ಬೆಂಗಳೂರು : ಠೇವಣಿದಾರರ ಪ್ರಶ್ನೆಗಳಿಗೆ ಉತ್ತರ ನೀಡಿದೆ ಸಂಸದ ತೇಜಸ್ವಿ ಸೂರ್ಯ ಎಸ್ಕೇಪ್ ಆದ ಘಟನೆ ಬಸವನಗುಡಿಯಲ್ಲಿ ನಡೆದಿದೆ. ಸಂಸದ ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಆಕ್ರೋಶವನ್ನು ಹೊರಹಾಕಿ, ನಮಗೆ ಅನ್ಯಾಯ ಮಾಡಿದ್ದೀರಿ, ನಮ್ಮ ಠೇವಣಿಯನ್ನು ವಾಪಸ್‌ನೀಡಿ ಎಂದು ಧಿಕ್ಕಾರ ಕೂಗಿದರು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಏಪ್ರಿಲ್ 13ರಂದು ಸಂಜೆ ನಾಲ್ಕುಗಂಟೆಗೆ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಹಾಗೂ ಕೋಆಪರೇಟಿವ್ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಕರೆದಿದ್ದರು. ಠೇವಣಿದಾರರ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗ್ರಾಹಕರನ್ನು ತಳ್ಳಿ ಹಲ್ಲೆ ಮಾಡಿರುವ ವಿಡಿಯೋ ಜನಶಕ್ತಿ ಮೀಡಿಯಾಗೆ ಲಭ್ಯವಾಗಿದೆ.
ಇದನ್ನೂ ಓದಿ : ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ
ತೇಜಸ್ವಿ ಸೂರ್ಯ ಕರೆದ ಸಭೆಯಲ್ಲಿಯೇ ಅವರ ವಿರುದ್ಧವೇ ಡಿಪಾಸಿಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದಲ ಹೆಚ್ಚಾದ ವೇಳೆ ತೇಜಸ್ವಿ ಸೂರ್ಯ ಕುಪಿತಗೊಂಡು ಸಭೆಯಿಂದ ಎದ್ದು ಹೊರ ನಡೆಯಲು ಮುಂದಾಗಿದ್ದು, ಈ ಸಂದರ್ಭದಲ್ಲಿ ತಡೆದ ಮಹಿಳೆಯೊಬ್ಬರನ್ನು ತಳ್ಳಿ ಹೊರ ನಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳ ಮೇಲೆಯೂ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ವಾಗ್ವಾದದ ವೇಳೆ ಶಾಸಕ ರವಿ ಸುಬ್ರಮಣ್ಯಂ ಗ್ರಾಹಕರೊಬ್ಬರನ್ನು ಕೈ ಹಿಡಿದು ಎಳೆಯುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದಾಗಿದೆ.
ಸಹಕಾರಿ ಬ್ಯಾಂಕ್, ಸೊಸೈಟಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಠೇವಣಿದಾರರ ಸಭೆ ಎಂದು ಆರಂಭದಲ್ಲಿ ಹೇಳಿದ್ದರು, ಸಹಕಾರಿ ಕ್ಷೇತ್ರದ ಚಿಂತನ ಮಂಥನ ಎಂದು ಹೇಳಿ ಮತ ನೀಡುವಂತೆ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ ಎಂದು ಠೇವಣಿದಾರರು ಆರೋಪಿಸಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದೆ, ಠೇವಣಿದಾರರ ಸಭೆ ಎಂದು ಕರೆದು, ಚುನಾವಣಾ ವಿಷಯಗಳನ್ನು ಮಾತನಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಕೂಡಲೇ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಬಸವನಗುಡಿ ಮುಖಂಡರಾದ ಬಸ್ಸಮ್ಮ ಆಗ್ರಹಿಸಿದ್ದಾರೆ.