ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿನ ವಾಯುಮಾಲಿನ್ಯದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರ ಮಾಡುವ ಕುರಿತು ಸಾರ್ವಜನಿಕರು ಮತ್ತು ತಜ್ಞರ ಸಲಹೆಗಳನ್ನು ಆಹ್ವಾನಿಸಲು ಸುಪ್ರೀಂ ಕೋರ್ಟ್ ಇಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ನೇತೃತ್ವದ ಪೀಠವು ವಿಚಾರಣೆಯನ್ನು ಆಲಿಸಿತು. ವಾಣಿಜ್ಯ ಉದ್ಯಮಿಗಳು ಮತ್ತು ಕೈಗಾರಿಕೆ ಮಾಲೀಕರು ಸಲ್ಲಿಸಿದ ವೈಯಕ್ತಿಕ ಮನವಿಗಳನ್ನು ಕೇಂದ್ರೀಯ ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ ಕೋರ್ಟ್ ಬಿಟ್ಟಿತ್ತು.
ಕೈಗಾರಿಕಾ ಘಟಕಗಳ ಪುನಾರಂಭಿಸಿರುವ ಬಗ್ಗೆ ಕೇಂದ್ರೀಯ ವಾಯು ಗುಣಮಟ್ಟ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ. ಕಳೆದ ವಾರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ನಿಯಂತ್ರಣಕ್ಕೆ ಬಂದಿರುವುದನ್ನು ಗಮನಿಸಿತ್ತು.
ಈಗಾಗಲೇ ಕೆಲವು ಕೈಗಾರಿಕೆಗಳ ಮೇಲಿನ ಬಿಗಿ ನಿರ್ಬಂಧವನ್ನು ಸಡಿಲಗೊಳಿಸಲಾಗಿದೆ. ಅದರ ಪರಿಣಾಮವನ್ನು ನೋಡಿಕೊಂಡು ಶಾಲೆಗಳ ಪುನಾರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಂಡಳಿಯು ತಿಳಿಸಿದೆ.
ನವದೆಹಲಿಯಲ್ಲಿ ವಾಯು ಗುಣಮಟ್ಟವನ್ನು ನೋಡಿಕೊಂಡು ಶಾಲೆಗಳು, ಕೈಗಾರಿಕೆಗಳ ಪುನಾರಂಭ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಯಾವಾಗ ಆರಂಭಿಸಬೇಕು ಎಂದು ತೀರ್ಮಾನಿಸುವುದಕ್ಕೆ ಸುಪ್ರೀಂ ಕೋರ್ಟ್ ಮಾಲಿನ್ಯ ಮಂಡಳಿಗೆ ಸೂಚನೆ ನೀಡಿತ್ತು.
ಕೆಲವು ಕೈಗಾರಿಕೆಗಳ ಮೇಲಿನ ನಿಷೇಧ ತೆರವುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗವು ಸಲ್ಲಿಸಿದ ವರದಿಯನ್ನು ಸುಪ್ರೀಂಕೋರ್ಟ್ ಗಮನಿಸಿತು.
ನವದೆಹಲಿಯಲ್ಲಿ ಚಳಿಗಾಲದ ನಡುವೆ ವಿದ್ಯುತ್ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ 6 ವಿದ್ಯುತ್ ಉತ್ಪಾದಕ ಘಟಕಗಳ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಲಿನ್ಯ ಮಂಡಳಿಯು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ. ಕನಿಷ್ಠ ಅವಶ್ಯಕತೆಗಳ ಆಧಾರದ ಮೇಲೆ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.