ದೊಡ್ಡಬೆಳವಂಗಲ: ಭೂ – ಸ್ವಾಧೀನವೆಂಬ ಕೆಐಎಡಿಬಿ ಪೋಷಿತ ಸಾಂಕ್ರಾಮಿಕ

ರೈತರ ಒಪ್ಪಿಗೆ ಪಡೆಯದೆ, ಪರಿಸರಾತ್ಮಕ ಅಂಶಗಳನ್ನೂ ಲೆಕ್ಕಿಸದೆ, ಕೃಷಿ-ಹೈನುಗಾರಿಕೆ, ಕೃಷಿಕರು, ಕೂಲಿಕಾರರ ಬದುಕನ್ನು ಅಂದಾಜಿಸದೆ ಏಕಾಏಕಿ ಭೂ-ಸ್ವಾಧೀನಕ್ಕೆ ನೋಟೀಸ್ ನೀಡುವ ಕೆಟ್ಟಚಾಳಿ ಹೊಸದೇನಲ್ಲ. ಮಂಡಳಿಯು ಕೃಷಿಕರ ಭೂಮಿ ಹೊಡೆಯಲು ಕೈಗಾರಿಕೆಯ ಹೆಸರಿನಲ್ಲಿ ಗ್ರಾಮೀಣ ಭಾಗಕ್ಕೆ ಹಬ್ಬಿಸುತ್ತಿರುವ ಸಾಂಕ್ರಾಮಿಕ ಜಾಡ್ಯ ಇದಾಗಿದೆ. ಈ ಜಾಡ್ಯಕ್ಕೆ ಚನ್ನರಾಯಪಟ್ಟಣ ರೈತರು ಮದ್ದು ಅರೆದದ್ದನ್ನು ಪಕ್ಕದ ದೊಡ್ಡಬಳ್ಳಾಪುರ ತಾಲೂಕಿನ ರೈತರು ಸಹ ಕಂಡಿದ್ದಾರೆ, ತಿಳಿದಿದ್ದಾರೆ. ಅದೇ ಹಾದಿಯಲ್ಲಿ ಹೋರಾಟದ ಅಂಗಳಕ್ಕೆ ಧುಮುಕಿದ್ದಾರೆ.

ಪ್ರಭಾ ಎನ್. ಬೆಳವಂಗಲ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ 398 ನೆಯ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ದಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಗೆ ಸೇರಿದ  ನಾಲ್ಕು ಗ್ರಾಮಗಳಾದ ಚಿಕ್ಕಬೆಳವಂಗಲ, ಸೊಣ್ಣೇನಹಳ್ಳಿ, ರಾಂಪುರ, ನಾರನಹಳ್ಳಿ ಮತ್ತು ದೊಡ್ಡಬೆಳವಂಗಲ ಗ್ರಾಮಗಳಲ್ಲಿ ಸುಮಾರು 2100 ಎಕರೆಯಷ್ಟು ಫಲವತ್ತಾದ ಕೃಷಿ ಭೂಮಿಯನ್ನು ಐಟಿ ಮತ್ತು ಡಾಟಾ ಸೆಂಟರ್ ಅಭಿವೃದ್ಧಿಗೆಂದು ಸ್ವಾದೀನಪಡಿಸಿಕೊಳ್ಳುವ ಕುರಿತು ವರದಿ ಮಂಡಿಸಿದ್ದಾರೆ. ಈ ಭಾಗದ ಭೂಮಿ ಖಾಲಿ ಇದೆ ಎನ್ನುವ ಅಂಶವನ್ನು ವರದಿಯಲ್ಲಿ ತರುವ ಮೂಲಕ ಅಧಿಕಾರಿಗಳು ಮಂಡಳಿಗೆ ತಪ್ಪು ಮಾಹಿತಿ ನೀಡಿದ್ದಾರೆ.

ಈ ಗ್ರಾಮಗಳಿಂದ ನಾಲ್ಕೈದು ಕಿ.ಮೀ. ದೂರದಲ್ಲಿ ಈಗಾಗಲೆ ಸ್ವಾಧೀನಪಡಿಸಿಕೊಂಡಿರುವ 5800 ಎಕರೆ ಭೂಮಿಯಲ್ಲಿ ಯಾವ ಕೈಗಾರಿಕೆಗಳೂ ಚಾಲನೆ ಪಡೆದಿಲ್ಲ. ಅಭಿವೃದ್ಧಿಯ ಗಂಧ-ಗಾಳಿ ಅಲ್ಲಿಂದ ಸೂಸುತ್ತಿಲ್ಲ. ಈ ನಡುವೆ ತುಮಕೂರು ಜಿಲ್ಲಾಡಳಿತ ಐಟಿಗೆ ಉತ್ತೇಜನ ನೀಡಿ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಿದೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಂಟಿಕೊಂಡಿರುವ ತುಮಕೂರು ಬಳಿಯ ವಸಂತ ನರಸಾಪುರ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆಂದು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅಲ್ಲಿ, ಇವರು ಜಂಭ ಕೊಚ್ಚಿಕೊಳ್ಳುವ ಮಟ್ಟಿಗಿನ ಕೈಗಾರಿಕೆಗಳ ಸ್ಥಾಪನೆಯಾಗಲಿ ಉದ್ಯೋಗ ಸೃಷ್ಟಿಯಾಗಲಿ ಆಗಿಲ್ಲ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪ ಚುನಾವಣೆ: ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಲು ಸಿಪಿಐ(ಎಂ) ಕರೆ

ರಾಜ್ಯದ ತುಂಬೆಲ್ಲಾ ಕೈಗಾರಿಕೆ, ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಗ್ರಾಮೀಣ ಆರ್ಥಿಕತೆ ಮುಂತಾದ ಘೋಷಣೆಗಳು ಬಡಬಡಾಯಿಸುತ್ತಿವೆ. ರೈತರಿಂದ ಭೂಮಿ ಕಸಿಯಲು ಬಂಡವಾಳಿಗರು, ಕಾರ್ಪೊರೇಟ್ ಕುಳಗಳು, ಭೂ ದಲ್ಲಾಳಿಗಳು, ರಾಜಕಾರಣಿಗಳು, ಅಧಿಕಾರಿಗಳ ಕೂಟ ಕೂಡಿ ಹೆಣೆದಿರುವ ಅಭಿವೃದ್ಧಿ ಹೆಸರಿನ ಈ ಬಲೆಯು ಈಗಾಗಲೆ ಬೆಂಗಳೂರು ಸುತ್ತ-ಮುತ್ತಲ ಜಿಲ್ಲೆಗಳ ಸಾವಿರಾರು ರೈತ ಕುಟುಂಬಗಳನ್ನು ಮುಳುಗಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರು ಭೂಮಿ ಮಾರಿ ಅತ್ತ ಕೃಷಿಯು ಇಲ್ಲದೆ ಇತ್ತ ಉದ್ಯೋಗಗಳೂ ಇಲ್ಲದೆ ನಾನಾ ತರದ ಕೂಲಿಕಾರರಾಗಿ ಪರಿವರ್ತಿತರಾಗಿದ್ದಾರೆ. ಗುಳೆ ಹೋಗಿ ಕಾಣದ ಊರುಗಳನ್ನು ಸೇರಿಕೊಂಡು ನೆಂಟರಿಷ್ಟರ ಕೈಗೂ ಸಿಗದಂತಾಗಿದ್ದಾರೆ. ಕೈಗಾರಿಕಾ ಪ್ರದೇಶಕ್ಕೆಂದು ಪಡೆದ ಭೂಮಿಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು, ವಸತಿ ಶಾಲೆಗಳು, ರೆಸಾರ್ಟ್ ಗಳು ತಲೆ ಎತ್ತಿ ನಿಂತಿರುವ ಉದಾಹರಣೆಗಳೂ ನಮ್ಮ ಮುಂದಿವೆ.

ರಿಯಲ್ ಎಸ್ಟೇಟ್ ದಂಧೆ ಬೆಂಗಳೂರಿನ ಆಸುಪಾಸು ತಾಲ್ಲೂಕುಗಳು, ಜಿಲ್ಲೆಗಳಲ್ಲಿ ರೈತರ ಭೂಮಿಗೆ ಲಗ್ಗೆ ಇಟ್ಟಿದೆ. ಕಸ ವಿಲೇವಾರಿ ಘಟಕಗಳೂ ಇದೇ ಊರುಗಳಿಗೆ ಸಮೀಪದಲ್ಲಿದ್ದು 500 ಎಕರೆ ಭೂಮಿಯನ್ನು ಕಸ ಆವರಿಸಿದೆ. ಅದರಿಂದ ವಾಯು, ಪರಿಸರ, ಜಲ ಮಾಲಿನ್ಯವಾಗಿ ಸುತ್ತಲಿನ ಹಳ್ಳಿಗಳ ಜನರು ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸರದ ಗುಣಮಟ್ಟ ಶೋಚನೀಯ ಸ್ಥಿತಿಗೆ ತಲುಪುತ್ತಿದೆ.

ರೈತರ ಒಪ್ಪಿಗೆ ಪಡೆಯದೆ,  ಪರಿಸರಾತ್ಮಕ ಅಂಶಗಳನ್ನೂ ಲೆಕ್ಕಿಸದೆ, ಕೃಷಿ-ಹೈನುಗಾರಿಕೆ, ಕೃಷಿಕರು, ಕೂಲಿಕಾರರ ಬದುಕನ್ನು ಅಂದಾಜಿಸದೆ ಏಕಾಏಕಿ ಭೂ-ಸ್ವಾಧೀನಕ್ಕೆ ನೋಟೀಸ್ ನೀಡುವ ಕೆಐಎಡಿಬಿಯ ಕೆಟ್ಟಚಾಳಿ ಹೊಸದೇನಲ್ಲ. ಇದು ಮಂಡಳಿ ಕೃಷಿಕರ ಭೂಮಿ ಹೊಡೆಯಲು ಕೈಗಾರಿಕೆಯ ಹೆಸರಿನಲ್ಲಿ ಗ್ರಾಮೀಣ ಭಾಗಕ್ಕೆ ಹಬ್ಬಿಸುತ್ತಿರುವ ಸಾಂಕ್ರಾಮಿಕ ಜಾಡ್ಯ.

ಈ ಜಾಡ್ಯಕ್ಕೆ ಚನ್ನರಾಯಪಟ್ಟಣ ರೈತರು ಮದ್ದು ಅರೆದದ್ದನ್ನು ಪಕ್ಕದ ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರು ಸಹ ಕಂಡಿದ್ದಾರೆ, ತಿಳಿದಿದ್ದಾರೆ. ಅದೇ ಹಾದಿಯಲ್ಲಿ ಹೋರಾಟದ ಅಂಗಳಕ್ಕೆ ಧುಮುಕಿದ್ದಾರೆ.

ಎಸ್.ಟಿ.ಆರ್.ಆರ್ ರಸ್ತೆ ಮತ್ತು ಕ್ವಿನ್ ಸಿಟಿಗೆ ಹೊಂದಿಕೊಂಡಿರುವ ಈ ಜಮೀನು ಖಾಲಿ ಇದೆ ಎನ್ನುವ ಪ್ರಸ್ತಾವನೆಯನ್ನು ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದು ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಶಿಫಾರಸು ಮಾಡಿರುತ್ತಾರೆ.

ಆದರೆ, ಈ ವರದಿಯು ಪರಿಪೂರ್ಣ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಇವರು ಶಿಫಾರಸು ಮಾಡಿರುವ ಭೂಮಿಯು ಕೆಳಕಂಡ ಆರ್ಥಿಕ, ಪರಿಸರಾತ್ಮಕ ಅಂಶಗಳಿಂದ ಕೂಡಿದೆ.

1. ಈ ಜಮೀನುಗಳ ವ್ಯಾಪ್ತಿಯಲ್ಲಿ ಸೊಣ್ಣೇನಹಳ್ಳಿ, ರಾಂಪುರ, ಅಕ್ಕತಮ್ಮನಹಳ್ಳಿ, ನಾರನಹಳ್ಳಿ, ದೊಡ್ಡಬೆಳವಂಗಲ ಗ್ರಾಮಗಳ ಕೆರೆಗಳಿವೆ ಐವತ್ತಕ್ಕು ಹೆಚ್ಚು ಕುಂಟೆಗಳಿವೆ.

2.ತಿಪ್ಪಗೊಂಡನಹಳ್ಳಿ ಜಲಾನಯನ ಪಾತ್ರದ ಅರ್ಕಾವತಿ – ಕುಮುದ್ವತಿ ನದಿಯ ಹಳ್ಳ-ಕೊಳ್ಳಗಳಿಂದ ಸುತ್ತುವರೆದ ಜಮೀನುಗಳು ಇದರಲ್ಲಿವೆ.

3. ಸುಮಾರು ಅರ್ಧಕ್ಕೂ ಹೆಚ್ಚು ಭೂ ಭಾಗದಲ್ಲಿ ಅಡಿಕೆ ತೋಟ, ತೆಂಗಿನ ತೋಟ, ಮಾವು, ದ್ರಾಕ್ಷಿ, ಹಣ್ಣು-ತರಕಾರಿಗಳ ತೋಟಗಳಿವೆ. ಉಳಿದ ಭಾಗದಲ್ಲಿ ರಾಗಿ, ಜೋಳ, ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ.

4. ಸುಮಾರು 50ಕ್ಕೂ ಹೆಚ್ಚು ಕುಕ್ಕುಟ ಫಾರಂಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ.

5. ಪ್ರತಿ ಗ್ರಾಮದಿಂದಲೂ ದಿನವೊಂದಕ್ಕೆ ಸರಾಸರಿ 1000 ಲೀಟರ್ ಹಾಲನ್ನು ನಗರಕ್ಕೆ ಪೂರೈಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮೇವಿನ ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.

6. ಕುರಿ, ಮೇಕೆ, ಕೋಳಿ ಸಾಕಾಣಿಕೆಗಳು ನೂರಾರು ಕುಟುಂಬಗಳ ಆದಾಯದ ಮೂಲಗಳಾಗಿವೆ.

7. ಈಗಾಗಲೇ ದೊಡ್ಡಬಳ್ಳಾಪುರ ರಸ್ತೆಯಿಂದ ಸೋಂಪುರ ರಸ್ತೆವರೆಗಿನ ದೊಡ್ಡಬೆಳವಂಗಲ ಹೋಬಳಿಯ 5800 ಎಕರೆ ಭೂಮಿಯನ್ನು ಕ್ವಿನ್ ಸಿಟಿಗೆ ಪರಬಾರೆ ಮಾಡಲಾಗಿದೆ. ಹೆದ್ದಾರಿ, ಸ್ಮಾರ್ಟ್ ಸಿಟಿ ಮುಂತಾದ ಹೆಸರುಗಳ ಮೂಲಕ ರೈತರಿಂದ ನೂರಾರು ಎಕರೆ ಕೃಷಿ ಯೋಗ್ಯವಾದ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗಿದೆ.  ಕೃಷಿಗೆ ಬೇಕಾದ ಭೂಮಿ ಕುಗ್ಗಿ ಹೋಗಿದೆ. ಆಹಾರದ ಸ್ವಾವಲಂಬನೆಯಲ್ಲಿ ಭಾರೀ ಹೊಡೆತ ಬಿದ್ದಿದೆ.

8. ರೈತರ ಅಭಿಪ್ರಾಯ ಪಡೆಯದೆ, ಸ್ಥಳೀಯ ಪಂಚಾಯ್ತಿಗಳನ್ನು ಲೆಕ್ಕಿಸದೆ, ಪರಿಸರ ಮತ್ತು ಜೀವವೈವಿಧ್ಯದ ಸಮತೋಲನವನ್ನು ಪರಿಗಣಿಸದೆ ರೈತರ ಕೃಷಿ ಜಮೀನಿಗೆ ಲಗ್ಗೆ ಹಾಕುವುದು, ಭೂ-ಸ್ವಾಧೀನಕ್ಕೆ ನೊಟೀಸ್ ನೀಡುವುದು ಕೆಐಎಡಿಬಿಯ ಕೆಟ್ಟ ಚಾಳಿಯಾಗಿದೆ.

9. ಕೈಗಾರಿಕಾ ಸ್ಥಾಪನೆಯ ಹೆಸರಿನಲ್ಲಿ ಕೆಐಎಡಿಬಿ ಈಗಾಗಲೆ ವಶಪಡಿಸಿಕೊಂಡಿರುವ ಭೂಮಿ ಇನ್ನೂ ಖಾಲಿ ಬಿದ್ದಿದ್ದು ಅಲ್ಲೆಲ್ಲ ಇನ್ನು ಕೈಗಾರಿಕೆಗಳು ಸ್ಥಾಪನೆಯಾಗಬೇಕಿದೆ.

10. ಕೈಗಾರಿಕಾ ಸ್ಥಾಪನೆಗೆಂದು ವಶಪಡಿಸಿಕೊಂಡ ಭೂಮಿಯನ್ನು ಬಿಲ್ಡರ್ ಗಳಿಗೆ, ವಿಶ್ವವಿದ್ಯಾಲಯಗಳಿಗೆ, ಕೈಗಾರಿಕೇತರ ಉದ್ದೇಶಗಳಿಗೆ ಮಾರಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಹೀಗಿರುವಾಗ, ಕೆಐಎಡಿಬಿಯ ಭೂ-ಸ್ವಾಧೀನದ ಮೇಲಿನ ಉಲ್ಲೇಖ ರೈತರನ್ನು ಮೋಸಗೊಳಿಸುವ ಕಾರ್ಯತಂತ್ರವಾಗಿದೆ. ಈ ಭಾಗದ ರೈತರು ಸಣ್ಣ ಹಿಡುವಳಿದಾರರಾಗಿದ್ದು ಹಿಂದಿನ ತಲೆಮಾರಿನಿಂದ ಬಂದಿರುವ ತಮ್ಮ ಪಾಲಿನ ಭೂಮಿಯನ್ನು ತಮ್ಮ ಕುಟುಂಬಗಳ ಮುಂದಿನ ತಲೆಮಾರುಗಳಿಗೆ ವರ್ಗಾಯಿಸುವ ಮತ್ತು ಜೀವನೋಪಾಯಕ್ಕಾಗಿ ಅದನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ಹೊಂದಿದವರಾಗಿರುತ್ತಾರೆ.

11. ಟೆರ್ರಾಫಾರಂ ಮತ್ತು ಎಂ.ಎಸ್.ಜಿ.ಬಿ ಘನತ್ಯಾಜ್ಯ ಘಟಕಗಳು 500 ಎಕರೆ ಪ್ರದೇಶದಲ್ಲಿದ್ದು ಈಗಾಗಲೇ ನೀರು, ಪರಿಸರಕ್ಕೆ ಸಾಕಷ್ಟು ಹಾನಿಯಾಗಿದೆ. ಜನ, ಜಾನುವಾರುಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿದೆ.

12. ದೊಡ್ಡಬೆಳವಂಗಲ ಹೋಬಳಿಯು ಹಸಿರು ವಲಯವೆಂದು ಈಗಾಗಲೇ ದಾಖಲುಗೊಂಡಿದೆ.

13. ಐದು ಗ್ರಾಮಗಳ ಜನಸಂಖ್ಯೆ ಸುಮಾರು 12,000ದಷ್ಟಿದ್ದು 3000 ಕುಟುಂಬಗಳು ಇಲ್ಲಿ ನೆಲೆಯೂರಿವೆ.

14. ರಾಸುಗಳು 2500ರಷ್ಟಿದ್ದು ಸುಮಾರು 900 ಕೃಷಿ ಪಂಪ್ ಸೆಟ್ಟುಗಳಿವೆ.

15. ಕೃಷಿಕರನ್ನು ಅವಲಂಬಿಸಿ ನೂರಾರು ಕೃಷಿ ಕೂಲಿಕಾರ ಕುಟುಂಬಗಳು ಬದುಕು ನಡೆಸುತ್ತಿವೆ.

ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media

Donate Janashakthi Media

Leave a Reply

Your email address will not be published. Required fields are marked *