ತೇಜಸ್ವಿ ಸೂರ್ಯಗೆ ಮತ ನೀಡುವ ಮೊದಲು ಯೋಚಿಸಿ – ಮೋಹನ್ ರಾವ್ ಬಹಿರಂಗ ಪತ್ರ

 – ಮೋಹನ್ ರಾವ್

 ಹಲೋ, ನಮಸ್ಕಾರ. ನನ್ನ ಹೆಸರು ಮೋಹನ್ ರಾವ್. ನಾನು ವೈದ್ಯಕೀಯ ರಂಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕ ಆರೋಗ್ಯದಲ್ಲಿ ವಿಶೇಷ ತರಬೇತಿ ಪಡೆದಿದ್ದೇನೆ. ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಸೆಂಟರ್ ಆಫ್ ಸೋಶಿಯಲ್ ಮೆಡಿಸಿನ್ ಅಂಡ್ ಕಮ್ಯುನಿಟ್ ಹೆಲ್ತ್ ನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ್ದೇನೆ. ಈಗ ನಾನು ನನ್ನ ಸ್ವಂತ ಊರಾದ ಬೆಂಗಳೂರಿನಲ್ಲಿ ಸ್ವತಂತ್ರ ಸಂಶೋಧಕನಾಗಿ ದುಡಿಯುತ್ತಿದ್ದೇನೆ. ತೇಜಸ್ವಿ ಸೂರ್ಯ

ಕೋವಿಡ್-19 ರ ಸಮಯದಲ್ಲಿ ಕೇಂದ್ರ ಸರ್ಕಾರವು ಹೇಗೆ ನಡೆದುಕೊಂಡಿತು ಎಂಬ ಸಂಗತಿಯನ್ನು ಒಬ್ಬ ಸಾರ್ವಜನಿಕ ಆರೋಗ್ಯ ಕಾರ್ಯಕರ್ತನಾಗಿ ನೆನೆಯದೆ ಇರಲಾರೆ. ಬಡ ಜನರಿಗೆ ಆದಾಯ ಧನಸಹಾಯ ಹಾಗೂ ಆಹಾರದ ನೆರವು ನೀಡುವಂತಹ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಬದಲು ಅದೊಂದು ಹೃದಯಹೀನ ವೈದ್ಯರುಗಳ ಭೀಕರ ನೃತ್ಯವಾಗಿತ್ತು. ಒಂದುಕಡೆ ದೇಶದ ಪ್ರಧಾನಿಯವರು ನವಿಲಿನ ಜತೆ ಫೋಟೋ ಪ್ರದರ್ಶಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳು ಆಮ್ಲಜನಕ ಸಿಲಿಂಡರುಗಳಿಲ್ಲದೇ, ಹಾಸಿಗೆಗಳಿಲ್ಲದೇ, ಔಷಧಿಗಳಿಲ್ಲದೇ ಮತ್ತು ವೆಂಟಿಲೇಟರುಗಳಿಲ್ಲದೇ ತಡಕಾಡುತ್ತಿದ್ದವು. ಎಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡರೆಂದರೆ ಮಸಣಗಳು ತುಂಬಿ ತುಳುಕಾಡುತ್ತಿದ್ದವು, ಕೆಲವು ಕಡೆ ಶವಸುಡಲು ಕಟ್ಟಿಗೆಗಳೇ ಇಲ್ಲದೆ ಸಾಮೂಹಿಕ ಚಿತಾಗಾರಗಳಾಗಿ ಮಾರ್ಪಾಟಾದವು. ಗಂಗಾನದಿ ತೀರದಲ್ಲಿ ಸಾವಿರಾರು ಶವಗಳ ಸಂಸ್ಕಾರಕ್ಕೆ ತಾವಿಲ್ಲದೇ ಗಂಗಾ ನದಿಯಲ್ಲಿ ಹೆಣಗಳು ತೇಲಿಹೋದ ದುರಂತವನ್ನೂ ನಮ್ಮ ಭಾರತದೇಶ ಕಾಣುವಂತಾಯಿತು. ತೇಜಸ್ವಿ ಸೂರ್ಯ

ಬಾಬಾ ರಾಮದೇವ ಮಾರುತ್ತಿದ್ದ ಔಷಧಿಯನ್ನು ಪರೀಕ್ಷೆಗೂ ಒಡ್ಡದೇ ಅದನ್ನೇ ಕೋವಿಡ್ ಗೆ ಮದ್ದು ಎಂದು ಕೇಂದ್ರ ಆರೋಗ್ಯ ಸಚಿವರು ನಿರ್ದೇಶನ ನೀಡುವುದರ ಮೂಲಕ ಲಕ್ಷಾಂತರ ಜನರ ಜೀವವನ್ನು ಅಪಾಯಕ್ಕೊಡ್ಡಿದರು. ತಟ್ಟೆ ಲೋಟಗಳನ್ನು ಬಡಿಯುತ್ತಾ ‘ಕೊರೋನಾ ಹೋಗು’ ಎಂದು ಹೇಳಿದರೆ ಕೋವಿಡ್ ಮಾಯವಾಗುತ್ತದೆ ಎಂದು ನಮಗೆ ಹೇಳಲಾಯಿತು. “ಕೊರೋನ ಜಿಹಾದ್” ಎಂಬ ಹೊಸ ಪದಗಳನ್ನು ಆವಿಷ್ಕಾರ ಮಾಡಿ ಮುಸ್ಲಿಮರು ಉದ್ದೇಶಪೂರ್ವಕವಾಗಿ ಕೋವಿಡನ್ನು ಹರಡುತ್ತಿದ್ದಾರೆ, ಆ ಮೂಲಕ ಭಾರತವನ್ನು ಇಸ್ಲಾಂದೇಶವನ್ನಾಗಿ ಪರಿವರ್ತನೆ ಮಾಡುತ್ತಿದ್ದಾರೆ ಎಂಬ ಅಪಪ್ರಚಾರ ಮಾಡಿದರು. ಸರ್ಕಾರದ ಅನುಮತಿಯೊಂದಿಗೆ ನಡೆದ ಮುಸ್ಲಿಂ ಧಾರ್ಮಿಕ ಸಮಾರಂಭವು ಕೋವಿಡ್ ಗೆ ಕಾರಣ ಎಂದು ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷವಿಷವನ್ನು ಬಿತ್ತುತ್ತಿದ್ದರೆ, ಮತ್ತೊಂದೆಡೆ ಕುಂಭ ಮೇಳದಲ್ಲಿ ಲಕ್ಷಾಂತರ ಜನರು ಅಣಿನೆರೆಯಲು ಅವಕಾಶ ನೀಡಿ ಹಿಂದೂಗಳ ಜೀವಗಳನ್ನು ಅಪಾಯಕ್ಕೆ ಒಡ್ಡಲಾಯಿತು.ತೇಜಸ್ವಿ ಸೂರ್ಯ

ಅಂತಿಮವಾಗಿ, ಲಸಿಕೆ ನೀತಿ ( vaccination policy) ಯ ಮೂಲಕ ಭಾರಿ ಅವ್ಯವಸ್ಥೆಯನ್ನು ಹುಟ್ಟುಹಾಕಿ ಸಾರ್ವಜನಿಕ ಹಣವನ್ನು ಖಾಸಗಿ ಕಂಪನಿಗಳಿಗೆ ಧಾರೆಯೆರೆದು ಲಾಭಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು, ಲಸಿಕೆ ಉತ್ಪಾದನೆಯಲ್ಲಿ ಉತ್ತಮ ಹೆಸರು ಮಾಡಿರುವ ಸಾರ್ವಜನಿಕ ಸಂಸ್ಥೆಗಳು ಅನುದಾನಗಳಿಲ್ಲದೇ ಸೊರಗುವಂತೆ ಮಾಡಲಾಯಿತು. ಭಾರತೀಯರಿಗೇ ಲಸಿಕೆ ಕೊರತೆಯಾಗುತ್ತಿರುವಾಗ, ಖಾಸಗಿ ಕಂಪನಿಗಳು ಉತ್ಪಾದನೆ ಮಾಡಿದ ಲಸಿಕೆಗಳನ್ನು ಹೊರದೇಶಗಳಿಗೆ ರಫ್ತು ಮಾಡಲು ಅವಕಾಶ ನೀಡಿ ಲಾಭ ಮಾಡಿಕೊಳ್ಳಲು ಬಿಟ್ಟಿತು ನಮ್ಮ ಘನ ಕೇಂದ್ರ ಸರ್ಕಾರ ! ಅಗತ್ಯ ರಕ್ಷಣಾ ತೊಡುಗೆಗಳಿಲ್ಲದೇ ನೂರಾರು ಆರೋಗ್ಯ ಕಾರ್ಯಕರ್ತರು, ವೈದ್ಯರನ್ನೂ ಒಳಗೊಂಡಂತೆ, ಅಸು ನೀಗಬೇಕಾದ ದುಃಸ್ಥಿತಿಯನ್ನು ನಮ್ಮ ಸರ್ಕಾರ ಸೃಷ್ಟಿಸಿತು.

ಇದನ್ನು ಓದಿ : ಐದು ವರ್ಷಗಳಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಆಸ್ತಿಯಲ್ಲಿ ಸುಮಾರು 30 ಪಟ್ಟು ಹೆಚ್ಚಳ

ಒಬ್ಬ ನಿರಂಕುಶಾಧಿಕಾರಿಯ ದುರ್ನಡತೆಯ ಕಾರಣ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಹಾಗೂ ಸಾಂಕ್ರಾಮಿಕ ರೋಗತಜ್ಞರನ್ನು ಬದಿಗೊತ್ತಲಾಯಿತು. ಅದರಿಂದಾಗಿ ದೇಶ ಅತಿದೊಡ್ಡ ಸಾವುನೋವುಗಳನ್ನು ಕಂಡು ಭಾರಿ ಬೆಲೆ ತೆರುವಂತಾಯಿತು. ಅಧಿಕೃತ ಅಂಕಿಅಂಶಗಳನ್ನು ಮುಚ್ಚಿಡಲಾಯಿತಾದರೂ, ಕೋವಿಡ್ ನಿಂದಾಗಿ ಜಗತ್ತಿನಲ್ಲೇ ಅತಿ ಹೆಚ್ಚು ಸಾವು ಸಂಭವಿಸಿದ ದೇಶ ಭಾರತವಾಗಿದೆ. ಜನಸಂಖ್ಯಾಶಾಸ್ತ್ರಜ್ಞರೊಬ್ಬರು ತಮ್ಮ ಶೈಕ್ಷಣಿಕ ಪತ್ರಿಕೆಯೊಂದರಲ್ಲಿ ‘ಕೋವಿಡ್ ನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆಯು ಸರ್ಕಾರಿ ಅಂಕಿಅಂಶಗಳಿಗಿಂತ ದುಪ್ಪಟ್ಟು ಇದೆ’ ಎಂದು ಪ್ರಕಟಿಸಿದ್ದಕ್ಕಾಗಿ ಮುಂಬಯಿಯ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸ್ಟಡೀಸ್ ನ ನಿರ್ದೇಶಕರನ್ನು ಕೆಲಸದಿಂದ ಕಿತ್ತುಹಾಕಲಾಯಿತು. ಹಾಗಾಗಿ ಜನಸಂಖ್ಯಾಶಾಸ್ತ್ರಜ್ಞರು ಸತ್ಯ ನುಡಿಯಲು ಹೆದರುತ್ತಿದ್ದಾರೆ.

ರೋಗಾಣುಗಳು ರೂಪಾಂತರಗೊಳ್ಳುತ್ತವೆಯಾದ್ದರಿಂದ ಕೋವಿಡ್ ನಮ್ಮೊಡನೆ ಸದಾ ಇರುತ್ತದೆ ಎಂದಿದ್ದಕ್ಕಾಗಿ ಏನಾಯಿತು ಅನ್ನುವುದನ್ನು ನಾವು ನೆನಪಿಡಬೇಕು. ಈ ಹಿನ್ನೆಲೆಯಲ್ಲಿ ನಾವು ಕೋವಿಡ್ ಸಂದರ್ಭದಲ್ಲಿ ತೇಜಸ್ವಿ ಸೂರ್ಯರವರ ವರ್ತನೆಗಳು ಹೇಗಿದ್ದವು ಎನ್ನುವುದನ್ನು ಪರಿಶೀಲಿಸಬೇಕು. ನಡೆಯುತ್ತಿದ್ದ ಕೆಲಸವನ್ನು ಹಾಳುಗೆಡವಿದರು, ಸುಸೂತ್ರವಾಗಿ ನಡೆಯುತ್ತಿದ್ದ ಕೆಲಸದಲ್ಲಿ ಕೋಮುವಾದಿ ರೋಗಾಣುವನ್ನು ಬಿತ್ತಿದರು, ಸಂಪೂರ್ಣವಾಗಿ ಕೆಲಸ ಅಸ್ತವ್ಯಸ್ತವಾಗುವಂತೆ ಮಾಡಿದರು.ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಆದ ಸಾವಿನ ಸುದ್ದಿಯನ್ನು ಪರಿಣಾಮಕಾರಿಯಾಗಿ ಮರೆಮಾಚಲು ಯತ್ನಿಸಿದರು. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ಸುಳ್ಳು ಸುದ್ದಿ ಹರಡಿದರು, ಕೋವಿಡ್ ಸಮರ ಕೊಠಡಿ ( covid war room) ಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ನೌಕರರನ್ನು ಕಿತ್ತುಹಾಕುವುದರ ಮೂಲಕ ಇಡೀ ವ್ಯವಸ್ಥೆಯನ್ನೇ ನೌಕರರ ಕೊರತೆಯಿಂದಾಗಿ ನರಳುವಂತೆ ಮಾಡಿದರು.

ಇಂತಹ ದುರ್ನಡತೆಗಳು ನಮ್ಮ ರಾಜ್ಯದಲ್ಲಿ ಮಹಾರಾಷ್ಟ್ರಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಯಿತು ಎಂಬುದು ಸಂದೇಹವೇ ಇಲ್ಲ. ಅಲ್ಲಿ ಮಹಾರಾಷ್ಟ್ರದಲ್ಲಿ ರಾಜಕಾರಣಿಗಳು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳನ್ನು ಬೆಂಬಲಿಸಿದರು, ಎಲ್ಲಿಯೂ ತೇಜಸ್ವಿ ಸೂರ್ಯ ಅವರಂತೆ ಹಸ್ತಕ್ಷೇಪ ಮಾಡಲಿಲ್ಲ, ಹಾಳುಗೆಡವಲಿಲ್ಲ.

ಈ ಹಿನ್ನೆಲೆಯಲ್ಲಿ ನಾನು ಮತದಾರರಲ್ಲಿ ಕಳಕಳಿಯ ವಿನಂತಿ ಮಾಡುತ್ತೇನೆ, “ಗಂಭೀರವಾಗಿ ಯೋಚನೆಮಾಡಿ ಮತದಾನ ಮಾಡಿ” ಎಂದು. ದೇಶ ಬಿಕ್ಕಟ್ಟಿನಲ್ಲಿರುವಾಗ ದ್ವೇಷ ಬಿತ್ತುವ ವ್ಯಕ್ತಿಗೆ ನಾವು ಮತನೀಡಬೇಕೆ? ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಂತಹ ಸ್ವಾಯತ್ತ ವ್ಯವಸ್ಥೆಯಲ್ಲಿ ಮೂಗುತೂರಿಸುವ ಬೇಜವಾಬ್ದಾರಿ ವ್ಯಕ್ತಿಗೆ ಮತ ಹಾಕಬೇಕೆ? ಒಬ್ಬ ಬ್ರಾಹಣ ಪೂಜಾರಿಯು ಗೋಳಕವೊಂದನ್ನು ಶುದ್ಧ ತಣ್ಣೀರಿನಲ್ಲಿ ಅಭಿ಼ಷೇಕ ಮಾಡುವುದರಿಂದ ಜಾಗತಿಕ ತಾಪಮಾನವನ್ನು ತಡೆಗಟ್ಟಬಹುದು ಎನ್ನುವ ವಿಜ್ಣಾನ ವಿರೋಧಿ ವ್ಯಕ್ತಿಯನ್ನು ನಾವು ಆಯ್ಕೆ ಮಾಡಬೇಕೆ? ಒಬ್ಬ ಸಾರ್ವಜನಿಕ ಆರೋಗ್ಯ ಕಾರ್ಯಕರ್ತನಾಗಿ ಮತ್ತು ಜವಾಬ್ದಾರಿಯುತ ನಾಗರಿಕನಾಗಿ, ಪುರಾಣಕರ್ತನ ಮಾತುಗಳಿಂದ ಮರುಳಾಗಬೇಡಿ ಎಂದು ಕೋರಿಕೊಳ್ಳುತ್ತೇನೆ. ನಾವು ಜನರಿಗೆ ಉತ್ತರದಾಯಿತ್ವರಾಗಿರಬೇಕು ಎಂಬುದನ್ನ ನಾವು ನೆನಪಿಡಬೇಕು.

 

ಇದನ್ನು ನೋಡಿ : ಮೈ ತುಂಬಾ ದ್ವೇಷ ತುಂಬಿಕೊಂಡಿರುವ ತೇಜಸ್ವಿ ಸೂರ್ಯನನ್ನು ಸೋಲಿಸುವುದೆ ಕೆಆರ್‌ಎಸ್‌ ಪಕ್ಷದ ಗುರಿ Janashakthi Media

Donate Janashakthi Media

Leave a Reply

Your email address will not be published. Required fields are marked *