಿಖರ ಲೆಕ್ಕಾಚಾರ, ಸಾಮಾಜಿಕ ಪರಿಸ್ಥಿತಿ ಮತ್ತು ಭವಿಷ್ಯದ ಭದ್ರತೆಯ ಸಮೀಕ್ಷೆಯಾಗಿದೆ. ಮತದಾರರು ಕನಸುಗಳನ್ನೂ ಭರವಸೆಗಳನ್ನೂ ತೂಕ ಹಾಕಿ ನಿರ್ಧಾರ ಮಾಡುತ್ತಿಲ್ಲ; ಅವರು ಅಪಾಯದ ಮಟ್ಟವನ್ನು ಅಳೆಯುತ್ತಿದ್ದಾರೆ. ಹೀಗಾಗಿ, ಫಲಿತಾಂಶ ಕೇವಲ ಸೀಟುಗಳ ಸಂಖ್ಯೆಯಲ್ಲ; ಇದು ಬಂಗಾಳದ ಸಮಾಜದ ಸಾಮರ್ಥ್ಯ, ಆತಂಕವನ್ನು ಸಹಿಸಿಕೊಳ್ಳುವ ಸಾಮರ್ಥ್ಯ, ಮತ್ತು ರಾಜಕೀಯ ವೈಫಲ್ಯಗಳ ವಿರುದ್ಧ ತಾಳ್ಮೆಯ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ, ಜನತಂತ್ರ ಹೇಗೆ ಲೆಕ್ಕಾಚಾರದ ಮೂಲಕ ನಿರ್ವಹಿಸುತ್ತಿದೆ ಎಂಬುದು ಮಹತ್ವವಾಗಿದೆ.
